
ಬಜೆಟ್‌ನಲ್ಲಿ ಹಾವೇರಿಜಿಲ್ಲೆಗೆ ದಕ್ಕಿದ್ದು ಬೆಲ್ಲಕ್ಕಿಂತ ಬೇವೆ ಜಾಸ್ತಿ!
* ಘೋಷಣೆಯಾಗಲಿಲ್ಲ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ * ಹಾವೇರಿ ವಿವಿಗೆ- ಜಾನಪದ ವಿವಿಗೆ ಸಿಗಲಿಲ್ಲ ವಿಶೇಷ ಅನುದಾನ
ಮಾಲತೇಶ ಅಂಗೂರ
ಹಾವೇರಿ: ಬಹುನಿರೀಕ್ಷಿತ ಬಜೆಟ್ ಮಂಡನೆಯಾಗಿದೆ. ಯುಗಾದಿಯ ಹೊಸ್ತಿಲಲ್ಲಿರುವ ಜಿಲ್ಲೆಯ ಜನತೆ ಬಜೆಟ್‌ಮೇಲೆ ಹತ್ತಾರು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದರು. ಆದರೆ ಜಿಲ್ಲೆಯ ಜನತೆಗೆ ಸಿಕ್ಕಿದ್ದು ಬೆಲ್ಲಕ್ಕಿಂತ ಬೇವೆ ಜಾಸ್ತಿ ಎನ್ನುವಂತಾಗಿದೆ. ಬಹು ಬೇಡಿಕೆಯಾಗಿದ್ದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಘೋಷಣೆಯಾಗಲಿಲ್ಲ, ಹಾವೇರಿ ವಿವಿಗೆ- ಜಾನಪದ ವಿವಿಗೆ ವಿಶೇಷ ಅನುದಾನ ಸಿಕ್ಕಿಲ್ಲ. ಇದರ ನಡುವೆ ಭಾವೈಕ್ಯತೆಯ ಹರಿಕಾರ ಸಂತ ಶಿಶುನಾಳ ಷರೀಫ್‌ರ ಹೆಸರಿನಲ್ಲಿ ಪ್ರತ್ಯೇಕ ಪ್ರತಿಷ್ಠಾನ ಸ್ಥಾಪನೆ ಘೋಷಣೆ ಮಾಡಲಾಗಿದೆ.
ಹಾನಗಲ್ ತಾಲ್ಲೂಕಿನ ತಿಳವಳ್ಳಿ ಪ್ರತ್ಯೇಕ ಪೊಲೀಸ್ ಠಾಣೆ ಸ್ಥಾಪನೆ ಮಾಡಲಾಗಿದೆ. ಶಿಗ್ಗಾವಿ ತಾಲ್ಲೂಕಿನ ಶಿಶುವಿನಹಾಳದ ಸಂತ ಶಿಶುನಾಳ ಷರೀಫ್‌ರ ಹೆಸರಿನಲ್ಲಿ ಅಲ್ಪಸಂಖ್ಯಾತರಿಗಾಗಿ ೧೦ ಹೊಸ ವಸತಿ ಶಾಲೆಗಳನ್ನು ಸಿಬಿಎಸ್‌ಇ ಪಠ್ಯಕ್ರಮದೊಂದಿಗೆ ಆರಂಭ, ಜಿಲ್ಲೆಯ ಸಂತ ಶಿಶುನಾಳ ಷರೀಫರ ಹೆಸರಿನಲ್ಲಿ ೨೫ ವಸತಿ ಶಾಲೆಗಳ ಆರಂಭ, ಭಾವೈಕ್ಯತೆಯ ಹರಿಕಾರ ಸಂತ ಶಿಶುನಾಳ ಷರೀಫ್‌ರ ಹೆಸರಿನಲ್ಲಿ ಪ್ರತ್ಯೇಕ ಪ್ರತಿಷ್ಠಾನ ಸ್ಥಾಪನೆ, ಜಿಲ್ಲಾ ಗಾಂಧಿ ಭವನವನ್ನು ಪುನಃಕ್ಷೇತನಗೊಳಿಸಲು ಮಹಾತ್ಮಾ ಗಾಂಧೀಜಿ ಜನ ಶಿಕ್ಷಣ ಕೇಂದ್ರ ಯೋಜನೆ ಜಾರಿ ಹಾವೇರಿ ಜಿಲ್ಲೆಯ ಹಲವು ಕಡೆಗಳಲ್ಲಿ ಗಾಂಧೀಜಿ ಭೇಟಿ ನೀಡಿದ್ದು, ಅದೇ ಸ್ಥಳದಲ್ಲಿ ಗಾಂಧಿ ಸ್ಮಾರಕ ಸ್ತಂಭ ನಿರ್ಮಾಣ ಘೋಷಿಸಲಾಗಿದೆ.
ಜಿಲ್ಲೆಯ ರಟ್ಟಿಹಳ್ಳಿ ತಾಲ್ಲೂಕಿನ ಮದಗ ಮಾಸೂರು ಕೆರೆಗೆ ನೀರು ತುಂಬಿಸುವ ಹಾಗೂ ಬ್ಯಾಡಗಿ ತಾಲ್ಲೂಕಿನ ಗುಡ್ಡದಮಲ್ಲಾಪುರ ಏತ ನೀರಾವರಿ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡಲಳಾಗಿದೆ. ಹಾನಗಲ್ ಭಾಗದ ೧೧೧ ಕೆರೆಗಳಿಗೆ ವರದಾ ನದಿಯಿಂದ ಏತ ನೀರಾವರಿ, ರಟ್ಟಿಹಳ್ಳಿ ತಾಲ್ಲೂಕಿನಲ್ಲಿ ಚೆಕ್ ಡ್ಯಾಂ ಹಾಗೂ ತಡೆಗೋಡೆ ನಿರ್ಮಾಣ. ಶಿಗ್ಗಾವಿ ತಾಲ್ಲೂಕಿನಲ್ಲಿ ಸೇತುವೆ ಸಹಿತ ಚೆಕ್ ಡ್ಯಾಂ ನಿರ್ಮಾಣ ಕಾಮಗಾರಿಗೆ ಅನುಮೋದನೆ ದೊರೆತಿದೆ. ಬ್ಯಾಡಗಿ ವಿಧಾನಸಭಾ ಕ್ಷೇತ್ರದ ಸಂಗೂರಿನಲ್ಲಿ ಬ್ರಿಡ್ಜ್ ಕಂ ಬ್ಯಾರೇಜ್ ಗೇಟ್ ಅಳವಡಿಕೆ ಮತ್ತು ತಡೆಗೋಡೆ ನಿರ್ಮಾಣ
ಶಿಗ್ಗಾವಿ ತಾಲ್ಲೂಕಿನ ತಡಸ ಅಡವಿ ಸೋಮಾಪುರ ನಡುವೆ ಫೀಡರ್ ಕಾಲುವೆ ಅಭಿವೃದ್ಧಿ, ಕಾರ್ಮಿಕ ಇಲಾಖೆಯಿಂದ ಎರಡನೇ ಹಂತದಲ್ಲಿ ಹಾವೇರಿ, ರಾಣೆಬೆನ್ನೂರು, ಶಿಗ್ಗಾವಿ, ಹಾನಗಲ್, ಹಿರೇಕೆರೂರಿನಲ್ಲಿ ಶ್ರಮಿಕ ವಸತಿ ಶಾಲೆ ನಿರ್ಮಾಣದ ಬಗ್ಗೆ ಘೋಷಣೆಯಾಗಿದೆ. ಜಿಲ್ಲೆಯ ೬ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷದ ಶಾಸಕರಿದ್ದಾರೆ. ಆದರೆ ಇವರು ಮುಖ್ಯಮಂತ್ರಿಗಳ ಮೇಲೆ ಜಿಲ್ಲೆಯ ಬೇಡಿಕೆಗಳ ಬಗ್ಗೆ ಒತ್ತಡ ಹಾಕುವಲ್ಲಿ ವಿಫಲರಾಗಿದ್ದಾರೆ ಎನ್ನುವುದು ಜನತೆಯ ಆರೋಪವಾಗಿದೆ.

ಜಿಲ್ಲಾ ಉಸ್ತುವಾರಿ ಸಚಿವರು ಹೇಳೋದೇನು? ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮತ್ತು ಪ್ರತ್ಯೇಕ ಡಿಸಿಸಿ ಬ್ಯಾಂಕ್ ರಚನೆಯ ಬೇಡಿಕೆಗಳಿಗೆ ಬಜೆಟ್‌ನಲ್ಲಿ ಸ್ಪಂದನೆ ವ್ಯಕ್ತವಾಗಿದ್ದು, ಈ ಬೇಡಿಕೆಗಳು ಈಡೇರಲಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಆಶಯ ವ್ಯಕ್ತಪಡಿಸಿದ್ದಾರೆ. ೨೦೨೬-೨೭ನೇ ಸಾಲಿನಲ್ಲಿ ವೈದ್ಯಕೀಯ ಕಾಲೇಜು, ಆಸ್ಪತ್ರೆ ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳ ನಿರ್ಮಾಣ ಕಾಮಗಾರಿಗಳಿಗೆ ೬೨೦ ಕೋಟಿ ರೂ. ಹಾಗೂ ಉಪಕರಣಗಳ ಖರೀದಿಗೆ ೨೨೦ ಕೋಟಿ ರೂ. ಅನುದಾನ ಮೀಸಲಿಡಲಾಗಿದೆ. ಹಾವೇರಿ ವೈದ್ಯಕೀಯ ಕಾಲೇಜು ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯಮಂತ್ರಿಗಳು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಭರವಸೆ ನೀಡಿದ್ದು, ಈ ಉದ್ದೇಶದ ಯೋಜನೆಗಳಿಗೆ ಬಜೆಟ್‌ನಲ್ಲಿ ಅನುದಾನ ತೆಗೆದಿರಿಸಿದ್ದಾರೆ. ಹೀಗಾಗಿ ಹಾವೇರಿಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕನಸು ನನಸಾಗುವ ನಿರೀಕ್ಷೆ ಇದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

