
ಒಳಮೀಸಲಾತಿಯಿಲ್ಲದೇ ಉದ್ಯೋಗ ಭರ್ತಿ ಖಂಡಿಸಿ ಮಾ.೧೨ರಂದು ಬೆಂಗಳೂರಲ್ಲಿ ಪ್ರತಿಭಟನೆ: ಮಾಳಗಿ
ಹಾವೇರಿ: ಒಳಮೀಸಲಾತಿಯಿಲ್ಲದೇ ಉದ್ಯೋಗ ಭರ್ತಿ ಮಾಡುವ ಕಾಂಗ್ರೆಸ್ ಸರ್ಕಾರದ ಮಹಾದ್ರೋಹವನ್ನು ಖಂಡಿಸಿ ಮಾರ್ಚ-೧೨ ಗುರುವಾರ ಬೆಳಿಗ್ಗೆ-೧೧ ಘಂಟೆಗೆ ಬೆಂಗಳೂರಿನ ಫ್ರೀಡಂ ಪಾರ್ಕನಲ್ಲಿ ಕರ್ನಾಟಕದ ಸಮಸ್ತ ಒಳಮೀಸಲಾತಿ ಹೋರಾಟಗಾರರ ನೇತೃತ್ವದಲ್ಲಿ ಒಳಮೀಸಲಾತಿ ಹೋರಾಟ ಸಮಿತಿ ವತಿಯಿಂದ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ. ಬೃಹತ್ ಪ್ರತಿಭಟನೆಯಲ್ಲಿ ಸಮಾಜ ಭಾಂದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ರಾಜ್ಯ ಸಂಘಟನಾ ಸಂಚಾಲಕರು ಹಾಗೂ ರಾಜ್ಯ ಮುಖಂಡ ಉಡಚಪ್ಪ ಮಾಳಗಿ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಒಳಮಿಸಲಾತಿಗಾಗಿ ಸುಮಾರು ೩೫ ವರ್ಷಗಳ ಕಾಲ ನಿರಂತರವಾಗಿ ಹೋರಾಟ ಮಾಡುತ್ತಾ ಬರುತ್ತಿದ್ದು, ಒಳಮೀಸಲಾತಿಯನ್ನು ತಪ್ಪಿಸುವ ಹುನ್ನಾರ ನಡೆಯುತ್ತಿದೆ. ಒಳಮೀಸಲಾತಿಯನ್ನು ಅನ್ವಯವಾಗದಂತೆ ೫೬ ಸಾವಿರ ಹುದ್ದೆಗಳನ್ನು ಭರ್ತಿ ಮಾಡುತ್ತೇವೆ ಎಂದು ಸಚಿವ ಸಂಪುಟದಲ್ಲಿ ಹೇಳಲಾಗುತ್ತಿದೆ. ನಿವೃತ್ತ ನ್ಯಾಯಮೂರ್ತಿ ನಾಗಮೋಹನ್‌ದಾಸ್ ೧೭% ರಷ್ಟು ಪರಿಶಿಷ್ಟ ಜಾತಿಗಳ ಮೀಸಲಾತಿ ಹೆಚ್ಚಿಸಲು ಶಿಫಾರಸ್ಸು ಮಾಡಿರುತ್ತಾರೆ. ಎಲ್ಲರಿಗೂ ಅನುಕೂಲವಾಗುವಂತೆ ಮೀಸಲಾತಿಯನ್ನು ರಾಜ್ಯದಲ್ಲಿ ೫೬% ರಷ್ಟು ಮೀಸಲಾತಿ ಹೆಚ್ಚಳ ಮಾಡಿ, ಒಳಮೀಸಲಾತಿ ಅನ್ವಯವಾಗುವಂತೆ ಎಲ್ಲಾ ಹುದ್ದೆಗಳನ್ನು ಭರ್ತಿ ಸೇರಿದಂತೆ ಅನೇಕ ಬೇಡಿಕೆಗಳನ್ನು ಈಡೇರಿಸುವಂತೆ ರಾಜ್ಯ ಸರ್ಕಾರದ ವಿರುದ್ಧ ಹೋರಾಟವನ್ನು ಹಮ್ಮಿಕೊಳ್ಳಲಾಗಿದೆ.
ನಮ್ಮ ಅಳಿವು-ಉಳಿವಿನ ಈ ನಿರ್ಣಾಯಕ ಹೋರಾಟದಲ್ಲಿ ಉತ್ತರ ಕರ್ನಾಟಕ ಭಾಗದ ಎಲ್ಲಾ ಜಿಲ್ಲೆಯ ಹಾಗೂ ಧಾರವಾಡ, ಉತ್ತರ ಕನ್ನಡ, ಗದಗ ಮತ್ತು ಹಾವೇರಿ ಜಿಲ್ಲೆಯ ಪಕ್ಷಾತೀತವಾಗಿ ಸಮಾಜದ ಎಲ್ಲಾ ನಾಯಕರು, ಮುಖಂಡರು, ಯುವಕರು, ವಿದ್ಯಾರ್ಥಿಗಳು, ಮಹಿಳೆಯರು ಹಾಗೂ ಪೌರಕಾರ್ಮಿಕರು ಮತ್ತು ಒಳಮೀಸಲಾತಿಯಲ್ಲಿ ಬರುವ ಎಲ್ಲಾ ಪದಾಧಿಕಾರಿಗಳು, ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಹೋರಾಟಕ್ಕೆ ಆಗಮಿಸಿ ಬೃಹತ್ ಪ್ರತಿಭಟನೆಯನ್ನು ಯಶಸ್ವಿಗೊಳಿಸಬೇಕೆಂದು ಉಡಚಪ್ಪ ಮಾಳಗಿ ಪ್ರಕಟಣೆಯಲ್ಲಿ ಕೋರಿದ್ದಾರೆ.

