
ಕಾಫಿಯ ಮತ್ತೆ ಗಮ್ಮತ್ತು……..
(ಅಕ್ಟೋಬರ್ ೧ ಅಂತರರಾಷ್ಟ್ರೀಯ ಕಾಫಿ ದಿನದ ನಮಿತ್ಯ ನಿಮ್ಮೊಂದಿಗೆ ಹಾಗೇ ಸುಮ್ಮನೆ ಕಾಫಿಕುಡಿಯುತ್ತಾ)
ಮಲೆನಾಡ ಸೆರಗು ಎನ್ನುವ ಅಭಿದಾನ ಹೊಂದಿರುವ ಮರಿಕಲ್ಯಾಣಖ್ಯಾತಿಯ ನಮ್ಮೂರಲ್ಲಿ ಮಳೆ ಪ್ರಾರಂಭವಾಗಿ (ಮೇ ತಿಂಗಳಿಂದ ಪ್ರಾರಂಭವಾಗಿ ಅಕ್ಟೋಬರ ತಿಂಗಳಿಗೂ ಮಳೆ ಮುಂದುವರೆದಿದೆ) ಸರಿಸುಮಾರು ೫ತಿಂಗಳು ಕಳೆದು ಆರನೇ ತಿಂಗಳಿಗೆ ಮಳೆಗಾಲ ಕಾಲಿರಿಸಿದೆ. ಚಳಿಗಾಲದಲ್ಲಿರ ಬೇಕಾಗಿದ್ದ ನಾವು-ನೀವೆಲ್ಲಾ ಇನ್ನು ಮಳೆಯ ಸಿಂಚನದಲ್ಲಿ ಕಾಲಕಳೆಯುತ್ತಿದ್ದೇವೆ. ಹವಾಮಾನ ವೈಫರಿತ್ಯವೋ, ಹವಾಮಾನವೇ ಬದಲಾಗಿದೆಯೋ? ತಿಳಿಯುತ್ತಿಲ್ಲ. ಆದರೆ ಈ ಮಳೆಯ ಚಳಿಯ ವಾತಾವರಣದಲ್ಲಿ ಬೆಚ್ಚನೆಯ ಕಾಫಿ ಮಾತ್ರ ನಿತ್ಯ ಹಲವಾರು ಕಪ್ಪು ದೇಹಕ್ಕೆ ಸೇರಿ ಮೈಮನವನ್ನು ಉಲ್ಲಾಸಗೊಳಿಸುತ್ತಿದೆ.
ಬೆಳಗಿನಿಂದ ತಡರಾತ್ರಿ ಮೊಬೈಲ್ ಹಿಡಿದು ನಿದ್ರೆಗೆ ಜಾರುವವರಗೂ “ಕಾಫಿ” ಹಿರುವವರು ಉಂಟು. “ಒಂದು ಗ್ಲಾಸ್ ಬಿಸಿ ಬಿಸಿ ಫಿಲ್ಟರ್ ಕಾಫಿ ಕುಡಿದ ನಂತರವೇ ದಿನವನ್ನು ಅಧಿಕೃತವಾಗಿ ಶುರುಮಾಡುವವರು ಉಂಟು”. ಕಾಫಿಯ ದಿನಚರಿ ನಮ್ಮಲ್ಲಿ ಬಹುತೇಕರಿಗೆ ರೂಢಿಯಾಗಿದೆ. ಕಾಫಿ ಕುಡಿಯದಿದ್ದರೇ ಅಂದಿನ ದಿನ ಸರಿಯಾಗಿ ಶುರುವಾಗೋದೇ ಇಲ್ಲ ಎನ್ನುವಷ್ಟರ ಮಟ್ಟಿಗೆ ಕಾಫಿ ಅನಿವಾರ್ಯ. ’ಕಾಫಿ’ ಈ ಶಬ್ದ ಕಿವಿಗೆ ಬೀಳುತ್ತಿದ್ದಂತೆ, ನಾಲಿಗೆ ಚಡಪಡಿಸುವುದು, ಕಿವಿ ಚುರುಕಾಗಿ ನಿದ್ದೆ ಹಾರಿ ಹೋಗುತ್ತದೆ. ಎಲ್ಲರ ದಿನಚರಿ ಶುರುವಾಗುವುದೇ ಒಂದು ಕಪ್ಪು ಬಿಸಿಬಿಸಿ ಸ್ಟ್ರಾಂಗ್ ಕಾಫಿಯಿಂದ. ವಾಹನಗಳಿಗೆ ಪೆಟ್ರೋಲ್ ಹಾಕಿ ಚಾಲು ಮಾಡಿದಂತೆ, ಕಾಫಿ ಕುಡಿದ ಮೇಲೆ ಎಲ್ಲರ ಜಡತ್ವ ಮರೆಯಾಗಿ ಚೈತನ್ಯ ಹೊಮ್ಮುತ್ತದೆ.
ಆದ್ರೆ ನಾವೆಲ್ಲಾ ಇಷ್ಟೊಂದು ಆಸ್ವಾದಿಸುವ ಈ ಫಿಲ್ಟರ್ ಕಾಫಿ ಎಲ್ಲಿ ಬೆಳೆಯುತ್ತೆ? ಕಾಫಿ ಪುಡಿಯನ್ನು ಹೇಗೆ ತಯಾರಿಸ್ತಾರೆ? ಇಲ್ಲಿದೆ ವಿವರ.
ಕನ್ನಡಿಗರಿಗೆ ಕಾಫಿ ಅಂದ್ರೆ ಎರಡೇ ಪದ ನೆನಪಾಗೋದು. ಒಂದು “ಚಿಕ್ಕಮಗಳೂರು ಮತ್ತೊಂದು ಕೊಡಗು”. ದೇಶದಾದ್ಯಂತ ಹೆಸರುವಾಸಿಯಾಗಿರೋ ಇಲ್ಲಿನ ಕಾಫಿ ವಿದೇಶಕ್ಕೂ ರಫ್ತಾಗುತ್ತೆ. ಹಚ್ಚ ಹಸಿರಾಗಿ ಕಾಣು ಕಾಫಿ ಗಿಡಗಳಲ್ಲಿ ವರ್ಷಕ್ಕೊಮ್ಮೆ ಗಾಢ ಕಂಪು ಸೂಸೋ ಹಾಲು ಬಿಳುಪಿನ ಹೂಗಳು ಅರಳುತ್ತವೆ. ಈ ಹೂಗಳ ಸುವಾಸನೆಯೋ ಜೀವನದಲ್ಲಿ ಒಮ್ಮೆಯಾದರೂ ಅದನ್ನು ಅನುಭಸಿಬೇಕು. ಬಾಡಿದ ನಂತರ ಸಣ್ಣಗೆ ಹಸಿರು ಬಣ್ಣದ ಕಾಯಿ ಗೊಂಚಲು ಗೊಂಚಲಾಗಿ ಮೂಡುತ್ತವೆ ಕಾಫಿ ಬೀಜಗಳು.
ಕಾಫಿ ಕಾಯಿಗಳು ಚೆನ್ನಾಗಿ ಹಣ್ಣಾದಾಗ ಅವುಗಳ ಬಣ್ಣ ಗಾಢ ಕೆಂಪಗಿರುತ್ತದೆ. ಅಷ್ಟರಲ್ಲಿ ಕಾಫಿ ಹಣ್ಣುಗಳನ್ನು ಗಿಡಗಳಿಂದ ಬೇರ್ಪಡಿಸಿ ಬಿಸಿಲಿನಲ್ಲಿ ಒಣಗಿಸಲಾಗುತ್ತದೆ. ಕೆಲ ಬಗೆಯ ಕಾಫಿ ಹಣ್ಣುಗಳನ್ನು ಯಂತ್ರಗಳ ಸಹಾಯದಿಂದ ಡ್ರೈಯರ್‌ನಲ್ಲೂ ಒಣಗಿಸ್ತಾರೆ. ಇನ್ಸ್ಟೆಂಟ್ ಕಾಫಿ ಪುಡಿ ಮಾಡುವವರು ಕಾಫಿ ಹಣ್ಣುಗಳಿಂದ ಬೀಜಗಳನ್ನು ಬೇರ್ಪಡಿಸಿ ನಂತರ ಬಳಸುತ್ತಾರೆ. ಆದ್ರೆ ಫಿಲ್ಟರ್ ಕಾಫಿ ಮಾಡಲು ಈ ಹಂತದ ಅವಶ್ಯಕತೆ ಇಲ್ಲ.
‘ಕಾಫಿ’ಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ‘ಕಾಫಿ’ ಮೊದಲು ನಮ್ಮ ಭಾರತಕ್ಕೆ ‘ಯೆಮನ್’ಎಂಬ ಸೂಫಿ ಸಂತರೊಬ್ಬರು, ಕರ್ನಾಟಕದ ಮಲೆನಾಡಾದ ಚಿಕ್ಕಮಗ ಳೂರು ಜಿಲ್ಲೆ ಬಾಬಾಬುಡನ್ ಗಿರಿ ಗುಡ್ಡಗಳ ಮೇಲೆ ‘ಕಾಫಿ’ ಬೆಳೆಯನ್ನು ಆರಂಭಿಸಿದರು. ಕಾಫಿ ಗಿಡ ಬೆಳೆಯಲು ಪ್ಲಾಂಟೇಶನ್‌ಗಳನ್ನು ಮಾಡಿ ಬೆಳೆಸಿದರು. ನಂತರ ಕಾಫಿ ರುಚಿ ಕೊಡಗಿಗೂ ಹಬ್ಬಿ, ಕೊಡಗಿನಲ್ಲಿ ಇಂದು ಕಾಫಿ ಪ್ಲಾಂಟೇಶನ್ಗಳೆ ಹೆಚ್ಚು ಇರುವುದು. ಕರ್ನಾಟದ ನೆರೆರಾಜ್ಯ ಕೇರಳ, ತಮಿಳುನಾಡಿನಲ್ಲಿ ಕಾಫಿ ಬೆಳೆದು ಹೊರದೇಶ ಗಳಿಗೂ ರಫ್ತಾಗುತ್ತದೆ.
ಇದ್ದಕ್ಕಿದ್ದಂತೆ ‘ಕಾಫಿ’ ನನಗೆ ಯಾಕೆ ನೆನಪಾಯಿತೆಂದರೆ, ‘ಕಾಫಿ’ ನೆನಪಾಗುವುದು ಅಂತ ಇಲ್ಲವೇ ಇಲ್ಲ. ಬೆಳಿಗ್ಗೆ, ಮಧ್ಯಾಹ್ನ, ಸಂಜೆ ಕಾಫಿ ಬೇಕು. ಉಳಿದಂತೆ ತಿಂಡಿ ಆದ ಮೇಲೆ, ಹೊರಗಡೆ ಹೋದಾಗ ಹೋಟೆಲ್ನಲ್ಲಿ, ಕಾಫಿ ಕುಡಿಯುವುದು ಇದ್ದೇ ಇದೆ. ಪ್ರಭುಗೌಡ ಪಾಟೀಲ ಅವರ ಪತ್ರಿಕಾ ಕಾರ್ಯಾಲಯಕ್ಕೆ ಭೇಟಿ ನೀಡಿದಾಗ ಅವರು ಮೊದಲು ಕೇಳುವುದೇ “ಸರ್ ಕಾಫಿ ಕುಡಿಯುತ್ತೀರಾ? ಎನ್ನುತ್ತಲೇ ಈಗ ಕಾಫಿ ಆಯ್ತು ಬೇಡ ಎಂದು ಹೇಳ ವಷ್ಟರಲ್ಲಿ ಕಾಫಿಗೆ ಆರ್ಡರ್ ಮಾಡುತ್ತಾರೆ. ಒಂದು ಶುಗರ್‌ಲೆಸ್, ಮೂರು ಪ್ಲಸ್ ಎಂದು. ಬೇಕರಿ ಮಂಜಣ್ಣ ತುರುವ ಒಗರು ಒಗರಾದ ಕಾಫಿ ಕುಡಿದಾಗ ಏನೋ ಒಂತಾರ ಸಂತೋಷ.
ಪರಿಚಯದ ಮನೆಗಳಿಗೆ ಹೋದಾಗ ಒಂದು ಲೋಟ ಬಿಸಿ ಕಾಫಿ ಕೊಟ್ಟರೆ, ಅವರಷ್ಟು ಒಳ್ಳೆಯವರು, ಸಂಸ್ಕಾರವಂತರು ಬೇರೆ ಯಾರು ಕಾಣುವುದೇ ಇಲ್ಲ. ಚಳಿ, ಮಳೆಗಾಲ, ಊರಿಂದ ಬಂದ ಕೂಡಲೇ, ಇದೆಲ್ಲ ಬಿಡಿ ಬಿರು ಬೇಸಿಗೆ ಯಲ್ಲೂ ನಾವೆಲ್ಲ ಬಿಸಿ ಬಿಸಿ ಕಾಫಿ ಪ್ರಿಯರೇ, ಕಾಫಿ ಬದಲಿಗೆ ನಿಂಬೆಹಣ್ಣಿನ, ಪಾನಕ ಹೊಸ ತರಹದ ಜ್ಯೂಸ್ಗಳು, ಕಷಾಯ, ಕೊನೆಗೆ ಪಾಯಸ ಇದು ಯಾವುದೇ ಕೊಟ್ಟರು ಔಪಚಾರಿಕ ಎನಿಸುತ್ತದೆ. ಆದರೆ ಕಾಫಿಗಿರುವ ಘನತೆ ತೂಕವೇ ಬೇರೆ.
ಬಾಯಾರಿಕೆಗೆ, ಬೇಜಾರಿಗೆ, ಸುಸ್ತಿಗೆ, ತಲೆನೋವಿಗೆ, ಗಂಟಲು ಕರಕರ ಅಂದರೆ, ನಾಲಿಗೆ ಒಣಗಿದರೆ, ಊಟ ಸೇರದಿದ್ದರೆ, ಮೈ ಕೈ ನೋವಿಗೆ, ಊರಿಂದ ಬಂದ ಕೂಡಲೇ, ಬಸ್ಸಿಂದ ಇಳಿದು ಬಂದರೆ, ಸುಮ್ಮನೆ ಬೋರ್ ಆದಾಗ, ಮನಸ್ಸಿಗೆ ನೋವಾದಾಗ ಹೇಳಲಿಕ್ಕೆ ಹಲವಾರು ಕಾರಣಗಳು ಆದರೆ ಕಾಫಿ ಕುಡಿಯಲು ಇಂಥದೇ ಕಾರಣಗಳು ಬೇಕೆಂದೇನೂ ಇಲ್ಲ. ಎಂತದೇ ಸಣ್ಣ ಪುಟ್ಟ ಸಮಸ್ಯೆಗಳಿಗೆಲ್ಲ ಕಾಫಿ ರಾಮಬಾಣವಿದ್ದಂತೆ. ಒಂದು ಲೋಟ ಕಾಫಿ, “ಒನ್ ಸಲ್ಯೂಷನ್ ಫಾರ್ ಆಲ್ ಪ್ರಾಬ್ಲಮ್ ಇಸ್ ಕಾಫಿ’ ನೀವೆನಂತಿರಿ!.
ಕಾಫಿ ಪ್ರಿಯ ಹಾವೇರಿಯಾಂವ್
ಮಾಲತೇಶ ಅಂಗೂರ, ಹಾವೇರಿ.

