

ಹಾವೇರಿ: ಸುಳ್ಳು ಜಾತಿ ಪ್ರಮಾಣಪತ್ರ ಪಡೆದು ಸಶಸ್ತ್ರ ಪೊಲೀಸ್ ಪೇದೆ ಹುದ್ದೆಗೆ ಆಯ್ಕೆಯಾಗಿದ್ದ ಆರೋಪಿಗೆ ಏಳು ವರ್ಷ ಜೈಲು ಶಿಕ್ಷೆ
ಹಾವೇರಿ: ಸುಳ್ಳು ದಾಖಲಾತಿಗಳನ್ನು ಸೃಷ್ಟಿಸಿ ಪರಿಶಿಷ್ಟ ಜಾತಿ ಪ್ರಮಾಣಪತ್ರ ಪಡೆದು ಸಶಸ್ತ್ರ ಪೊಲೀಸ್ ಪೇದೆ ಹುದ್ದೆಗೆ ಆಯ್ಕೆಯಾಗಿದ್ದ ಸೋಮಶೇಖರ ಭೀಮಪ್ಪ ಕುಂಕುಮಗಾರ ಈತನಿಗೆ ಏಳು ವರ್ಷಗಳ ಕಾರಾಗೃಹ ಶಿಕ್ಷೆ ಹಾಗೂ ರೂ.೩೦ ಸಾವಿರ ದಂಡ ವಿಧಿಸಿ ಹಾವೇರಿಯ ಒಂದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಜಿ.ಎಲ್.ಲಕ್ಷ್ಮೀನಾರಾಯಣ ಅವರು ಡಿ.20ರ ಬುಧವಾರ ತೀರ್ಪು ನೀಡಿದ್ದಾರೆ.
ಹಿರೇಕೆರೂರು ತಾಲೂಕು ಭೋಗಾವಿ ಗ್ರಾಮದ ಸೋಮಶೇಖರ ಭೀಮಪ್ಪ ಕುಂಕುಮಗಾರ ಈತನು ಮೂಲತಃ ಕುಂಕುಮಗಾರ (ಬಲಿಜ ಜನಾಂಗ) ಜಾತಿಗೆ ಸೇರಿದ್ದರೂ ಸಹ, ಭೋಗಾವಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾಗಿ ಕಾರ್ಯನಿರ್ವಹಿಸುತ್ತಿದ್ದ ಮೃತ ಹನುಮಂತಪ್ಪ ತಳವಾರ ಅವರ ಸಹಕಾರ ಪಡೆದು ಚನ್ನದಾಸರ ಎಂದು ಜಾತಿ ಕಾಲಂನಲ್ಲಿ ನಮೂದಿಸಿ, ಸುಳ್ಳು ವ್ಯಾಸಂಗ ಪ್ರಮಾಣಪತ್ರ ಹಾಗೂ ಇತರೆ ದಾಖಲಾತಿಗಳನ್ನು ಸೃಷ್ಟಿಸಿ, ಹಿರೇಕೆರೂರು ತಹಶೀಲ್ದಾರರಿಗೆ ಸಲ್ಲಿಸಿ, ಪರಿಶಿಷ್ಟ ಜಾತಿಯ ಪ್ರಮಾಣಪತ್ರ ಪಡೆದು ದಕ್ಷಿಣ ಕನ್ನಡ ಜಿಲ್ಲೆಯ ಸಶಸ್ತ್ರ ಪೊಲೀಸ್ ಪೇದೆ ಹುದ್ದೆಗೆ ಆಯ್ಕೆಯಾಗಿದ್ದಾನೆಂದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಜಾತಿ ಪರಿಶೀಲನಾ ಸಮಿತಿ ಅಧ್ಯಕ್ಷರ ನಡಾವಳಿಯಿಂದ ಮತ್ತು ತನಿಖೆಯಿಂದ ಆರೋಪ ದೃಢಪಟ್ಟ ಅಂಶದ ಮೇಲೆ ಹಿರೇಕೆರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ದಾವಣಗೆರೆ ನಾಗರೀಕ ಹಕ್ಕು ಜಾರಿ ನಿರ್ದೇಶನಾಲಯದ ತನಿಖಾಧಿಕಾರಿ ಪೊಲೀಸ್ ಆರಕ್ಷಕ ಉಪ ನಿರೀಕ್ಷಕರಾದ ಶ್ರೀಮತಿ ಜಯರತ್ನಮ್ಮ ಅವರು ಪ್ರಕರಣದ ತನಿಖೆ ನಡೆಸಿ ದೋಷಾರೋಪಣಾ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಆರೋಪಿ ಮೇಲೆ ಹೊರಿಸಲಾದ ಭಾ.ದಂ.ಸಂ. ಕಲಂ:196, 197, 198, 417, 420, 468, 471, ಐಪಿಸಿ ಮತ್ತು 5(ಎ) KARNATAK SC/ST AND B.C (RESERVATION OF APPOINTMENT) 1990 ಮತ್ತು ಕಲಂ: 3(1)(q) ಎಸ್ಸಿ/ಎಸ್ಟಿ (ಪಿಎ) ತಿದ್ದುಪಡಿ ಕಾಯ್ದೆ- ೨೦೧೫ ಅಡಿಯಲ್ಲಿ ಆಪಾದನೆಗಳು ರುಜುವಾತದ ಹಿನ್ನಲೆಯಲ್ಲಿ ಆರೋಪಿತರಿಗೆ ಶಿಕ್ಷೆ ಹಾಗೂ ದಂಡ ವಿಧಿಸಿ ನ್ಯಾಯಾಧೀಶರು ತೀರ್ಪು ನೀಡಿದ್ದಾರೆ.
ಸರ್ಕಾರದ ಪರವಾಗಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಒಂದನೇ ಅಧಿಕ ಸರ್ಕಾರಿ ಅಭಿಯೋಜಕರಾದ ಶ್ರೀಮತಿ ಸರೋಜಾ ಜಿ.ಕೂಡಲಗಿಮಠ ಅವರು ವಾದ ಮಂಡಿಸಿದ್ದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

