
ಪಶ್ಚಿಮ ಪಜವೀಧರ ಪರಿಷತ್ ಚುನಾವಣೆಗೆ ಸಿದ್ಧತೆ | ಕೈ ಅಭ್ಯರ್ಥಿಯಾಗಲು ಹಾವೇರಿಯಲ್ಲಿ ಪೈಪೋಟಿ!
ಹಾವೇರಿ:ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ಚುನಾವಣೆಗೆ ಸಂಬಂಧಪಟ್ಟಂತೆ ಹೊಸದಾಗಿ ಮತದಾಧರ ಪಟ್ಟಿಯಲ್ಲಿ ಹೆಸರುಗಳನ್ನು ನೋಂದಾಯಿಸಲು ಸಾರ್ವಜನಿಕರಿಗೆ ಹಾಗೂ ಮತದಾರರಿಗೆ ಅಗತ್ಯ ಜಾಗೃತಿ ಮೂಡಿಸಲು ಜಿಲ್ಲಾಡಳಿತ ಮುಂದಾಗಿದ್ದು, ವಿಧಾನ ಪರಿಷತ್ ಪಶ್ಚಿಮ ಪದವೀಧರ ಮತಕ್ಷೇತ್ರದ ಚುನಾವಣೆಗೆ ರಾಜಕೀಯ ಪಕ್ಷಗಳು ಪೂರ್ವಸಿದ್ದತೆ ನಡೆಸಿದ್ದು, ಪದವೀಧರರ ನೋಂದಣಿಯ ಕಾರ್ಯವನ್ನು ಭರದಿಂದ ಕೈಗೊಂಡಿವೆ.
ಕರ್ನಾಟಕ ಪಶ್ಚಿಮ ಪದವೀಧರ ಕ್ಷೇತ್ರ ಧಾರವಾಡ, ಹಾವೇರಿ, ಕಾರವಾರ ಹಾಗೂ ಗದಗ ಜಿಲ್ಲೆಗಳನ್ನು ಒಳಗೊಂಡಿದೆ. ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆಗೆ ಇನ್ನು ಒಂದು ವರ್ಷಬಾಕಿ ಇದ್ದು, ಹಾವೇರಿ ಜಿಲ್ಲೆಯಲ್ಲಿ ಅತೀ ಹೆಚ್ಚು ಅಂದರೆ ೨೩ ಸಾವಿರಕ್ಕೂ ಹೆಚ್ಚು ಪದವಿಧರ ಮತದಾರರನ್ನು, ಕಾರವಾರ ಜಿಲ್ಲೆಯು ಅತ್ಯಂತ ಕಡಿಮೆ (೧೩ ಸಾವಿರಕ್ಕೂ ಅಧಿಕ) ಮತದಾರರನ್ನು ಹೊಂದಿದೆ.
ಬೆಳಗಾವಿ ಪ್ರಾದೇಶಿಕ ಆಯುಕ್ತರ ವಿಭಾಗದ ನಿರ್ದೇಶನದ ಮೇರೆಗೆ ಜಿಲ್ಲಾ ನೋಂದಣಾಧಿಕಾರಿಗಳು ಸಹ ಸರ್ವಪಕ್ಷಗಳ ಸಭೆ ನಡೆಸಿ, ಮತಪಟ್ಟಿ ಸಿದ್ದತೆಗೆ ಸಹಕರಿಸಲು ಮನವಿ ಮಾಡಿದೆ. ಇದಕ್ಕೆ ಸರ್ವಪಕ್ಷಗಳು ಸಕಾರಕವಾಗಿ ಸ್ಪಂದಿಸಿವೆ. ಪ್ರಸ್ತುತ ಪಶ್ಚಿಮ ಪದವೀಧರ ಮತಕ್ಷೇತ್ರ ಬಿಜೆಪಿ ವಶದಲ್ಲಿದೆ. ೨೦೨೦ರಲ್ಲಿ ನಡೆದ ಚುನಾವಣೆಯಲ್ಲಿ ಪ್ರೊ.ಎಸ್.ವಿ.ಸಂಕನೂರ ಈ ಕ್ಷೇತ್ರದಲ್ಲಿ ಗೆಲವು ಸಾಧಿಸಿದ್ದು, ಬಸವರಾಜ ಗುರಿಕಾರ, ಡಾ.ಆರ್. ಎಂ.ಕುಬೇರಪ್ಪ ಸೋಲುಂಡಿದ್ದರು.
ಪಸ್ತುತ ಈ ಕ್ಷೇತ್ರಕ್ಕೆ ಅಭ್ಯರ್ಥಿಯಾಗಲು ಕಾಂಗ್ರೆಸ್ನಲ್ಲಿ ಪೈಪೋಟಿ ಕಂಡು ಬರುತ್ತಿದೆ. ಕಳೆದಬಾರಿ ಸೋಕುಂಡಿದ್ದ ಡಾ.ಆರ್. ಎಂ.ಕುಬೇರಪ್ಪ ಬರುವ ಚುನಾವಣೆಯಲ್ಲಿ ತಮಗೆ ಇಲ್ಲವೇ ತಮ್ಮ ಪುತ್ರನಿಗೆ ಕಾಂಗ್ರೆಸ್ ಟಿಕೆಟ್ ನೀಡುವಂತೆ ಬೇಡಿಕೆಮಂಡಿದ್ದಾರೆ. ಇತ್ತ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪ್ರಭಾವಿ ಯುವ ಮುಖಂಡ ಸಂಜೀವಕುಮಾರ ನೀರಲಗಿ ಅವರ ಹೆಸರು ಸಹ ಪ್ರಭಲವಾಗಿ ಕೇಳಿಬರುತ್ತಿದೆ. ಇದಕ್ಕೆ ಕಾರಣವು ಇಲ್ಲದಿಲ್ಲ. ನಿಗಮ-ಮಂಡಳಿಯ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದ ನೀರಲಗಿ ಅವರು ಅಧ್ಯಕ್ಷ ಸ್ಥಾನಕ್ಕೆ ಬೇಡಿಕೆ ಇಟ್ಟ ಸಂದರ್ಭದಲ್ಲಿ ಕೆ.ಪಿ.ಸಿ.ಸಿ ಅಧ್ಯಕ್ಷರು ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ ನೀರಲಗಿ ಅವರಿಗೆ ಅಧ್ಯಕ್ಷ ಸ್ಥಾನ ಬೇಡ ಮುಂಬರುವ ವಿಧಾನಪರಿಷತ್ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಲಾಗುವುದು ಎಂದು ಭರವಸೆ ನೀಡಿದ ಹಿನ್ನಲೆಯಲ್ಲಿ ಸಂಜೀವಕುಮಾರ ನೀರಲಗಿ ಅವರ ಹೆಸರು ಕಾಂಗ್ರೆಸ್ ಅಭ್ಯರ್ಥಿಗಳಲ್ಲಿ ಮುಂಚೂಣಿಯಲ್ಲಿದೆ.
ಇನ್ನು ಯುವ ಉದ್ಯಮಿ ಹಾವೇರಿಯ ರಾಘವೇಂದ್ರ ಬಾಸೂರ ಅವರು ಹೆಸರು ಸಹ ಕಾಂಗ್ರೆಸ್ ವಲಯದಲ್ಲಿ ಪ್ರಭಲವಾಗಿ ಕೇಳಿಬರುತ್ತಿದೆ. ಕಳೆದ ಎರಡು ವರ್ಷಗಳಿಂದ ಬಾಸೂರ ಅವರು ನಿರುದ್ಯೋಗಿ ಪದವೀಧರರಿಗಾಗಿ ತಮ್ಮ ಸ್ನೇಹಿತರ ಬಳಗದೊಂದಿಗೆ ಉದ್ಯೋಗಮೇಳಗಳನ್ನು ಆಯೋಜಿಸುತ್ತಾ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದು, ಪದವಿಧರರ ನೊಂದಣಿಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಇವರಜೊತೆ ಹಾನಗಲ್ಲ ಕ್ಷೇತ್ರದ ಶಾಸಕ ಮಾನೆ ಅವರ ಆಪ್ತ ಮಂಜು ಅವರ ಹೆಸರು ಸಹ ಕೇಳಿಬರುತ್ತಿದೆ.
ಅಧಿಕಾರದಲ್ಲಿರುವ ಕಾಂಗ್ರೆಸ್ ಗ್ಯಾರಂಟಿಗಳು, ನಿರುದ್ಯೋಗಿಗಳಿಗೆ ವಿದ್ಯಾನಿಧಿ ಯೋಜನೆಯ ಕುರಿತು ಪದವೀಧರರಿಗೆ ಮನವರಿಕೆ ಮಾಡಿ, ಮತಗಳನ್ನು ಗಟ್ಟಿಮಾಡಿಕೊಳ್ಳಲು ಕಾಂಗ್ರೆಸ್ ಮುಂದಾಗಿದೆ. ಬಿಜೆಪಿ-ಜೆಡಿಎಸ್ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಆಕಾಂಕ್ಷಿಗಳ ಮತ್ತು ಮುಖಂಡರು ಪದವಿಧರರ ನೊಂದಣಿಗೆ ಮುಂದಾಗಿದ್ದು, ತಮ್ಮ ವೈಯಕ್ತಿಕ ಸಾಧನೆ, ಬಿಜೆಪಿ-ಕಾಂಗ್ರೆಸ್, ಜೆಡಿಎಸ್ ಸರ್ಕಾರಗಳ ಉತ್ತಮ ಕಾರ್ಯಗಳು ಹಾಗೂ ಜನಪ್ರಿಯ ಯೋಜನೆ ಬಗ್ಗೆ ಮತದಾರರಿಗೆ ತಿಳಿಸಿ, ತಮ್ಮನ್ನು ಬೆಂಬಲಿಸಲು ಕೋರುತ್ತಿದ್ದು, ಬರುವ ದಿನಗಳಲ್ಲಿ ಪಶ್ಚಿಮ ಪದವೀಧರ ಪರಿಷತ್ ಚುನಾವಣೆಯ ಅಖಾಡ ರಂಗುಪಡೆದುಕೊಳ್ಳಲಿದೆ.
೨೦೨೦ರಂತೆ ಮತದಾರರು
ಹಾವೇರಿ-೨೩,೧೮೫
ಧಾರವಾಡ-೨೦,೬೯೮
ಗದಗ-೧೫,೩೬೨
ಕಾರವಾರ: ೧೩,೦೫೫

