
ನಿರಂಜನಾನಂದ ಶ್ರೀ ಬಗ್ಗೆ ಹಗರುಮಾತು, ಎಚ್.ವಿಶ್ವನಾಥ ಕ್ಷಮೆಗೆ ಶಿವಣ್ಣನವರ ಆಗ್ರಹ
ಹಾವೇರಿ: ಕಾಗಿನೆಲೆಯ ಕನಕಗುರುಪೀಠವನ್ನು ರಾಜ್ಯದ ಸಮಸ್ತ ಕುರುಬ ಸಮಾಜ ಸೇರಿ ೧೯೯೨ರಲ್ಲಿ ಸ್ಥಾಪಿಸಿದೆ. ಈಗಿನ ಜಗದ್ಗುರು ನಿರಂಜನಾನಂದಪುರಿಶ್ರೀಗಳು ಕುರುಬ ಸಮಾಜದ ಏಳಿಗೆಗೆ ಶ್ರಮಿಸುತ್ತಾ ಬಂದಿದ್ದಾರೆ. ಇವರನ್ನು ಮಠದಿಂದ ಹೊರಹಾಕಲಾಗುವುದು, ಕಿತ್ತುಹಾಕಲಾಗುವುದು ಎಂದು ಹೇಳಿಕೆ ನೀಡಿರುವ ಮಾಜಿ ಸಚಿವ, ಎಂ.ಎಲ್.ಸಿ ಎಚ್.ವಿಶ್ವನಾಥ ಕೂಡಲೇ ಸ್ವಾಮೀಜಿಯವರ ಕ್ಷಮೆ ಯಾಚಿಸಬೇಕೆಂದು ಬ್ಯಾಡಗಿ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಕನಕಗುರುಪೀಠದ ಟ್ರಸ್ಟಿ ಬಸವರಾಜ ಶಿವಣ್ಣನವರ ಒತ್ತಾಯಿಸಿದ್ದಾರೆ.
ಬುಧವಾರ ಇಲ್ಲಿನ ಪ್ರವಾಸಿ ಮಂದಿರದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು. ನಿರಂಜನಾನಂದಪುರಿಶ್ರೀ ಉತ್ತಮವಾಗಿ ಸಮಾಜ ಸಂಘಟನೆ ಮಾಡಿದ್ದಾರೆ. ರಾಜ್ಯದ ವಿವಿಧ ಕಡೆಗಳಲ್ಲಿ ಶಾಖಾಮಠಗಳನ್ನು ಸ್ಥಾಪಿಸುವ ಮೂಲಕ, ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದ್ದಾರೆ. ಐಎಎಸ್, ಕೆಎಎಎಸ್ ತರಬೇತಿ ಕೇಂದ್ರಗಳನ್ನು ಸ್ಥಾಪಿಸಿದ್ದಾರೆ. ೨೦೦ಕೋಟಿಗೂ ಅಧಿಕ ಆಸ್ತಿ ಮಾಡಿದ್ದಾರೆ. ಇಂತವರ ಬಗ್ಗೆ ವಿಶ್ವನಾಥ ಅವರು ಸೆ.೧೬ರಂದು ಸ್ವಾಮಿಜಿ ಅವರನ್ನು ಮಠದಿಂದ ಕಿತ್ತುಹಾಕಲಾಗುವುದು ಎಂದು ಹೇಳಿದ್ದಾರೆ. ಮಠದಿಂದ ಶ್ರೀಗಳನ್ನು ಕಿತ್ತುಹಾಕಲು ವಿಶ್ವನಾಥಯಾರು? ಎಂದು ಖಾರವಾಗಿ ಅವರು ಪ್ರಶ್ನಿಸಿದರು.
ವಿಶ್ವನಾಥ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಗ್ಗೆಯೂ ಸಹ ಹಗುರುವಾಗಿ ಮಾತನಾಡಿದ್ದು, ಸಿದ್ದರಾಮಯ್ಯ ಅವತು ಎರಡನೆಬಾರಿಗೆ ಮುಖ್ಯಮಂತ್ರಿಯಾಗಿದ್ದಾರೆ. ಅವರ ಆಡಳಿತವನ್ನು ರಾಜ್ಯದ ಸರ್ವ ಜನಾಂಗ ಒಪ್ಪಿದೆ. ಎಲ್ಲರೂ ಅವರನ್ನು ಗೌರವಿಸುತ್ತಾರೆ. ಅವರ ಬಗ್ಗೆ ವಿಶ್ವನಾಥ ಆಡಿರುವ ಗರ್ವದ ಮಾತುಗಳನ್ನು ಸಮಾಜ ಒಪ್ಪುವುದಿಲ್ಲ. ವಿಶ್ವನಾಥ ಅವರು ಕೂಡಲೆ ಕ್ಷಮೆಯಾಚಿಸದಿದ್ದರೇ ಅವರ ವಿರುದ್ಧ ಹೋರಾಟ ರೂಪಿಸಲಾಗುವುದು ಎಂದರು.
ಸಮಾಜವನ್ನು ಸಂಘಟಿಸುವ ನಿಟ್ಟಿನಲ್ಲಿ ರಾಜಕೀಯವಾಗಿ ರಾಜಕಾರಣಿಗಳು ಸಹಾಯ, ಸಹಕಾರ ನೀಡುವುದಷ್ಟೆ ನಮ್ಮ ಕೆಲಸ, ಮಠದಲ್ಲಿ ರಾಜಕೀಯ ತರಬಾರದು. ಮಠ ಬೆಳೆಯಲು ರಾಜಕೀಯ ಬೇಕು, ಮಠದಲ್ಲಿ ರಾಜಕೀಯ ಬರಬಾರದು, ಗುರುಗಳ ಬಗ್ಗೆ ಅಗೌರವದಿಂದ ಮಾತನಾಡುವ ಮೂಲಕ ವಿಶ್ವನಾಥ ತಪ್ಪಾಗಿ ಮಾತನಾಡಿದ್ದಾರೆ. ಮಠ ಸ್ಥಾಪಿಸುವ ವೇಳೆ ವಿಶ್ವನಾಥ ಅವರನ್ನು ಸಮಾಜ ಅಧ್ಯಕ್ಷರನ್ನಾಗಿ ಆಯ್ಕೆಮಾಡಿತ್ತು. ಈಗಾಗಲೇ ವಿಶ್ವನಾಥ ಅವರಿಗೆ ವಯಸ್ಸಾಗಿದೆ. ಇರುವಷ್ಟು ದಿನ ಅವರು ಗೌರವ ಉಳಿಸಿಕೊಳ್ಳಬೇಕೆಂದು ಶಿವಣ್ಣನವರ ಹೇಳಿದರು.
ಹಾವೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ, ಮಠದ ಟ್ರಸ್ಟಿ ಎಸ್.ಎಫ್.ಎನ್.ಗಾಜಿಗೌಡ್ರ ಮಾತನಾಡಿ, ಕುರುಬ ಸಮಾಜದ ಅಭಿವೃದ್ಧಿಯ ದೃಷ್ಟಿಯಿಂದ ೧೯೯೨ರಲ್ಲಿ ಕನಕದಾಸರ ಕರ್ಮಭೂಮಿ ಕಾಗಿನೆಲೆಯಲ್ಲಿ ೭ ಎಕರೆ ಜಮೀನು ಪಡೆದು ಕುರುಬ ಜನಾಂಗಕ್ಕೆ ಮಠ ಬೇಕೆಂದು ಕಟ್ಟಿದ್ದೇವೆ. ಹರ್ತಿಕೋಟೆಯ ನಿರಂಜನಾಂದಪುರಿ ಸೇರಿದಂತೆ ನಾಲ್ವರು ಮಠಾಧೀಶರು ದೇವರ ಸಿಕ್ಕಂತೆ ಕುರುಬ ಸಮಾಜಕ್ಕೆ ಸಿಕ್ಕಿದ್ದಾರೆ. ನಿರಂಜನಾನಂದಶ್ರೀಗಳು ಬೆಳ್ಳೊಡಿಯಲ್ಲಿ ಮಠ, ಮೈಲಾರ, ಬೆಂಗಳೂರಲ್ಲಿ ನೂರಾರು ಕೋಟಿ ಬೆಲೆಬಾಳುವ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವ ಮೂಲಕ ಸಮಾಜವನ್ನು ಮುನ್ನಡೆಸಿದ್ದಾರೆ. ಅವರ ಬಗ್ಗೆ ರಾಜಕೀಯ ತಿಕ್ಕಾಟದಿಂದ ವಿಶ್ವನಾಥ ಅವರು ಹಗುರವಾದ ಮಾತುಗಳನ್ನಾಡಿರುವದು ತಪ್ಪು, ಸ್ವಾಮಿಗಳು ರಾಜಕೀಯ ಕ್ಕೆ ಹೋದವರಲ್ಲ, ಅವರನ್ನು ರಾಜಕೀಯಕ್ಕೆ ಬಳಸಿಕೊಳ್ಳಬಾರದು. ಶ್ರೀಗಳನ್ನು ತಗೆದು ಹಾಕಬೇಕೆನ್ನುವದು ತಪ್ಪು, ವಿಶ್ವನಾಥ ಅವರು ತಮ್ಮ ಮಾತು ಹಿಂದಕ್ಕೆ ಪಡೆಯಬೇಕು ಎಂದು ಅವರು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕುರುಬಸಮಾಜದ ಮುಖಂಡರುಗಳಾದ ರಾಜೇಂದ್ರ ಹಾವೇರೆಣ್ಣವರ, ಶಂಕ್ರಣ್ಣ ಮಾತನವರ, ಎಂ.ಎ. ಗಾಜಿಗೌಡ್ರ, ಆನಂದ ಹುಲಬನ್ನಿ, ಚಿಕ್ಕಣ್ಣ ಹಾದಿಮನಿ, ಹನುಮಂvಪ್ಪ ಕಂಬಳಿ, ಯಶವಂತ ಯಡಗೋಡಿ ಮತ್ತಿತರರು ಇದ್ದರು.

