
ಖಾಸಗಿ ಕಾಲೇಜಿನಲ್ಲಿ ವಿವಿ ಘಟಿಕೋತ್ಸವ: ವಿವಿ ಕ್ಯಾಂಪಸ್ ವಿದ್ಯಾರ್ಥಿಗಳಿಗಿಲ್ಲ ಅವಕಾಶ!
ಹಾವೇರಿ: ಇಲ್ಲಿನ ಹಾವೇರಿ ವಿಶ್ವವಿದ್ಯಾಲಯದ ಮೊದಲ ಘಟಿಕೋತ್ಸವವನ್ನು ವಿರೋಧ, ಪ್ರತಿರೋಧಗಳ ಮಧ್ಯೆಯು ಖಾಸಗಿ ಕಾಲೇಜಿನಲ್ಲಿ ನಡೆಸುತ್ತಿರುವ ಘಟಿಕೋತ್ಸವದಲ್ಲಿ ವಿವಿ ಕ್ಯಾಂಪಸ್ ವಿದ್ಯಾರ್ಥಿಗಳಿಗೆ, ಉಪನ್ಯಾಸಕರಿಗೆ, ಸಿಬ್ಬಂದಿಗಳಿಗೆ ಅವಕಾಶಕ್ಕಾಗಿ ಆಗ್ರಹಿಸಿ ಕೆರಿಮತ್ತಿಹಳ್ಳಿಯಲ್ಲಿರುವ ಹಾವೇರಿ ವಿವಿ ಎದುರು ಎಲ್ಲಾ ವಿಭಾಗದ ಕ್ಯಾಂಪಸ್ ವಿದ್ಯಾರ್ಥಿಗಳು ವಿವಿ ಕುಲಸಚಿವ ಎಸ್.ಟಿ. ಬಾಗಲಕೋಟೆ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಹಾವೇರಿ ವಿಶ್ವವಿದ್ಯಾಲಯದ ಪ್ರಥಮ ಘಟಿಕೋತ್ಸವವನ್ನು ಭಾರಿ ವಿರೋಧ, ಪ್ರತಿರೋಧ ಮಧ್ಯೆಯು ತುರಾತುರಿಯಲ್ಲಿ ನಗರದ ಖಾಸಗಿ ಕಾಲೇಜಿನಲ್ಲಿ ಎಪ್ರಿಲ್-೬ ರಂದು ನಡೆಸುತ್ತಿರುವುದು ಬೇಸರದ ಸಂಗತಿಯಾಗಿದೆ. ಜಿಲ್ಲೆಯ ಹೆಮ್ಮೆಯ ಕ್ಷಣವಾದ ಮೊದಲ ಘಟಿಕೋತ್ಸವವು ವಿಶ್ವವಿದ್ಯಾಲಯದ ಅಭಿವೃದ್ಧಿ ಕನ್ನೊಟದಿಂದ ಕ್ಯಾಂಪಸ್ ನಲ್ಲಿಯೇ ನಡೆಸಬೇಕೆಂದು ವಿದ್ಯಾರ್ಥಿ ಸಂಘಟನೆ ಸೇರಿದಂತೆ ಪ್ರಗತಿಪರರು, ಶಿಕ್ಷಣ ಪ್ರೇಮಿಗಳು, ಶಿಕ್ಷಣ ತಜ್ಞರು, ಚಿಂತಕರು, ವಿದ್ಯಾರ್ಥಿಗಳು, ಉಪನ್ಯಾಸಕರು, ಅನೇಕ ಸಂಘಟನೆಗಳು ಕುಲಪತಿಗಳಿಗೆ, ಜಿಲ್ಲಾಧಿಕಾರಿಗಳಿಗೆ, ಉನ್ನತ ಶಿಕ್ಷಣ ಸಚಿವರಿಗೆ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಲಾಗಿದೆ.
ಇಷ್ಟು ಪ್ರತಿರೋಧದ ನಡುವೆಯೂ ಖಾಸಗಿ ಕಾಲೇಜಿನಲ್ಲಿ ನಡೆಸುತ್ತಿರುವ ಘಟಿಕೋತ್ಸವಕ್ಕೆ ವಿಶ್ವವಿದ್ಯಾಲಯದ ಕ್ಯಾಂಪಸ್ ನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಎಲ್ಲಾ ವಿಭಾಗದ ವಿದ್ಯಾರ್ಥಿಗಳಿಗೆ ಅವಕಾಶ ಇಲ್ಲವೆಂದು ಸುದ್ದಿ ತಿಳಿದು ಎಲ್ಲಾ ವಿದ್ಯಾರ್ಥಿಗಳಿಗೆ ಬೇಸರ ಮೂಡಿದೆ. ವಿವಿ ಮೊದಲ ಘಟಿಕೋತ್ಸವವನ್ನು ಕಣ್ಣುತುಂಬಿಗೊಳಲು ಕಾಯುತ್ತಿರುವ ವಿದ್ಯಾರ್ಥಿಗಳಿಗೆ ನಿರಾಸೆ ಉಂಟಾಗಿದೆ.
ಘಟಿಕೋತ್ಸವ ಕಾರ್ಯಕ್ರಮವನ್ನು ನೋಡಬೇಕು, ಅದರಲ್ಲಿ ಭಾಗವಹಿಸಿ ನಮ್ಮ ಹೆಮ್ಮೆಯ ವಿವಿಯ ವಿದ್ಯಾರ್ಥಿಗಳು ಚಿನ್ನದ ಪದಕ ಸ್ವೀಕರಿಸುವ ಕ್ಷಣವನ್ನು ನಾವು ಕಣ್ಣುತುಂಬಿಕೊಂಡು ಸ್ಪೂರ್ತಿಯಾಗಿ ತೆಗೆದುಕೊಂಡು ಮುಂದಿನ ವರ್ಷದಲ್ಲಿ ನಾವು ಚೆನ್ನಾಗಿ ವಿದ್ಯಾಭ್ಯಾಸಮಾಡಿ ಚಿನ್ನದ ಪದಕ ಪಡೆಯಬೇಕು ಎಂಬ ಆಸೆಗೆ ತಣ್ಣಿರು ಎರಚಲಾಗಿದೆ ಎಂದು ಎಂದು ಕ್ಯಾಂಪಸ್ ವಿದ್ಯಾರ್ಥಿಗಳು ಬೇಸರ ವ್ಯಕ್ತಪಡಿಸಿದರು.
ಸರ್ಕಾರವು ನಯಪೈಸೆ ಅನುದಾನ ನೀಡಿಲ್ಲ, ವಿವಿಯಲ್ಲಿ ಹಣವಿಲ್ಲ ದಿನನಿತ್ಯದ ಚಟುವಟಿಕೆಗಳು ಹಾಗೂ ಕಾರ್ಯಕ್ರಮಗಳು ಪ್ರಮುಖವಾಗಿ ಘಟಿಕೋತ್ಸವವು ವಿದ್ಯಾರ್ಥಿಗಳು ನೀಡಿರುವ ಶುಲ್ಕ (ಫೀ) ದಲ್ಲಿ ಖರ್ಚು ವೆಚ್ಚ ಬಳಕೆ ಮಾಡುವುದಾದರೆ ಘಟಿಕೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಅವಕಾಶ ಯಾಕಿಲ್ಲ ? ಎಂದು ವಿದ್ಯಾರ್ಥಿಗಳು ದೂರಿದರು. ನಮ್ಮ ತಂದೆ-ತಾಯಿಗಳು ಕಷ್ಟಪಟ್ಟು ದುಡಿದು ನಮ್ಮನ್ನು ಸಾವಿರಾರು ರೂಪಾಯಿ ಶುಲ್ಕ ಕಟ್ಟಿ ವಿದ್ಯಾಭ್ಯಾಸ ಮಾಡಿಸುತ್ತಿದ್ದಾರೆ. ಪ್ರಶ್ನೆಸುವುದು ಮನವಿ ಮಾಡುವುದು ಸಂವಿಧಾನದ ವಿಧಿ ೧೯ ರ ಹಕ್ಕಾಗಿದೆ.
ವಿದ್ಯಾರ್ಥಿಗಳ ಪ್ರಶ್ನೆಗೆ ಹಾರಿಕೆ ಉತ್ತರ ನೀಡಿದ ಕುಲಪತಿ ಹಾಗೂ ಕುಲಸಚಿವರು: ಮನವಿ ಪತ್ರ ಸ್ವೀಕರಿಸಿದ ಕುಲಸಚಿವ ಎಸ್.ಟಿ. ಬಾಗಲಕೋಟೆ ಮಾತನಾಡಿ, ನಿಮ್ಮ ಮನವಿಯನ್ನು ಕುಲಪತಿಗಳ ಜೊತೆಗೆ ಚರ್ಚೆ ನೆಡೆಸುತ್ತೇವೆ. ರಾಜ್ಯಪಾಲರ ಬಿಗಿ ಭದ್ರತೆ ಇರುವುದರಿಂದ ಎಲ್ಲಾ ವಿದ್ಯಾರ್ಥಿಗಳಿಗೆ ಅವಕಾಶ ಕೊಡಲು ಕಷ್ಟವಾಗುತ್ತದೆ, ಆದರೂ ನಿಮ್ಮ ಮನವಿಯ ಕುರಿತು ಉನ್ನತ ಅಧಿಕಾರಿಗಳ ಜೊತೆಗೆ ಚರ್ಚಿಸುತ್ತೇವೆ ಎಂದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಾದ ರಕ್ಷಿತಾ ಎಸ್ ಬಿ, ಐಶ್ವರ್ಯ ಬಿ ಎಮ್, ಮಂಗಳಾ ಜೆ ಎಮ್, ಶಂಭುಲಿಂಗ ಸವದತ್ತಿ, ಬಸವರಾಜ ಎಸ್, ಪೂಜಾ ಬಾರ್ಕಿ, ವಿ ಎಸ್ ಲಿಂಗಯ್ಯ, ಸಂದೀಪ್, ಪರಶುರಾಮ, ಕವಿತಾ ಪಿ ವಿ, ಈಶ್ವರಿ ಎಮ್ ಬಿ, ನಿಂಗರಾಜ ಕೆ ಟಿ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

