ಪೌರಕಾರ್ಮಿಕರ ಮಾದರಿಯಲ್ಲಿ ಹೊರಗುತ್ತಿಗೆನಭಕರರ ನೇರಪಾವತಿಗೊಳಪಡಿಸಿ ಖಾಯಂಗೊಳಿಸಲು ಆಗ್ರಹ
ಪೌರಾಡಳಿತ ಸಚಿವ ರಹೀಂ ಖಾನ್ರಿಗೆ ಹೊರಗುತ್ತಿಗೆ ನೌಕರರ ಸಂಘದಿಂದ ಮನವಿ
ಹಾವೇರಿ: ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುವ ಪೌರಕಾರ್ಮಿಕರನ್ನು ಖಾಯಂ ಮಾಡಲು ಮುಂದಾಗಿರುವ ಸರಕಾರ ಪೌರಕಾರ್ಮಿಕರೊಟ್ಟಿಗೆ ಹೊರಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುವ ವಾಹನ ಚಾಲಕರು ನೀರು ಸರಬರಾಜು ಸಹಾಯಕರು, ಲೋಡರ್ಸ್, ಕ್ಲೀನರ್ಸ್ ಸೇರಿದಂತೆ ೧೫ಸಾವಿರಕ್ಕು ಹೆಚ್ಚು ನೌಕರರನ್ನು ಗುತ್ತಿಗೆಯಲ್ಲಿ ಉಳಿಸಲಾಗಿದೆ. ಹೊರಗುತ್ತಿಗೆ ನೌಕರರಿಗೆ ಪೌರಕಾರ್ಮಿಕರ ಮಾದರಿಯಲ್ಲಿ ನೇರಪಾವತಿಗೊಳಪಡಿಸಿ ಖಾಯಂಗೊಳಿಸಲು ಆಗ್ರಹಿಸಿ ಗುರುವಾರ ಹಾವೇರಿಯಲ್ಲಿ ಪೌರಾಡಳಿತ ಸಚಿವ ರಹೀಂ ಖಾನ್ರಿಗೆ ಕರ್ನಾಟಕ ರಾಜ್ಯ ಪಾಲಿಕೆ, ನಗರಸಭೆ, ಪಟ್ಟಣ ಪಂಚಾಯತಿ ಹೊರಗುತ್ತಿಗೆ ನೌಕರರ ಸಂಘದ ಪದಾಧಿಕಾರಿಗಳು ಮನವಿ ಅರ್ಪಿಸಿದರು.
ಸಚಿವರಿಗೆ ಅರ್ಪಿಸಿದ ಮನವಿಯಲ್ಲಿ ನಗರಗಳ ಸ್ವಚ್ಛತೆ ಹಾಗೂ ಕುಡಿಯುವ ನೀರು ನಿರ್ವಹಣೆಯಲ್ಲಿ ಹೊರಗುತ್ತಿಗೆ ನೌಕರರ ಪಾತ್ರ ಮಹತ್ವದ್ದಾಗಿದೆ. .೨೦೧೭ರಲ್ಲಿ ಪೌರಕಾರ್ಮಿಕರ ನೇಮಕಾತಿಗೊಳಿಸಿದಾಗಲೂ ಹೊರಗುತ್ತಿಗೆ ನೌಕರರನ್ನು ಗುತ್ತಿಗೆಯಲ್ಲಿ ಉಳಿಸಲಾಯಿತು. ೧೯೬೪ರ ಪೌರಾಡಳಿತ ಕಾಯ್ದೆ ಪ್ರಕಾರ ಕಸ ಸಾಗಿಸುವ ವಾಹನ ಚಾಲಕರು, ಲೋಡರ್ಸ್ ,ಕ್ಲೀನರ್ಸ್, ವೆಲ್ಡರ್ಸ್, ಯೂಜಿಡಿ ಕಾರ್ಮಿಕರು ಸಹ ಪೌರಕಾರ್ಮಿಕರೆಂದು ಗುರುತಿಸಲಾಗಿದೆ.
ಆದಾಗಿಯೂ ನಗರಾಭಿವೃದ್ಧಿ ಅಧಿಕಾರಿಗಳು ತಾರತಮ್ಯ ಎಸಗಿ ನೇರನೇಮಕಾತಿ ಹಾಗೂ ನೇರಪಾವತಿಯಲ್ಲಿ ಹೊರಗುತ್ತಿಗೆ ನೌಕರರಿಗೆ ಅನ್ಯಾಯ ಎಸಗಿದ್ದಾರೆ. ಈಗಲೂ ಸಹ ಹೊರಗುತ್ತಿಗೆ ನೌಕರರನ್ನು ಗುತ್ತಿಗೆಯಲ್ಲಿ ಮುಂದುವರಿಸುವ ಸರಕಾರದ ನೀತಿ ಒಂದು ಕಣ್ಣಿಗೆ ಬೆಣ್ಣೆ ಒಂದು ಕಣ್ಣಿಗೆ ಸುಣ್ಣ ಎಂಬಂತಾಗಿದೆ..
ಒಂದೇ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುವವರ ಮಧ್ಯೆ ಒಡೆದಾಳುವ ನೀತಿ ಅನುಸರಿಸುವುದು ಶೋಭೆಯಲ್ಲ. ಕಳೆದ ೨೦೧೭ ರಲ್ಲಿ ಪೌರಕಾರ್ಮಿಕರನ್ನು ಖಾಯಂಗೊಳಿಸಲಾಯಿತು. ಹೊರಗುತ್ತಿಗೆ ನೌಕರರನ್ನು ನೇರಪಾವತಿಗೆ ತರುವುದಾಗಿ ಕಾಂಗ್ರೆಸ್ ಸರಕಾರ ಅಶ್ವಾಸನೆ ನೀಡಿತ್ತು. ಕಳೆದ ಸರಕಾರದಲ್ಲಿ ತೀವ್ರ ಹೋರಾಟದ ಪರಿಣಾಮ ನಗರ ಸ್ಥಳೀಯ ಸಂಸ್ಥೆಗಳ ಹೊರಗುತ್ತಿಗೆ ನೌಕರರ ನೇರಪಾವತಿ ಕಡತ ಹಣಕಾಸು ಇಲಾಖೆಯ ಪರಿಶೀಲನೆಯಲ್ಲಿರುವಾಗಲೆ ವಿಧಾನಸಭೆ ಸಾರ್ವತ್ರಿಕ ಚುನಾವಣೆಗಳು ಘೋಷಣೆಯಾಗಿ ಕಡತ ನಗರಾಭಿವೃದ್ಧಿ ಇಲಾಖೆಗೆ ವಾಪಸ್ ಆಗಿದ್ದು. ಈ ಸಂಬಂಧ ಕಡತವನ್ನು ಸಂಪುಟದಲ್ಲಿ ಅಂಗೀಕರಿಸುವಂತೆ ಮನವಿ ಮಾಡಲಾಗಿದೆ,
ನೀರು ಸರಬರಾಜು ಸಹಾಯಕರು ಬೀದಿದೀಪ ನಿರ್ವಾಹಕರು ಸ್ಮಶಾನ ಕಾವಲುಗಾರರನ್ನು ಏಕಕಾಲಕ್ಕೆ ನೇರಪಾವತಿಗೆ ತಂದು ಖಾಯಂಗೊಳಿಸಬೇಕು. ಮಾಸಿಕ ೨೦೦೦ರೂ ಸಂಕಷ್ಟ ಭತ್ಯೆಯನ್ನು ಸ್ವಚ್ಛತೆಯಲ್ಲಿ ತೊಡಗಿಕೊಂಡ ಈ ಎಲ್ಲ ಹೊರಗುತ್ತಿಗೆ ನೌಕರರಿಗೂ ವಿಸ್ತರಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಮನವಿ ಅರ್ಪಿಸುವ ಸಂದರ್ಭದಲ್ಲಿ ಹೊರಗುತ್ತಿಗೆ ನೌಕರರ ಸಂಘದ ಹಾವೇರಿ ಜಿಲ್ಲಾಧ್ಯಕ್ಷ ರಾಜು ಹೊಸಮನಿ, ಜಿಲ್ಲಾ ಉಪಾಧ್ಯಕ್ಷ ಶಿವಪ್ಪ ಕಟ್ಟಿಮನಿ, ಜಿಲ್ಲಾ ಕಾರ್ಯದರ್ಶಿ ಗುರುನಾಥ ಅಡಿವೆಣ್ಣನವರ,ಜಿಲ್ಲಾ ಖಜಾಂಚಿ ರಮೇಶ ಭೋವಿ, ಪದಾಧಿಕಾರಿಗಳಾದ ನಾಗರಾಜ್, ಪ್ರಶಾಂತ ಇಂಗಳಗಿ,ಲಕ್ಷ್ಮಣ ಪೂಜಾರ, ಪರಶುರಾಮ ಸಂಗೂರ, ಮಲ್ಲೇಶಪ್ಪ ಕೊಪ್ಪದ, ಭೀಮಣ್ಣ ಚನ್ನದಾಸರ ಮತ್ತಿತರರು ಇದ್ದರು.