
ಡಾ. ರಾಜ್ ಕುಮಾರ್ ಅವರು ಒಮ್ಮೆ ನನಗೊಂದು ಘಟನೆಯನ್ನು ಹೇಳಿದರು.
“ನನಗೆ ಇವತ್ತು ನಿರೀಕ್ಷೆ ಮಾಡದೆ ಇರೋದೆಲ್ಲ ಸಿಕ್ಕಿದೆ. ಆದರೆ, ನಮ್ಮ ಊರಿಗೆ ಹೋದಾಗೆಲ್ಲ ಹೊಲ, ತೋಪು ಅಂತ ತಿರುಗಾಡ್ತೇನೆ. ಆಗ ಎಲ್ಲ ನೆನಪುಗಳೂ ಒತ್ತರಿಸಿ ಬರುತ್ವೆ. ಈಗ ಅವರಲ್ಲಿ ಅನೇಕರು ಬದುಕಿಲ್ಲ. ಅವರ ನೆನಪು ಕಾಡ್ಸುತ್ತೆ. ಒಬ್ನೇ ಅಲ್ಲಿ ಓಡಾಡ್ತ ಇದ್ರೆ ಮರಗಿಡಗಳಲ್ಲಿ ಎಲೆ ಅಲುಗಾಡೋ ಸದ್ದು, ಹಕ್ಕಿಗಳ ಚಿಲಿಪಿಲಿ, ಜೊತೆಗೆ ನನ್ ಕಿವೀಲಿ ಯಾರೊ ಪಿಸುಗುಟ್ಟಿದ ಅನುಭವ. ಗಾಳಿ ಮೂಲಕ ಮಾತಾಡಿದ ಹಾಗೆ; ಹಕ್ಕಿಗಳ ಮೂಲಕ ಮಿಡಿದ ಹಾಗೆ. ದೂರದಲ್ಲಿ ನೋಡಿದ್ರೆ ಸಮಾಧಿಗಳು. ಆಗ ನಾನು ಒಬ್ನೇ ಅಂದ್ಕೊತೀನಿ- ‘ಅಯ್ಯೋ ನಿಮ್ ಮನೆ ಕಾಯ್ ಹೋಗ, ಸುಮ್ನೆ ಯಾಕ್ ಪಿಸುಗುಡ್ತೀರಿ? ಗಾಳೀಲ್ ಯಾಕೆ ತೇಲ್ತಿರಿ? ರೂಪುಗಳಾಗ್ ಬನ್ರಪ್ಪ, ರೂಪುಗಳಾಗ್ ಬನ್ರಿ ಅಂದರೆ ಒಂದ್ ರೂಪಾನೂ ಇಲ್ಲ; ಬರೀ ಪಿಸುಗುಡೊ ಸದ್ದು! ಸಮಾಧಿ! ಆಗ ನಂಗೆ ಸಂಕಟ ತಡ್ಕಳಾಕಾಗಲ್ಲ… ಒಬ್ನೇ ಕೂತ್ ಅತ್ತು ಬಿಡ್ತೇನೆ.”
ರಾಜ್ ಕುಮಾರ್ ಅವರ ಈ ಮಾತುಗಳಲ್ಲಿ ಕವಿತೆಯೊಂದರ ರೂಪಕಶಕ್ತಿಯಿದೆ. ಇಂತಹ ಹಲವು ಪ್ರಸಂಗಗಳ ಮೂಲಕ ಅವರ ವ್ಯಕ್ತಿತ್ವವನ್ನು ನಿರೂಪಿಸುತ್ತ ಹೋಗಬಹುದು. ಒಂದೇ ಮಾತಿನಲ್ಲಿ ಹೇಳಬೇಕೆಂದರೆ- ನನಗೆ ತುಂಬಾ ಮಹತ್ವಪೂರ್ಣವೆನಿಸಿದ್ದು- ರಾಜ್ ಕುಮಾರ್ ಎಂಬ ರೂಪದೊಳಗಿನ ರೂಪಕ ಮತ್ತು ಮೈಯ್ಯೊಳಗಿನ ಮನಸ್ಸು- ಮುತ್ತುರಾಜ್!
ರಾಜ್ ಕುಮಾರ್ ಅವರು ಹೇಳಿದ ಇನ್ನೊಂದು ಘಟನೆ ಹೀಗಿದೆ:
ಮದ್ರಾಸಿನಲ್ಲಿದ್ದಾಗ ಇವರಿಗಾಗಿ ಹೆಚ್ಚು ಮೌಲ್ಯದ ಒಂದು ಮಂಚವನ್ನು ಖರೀದಿಸಲಾಯಿತು. ಅನೇಕ ಚಿತ್ತಾರಗಳಿದ್ದ ಈ ಮಂಚ ಆಕರ್ಷಕವಾಗಿತ್ತು. ಸ್ವಲ್ಪ ರಿಪೇರಿ ಮಾಡಿಸಿ ಇದನ್ನು ಮತ್ತಷ್ಟು ಆಕರ್ಷಕಗೊಳಿಸಲಾಯಿತು. ಹೊಚ್ಚ ಹೊಸ ಕರ್ಟನ್, ಹಾಸಿಗೆ, ತಲೆದಿಂಬುಗಳನ್ನು ತಂದು ಸುಸಜ್ಜಿತಗೊಳಿಸಲಾಯಿತು. ಬಡತನದ ಬೇಗೆಯಲ್ಲಿ ಬೆಂದು ಆಕಾರ ಪಡೆದ ಕಲಾವಿದ ಮನಸ್ಸಿಗೆ ಈ ಮಂಚದ ಅನುಭವ ಹೇಗಾಗಿರಬೇಕು!
ಮೊದಲನೆಯ ದಿನ, ರಾಜ್ ಕುಮಾರ್ ಅವರು ಮಂಚದ ಮೇಲೆ ಮಲಗಿದ್ದಾಗ ಸರಿಯಾಗಿ ನಿದ್ದೆ ಬರಲಿಲ್ಲ; ಎಚ್ಚರ, ಅರೆ ಎಚ್ಚರಗಳ ನಡುವೆ ಹೊರಳಾಡಿದರು. ಹೊಸ ಮಂಚವಾದ್ದರಿಂದ ಹೊಂದಿಕೆಯಾಗಿಲ್ಲವೆಂದು ಭಾವಿಸಿದರು. ಆ ನಂತರ ಅಭ್ಯಾಸವಾಗುತ್ತದೆ ಎಂದುಕೊಂಡರು. ಆದರೆ ಮತ್ತೆ ಎರಡು-ಮೂರು ದಿನ ಇದೇ ಅನುಭವ. ಎಷ್ಟು ಕಷ್ಟಪಟ್ಟರೂ ನಿದ್ದೆ ಮಾಡಲು ಸಾಧ್ಯವಾಗಲಿಲ್ಲ; ಎದ್ದರು; ಕೂತರು; ಮತ್ತೆ ಮಂಚದ ಮೇಲೆ ಮಲಗಿದರು; ಇಲ್ಲ. ಸರಿಯಾಗಿ ನಿದ್ದೆ ಬರಲೇ ಇಲ್ಲ. ಆಗ ಅವರಿಗೆ ಅರಿವಾಯಿತು: ಅವರ ಮೈ ಮತ್ತು ಮನಸ್ಸುಗಳು ಒಣ ಶ್ರೀಮಂತಿಕೆಯ ಮಂಚದೊಂದಿಗೆ ಹೊಂದಿಕೊಳ್ಳಲು ಸಿದ್ಧವಾಗಿರಲಿಲ್ಲ. ಕೂಡಲೇ ನಿರ್ಧರಿಸಿದರು- ‘ಈ ಶ್ರೀಮಂತ ಮಂಚ ನನ್ನದಲ್ಲ. ಇದು ನನ್ನೊಳಗಿನ ಭಾಗವಲ್ಲ’ ಎಂದು. ಅಂದಿನಿಂದ ಮೊದಲಿನಂತೆ ನೆಲದ ಮೇಲೆ ಮಲಗತೊಡಗಿದರು…
ಈ ನೈಜ ಘಟನೆಯು ಡಾ. ರಾಜ್ ಕುಮಾರ್ ಅವರ ಮನೋಧರ್ಮಕ್ಕೆ ಉತ್ತಮ ಪ್ರತೀಕವಾಗಬಲ್ಲದು. ಶ್ರೀಮಂತ ಮಂಚದೊಂದಿಗೆ ಮಾತಾಡದ ಮನಸ್ಸು, ಸದಾ ಸರಳತೆಯಲ್ಲೇ ಸುಖ ಕಾಣುತ್ತದೆ. ಹಣ, ಅಂತಸ್ತುಗಳು ಲಭ್ಯವಾದರೂ ಮೂಲದ ಸಾಮಾಜಿಕ ಆರ್ಥಿಕ ನೆಲೆಗಳು ಜಾಗೃತವಾಗಿ ‘ಮುತ್ತುರಾಜ್’ ಚೈತನ್ಯಶೀಲವಾಗಿರುವುದನ್ನು ತೋರಿಸುತ್ತವೆ.
ಮುತ್ತುರಾಜ್ ಮಣ್ಣಾಗಿದ್ದಾರೆ; ಆದರೆ ರೂಪಕಗಳ ಮೂಲಕ ಮಾತಾಡುತ್ತಲೇ ಇರುತ್ತಾರೆ.
-ಬರಗೂರು ರಾಮಚಂದ್ರಪ್ಪ
ಕೃಪೆ: -‘ಸಂಸ್ಕೃತಿ: ಶ್ರಮ ಮತ್ತು ಸೃಜನಶೀಲತೆ’ (ಪುಸ್ತಕ, ಪುಟ: 478-479, 2005)

