
ಸತ್ಯದ ಜೊತೆ ದೈವ ಶಕ್ತಿ ಸದಾ ಇರುತ್ತದೆ : ಶ್ರೀ ರಂಭಾಪುರಿ ಜಗದ್ಗುರುಗಳು
ಹಾವೇರಿ: ಆಧುನಿಕ ಕಾಲದಲ್ಲಿ ಶಾಂತಿ ತೃಪ್ತಿ ಕಾಣುತ್ತಿಲ್ಲ. ಬದುಕಿನಲ್ಲಿ ಹೋರಾಟ ಸಂಘರ್ಷ ನಿತ್ಯ ತಪ್ಪಿದ್ದಲ್ಲ. ಒಂದೆಡೆ ವೈಚಾರಿಕ ಪ್ರಜ್ಞೆ ಬೆಳೆಯುತ್ತಿದೆ. ಇನ್ನೊಂದೆಡೆಗೆ ಸಂಸ್ಕೃತಿ ಸಭ್ಯತೆ ಮಾಯವಾಗುತ್ತಿವೆ. ನಮ್ಮ ನಡೆ ನುಡಿಗಳು ಯಾವಾಗಲೂ ಸತ್ಯದ ಪರವಾಗಿರಬೇಕು. ಸುಳ್ಳಿನ ಜೊತೆ ದುಷ್ಟ ಶಕ್ತಿ ಇದ್ದರೆ ಸತ್ಯದ ಜೊತೆಗೆ ದೈವಶಕ್ತಿ ಸದಾ ಇರುತ್ತದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ಸೋಮವಾರ ತಾಲೂಕಿನ ನೆಗಳೂರು ಸಂಸ್ಥಾನ ಹಿರೇಮಠದ ಆವರಣದಲ್ಲಿ ಶ್ರೀ ಜಗದ್ಗುರು ಪಂಚಾಚಾರ್ಯ ಯುಗಮಾನೋತ್ಸವ ಹಾಗೂ ವೀರಶೈವ ಪಂಚಸೂತ್ರಗಳ ಪ್ರವಚನ ಗ್ರಂಥ ಬಿಡುಗಡೆ ಅಂಗವಾಗಿ ಜರುಗಿದ ಜನ ಜಾಗೃತಿ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು. ವೀರಶೈವ ಧರ್ಮದ ಇತಿಹಾಸ ಮತ್ತು ಪರಂಪರೆ ಅಪೂರ್ವವಾದುದು. ಶ್ರೀ ಜಗದ್ಗುರು ರೇಣುಕಾಚಾರ್ಯರಿಂದ ಬೋಧಿಸಲ್ಪಟ್ಟ ಶಿವಾದ್ವೈತ ತತ್ವ ಸಿದ್ಧಾಂತದ ಚಿಂತನೆಗಳು ಸಕಲರ ಬಾಳಿನಲ್ಲಿ ಬೆಳಕು ತೋರಿವೆ ಎಂದರು.
ಸಾನ್ನಿಧ್ಯ ವಹಿಸಿದ ಶ್ರೀ ಉಜ್ಜಯಿನಿ ಸಿದ್ಧಲಿಂಗ ಜಗದ್ಗುರುಗಳು ತಮ್ಮ ಆಶೀರ್ವಚನದಲ್ಲಿ ಸತ್ಯ ಮನುಷ್ಯನನ್ನು ಬದಲಾಯಿಸುತ್ತದೆ. ಕೆಲಸ ಮಾಡಲು ಮನಸ್ಸಿದ್ದರೆ ನೂರಾರು ಮಾರ್ಗಗಳು ಕಾಣುತ್ತವೆ. ಜೀವನ ನಮಗೆ ಏನೆಲ್ಲಾ ಕೊಟ್ಟಿದೆ ಎಂದು ಸರಿಯಾಗಿ ತಿಳಿದರೆ ನಾವೆಷ್ಟು ಅದೃಷ್ಟವಂತರೆಂದು ಗೊತ್ತಾಗುತ್ತದೆ ಎಂದರು.
ಸಾನ್ನಿಧ್ಯ ವಹಿಸಿದ ಶ್ರೀ ಶ್ರೀಶೈಲ ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಜಗದ್ಗುರುಗಳು ತಮ್ಮ ಆಶೀರ್ವಚನದಲ್ಲಿ ಸುಖ ಬಯಸುವುದು ಮನುಷ್ಯನ ಗುಣ. ದುರ್ನಡತೆಯಿಂದಾಗಿ ಮನುಷ್ಯನ ಬದುಕು ಛಿದ್ರಗೊಂಡಿದೆ. ಅಧಿಕಾರ ಕೀರ್ತಿ ಧನ ಕನಕ ವಸ್ತು ವಾಹನ ಮತ್ತು ದೇಹ ಸೌಖ್ಯಕ್ಕಾಗಿ ಬಡಿದಾಡಿ ಮಡಿದವರೆಷ್ಟೋ ಜನ. ಅವರೆಲ್ಲರೂ ಕಾಲ ಗರ್ಭದಲ್ಲಿ ಅಡಗಿ ಹೋಗಿದ್ದಾರೆ. ಜಗದ ಜನತೆಗೆ ಬೆಳಕು ತೋರುವ ಸನ್ಮಾರ್ಗ ತೋರಿದ ಶ್ರೀ ಜಗದ್ಗುರು ಪಂಚಾಚಾರ್ಯರು ಯಾವಾಗಲೂ ಶಾಶ್ವತ. ನೆಗಳೂರು ಗುರುಶಾಂತೇಶ್ವರ ಶ್ರೀಗಳು ರಚನಾತ್ಮಕ ಕಾರ್ಯ ಕೈಗೊಂಡಿದ್ದು ತಮಗೆ ಸಂತೋಷ ತಂದಿದೆ ಎಂದರು.
ಸಾನ್ನಿಧ್ಯ ವಹಿಸಿದ ಶ್ರೀ ಕಾಶಿ ಪೀಠದ ಡಾ. ಚಂದ್ರಶೇಖರ ಜಗದ್ಗುರುಗಳು ತಮ್ಮ ಆಶೀರ್ವಚನದಲ್ಲಿ ಪ್ರತಿಯೊಬ್ಬ ವ್ಯಕ್ತಿಗೆ ಆತ್ಮಾನುಸಂಧಾನದ ಸತ್ಯ ದರ್ಶನ ದಾರಿಯನ್ನು ತೋರಬೇಕಾಗುತ್ತದೆ. ವೀರಶೈವ ಪಂಚ ಸೂತ್ರೀಯ ಪ್ರವಚನ ಈ ಅಮೂಲ್ಯ ಕೃತಿಯಲ್ಲಿ ಸಿದ್ಧಾಂತ ಶಿಖಾಮಣಿಯ ಎರಡೂವರೆ ಸಾವಿರ ಶ್ಲೋಕಗಳನ್ನು ಆಧರಿಸಿ ೧೩ ಅಧ್ಯಾಯಗಳಲ್ಲಿ ಪೂರ್ಣಗೊಂಡ ಬೃಹತ್ ಕೃತಿ ಇದಾಗಿದೆ ಎಂದರು.
ವಿಧಾನಸಭಾ ಉಪಸಭಾಪತಿ ರುದ್ರಪ್ಪ ಲಮಾಣಿ ಸಮಾರಂಭವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿ ಅಧರ್ಮಕ್ಕೆ ಹಲವು ದಾರಿ. ಆದರೆ ಧರ್ಮಕ್ಕೊಂದೇ ದಾರಿ. ಕೆಡುವುದಕ್ಕಿಂತ ಕಟ್ಟುವುದಕ್ಕೆ ಮುರಿಯುವುದಕ್ಕಿಂತ ಜೋಡಿಸುವುದಕ್ಕೆ ಹೆಚ್ಚು ಮಹತ್ವ ಕೊಡಬೇಕಾಗಿದೆ ಎಂದರು.
ನವ್ಯ ಸಾಹಿತ್ಯ ಸಂಶೋಧಕರು ಮತ್ತು ಆಧ್ಯಾತ್ಮ ಚಿಂತಕರಾದ ಅಮೇರಿಕಾ ಶಿಕ್ಯಾಗೋ ವಾಸಿ ರವಿ ಹಂಜ್ ಅವರು “ವೀರಶೈವ ಪಂಚ ಸೂತ್ರೀಯ ಪ್ರವಚನ” ಗ್ರಂಥ ಬಿಡುಗಡೆ ಮಾಡಿದರು.
ಬೆಂಗಳೂರಿನ ಡಾ.ಸಿ.ಶಿವಕುಮಾರಸ್ವಾಮಿ ಅವರು ವೀರಶೈವ ಪಂಚ ಸೂತ್ರಗಳ ಪರಿಚಯವನ್ನು ಮಾಡಿಕೊಟ್ಟರು. ನೇತೃತ್ವ ವಹಿಸಿದ ನೆಗಳೂರು ಹಿರೇಮಠದ ಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿದರು.
ಮುಕ್ತಿಮಂದಿರ ಕ್ಷೇತ್ರದ ವಿಮಲ ರೇಣುಕ ಮುಕ್ತಿಮುನಿ ಶಿವಾಚಾರ್ಯ ಸ್ವಾಮಿಗಳು ಮತ್ತು ಬಂಕಾಪುರ ಅರಳೆಲೆ ಹಿರೇಮಠದ ರೇವಣಸಿದ್ಧೇಶ್ವರ ಶಿವಾಚಾರ್ಯ ಸ್ವಾಮಿಗಳು ನೇತೃತ್ವ ವಹಿಸಿದ್ದರು. ಸಭೆಯ ಸಮ್ಮೇಳನಾಧ್ಯಕ್ಷರಾದ ಅ.ಭಾ.ವೀರಶೈವ ಶಿವಾಚಾರ್ಯ ಸಂಸ್ಥೆಯ ಅಧ್ಯಕ್ಷರಾದ ಸಿಂದಗಿ ಸಾರಂಗಮಠದ ಡಾ.ಪ್ರಭು ಸಾರಂಗದೇವ ಶಿವಾಚಾರ್ಯ ಸ್ವಾಮಿಗಳು ಮಾತನಾಡಿದರು. ಹುಕ್ಕೇರಿ ಚಂದ್ರಶೇಖರ ಶಿವಾಚಾರ್ಯರು, ಸಿದ್ಧರಬೆಟ್ಟದ ವೀರಭದ್ರ ಶಿವಾಚಾರ್ಯರು ಸೇರಿದಂತೆ ವಿವಿಧ ಮಠಾಧೀಶರು ಉಪಸ್ಥಿತರಿದ್ದರು. ಡಾ. ಗುರುಪಾದಯ್ಯ ಸಾಲಿಮಠ ನಿರೂಪಿಸಿದರು.
ಭಾರತ ಯುದ್ಧ ನಿಲ್ಲಿಸಬೇಕು
ಹಾವೇರಿ: ಎರಡು ರಾಷ್ಟ್ರಗಳ ನಡುವಿನ ಯುದ್ಧವು ಕೇವಲ ಎರಡು ರಾಷ್ಟ್ರಗಳ ಮೇಲಷ್ಟೇ ಪರಿಣಾಮ ಬೀರಲ್ಲ. ಅದು ಬೇರೆ ರಾಷ್ಟ್ರಗಳಿಗೂ ಪರಿಣಾಮ ಬೀರುತ್ತದೆ. ಇದನ್ನು ಅರಿಯಬೇಕು. ಭಾರತವು ವಿಶ್ವಗುರುವಾಗಿದೆ. ಶಾಂತಿ ಬಯಸುವ ದೇಶವಾಗಿದೆ. ಕೊಲ್ಲಿ ರಾಷ್ಟ್ರಗಳ ನಡುವಿನ ಯುದ್ಧ ನಿಲ್ಲಿಸಲು ಪ್ರಯತ್ನಿಸಬೇಕೆಂದು ಶ್ರೀ ಶ್ರೀಶೈಲ ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಜಗದ್ಗುರುಗಳು ಹೇಳಿದರು. ಯಾಲೂಕಿನ ನೆಗಳೂರಲ್ಲಿ ನಡೆದಿರುವ ’ಪಂಚಾಚಾರ್ಯರ ಯುಗಮಾನೋತ್ಸವ ಧಾರ್ಮಿಕ ಸಮಾರಂಭದಲ್ಲಿ ಮಾತನಾಡಿದ ಅವರು ಇರಾನ್-ಇಸ್ರೇಲ್ ಕೊಲ್ಲಿ ರಾಷ್ಟ್ರಗಳ ನಡುವೆ ನಡೆಯುತ್ತಿರುವ ಯುದ್ಧದಿಂದ ಇತರೆ ದೇಶಗಳ ಮೇಲೆ ಪ್ರತ್ಯಕ್ಷ-ಪರೋಕ್ಷವಾಗಿ ಪರಿಣಾಮ ಬೀರುತ್ತಿದೆ. ಇಂಥ ಸ್ಥಿತಿಯಲ್ಲಿ ಭಾರತವು ಮಧ್ಯಪ್ರವೇಶ ಮಾಡಿ ಯುದ್ಧ ನಿಲ್ಲಿಸಬೇಕು, ಯುದ್ಧ ಯಾರಿಗೂ ಒಳ್ಳೆಯದಲ್ಲ. ಶಾಂತಿಯಿಂದ ನಡೆಯುವುದು ಎಲ್ಲರ ಕರ್ತವ್ಯ ಎಂದರು.

