
ಕೂಸನೂರಿನ ಕಿರಿಯಮಿತ್ರ, ಪಕ್ಷಿ ಪ್ರೇಮಿ ಪ್ರವೀಣ ಪೂಜಾರ ಮೊಬೈಲ್‌ಗೆ ಕರೆಮಾಡಿ ಸರ್ ನಮ್ಮೂರಬಳಿ ಬ್ಯಾತನಾಳ ಕೆರೆಯಲ್ಲಿ ಬಿಳಿ ಕೊಕ್ಕಿನ ಕಪ್ಪುಬಣ್ಣದ “ಅಮೇರಿಕನ್ ಕೂಟ್” ಪಕ್ಷಿಯು ಮರಿ ಮಾಡಿಸಿದೆ. ಮರಿಗಳೊಂದಿಗೆ ಈಜುತ್ತಾ ಮರಿಗಳಿಗೆ ಗುಟುಕು ನೀಡುತ್ತ ಸಂಚರಿಸುತ್ತಿವೆ, ಬೆಳಿಗ್ಗೆ ಬೇಗನೆ ಬಂದರೆ ಕೆರೆದಂಡೆಯಲ್ಲಿ ಅವುಗಳನ್ನು ನೋಡಬಹುದು, ಫೋಟೋಗಳನ್ನು ಹತ್ತಿರದಿಂದ ತಗೆಯಬಹುದು, ಸಮಯವಾದರೆ ಜನದಟ್ಟಣೆಗೆ ಹೆದರಿ ಅವು ಕೆರೆಯ ಇನ್ನೊಂದು ತೀರಕ್ಕೆ ಹೋಗುತ್ತವೆ ಎಂದು, ಬೇಗನೆ ಬರಲು ಹೇಳಿದ.
ಬೆಳಿಗ್ಗೆ ೬ಕ್ಕೆ ಇನ್ನೋರ್ವ ಮಿತ್ರ ಅಮೃತನೊಂದಿಗೆ ಆತನ ಬೈಕಿನಲ್ಲಿ ಬ್ಯಾತನಾಳಕಡೆಗೆ ನಮ್ಮ ಪ್ರಯಣ ಸಾಗಿತು. ಅದಾಗಲೇ ಕೆರೆಯ ಬಳಿ ಮಿತ್ರ ಪ್ರವೀಣ ನಮ್ಮ ಆಗಮನದ ನಿರೀಕ್ಷೆಯಲ್ಲಿದ್ದರು. ಬ್ಯಾತನಾಳಕೆರೆಯಲ್ಲಿ ವಲಸೆ ಪಕ್ಷಿಯಾಗಿರುವ “ಅಮೇರಿಕನ್ ಕೂಟ್” ಎನ್ನುವ ಬಿಳಿ ಕೊಕ್ಕಿನ ಕಡುಕಪ್ಪು ಸುಂದರಿ ಮುದ್ದಾದ ಮೂರು ಮರಿಗಳಿಗೆ ಜನ್ಮ ನೀಡಿ, ಅವುಗಳ ಲಾಲನೆ-ಪಾಲನೆ ಮಾಡುತ್ತಿರುವ ದೃಶ್ಯ ಕಣ್ಮನ ಸೆಳೆಯಿತು.
ತನ್ನ ಗಾಡವಾದ ಕಪ್ಪು ಬಣ್ಣದಿಂದ ಕಂಗೊಳಿಸುವ “ಅಮೇರಿಕನ್ ಕೂಟ್” ಪಕ್ಷಿಯ ಕೊಕ್ಕು ಬಿಳಿಬಣ್ಣದ್ದಾಗಿದೆ. ದುಂಡಗಿನ ತಲೆ ಹೊಂದಿರುವ ಕೊಬ್ಬಿದ, ಕೋಳಿಯಂತಹ ಪಕ್ಷಿ ಇದಾಗಿದೆ. ಪ್ರಕಾಶ ಮಾನವಾದ-ಬಿಳಿ ಬಣ್ಣದ ಕೊಕ್ಕು ಮತ್ತು ಹಣೆಯನ್ನು ಹೊಂದಿರುತ್ತವೆ. ಕಾಲುಗಳು ಹಳದಿ-ಹಸಿರು ಇದ್ದು, ಸಣ್ಣ ಬಾಲ, ಚಿಕ್ಕ ರೆಕ್ಕೆಗಳು ಮತ್ತು ದೊಡ್ಡ ಪಾದಗಳ ಇದ್ದು, ಅಪಾಯ ಎದುರಾದಾಗ ಸಂದರ್ಭಗಳಲ್ಲಿ ಇವು ಹಾರುತ್ತವೆ. ಬಹುತೇಕ ಓಡುವುದೇ ಹೆಚ್ಚು.
ಇವುಗಳಿಗೆ ಇಂತದೇ ನೀರು ಬೇಕೆಂದೇನೂ ಇಲ್ಲ!. ಯಾವುದೇ ನೀರಿನ ಮೇಲೆ ಜಲಸಸ್ಯಗಳನ್ನು ತಿನ್ನುವ ಕೂಟ್ಸ್ ಕಾಣಬಹುದು. ಈಜುವಾಗ ಅವು ಸಣ್ಣ ಬಾತುಕೋಳಿಗಳಂತೆ ಕಾಣುತ್ತವೆ. ಆಹಾರಕ್ಕಾಗಿ ಹೆಚ್ಚಾಗಿ ಧುಮುಕುತ್ತವೆ, ಆದರೆ ನೆಲದಮೇಲೆ ಇವು ಕೋಳಿಯಂತೆ ಕಾಣುತ್ತವೆ. ಕೆರೆಕಟ್ಟೆಗಳಲ್ಲಿ, ಕೊಳಗಳಲ್ಲಿ, ಜವುಗು ಪ್ರದೇಶಗಳು, ಜಲಾಶಯಗಳು, ಸರೋವರಗಳ ಅಂಚುಗಳಲ್ಲಿ ಮತ್ತು ರಸ್ತೆಬದಿಯ ಹಳ್ಳಗಳಲ್ಲಿ ಇವುಗಳನ್ನು ಕಾಣಬಹುದಾಗಿದೆ.
ಸಂತಾನೋತ್ಪತ್ತಿ: “ಅಮೇರಿಕನ್ ಕೂಟ್”ಪಕ್ಷಿಯು ನೀರಿನ ಮೇಲೆ ತೇಲುವ ಗೂಡನ್ನು ದೊಡ್ಡ ಎಲೆಗಳು ಹಾಗೂ ಬಳ್ಳಿಗಳ ಮೇಲೆ ನಿರ್ಮಿಸುತ್ತದೆ. ಗೂಡು ನಿರ್ಮಿಸಲು ಆಳವಿಲ್ಲದ ನೀರಿನ ಹೊಂಡಗಳನ್ನು ಇವು ಹುಡುಕಿ ಅಲ್ಲಿ ಗೂಡು ನಿರ್ಮಿಸಿ, ಅಚ್ಚುಕಟ್ಟಾಗಿ ದೊಡ್ಡ ಬಟ್ಟಲಾಕಾರದ ಗೂಡನ್ನು ಸಸ್ಯದ ಕಾಂಡಗಳು ಮತ್ತು ಎಲೆಗಳಿಂದ ಸೂಕ್ಷ್ಮವಾದ ವಸ್ತುಗಳ ಬಳಿಸಿ ಗಂಡು-ಹೆಣ್ಣು ಎರಡು ಸೇರಿ ಒಳಪದರದೊಂದಿಗೆ ಗೂಡುಗಳನ್ನು ಸಂತಾನೋತ್ಪತ್ತಿಗಾಗಿ ನಿರ್ಮಿಸುತ್ತವೆ. ಗೂಡಿನಲ್ಲಿ ಮೊಟ್ಟೆಗಳನ್ನು ಇಟ್ಟು ಅವುಗಳಿಗೆ ಕಾವುಕೊಟ್ಟು ಮರಿಮಾಡಿಸುತ್ತವೆ.
ಮರಿಗಳನ್ನು ಮೊದಲ ೭ದಿನಗಳ ವರೆಗೆ ಹೆಣ್ಣು “ಅಮೇರಿಕನ್ ಕೂಟ್” ಆಹಾರವನ್ನು ಗುಟುಕು ನೀಡುವ ಮೂಲಕ ಮರಿಗಳನ್ನು ಪಾಲನೆ ಮಾಡುತ್ತದೆ.
ಈ ಸಮಯದಲ್ಲಿ ಗಂಡು ಆಹಾರವನ್ನು ತರುತ್ತದೆ. ನಂತರ ಮರಿಗಳೊಂದಿಗೆ ಗಂಡು-ಹೆಣ್ಣು ನೀರಿನಲ್ಲಿಈಜುತ್ತಾ ಮರಿಗಳಿಗೆ ಆಹಾರ ನೀಡುತ್ತಾ ಅವುಗಳಿಗೆ ಆಹಾರ ಭೇಟೆಯಾಡುವುದನ್ನು ಕಲಿಸುತ್ತವೆ. ಮರಿಗಳು ಸುಮಾರು ೫೫ ರಿಂದ ೬೦ ದಿನಗಳಲ್ಲಿ ಸ್ವತಂತ್ರವಾಗಿ ಬದುಕುವುದನ್ನು ಕಲಿತು ಹಾರಿಹೋಗುತ್ತವೆ. ಇಂತ ಜೀವನ ಕ್ರಮದ ಬಿಳಿ ಕೊಕ್ಕಿನ ಕಡುಕಪ್ಪು ಸುಂದರಿ”ಅಮೇರಿಕನ್ ಕೂಟ್”ಪಕ್ಷಿ ಹಾಗೂ ಅದರ ಮರಿಗಳ ಫೋಟೋಗಳನ್ನು ಚಿತ್ರೀಸಿಕೊಂಡು ಪ್ರವೀಣ ಅವರ ಮನೆಯಲ್ಲಿ ರೊಟ್ಟಿ ಸವಿದು ಹಾವೇರಿಗೆ ಮರಳಿದಾಗ ಮಧ್ಯಾಹ್ನ ೧೨ ಆಗಿತ್ತು.
ಚಿತ್ರ/ಲೇಖನ: ಮಾಲತೇಶ ಅಂಗೂರ, ಹಾವೇರಿ.