
ತುಂಗಾಪಾನ ಅಪಾಯಕ್ಕೆ ಆಹ್ವಾನ….! ಆತಂಕದಲ್ಲಿ ತುಂಗಭದ್ರಾನದಿಯ ನೀರು ಅವಲಂಬಿಸಿರುವ ಹಾವೇರಿಜಿಲ್ಲೆಯ ಜನತೆ!!!
ಹಾವೇರಿ; ಗಂಗಸ್ಥಾನ-ತುಂಗಾಪಾನ ಎನ್ನುವ ಮಾತು ಎಲ್ಲಡೆ ಪ್ರಚಲಿತದಲ್ಲಿದ್ದು, ಈ ಮಾತು ಗಂಗಾನದಿಯ ಪವಿತ್ರತೇ ಮತ್ತು ತುಂಗಭದ್ರಾನದಿಯ ನೀರಿನ ಶುದ್ಧತೆಯನ್ನು ಸಾರಿ ಹೇಳುತ್ತದೆ. ಆದರೆ ಮಾಲಿನ್ಯ ನಿಯಂತ್ರಣ ಮಂಡಳಿ ಇತ್ತೀಚೆಗೆ ಬಿಡುಗಡೆ ಮಾಡಿರುವ ವರದಿಯಲ್ಲಿ ತುಂಗಭದ್ರನದಿಯ ನೀರು ಕುಡಿಯಲು ಅಲ್ಲ, ಬಳಕೆಗೂ ಸಹ ಯೋಗ್ಯವಲ್ಲ ಎನ್ನುವ ಆಘಾತಕಾರಿ ಸಂಗತಿಯನ್ನು ಹೊರಹಾಕಿದೆ.
ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಪಿಸಿಬಿ) ಇತ್ತೀಚೆಗೆ ಬಿಡುಗಡೆ ಮಾಡಿದ ವರದಿಯು ರಾಜ್ಯದ ಪ್ರಮುಖ ನದಿಗಳಲ್ಲಿನ ನೀರಿನ ಗುಣಮಟ್ಟದ ಬಗ್ಗೆ ಗಂಭೀರ ಕಳವಳವನ್ನು ವ್ಯಕ್ತಪಡಿಸಿದೆ. ರಾಜ್ಯಾದ್ಯಂತ ೧೨ ಪ್ರಮುಖ ನದಿಗಳ ನೀರು ಕುಡಿಯಲು ಅಪಾಯಕಾರಿ ಎಂದು ತೋರಿಸುವ ಆಘಾತಕಾರಿ ವರದಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಹಾವೇರಿಜಿಲ್ಲೆಯಲ್ಲಿ ಹರಿದಿರುವ ತುಂಗಭದ್ರಾನದಿಯ ಸಹ ಒಂದಾಗಿದೆ. ಸೆಪ್ಟೆಂಬರ್‌ನಲ್ಲಿ ಈ ನದಿಗಳ ಉದ್ದಕ್ಕೂ ೩೨ ಸ್ಥಳಗಳಿಂದ ಸಂಗ್ರಹಿಸಲಾದ ಮಾದರಿಗಳು ಗಮನಾರ್ಹ ಮಾಲಿನ್ಯ ಕಡಿಮೆ ಕರಗಿದ ಆಮ್ಲಜನಕ ಮತ್ತು ಕೋಲಿಫಾರ್ಮ್ ಬ್ಯಾಕ್ಟಿರಿಯಾದ ಉಪಸ್ಥಿತಿಯನ್ನು ಬಹಿರಂಗಪಡಿಸಿವೆ.
ಸಂಶೋಧನೆಗಳ ಪ್ರಕಾರ, ನೇತ್ರಾವತಿಯನ್ನು ಹೊರತುಪಡಿಸಿ ೧೨ ಪ್ರಮುಖ ನದಿಗಳ ನೀರು ನೇರವಾಗಿ ಕುಡಿಯಲು ಸುರಕ್ಷಿತವಲ್ಲ ಎಂದು ವರದಿ ನೀಡಿದೆ. ಪರೀಕ್ಷಿಸಲಾದ ನದಿಗಳಲ್ಲಿ, ನೇತ್ರಾವತಿಗೆ ಮಾತ್ರ ಬಿ ರೇಟಿಂಗ್ ನೀಡಲಾಗಿದ್ದು, ಇದು ಸ್ನಾನ ಮತ್ತು ದೇಶೀಯ ಬಳಕೆಗೆ ಸೂಕ್ತವಾಗಿದೆ. ತುಂಗಭದ್ರಾ ನದಿ “ಸಿ” ರೇಟಿಂಗ್ ಪಡೆದಿದೆ. ನದಿ ನೀರೂ ನೇರವಾಗಿ ಕುಡಿಯಲು ಬಳಕೆ ಮಾಡದ ಸ್ಥಿತಿಯಲ್ಲಿಲ್ಲ. ಸೆಪ್ಟೆಂಬರ್‌ನಲ್ಲಿ ನಡೆಸಲಾದ ಪರೀಕ್ಷೆಯಿಂದ ದೊರಕಿರುವ ವರದಿಯ ಪ್ರಕಾರ ನೇರವಾಗಿ ಕುಡಿಯಲು ಬಳಕೆ ಮಾಡದ ಸ್ಥಿತಿಯಲ್ಲಿದೆ ಎನ್ನಲಾಗಿದೆ. ನದಿಗಳ ನೀರಿನಲ್ಲಿ ಆಮ್ಲಜನಕದ ಕೊರತೆ, ಬಯೋಕೆಮಿಕಲ್ ಆಕ್ಸಿಜನ್, ಕೋಲಿಫಾರ್ಮ್ ಬ್ಯಾಕ್ಟಿರಿಯಾ, ಫೆಕಲ್ ಕೋಲಿಫಾರ್ಮ್ ಬ್ಯಾಕ್ಟಿರಿಯಾಗಳು ಹೆಚ್ಚಿವೆ. ಹೀಗಾಗಿ ತುಂಗಭದ್ರಾ ನ ನೀರು ’ಎ’ ದರ್ಜೆಗೆ ಸೇರಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ನದಿಗಳು ಲಕ್ಷಾಂತರ ಜನರಿಗೆ ನೀರಿನ ಪ್ರಾಥಮಿಕ ಮೂಲವಾಗಿರುವ ಕರ್ನಾಟಕದ ಗಂಭೀರ ಪರಿಸರ ಕಾಳಜಿಯನ್ನು ವರದಿ ಎತ್ತಿ ತೋರಿಸುತ್ತದೆ. ರಾಸಾಯನಿಕ ಮಾಲಿನ್ಯ, ಆಮ್ಲಜನಕದ ಕೊರತೆ ಮತ್ತು ಬ್ಯಾಕ್ಟಿರಿಯಾದ ಉಪಸ್ಥಿತಿಯು ಅಸುರಕ್ಷಿತ ನೀರಿನ ಗುಣಮಟ್ಟಕ್ಕೆ ಕಾರಣವಾಗುವ ಪ್ರಮುಖ ಅಂಶಗಳಾಗಿವೆ ಎಂದು ಅಧ್ಯಯನವು ಉಲ್ಲೇಖಿಸಿದೆ. ನದಿ ಮಾದರಿಗಳ ಮೇಲೆ ನಡೆಸಿದ ಪರೀಕ್ಷೆಗಳು ಹೆಚ್ಚಿನ ಮಟ್ಟದ ಮಾಲಿನ್ಯಕಾರಕಗಳು ಮತ್ತು ಮಾಲಿನ್ಯವನ್ನು ಬಹಿರಂಗಪಡಿಸಿವೆ, ಇದರಿಂದಾಗಿ ನೀರು ಬಳಕೆಗೆ ಅನರ್ಹವಾಗಿದೆ. ಸಂಸ್ಕರಿಸದ ನದಿ ನೀರನ್ನು ಅವಲಂಬಿಸುವುದರಿಂದ ಗಂಭೀರ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ. ’ಸಿ’ ದರ್ಜೆಯ ಗುಣಮಟ್ಟ ಹೊಂದಿರುವ ತುಂಗಭದ್ರಾನದಿಯ ನೀರನ್ನು ಸಂಸ್ಕರಿಸಿ ಬಳಸಬಹುದಾಗಿದೆ ಎಂದು ಉಲ್ಲೇಖಿಸಲಾಗಿದೆ.
ಹಾವೇರಿಜಿಲ್ಲೆಯ ಜನರಿಗೆ ಕುಡಿಯುವ ಹಾಗೂ ಬಳಕೆಗೆ ತುಂಗಭದ್ರಾನದಿ ಜಲಮೂಲವಾಗಿದ್ದು, ಮಾಲಿನ್ಯ ನಿಯಂತ್ರಣ ಮಂಡಳಿ ಬಿಡುಗಡೆ ಮಾಡಿರುವ ವರದಿಯಿಂದ ಜಿಲ್ಲೆಯ ಜನತೆ ಆತಂಕಗೊಂಡಿದ್ದಾರೆ. ಹಾವೇರಿ, ರಾಣೇಬೆನ್ನೂರು, ಬ್ಯಾಡಗಿ, ಗುತ್ತಲ, ಅಗಡಿ ಸೇರಿದಂತೆ ಹಿರೇಕೆರೂರು ತಾಲೂಕಿನ ಕೆಲವು ಗ್ರಾಮಗಳು ಹಾಗೂ ನದಿಯಪಾತ್ರದಲ್ಲಿನ ಹಲವಾರು ಹಳ್ಳಿಗಳು, ಸಣ್ಣ-ಪುಟ್ಟ ಪಟ್ಟಣಗಳ ಜನತೆ, ಜಾನುವಾರುಗಳು ತುಂಗಭದ್ರಾನದಿಯ ನೀರಿನ್ನೇ ಅವಲಂಭಿಸಿವೆ. ರಾಣೇಬೆನ್ನೂರು ನಗರದಲ್ಲಿ ತುಂಗಭದ್ರಾನದಿಯ ನೀರಿನಿಂದ ೨೪+೭ ನೀರನ್ನು ಸರಬರಾಜು ಮಾಡಲಾಗುತ್ತಿದೆ. ಹಾವೇರಿಯಲ್ಲಿ ೨೪+೭ ನೀರು ಸರಬರಾಜು ಕಾರ್ಯ ಪ್ರಗತಿಯಲ್ಲಿದೆ. ಈಗಾಗಲೇ ಈ ಎರಡು ನಗರಸಭೆ ಹೊಂದಿರುವ ಪ್ರಮುಖ ಪಟ್ಟಣಗಳಿಗೆ ತುಂಗಭದ್ರಾ ನೀರನ್ನು ಸರಬರಾಜು ಮಾಡಲಾಗುತ್ತಿದೆ. ಹೀಗಾಗಿ ಜಿಲ್ಲೆಯ ಜನತೆಯನ್ನು ಮಾಲಿನ್ಯ ನಿಯಂತ್ರಣ ಮಂಡಳಿಯ ವರದಿ ನಿದ್ದೆಗೆಡೆಸಿದೆ.
ತುಂಗಭದ್ರಾ ನದಿಯಲ್ಲಿನ ಅಪಾಯವು ಸಾರ್ವಜನಿಕ ಆರೋಗ್ಯವನ್ನು ರಕ್ಷಿಸಲು ಕಠಿಣ ಮೇಲ್ವಿಚಾರಣೆ ಮತ್ತು ಉತ್ತಮ ಮಾಲಿನ್ಯ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಬೇಕಿದೆ. ತುಂಗಭದ್ರಾನದಿಯ ನೀರನ್ನು ಬಳಸುವ ನಾಗರಿಕರು ಸರಿಯಾದ ಸಂಸ್ಕರಣೆಯನ್ನು ಖಚಿತ ಪಡಿಸಿಕೊಳ್ಳುವವರೆಗೆ ಕುಡಿಯಲು ಮತ್ತು ಅಡುಗೆಗೆ ನೇರವಾಗಿ ನದಿ ನೀರನ್ನು ಬಳಸುವುದನ್ನು ತಪ್ಪಿಸುವ ನಿಟ್ಟಿನಲ್ಲಿ . ಸಂಸ್ಕರಿಸದ ನದಿ ನೀರನ್ನು ಸೇವಿಸುವುದನ್ನು ತಪ್ಪಿಸಲು ಮತ್ತು ಸರಿಯಾದ ನೀರಿನ ಶುದ್ದೀಕರಣ ಕ್ರಮಗಳನ್ನು ಅನುಸರಿಸಲು ಸ್ಥಳೀಯ ಆಡಳಿತ ಅಧಿಕಾರಿಗಳು ಮುಂದಾಗಬೇಕಿದೆ.
ನದಿ ಮಾಲಿನ್ಯಕ್ಕೆ ಕಾರಣಗಳೇನು?
ಪರಿಸರ ಮಾಲಿನ್ಯದ ಪ್ರಮಾಣ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಇದರಲ್ಲಿ ನೆಲ ಮಾಲಿನ್ಯ, ಜಲಮಾಲಿನ್ಯ, ವಾಯು ಮಾಲಿನ್ಯ ಎಲ್ಲವೂ ಸೇರಿದೆ. ನದಿ ತೀರದಲ್ಲಿರುವ ಕೈಗಾರಿಕೆಗಳಿಂದ ಹಾಗೂ ವಸತಿ ಪ್ರದೇಶಗಳಿಂದ ತ್ಯಾಜ್ಯಯುಕ್ತ ನೀರನ್ನು ನದಿಗೆ ಹರಿ ಬಿಡುವುದು ನದಿಯ ಮಾಲಿನ್ಯಕ್ಕೆ ಮುಖ್ಯ ಕಾರಣವಾಗಿದೆ. ಚರಂಡಿ ನೀರು ಸಂಸ್ಕರಣೆ ಮಾಡದೇ ನೇರವಾಗಿ ನದಿಗೆ ಬಿಡುತ್ತಿರುವುದು, ಜನರು ತಮ್ಮ ಮನೆಯ ಕಸ, ಕೊಳಚೆ, ಹೂವು, ಜಾನುವಾರುಗಳ ಮಾಂಸ ನದಿಗೆ ಎಸೆಯುತ್ತಿರುವುದು ಮುಖ್ಯ ಕಾರಣ ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ತಿಳಿಸಿದೆ.
ಆರೋಗ್ಯದ ಮೇಲೆ ಪರಿಣಾಮ
ಕಲುಷಿತ ನೀರನ್ನು ಬಳಸುವುದಿಂದ ಆರೋಗ್ಯಕ್ಕೆ ಹಲವು ರೀತಿಯಲ್ಲಿ ತೊಂದರೆಯುಂಟಾಗುತ್ತದೆ. ಇಂಥಾ ನೀರುಗಳು ಹಾನಿಕಾರಕ ಬ್ಯಾಕ್ಟಿರಿಯಾ ಮತ್ತು ರೋಗಕಾರಕಗಳ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಇದರಿಂದ ಕಾಲರಾ, ಟೈಫಾಯಿಡ್, ಭೇದಿ, ಹೆಪಟೈಟಿಸ್‌ನಂತಹ ರೋಗಗಳು ಹರಡುವಿಕೆ ಹೆಚ್ಚಾಗುತ್ತದೆ. ಹೆಚ್ಚುವರಿಯಾಗಿ ಕೈಗಾರಿಕೆ ತ್ಯಾಜ್ಯ ವಿಸರ್ಜನೆ ಮತ್ತು ಕೀಟನಾಶಕ, ಔಷಧೀಯ ತ್ಯಾಜ್ಯಗಳಂತಹ ವಿಷಕಾರಿ ರಾಸಾಯನಿಕಗಳನ್ನು ನೀರಿನಲ್ಲಿ ಒಳಗೊಂಡಿರಬಹುದು. ಇದು ದೀರ್ಘಕಾಲೀನ ಆರೋಗ್ಯದ ಅಪಾಯಗಳನ್ನು ತಂದೊಡ್ಡುತ್ತದೆ. ಇಂಥಾ ನೀರನ್ನು ಬಳಸಿ ಸ್ನಾನ ಮಾಡುವುದು, ಬಟ್ಟೆ ಒಗೆಯುವುದು ಚರ್ಮದ ಸಮಸ್ಯೆಗಳನ್ನು ಉಂಟು ಮಾಡಬಹುದು.
ಹಾವೇರಿಜನರನ್ನು ಕಾಯೋರು ಯಾರು?
ಜಿಲ್ಲಾ ಕೇಂದ್ರವವಾಗಿರುವ ಹಾವೇರಿನಗರದ ಜನಸಂಖ್ಯೆ ಅಂದಾಜು ೧ಲಕ್ಷ ಇದ್ದು, ಜನರ ನೀರಿನ ಅಗತ್ಯತೆಯನ್ನು ಪೂರೈಸಲು ವರದ, ತುಂಗಭದ್ರಾ ಹಾಗೂ ಹೆಗ್ಗೆರೆಕೆರೆ ಈ ಮೂರು ಜಲಮೂಲಗಳಿವೆ. ಆದರೆ ನಗರದ ಜನತೆಗೆ ೧೦-೧೫ದಿನಗಳಿಗೊಮ್ಮೆ ನೀರು ಸರಬರಾಜು ಮಾಡಲಾಗುತ್ತಿದೆ. ಅದು ಎಂತಾ ನೀರು ಎಂದರೆ, ನಲ್ಲಿಯಲ್ಲಿ ಬರುವ ನೀರನ್ನು ನೋಡಿದರೇ ಈ ನೀರನ್ನು ಶುದ್ಧೀಕರಿಸಲಾಗಿದಯೇ? ನದಿಯಿಂದ ಹಾಗೆ ನೇರವಾಗಿ ಹರಿಸಲಾಗಿದೆಯೇ? ಎನ್ನುವ ಅನುಮಾನ ಮೂಡುತ್ತದೆ. ಅಷ್ಟೊಂದು ನೀರು ರಾಡಿಯಾಗಿರುತ್ತದೆ. ಇನ್ನು ಹಾವೇರಿನಗರಕ್ಕೆ ನೀರು ಸರಬರಾಜು ಮಾಡುವ ಶುದ್ಧೀಕರಣ ಘಟಕವು ಸದಾ ದುರಸ್ತಿಯಲ್ಲಿರುವುದೇ ಹೆಚ್ಚು, ಆಲಂ ಇದ್ದರೆ, ಬ್ಲಿಚಿಂಗ್ ಪೌಡರ್ ಇರುವುದಿಲ್ಲ, ಇವೆರಡು ಇದ್ದರೆ ಕ್ಲೋರಿನ ಯಂತ್ರ ಸರಿಯಿರುವುದಿಲ್ಲ. ಹೀಗಾಗಿ ನಗರಸಭೆ ಜನತೆಗೆ ಯಾವಾಗ ನೀರು ಶುದ್ಧೀಕರಿಸಿ ಪೂರೈಸುತ್ತದೆಯೋ ಗೊತ್ತಿಲ್ಲ. ಈ ನೀರನ್ನು ಕುಡಿಯುವ ಹಾವೇರಿಜನರನ್ನು ಕಾಪಾಡೋರು ಯಾರು? ಎನ್ನುವ ಪ್ರಶ್ನೆಗೆ ಉತ್ತರಿಸವವರು ಯಾರು?

