ಹಲವು ಭಾಷೆ, ಹಲವು ಜಾತಿ, ಹಲವು ಧರ್ಮ ಭಾರತದ ಶಕ್ತಿ: ಸಿಎಂ
ಬೆಳಗಾವಿ: ಸಂಘ ಪರಿವಾರ ಗಾಂಧಿ, ಅಂಬೇಡ್ಕರ್ರನ್ನು ದ್ವೇಷಿಸುತ್ತದೆ, ನಾವು ಇಬ್ಬರ ಆಶಯಗಳನ್ನೂ ಪೀಳಿಗೆಯಿಂದ ಪೀಳಿಗೆಗೆ ದಾಟಿಸುತ್ತೇವೆ, ವಿಸ್ತರಿಸುತ್ತೇವೆ, ನಾವು ಸಂವಿಧಾನ ರಕ್ಷಿಸಿದರೆ ಇದೇ ಸಂವಿಧಾನ ನಮ್ಮೆಲ್ಲರನ್ನೂ ರಕ್ಷಿಸುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಮಂಗಳವಾರ ಬೆಳಗಾವಿಯಲ್ಲಿ ಆಯೋಜಿಸಲಾಗಿದ್ದ ಐತಿಹಾಸಿಕ ಜೈ ಬಾಪು-ಜೈ ಭೀಮ್- ಜೈ ಸಂವಿಧಾನ ಅಭಿಯಾನ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಂವಿಧಾನ ದ್ವೇಷಿಯಾಗಿರುವ ಸಂಘದ ಸಿದ್ಧಾಂತವನ್ನು ಬಿಜೆಪಿ ಭಾರತೀಯರ ಮೇಲೆ ಹೇರುತ್ತಿದ್ದು ಇದನ್ನು ಹಿಮ್ಮೆಟ್ಟಿಸೋಣ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.
ಸಂಘ ಪರಿವಾರ ಭಾರತದಲ್ಲಿ ಬಹಳ ವ್ಯವಸ್ಥಿತವಾಗಿ ಒಡಕು ತರುತ್ತಿದೆ. ಭಾರತೀಯರ ನಡುವೆ ಬಿರುಕು ಮೂಡಿಸುತ್ತಾ ಭಾರತವನ್ನು ದುರ್ಬಲಗೊಳಿಸುತ್ತಿದೆ. ಬಿಜೆಪಿಯ ಈ ಯತ್ನವನ್ನು ನಾವು ಸೋಲಿಸಬೇಕು. ಇದಕ್ಕೆ ಗಾಂಧಿ-ಅಂಬೇಡ್ಕರ್ ನಮಗೆ ಮಾರ್ಗದರ್ಶಕರು ಎಂದರು.
ಸಂವಿಧಾನ ಜಾರಿಯಾದಾಗ ಬಿಜೆಪಿ ಪರಿವಾರ ಅಂಬೇಡ್ಕರ್ ಭಾವಚಿತ್ರವನ್ನು, ಸಂವಿಧಾನವನ್ನು ಸುಟ್ಟಿತ್ತು. ಇದನ್ನು ಈ ದೇಶ, ಈ ದೇಶದ ಜನ ಸಮುದಾಯ ಯಾವತ್ತೂ ಕ್ಷಮಿಸುವುದಿಲ್ಲ, ಮರೆಯುವುದಿಲ್ಲ ಎಂದ ಅವರು ಹಲವು ಭಾಷೆ, ಹಲವು ಜಾತಿ, ಹಲವು ಧರ್ಮ ಭಾರತದ ಶಕ್ತಿ. ಗಾಂಧಿ ಅಂಬೇಡ್ಕರ್ ಅವರ ಆಶಯಗಳು, ಮೌಲ್ಯಗಳ ಈಡೇರಿಕೆಗೆ ನಾವು ಕಾರ್ಯಕ್ರಮಗಳನ್ನು ರೂಪಿಸಿ ಜಾರಿ ಮಾಡಿದ್ದೇವೆ. ಇದಕ್ಕಾಗಿ ಬಜೆಟ್ ನಲ್ಲಿ ೫೨ ಸಾವಿರ ಕೋಟಿಗೂ ಅಧಿಕ ಮೊತ್ತದ ಹಣವನ್ನು ನೇರವಾಗಿ ಜನರ ಖಾತೆಗೆ ಹಾಕಿ ರಾಜ್ಯದ ಜನರನ್ನು ಆರ್ಥಿಕವಾಗಿ ಸಬಲರನ್ನಾಗಿಸಿದ್ದೇವೆ ಎಂದರು.
ಗಾಂಧಿ ಭಾರತ ಮರು ನಿರ್ಮಾಣ ಪ್ರಕಟಣೆಗಳ ಬಿಡುಗಡೆ:೧೯೨೪ ರಲ್ಲಿ ಬೆಳಗಾವಿಯಲ್ಲಿ ಮಹಾತ್ಮ ಗಾಂಧೀಜಿಯವರ ಅಧ್ಯಕ್ಷತೆಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದ ಸಂದರ್ಭದಲ್ಲಿ ಕೈಗೊಂಡ ನಿರ್ಣಯಗಳು, ಅಧ್ಯಕ್ಷೀಯ ಭಾಷಣ ಮತ್ತಿತರ ಮಾಹಿತಿಗಳು ಹಾಗೂ ಅಪರೂಪದ ಛಾಯಾಚಿತ್ರಗಳನ್ನು ಒಳಗೊಂಡು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಪ್ರಕಟಿಸಿರುವ “ಗಾಂಧಿ ಭಾರತ ಮರು ನಿರ್ಮಾಣ” ಹಾಗೂ ಖeಛಿಟಚಿimiಟಿg ಉಚಿಟಿಜhi ಃhಚಿಡಿಚಿಣh ಕನ್ನಡ ಹಾಗೂ ಆಂಗ್ಲ ಪುಸ್ತಕಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ,ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಬಿಡುಗಡೆ ಮಾಡಿದರು.ಸುವರ್ಣ ಸೌಧದ ಆವರಣದಲ್ಲಿ ಸ್ಥಾಪಿಸಿರುವ ಬೃಹತ್ ಗಾಂಧಿ ಪುತ್ಥಳಿ ಅನಾವರಣ ಸಮಾರಂಭದಲ್ಲಿ ಈ ಕೃತಿಗಳನ್ನು ಲೋಕಾರ್ಪಣೆ ಮಾಡಲಾಯಿತು.
೧೯೨೪ ರ ಕಾಂಗ್ರೆಸ್ ಅಧಿವೇಶನದ ನಿರ್ಣಯಗಳು,ಕೊಲ್ಕತ್ತಾ ಒಪ್ಪಂದ ಮತ್ತು ನೇಯ್ಗೆಯ ಮತಾಧಿಕಾರ,ಸರೋಜಿನಿ ನಾಯ್ಡು ಅವರ ವಿದೇಶಾಂಗ ಸೇವೆ,ಅಕಾಲಿಗಳಿಗೆ ಅಭಿನಂದನೆ,ರಾಷ್ಟ್ರೀಯ ಶಿಕ್ಷಣ ಸಂಸ್ಥೆಗಳು, ಬರ್ಮಾದ ಜನರಿಗೆ ಸಹಾನುಭೂತಿ, ಕೋಹತ್ ಹಾಗೂ ಗುಲಬರ್ಗಾ ಗಲಭೆಗಳು,ಅಸ್ಪೃಶ್ಯತೆ ನಿವಾರಣೆ,ಅಧಿವೇಶನದ ಲೆಕ್ಕಪರಿಶೋಧನೆ ಸೇರಿದಂತೆ ಐತಿಹಾಸಿಕ ಮಾಹಿತಿಗಳು ಹಾಗೂ ಛಾಯಾಚಿತ್ರಗಳನ್ನು ಈ ಪುಸ್ತಕಗಳು ಒಳಗೊಂಡಿವೆ
ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ,ವಿಧಾನಸಭಾಧ್ಯಕ್ಷ ಯು.ಟಿ.ಖಾದರ್,ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಂಸದರಾದ ಪ್ರಿಯಾಂಕಾ ಗಾಂಧಿ,ಕೆ.ಸಿ.ವೇಣುಗೋಪಾಲ,ರಣದೀಪ್ಸಿಂಗ್ ಸುರ್ಜೇವಾಲಾ,ವಿಧಾನಸಭೆ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ,ಸಚಿವರಾದ ಎಚ್.ಕೆ.ಪಾಟೀಲ,ಡಾ.ಜಿ.ಪರಮೇಶ್ವರ, ಸತೀಶ ಜಾರಕಿಹೊಳಿ ಮತ್ತಿತರ ಗಣ್ಯರು ವೇದಿಕೆಯಲ್ಲಿದ್ದರು.