
ಕನ್ನಡ ಸಾಂಸ್ಕೃತಿಕ ಇತಿಹಾಸಕ್ಕೆ ಹಾವೇರಿ ಜಿಲ್ಲೆ ಮಹೋನ್ನತ ಕೊಡುಗೆ ನೀಡಿದೆ
-ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ
ಹಾವೇರಿ:ನ.೦೧(ಕರ್ನಾಟಕ ವಾರ್ತೆ): ಕನ್ನಡ ಸಾಂಸ್ಕೃತಿಕ ಇತಿಹಾಸಕ್ಕೆ ಹಾವೇರಿ ಜಿಲ್ಲೆ ಮಹೋನ್ನತ ಕೊಡುಗೆ ನೀಡಿದೆ. ಕನ್ನಡ ನಾಡು ಹಾಗೂ ಭಾಷೆ ತನ್ನದೇ ಆದ ವಿಶಿಷ್ಟ ಇತಿಹಾಸಹೊಂದಿದೆ. ಕರ್ನಾಟಕದ ಸಾರ್ವಭೌಮ ಭಾಷೆಯಾದ ಕನ್ನಡ ಭಾಷೆಗೂ ಎರಡು ಸಾವಿರ ವರ್ಷಗಳ ಸುದೀರ್ಘವಾದ ಇತಿಹಾಸವಿದೆ ಎಂದು ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ನಿರ್ದೇಶನಾಲಯ ಹಾಗೂ ಕೃಷಿ ಮಾರುಕಟ್ಟೆ ಸಚಿವರು ಹಾಗೂ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವಾನಂದ ಪಾಟೀಲ ಹೇಳಿದರು.
ನಗರದ ದಿ.ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ ೭೦ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಕರ್ನಾಟಕ ಸಾಮಾಜಿಕ ಹರಿಕಾರರಾದ ಬಸವಣ್ಣನವರಿಂದ ಹಿಡಿದು ನಾಲ್ವಡಿ ಕೃಷ್ಣರಾಜ ಒಡೆಯರ್ವರೆಗೆ ದೇಶಿ ಅಸ್ಮಿತೆಯೊಂದಿಗೆ ನಾಡಿನ ಅಭಿವೃದ್ಧಿ ಹಾಗೂ ಸಾಮಾಜಿಕ ನ್ಯಾಯದ ತೇರನ್ನು ಜೊತೆ ಜೊತೆಗೆ ಎಳೆಯಲಾಗಿದೆ. ಈ ಪರಂಪರೆಯನ್ನು ಮುಂದುವರಿಸುತ್ತ ಅಭಿವೃದ್ಧಿ ಹಾಗೂ ಸಾಮಾಜಿಕ ನ್ಯಾಯವನ್ನು ಒಟ್ಟೊಟ್ಟಿಗೆ ಕೊಂಡೊಯ್ಯುವಲ್ಲಿ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ ಅವರ ನೇತೃತ್ವದ ನಮ್ಮ ಸರ್ಕಾರ ನಾಡು-ನುಡಿಯ ಅಭಿವೃದ್ಧಿ ಜೊತೆಗೆ ಜನರ ಬದುಕಿನಲ್ಲಿ ಬದಲಾವಣೆ ತರಲು ಹಲವು ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದೆ ಎಂದರು.
ಭಾಷಾವಾರು ಪ್ರಾಂತ ರಚನೆಯ ಆಧಾರದ ಮೇಲೆ ೧೯೫೬ ನವೆಂಬರ್ ೧ ರಂದು ಕರ್ನಾಟಕ ರಾಜ್ಯ ಉದಯವಾಯಿತು. ದೇಶದ ಬೇರೆ ಬೇರೆ ರಾಜ್ಯ, ಪ್ರಾಂತ್ಯಗಳಲ್ಲಿ ಹರಿದು ಹಂಚಿ ಹೋಗಿದ್ದ ಕನ್ನಡ ನಾಡು, ಏಕೀಕರಣಗೊಂಡು ಭಾಷಾವಾರು ಪ್ರಾಂತ ರಚನೆಯ ಆಧಾರದ ಮೇಲೆ ಕರ್ನಾಟಕ ರಾಜ್ಯ ಉದಯವಾಯಿತು. ಮೊದಲು ಮೈಸೂರು ರಾಜ್ಯವೆಂದು ಕರೆಯಲಾದ ಕನ್ನಡನಾಡಿಗೆ ೧೯೭೩ರಲ್ಲಿ ಅಂದಿನ ಮುಖ್ಯಮಂತ್ರಿಗಳಾಗಿದ್ದ ಸನ್ಮಾನ್ಯ ಡಿ.ದೇವರಾಜ ಅರಸು ಅವರ ವಿಶೇಷ ಕಾಳಜಿಯಿಂದ ಕರ್ನಾಟಕ ರಾಜ್ಯ ಎಂದು ನಾಮಕರಣ ಮಾಡಲಾಯಿತು ಎಂದರು.
ಕನ್ನಡ ನಾಡು ಹಾಗೂ ಭಾಷೆಗೆ ತನ್ನದೇ ಆದ ವಿಶಿಷ್ಟ ಇತಿಹಾಸಹೊಂದಿದೆ. ಕರ್ನಾಟಕದ ಸಾರ್ವಭೌಮ ಭಾಷೆಯಾದ ಕನ್ನಡ ಭಾಷೆಗೂ ಎರಡು ಸಾವಿರ ವರ್ಷಗಳ ಸುದೀರ್ಘವಾದ ಇತಿಹಾಸವಿದೆ. ಹಲವು ರಾಜ ವಂಶಗಳು ಕನ್ನಡ ನಾಡನ್ನು ಆಳಿವೆ. ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆ ಬಂದಾಗ ನಾಡಿಗಾಗಿ ಸ್ವಾಭಿಮಾನದ ಹೋರಾಟಗಳು ಕ್ರಿ.ಶ.೧೮೦೦ ರಿಂದಲೇ ಆರಂಭಗೊಂಡಿತ್ತು. ಬ್ರಿಟಿಷರ ಸಾಮ್ರಾಜ್ಯಶಾಹಿಯ ವಿರುದ್ಧ ಹಲಗಲಿ ಬೇಡರ ದಂಗೆಗಳು, ದೋಂಡಿಯ ವಾಘಾ, ಸಂಗೊಳ್ಳಿ ರಾಯಣ್ಣ, ನರಗುಂದದ ಭಾಸ್ಕರ್ ಭಾವೆ, ಸುರಪುರದ ವೆಂಕಟಪ್ಪನಾಯಕ, ಮುಂಡರಗಿ ಭೀಮರಾಯ, ಕಿತ್ತೂರ ರಾಣಿ ಚೆನ್ನಮ್ಮ ರಂತಹ ದೇಶಾಭಿಮಾನಿಗಳು ಹೋರಾಟ ನಡೆಸಿ ಕನ್ನಡ ನೆಲದ ಸ್ವಾಭಿಮಾನವನ್ನು ಎತ್ತಿ ಹಿಡಿದಿದ್ದಾರೆ. ಕರ್ನಾಟಕದ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟದ ಜೊತೆ ಜೊತೆಗೆ ಕರ್ನಾಟಕ ಏಕೀಕರಣದ ಹೋರಾಟಗಳು ಆರಂಭಗೊಂಡಿರುವುದು ಸ್ಮರಣೀಯ ಎಂದ ಅವರು, ಹಲವು ಐತಿಹಾಸಕ ಸಂದರ್ಭಗಳನ್ನು ಸ್ಮರಿಸಿಕೊಂಡರು.
ಕನ್ನಡನಾಡು ಅತ್ಯಂತ ಸುಂದರಮಯವಾದ ನಾಡು. ಕರ್ನಾಟಕವೆಂದರೆ ಕಪ್ಪು ಮಣ್ಣಿನ ನಾಡು. ಕನ್ನಡ ನುಡಿಯ ಸೊಬಗೂ ಮಧುರವಾದದು. ಆದಿಕವಿ ಪಂಪನಿಂದ ಕುವೆಂಪುವರೆಗೂ ಸಹಸ್ರಾರು ಕವಿ, ಸಾಹಿತಿ, ಚಿಂತಕರು ಕನ್ನಡ ನುಡಿ ತೋರಣ ಕಟ್ಟಿದ ಫಲವಾಗಿ ಕನ್ನಡ ಭಾಷೆಗೆ ಎಂಟು ಜ್ಞಾನಪೀಠ ಪ್ರಶಸ್ತಿಗಳ ಗೌರವ ಸಂದಿದೆ. ಈ ಪ್ರಶಸ್ತಿ ಪುರಸ್ಕೃತರಲ್ಲಿ ಜಿಲ್ಲೆಯ ಡಾ.ವಿ.ಕೃ.ಗೋಕಾಕರು ಒಬ್ಬರು ಎಂಬುದು ನಮಗೆಲ್ಲ ಅಭಿಮಾನದ ಸಂಗತಿ ಎಂದರು.
ಕನ್ನಡ ಸಾಂಸ್ಕೃತಿಕ ಇತಿಹಾಸಕ್ಕೆ ಹಾವೇರಿ ಜಿಲ್ಲೆ ಮಹೋನ್ನತ ಕೊಡುಗೆ ನೀಡಿದೆ. ತ್ರಿಪದಿ ಕವಿ ಸರ್ವಜ್ಞ, ದಾಸಶ್ರೇಷ್ಠರಾದ ಕನಕದಾಸರು, ವಚನಕಾರರಾದ ಅಂಬಿಗರ ಚೌಡಯ್ಯ, ತತ್ವಪದಕಾರರಾದ ಶಿಶುನಾಳ ಷರೀಫರು, ಗಾನಯೋಗಿ ಪುಟ್ಟರಾಜ ಗವಾಯಿಗಳು, ಕಾದಂಬರಿ ಪಿತಾಮಹ ಗಳಗನಾಥರು, ಆಧುನಿಕ ವಚನಕಾರರಾದ ಮಹಾದೇವ ಬಣಕಾರ, ನಾಟಕಕಾರರಾದ ಶಾಂತಕವಿ, ಅಂತರಾಷ್ಟ್ರೀಯ ಖ್ಯಾತ ಲೇಖಕರಾದ ಹಿರೇಮಲ್ಲೂರ ಈಶ್ವರ, ಪ್ರಗತಿಶೀಲ ಸಾಹಿತಿಗಳಾದ ಸುರಂ, ಯಕ್ಕುಂಡಿ, ಲಲಿತ ಪ್ರಬಂಧಕರಾದ ರಾಕು, ಕನ್ನಡ ಕಟ್ಟಾಳು ಪಾಟೀಲ ಪುಟ್ಟಪ್ಪ, ಖ್ಯಾತ ಕವಿ ಚಂದ್ರಶೇಖರ ಪಾಟೀಲ ರಂತಹ ಮಹಾ ಪುರುಷರು ಕನ್ನಡ ಭಾಷೆ, ಸಂಸ್ಕೃತಿಯ ಶ್ರೀಮಂತಿಕೆಗೆ ನೀಡಿದ ಕೊಡುಗೆ ಅನನ್ಯವಾಗಿದೆ ಎಂದು ಬಣ್ಣಿಸಿದರು.
ಪಂಚಗ್ಯಾರಂಟಿ ಯೋಜನೆಯಲ್ಲಿ ಒಂದಾದ ಶಕ್ತಿ ಯೋಜನೆಯಡಿ ರಾಜ್ಯದಲ್ಲಿ ಮಹಿಳೆಯರು ಅಧಿಕ ಸಂಖ್ಯೆಯಲ್ಲಿ ಪ್ರಯಾಣ ಮಾಡಿದ ಹಿನ್ನಲೆಯಲ್ಲಿ ಗೋಲ್ಡ್ನ್ ಬುಕ್ ಆಫ್ ರೆಕಾರ್ಡ್ಗೆ ದಾಖಲಾಗಿದೆ. ಈ ಯೋಜನೆಯಡಿ ಜಿಲ್ಲೆಯಲ್ಲಿ ಈವರೆಗೆ ೩೧.೮ ಲಕ್ಷ ಫಲಾನುಭವಿಗಳು ಸಂಚಾರ ಮಾಡಿದ್ದು, ಹೆಚ್ಚುವರಿಯಾಗಿ ರೂ.೨೦ ಕೋಟಿ ಆದಾಯ ನಿಗಮಕ್ಕೆ ಸಂದಿದೆ. ಸುರಕ್ಷಿತ ಹಾಗೂ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಲು ಹಾವೇರಿ ವಿಭಾಗಕ್ಕೆ ೮೬ ನೂತನ ಬಸ್ಗಳನ್ನು ನೀಡಲಾಗಿದೆ.
ಗೃಹ ಜ್ಯೋತಿ ಯೋಜನೆಯಡಿ ಜಿಲ್ಲೆಯಲ್ಲಿ ಶೇಕಡಾ ೯೮ ರ? ಅಂದರೆ ೪.೧೦ ಲಕ್ಷ ವಿದ್ಯುತ್ ಗ್ರಾಹಕರು ನೋಂದಾಯಿಸಿಕೊಂಡಿದ್ದಾರೆ. ಈ ಕುಟುಂಬಗಳಿಗೆ ಶೂನ್ಯ ವಿದ್ಯುತ್ ಬಿಲ್ ವಿತರಿಸಲಾಗಿದೆ. ಇದುವರೆಗೆ ಗೃಹ ಜ್ಯೋತಿ ಯೋಜನೆಗೆ ಸರ್ಕಾರ ೩೪೬.೭೬ ಕೋಟಿ ರೂಪಾಯಿ ಪಾವತಿಸಿದೆ.
ಗೃಹ ಲಕ್ಷ್ಮೀ ಯೋಜನೆಯಡಿ ಜಿಲ್ಲೆಯ ೩.೮೧ ಲಕ್ಷ ಫಲಾನುಭವಿಗಳಿಗೆ ಪ್ರತಿ ತಿಂಗಳು ರೂ. ಎರಡು ಸಾವಿರದಂತೆ ೨೦೨೫ರ ಜುಲೈವರೆಗೆ ೧೫೫೩ ಕೋಟಿ ರೂ ಪಾವತಿಸಲಾಗಿದೆ.
ಅನ್ನಭಾಗ್ಯದಡಿ ಜಿಲ್ಲೆಯ ಬಿಪಿಎಲ್ ಹಾಗೂ ಅಂತ್ಯೋದಯ ಪಡಿತರ ಕುಟುಂಬದ ೧೪.೨೦ ಲಕ್ಷ ಸದಸ್ಯರಿಗೆ ಕಳೆದ ಏಪ್ರಿಲ್ ತಿಂಗಳಿನಿಂದ ಅಕ್ಟೋಬರ್ ಅಂತ್ಯಕ್ಕೆ ೩.೬೧ಲಕ್ಷ ಕ್ವಿಂಟಲ್ ಅಕ್ಕಿ, ೧.೫೮ ಕ್ವಿಂಟಲ್ ಜೋಳ ವಿತರಣೆ ಮಾಡಲಾಗಿದೆ.
ಯುವನಿಧಿ ಯೋಜನೆಯಡಿ ಜಿಲ್ಲೆಯಲ್ಲಿ ೮,೧೭೦ ಫಲಾನುಭವಿಗಳು ನೋಂದಾಯಿಸಿಕೊಂಡಿದ್ದು, ಜುಲೈ ೨೦೨೫ರ ಅಂತ್ಯದವರೆಗೆ ಫಲಾನುಭವಿಗಳ ಖಾತೆಗೆ ೧೮ ಕೋಟಿ ರೂ ನೇರ ನಗದು ವರ್ಗಾವಣೆ ಮಾಡಲಾಗಿದೆ
ಕೃಷಿ: ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಉತ್ತಮ ಮಳೆಯಾಗಿದ್ದು, ೩.೨೭ ಲಕ್ಷ ಹೆಕ್ಟರ್ ಬಿತ್ತನೆಯಾಗಿರುತ್ತದೆ. ಪ್ರಮುಖ ಬೆಳೆಗಳಾದ ಮೆಕ್ಕೆಜೋಳ, ಭತ್ತ, ಸೋಯಾ ಅವರೆ, ಶೇಂಗಾ ಬೆಳೆಗಳು ಉತ್ತಮ ಇಳುವರಿಯೊಂದಿಗೆ ರೈತರಲ್ಲಿ ಮಂದಹಾಸ ಮೂಡಿಸಿವೆ. ಹಿಂಗಾರು ಹಂಗಾಮಿಗೆ ೧೧ ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಕಾರ್ಯ ಪ್ರಗತಿಯಲ್ಲಿದೆ. ೫೭,೨೮೮ ಮೆಟ್ರಿಕ್ ಟನ್ ರಸಗೊಬ್ಬರ ವಿತರಣೆ ಮಾಡಲಾಗಿದೆ. ೨೯೮ ಕ್ವಿಂಟಲ್ ಬಿತ್ತನೆ ಬೀಜ ರಿಯಾಯಿತಿ ದರದಲ್ಲಿ ವಿತರಣೆ ಮಾಡಲಾಗಿದೆ. ಬಿತ್ತನೆ ಬೀಜ ಹಾಗೂ ರಸಗೊಬ್ಬರ ವಿತರಣೆಯನ್ನು ಸಮರ್ಪಕವಾಗಿ ನಿರ್ವಹಿಸಲಾಗಿದೆ.
ತೋಟಗಾರಿಕಾ ಚಟುವಟಿಕೆಗೆ ಪ್ರಸಕ್ತ ಆರ್ಥಿಕ ವ?ದಲ್ಲಿ ವಿವಿಧ ಯೋಜನೆಯಡಿ ೪೪.೯೩ ಕೋಟಿ ರೂ ಮೊತ್ತಕ್ಕೆ ಅನುಮೋದನೆ ನೀಡಲಾಗಿದೆ. ರಾಷ್ಟ್ರೀಯ ಎಣ್ಣೆಕಾಳು ಮತ್ತು ಎಣ್ಣೆ ತಾಳೆ ಯೋಜನೆಯಡಿ ಅಕ್ಟೋಬರ್ ವರೆಗೆ ೧೨.೩೨ ಕೋಟಿ ರೂ ಬಿಡುಗಡೆಯಾಗಿದೆ.೧,೪೧೭ ಫಲಾನುಭವಿಗಳಿಗೆ ಸಹಾಯಧನ ವಿತರಣೆ ಮಾಡಲಾಗಿದೆ.
ಕೃಷಿ ಮಾರಾಟ ಇಲಾಖೆಯಿಂದ ಜಿಲ್ಲೆಯ ವಿವಿಧ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಲ್ಲಿ ಶೀತಲಗೃಹ, ಅಂಗಡಿ-ಗೋದಾಮು, ಸಿಸಿ ರಸ್ತೆ, ಚರಂಡಿ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ೫೪.೫೦ ಕೋಟಿ ರೂ ಮಂಜೂರು ಮಾಡಲಾಗಿದೆ. ಕಾಮಗಾರಿ ವಿವಿಧ ಹಂತಗಳಲ್ಲಿ ಪ್ರಗತಿಯಲ್ಲಿದೆ.
ಕಂದಾಯ ಗ್ರಾಮಗಳ ರಚನೆ : ಕಂದಾಯ ಗ್ರಾಮ ರಚನೆ ಮತ್ತು ಇಲ್ಲಿರುವ ದಾಖಲೆ ರಹಿತ ಜನವಸತಿಗೆ ಹಕ್ಕು ಪತ್ರ ನೀಡುವ ಕಾರ್ಯವು ಸರ್ಕಾರದ ಮಹತ್ವಾಕಾಂಕ್ಷಿಯ ಯೋಜನೆಯಲ್ಲಿ ಒಂದಾಗಿದ್ದು, ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಹೊಸದಾಗಿ ೪೧೮ ದಾಖಲೆರಹಿತ ಜನವಸತಿಗಳನ್ನು ಗುರುತಿಸಿ ಈವರೆಗೆ ೨,೦೮೦ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲಾಗಿದೆ. ಉಳಿದ ೩೦,೦೦೦ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸುವ ಕಾರ್ಯ ಪ್ರಗತಿಯಲ್ಲಿರುತ್ತದೆ.
ಬೆಳೆ ಹಾನಿಯ ವಿವರ : ಮುಂಗಾರು ಮಳೆ, ಗಾಳಿಯಿಂದ ಜಿಲ್ಲೆಯಲ್ಲಿ ಒಟ್ಟು ೧೮೮೨೧.೮೯ ಹೆಕ್ಟೇರ್ ಬೆಳೆ ಹಾನಿಯಾಗಿದೆ. ಬೆಳೆ ಹಾನಿ ಪರಿಹಾರ ವಿತರಣೆಗಾಗಿ ಡಾಟಾ ಎಂಟ್ರಿ ಕಾರ್ಯ ಮುಗಿದಿದ್ದು ಹಣವರ್ಗಾವಣೆ ಪ್ರಕ್ರಿಯೆ ಪ್ರಗತಿಯಲ್ಲಿದೆ.
ರಾಜ್ಯಾದ್ಯಂತ ಭಾರೀ ಮಳೆ, ಪ್ರವಾಹ ಮತ್ತು ಭೂಕುಸಿತಗಳಿಂದ ಪ್ರಮುಖ ಮೂಲಸೌಕರ್ಯಕ್ಕೆ ವ್ಯಾಪಕ ಹಾನಿ ಉಂಟಾಗಿದೆ. ಜಿಲ್ಲೆಯ ಆಡಳಿತ ಮತ್ತು ಸಂಬಂಧಿತ ವಿಭಾಗಗಳಿಂದ ನಡೆದ ಸ್ಥಳ ಸಮೀಕ್ಷೆಯ ಮೌಲ್ಯಮಾಪನದ ಆಧಾರದ ಮೇಲೆ ಕ್ಷೇತ್ರವಾರು ಹಾನಿ ಮತ್ತು ಮರುನಿರ್ಮಾಣ ವೆಚ್ಚದ ಅಂದಾಜುಗಳನ್ನು ಸಂಗ್ರಹಿಸಿ ರೂ.೧,೫೪೫.೨೪ ಕೋಟಿ ರೂಪಾಯಿಗಳ ಸಹಾಯಧನ ಅಗತ್ಯವಿದ್ದು, ಈ ಆರ್ಥಿಕ ಸಹಾಯವನ್ನು ಕೇಂದ್ರ ಸರ್ಕಾರದಿಂದ ಕೋರಲು ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಕೈಮಗ್ಗ ಮತ್ತು ಜವಳಿ ಇಲಾಖೆಯಿಂದ ನೇಕಾರ ಪ್ಯಾಕೇಜ್ ಯೋಜನೆಯಡಿ ೧೦ ಎಚ್.ಪಿ. ವಿದ್ಯುತ್ ಸಂಪರ್ಕ ಹೊಂದಿದ ಜಿಲ್ಲೆಯ ೧೩೧ ವಿದ್ಯುತ್ ಮಗ್ಗ ಘಟಕಗಳಿಗೆ ಉಚಿತವಾಗಿ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ. ೧೦ ರಿಂದ ೨೦ ಎಚ್ಪಿ ವಿದ್ಯುತ್ ಸಂಪರ್ಕ ಹೊಂದಿದ ೪ ವಿದ್ಯುತ್ ಘಟಕಗಳಿಗೆ ಪ್ರತಿ ಯೂನಿಟ್ಗೆ ೧.೨೫ ರೂ ನಂತೆ ರಿಯಾಯಿತಿ ದರದಲ್ಲಿ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ.
ಜಿಲ್ಲೆಯ ನಿರುದ್ಯೋಗಿ
ಯುವಕ-ಯುವತಿಯರಿಗೆ ಉದ್ಯೋಗ ದೊರಕಿಸಿಕೊಡುವ ಹಿನ್ನಲೆಯಲ್ಲಿ ಈ ತಿಂಗಳಿನಲ್ಲಿ ರಾಣೇಬೆನ್ನೂರ ನಗರದಲ್ಲಿ ಜಿಲ್ಲಾ ಮಟ್ಟದ ಉದ್ಯೋಗ ಮೇಳ ಆಯೋಜನೆಗೆ ಸಿದ್ಧತೆ ನಡೆದಿದೆ ಎಂದರು.
ಸನ್ಮಾನ: ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಮಾಡಿದ ೩೦ ಜನ ಸಾಧಕರನ್ನು ಸನ್ಮಾನಿಸಲಾಯಿತು. ಸಾಹಿತ್ಯ ಕ್ಷೇತ್ರದಿಂದ ಚಂದ್ರಗೌಡ ಪಾಟೀಲ, ಸುರೇಶ ಮಲ್ಲಾಡದ, ಶ್ರೀಮತಿ ಶೈಲಜಾ ಕೋರಿಶೆಟ್ಟರ, ಸುಭಾಸ ಹೊಸಮನಿ, ಷಣ್ಮುಕಪ್ಪ ಕಂಬಳಿ, ಶಿಕ್ಷಣ ಕ್ಷೇತ್ರದಿಂದ ಶ್ರೀಮತಿ ಮಂಜುಳಾ ಸಂಶಿ, ಕರಕುಶಲ ಕ್ಷೇತ್ರದಿಂದ ಗಣೇಶ ರಾಯ್ಕರ್, ಚಿತ್ರಕಲೆ ಕ್ಷೇತ್ರದಿಂದ ಗಂಗಾಧರ ಹಿರೇಮಠ, ಜಾನಪದ ಸಂಗೀತ ಕಲಾವಿ ಬಸವರಾಜ ಗೊಬ್ಬಿ, ಪುರವಂತಿಕೆ ಕಲಾವಿದ ಓಂಪ್ರಕಾಶ ಅಂಗಡಿ, ವೀರಗಾಸೆ ಕಲಾವಿದ ಶಿವರುದ್ರಪ್ಪ ಬಡಿಗೇರ, ಜಾನಪದ ಕಲಾವಿದರಾದ ರಾಜಕುಮಾರ ಅರ್ಕಸಾಲಿ, ಡಾ.ಆನಂದಪ್ಪ ಜೋಗಿ, ಕೃಷ್ಣಗೌಡ ಜೀವನಗೌಡ್ರ, ಷಣ್ಮುಖಪ್ಪ ಭಜಂತ್ರಿ, ಮಧುಕುಮಾರ ಹರಿಜನ, ರಂಗಭೂಮಿ ಕಲಾವಿದರಾದ ಬೀರಪ್ಪ ಡೊಳ್ಳಿನ, ಕೃಷ್ಣಚಾರಿ ಬಡಿಗೇರ, ಪ್ರಕಾಶ ಗಡಿಯಪ್ಪಗೌಡ್ರ, ಸಮಾಜ ಸೇವೆ ಕ್ಷೇತ್ರದಿಂದ ಶ್ರೀಮತಿ ಐಶ್ವರ್ಯ ಮಾನೇಗಾರ, ಶಿವಪ್ಪ ಮಲಗುಂದ, ಡಾ.ಎಂ.ಎಸ್.ಹೆಬ್ಬಾಳ, ಸಂಗೀತ/ ನೃತ್ಯ ಕಲಾವಿದೆ ಮಾನಸಾ ಎಸ್.ಎಚ್, ಸಂಗೀತ ಕಲಾವಿದೆ ಶ್ರೀಮತಿ ಶೀಲಾ ಪಾಟೀಲ, ಕೃಷಿ ಕ್ಷೇತ್ರದಿಂದ ಭೀಮಣ್ಣ ಚಿಗರಿ, ನಾಗೇಂದ್ರ ಮಲಗುಂದ, ವಿಜ್ಞಾನ ಕ್ಷೇತ್ರದಿಂದ ಸಾಗರ ಬಳ್ಳಾರಿ, ಕಿಶೋರ ಬಡಿಗೇರ, ಕನ್ನಡಪರ ಹೋರಾಟಗಾರ ರಮೇಶ ಆನವಟ್ಟಿ ಹಾಗೂ ಸಾಹಿತಿ ಶ್ರೀಮತಿ ಸುಲಕ್ಷಣಾ ಶಿವಪೂರ ಅವರನ್ನು ಸನ್ಮಾನಿಸಲಾಯಿತು.
ಆರ್ಕಷಕ ನೃತ್ಯ ಕಾರ್ಯಕ್ರಮ: ಇದೇ ಸಂದರ್ಭದಲ್ಲಿ ನಗರದ ಎಸ್.ಎಂ.ಎಸ್, ಹುಕ್ಕೇರಿಮಠ ಹಾಗೂ ಸಾಯಿಚಂದ ಗುರುಕುಲ ಶಾಲೆಗಳ ವಿದ್ಯಾರ್ಥಿಗಳು ನಾಡು-ನುಡಿ ಶ್ರೀಮಂತಿಕೆ ಬಿಂಬಿಸುವ ಕನ್ನಡ ಗೀತೆಗಳಿಗೆ ಆಕರ್ಷಕ ನೃತ್ಯ ಪ್ರದರ್ಶಿಸಿದರು.
ಶಿಸ್ತುಬದ್ಧ ಪಥಸಂಚಲನ: ಪೊಲೀಸ್ ಇಲಾಖೆ ಶಂಕರಗೌಡ ಪಾಟೀಲ ಅವರ ನೇತೃತ್ವದಲ್ಲಿ ನಾಗರೀಕ ಪೊಲೀಸ್, ಸಶಸ್ತ್ರ ಮೀಸಲು ಪಡೆ, ಅಬಕಾರಿ ದಳ, ಅಗ್ನಿಶಾಮಕ, ಅರಣ್ಯ ರಕ್ಷಕ ಪಡೆ, ಗೃಹ ರಕ್ಷಕದಳ, ಅಬಕಾರಿ ಇಲಾಖೆ ಪಡೆ, ಎನ್.ಸಿ.ಸಿ ತಂಡ, ಕೆ.ಎಸ್.ಇ ಆಂಗ್ಲಮಾಧ್ಯಮ, ಜೆಪಿ ರೋಟರಿ, ಕಳಿದಾಸ, ಆದರ್ಶ, ಲೋಡಲ್, ಬಸವ ಭಾರತಿ ಹಾಗೂ ಸರ್ಕಾರಿ ಪ್ರೌಢಶಾಲೆಗಳು ಸೇರಿದಂತೆ ಒಟ್ಟು ೧೫ ತಂಡಗಳಿಂದ ಶಿಸ್ತುಬದ್ಧ ಪಥಸಂಚಲನ ಜರಗಿತು. ಪೊಲೀಸ್ ವಾದ್ಯವೃಂದ ಸುಸ್ರಾವ್ಯವಾಗಿ ಬ್ಯಾಂಡ್ಸೆಟ್ ನುಡಿಸಿದರು.
ಕಾರ್ಯಕ್ರಮ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಎಫ್.ಎನ್.ಗಾಜಿಗೌಡ್ರ, ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ಎಂ.ಎಂ.ಮೈದೂರು, ನಗರಸಭೆ ಉಪಾಧ್ಯಕ್ಷ ಮಲ್ಲಿಕಾರ್ಜುನ ಸಾತೇನಹಳ್ಳಿ, ನಗರಸಭೆ ಸದಸ್ಯ ಸಂಜೀವಕುಮಾರ ನೀರಲಗಿ, ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಮತಿ ಯಶೋಧಾ ವಂಟಗೋಡಿ, ಅಪರ ಜಿಲ್ಲಾಧಿಕಾರಿ ಡಾ.ಎಲ್.ನಾಗರಾಜ, ಜಿ.ಪಂ.ಉಪಕಾರ್ಯದರ್ಶಿ ಡಾ.ಪುನಿತ್, ಉಪವಿಭಾಗಾಧಿಕಾರಿ ಕಲ್ಯಾಣಿ ಕಾಂಬ್ಳೆ, ತಹಶೀಲ್ದಾರ ಶ್ರೀಮತಿ ಶರಣಮ್ಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿದೇಶಕ ವೀರಯ್ಯಸ್ವಾಮಿ ಹಿರೇಮಠ, ಪ್ರವಾಸೋದ್ಯ ಇಲಾಖೆ ಸಹಾಯಕ ನಿರ್ದೇಶಕ ಆರ್.ವಿ.ಚಿನ್ನಿಕಟ್ಟಿ, ಕೆ.ಸಿ.ಸಿ.ಬ್ಯಾಂಕ್ ನಿರ್ದೇಶಕ ಕೊಟ್ರೇಶಪ್ಪ ಬಸೇಗಣ್ಣಿ ಇತರರು ಉಪಸ್ಥಿತರಿದ್ದರು.
ವಾವಿ

