
(ಪರ್ಪಲ್ ರಂಪ್‌ಸನ್ ಬರ್ಡ್)
“ನೇರಳೆ ಬೆನ್ನಿನ ಸೂರಕ್ಕಿ” ನೋಡಲು ಬಲುಸುಂದರ, ಮಕರಂದ ಹೀರುವ ಹೂಗುಬ್ಬಿಪಕ್ಷಿಗಳ ಪೋಟೋ ತಗೆಯುವುದು ನಿಜಕ್ಕೂ ಸವಾಲಿನ ಕೆಲಸವೇ ಸರಿ!. ಪ್ರತಿಕ್ಷಣವು ರೆಕ್ಕೆ ಬಡೆಯುತ್ತಾ, ಅತ್ತ ಇತ್ತ ನೋಡುತ್ತಲೇ ಇರುತ್ತವೆ, ಅದಕ್ಕೆ ಬಹಳ ತಾಳ್ಮೆಯು ಬೇಕಾಗುತ್ತದೆ?.”ಹಳದಿ ಹೂಗುಬ್ಬಿ” “ನೇರಳೆ ಬೆನ್ನಿನ ಸೂರಕ್ಕಿ” ಮಕರಂದ ಹೀರುವ ದೃಶ್ಯ ಕ್ಷಣಾರ್ಧದಲ್ಲಿ ನಡೆಯುವ ಸನ್ನಿವೇಶ. ಜ.೧೦-೨೦೨೪ರಂದು ಹೆಗ್ಗೇರಿಕೆರೆಗೆ ಭೇಟಿ ನೀಡಿದ ವೇಳೆ ಮುತ್ತುಗದ ಹೂವಿನಿಂದ ಮಕರಂದ ಹೀರುತ್ತಿದ್ದ ದೃಶ್ಯ ಗಮನ ಸೆಳೆಯಿತು. ಅದರ ಕೆಲವು ದೃಶ್ಯಗಳನ್ನು ಕ್ಯಾಮೇರಾ ಕಣ್ಣಿನಲ್ಲಿ ಸೆರೆಹಿಡಿದಿರುವೆ.
ನೆರಳೆ ಬಣ್ಣ ಪ್ರಧಾನವಾಗಿರುವ ಗುಬ್ಬಚ್ಚಿ ಗಾತ್ರದ “ನೇರಳೆ ಬೆನ್ನಿನ ಸೂರಕ್ಕಿ” ಎದೆ ಹೊಟ್ಟೆ ಬಿಳಿ-ತಿಳು ಹಳದಿ ಬಣ್ಣ. ರೆಕ್ಕೆ ಮತ್ತು ಬಾಲದ ಪುಕ್ಕಗಳು ಸಾಧಾರಣ ನೇರಳೆ ಬಣ್ಣ, ತುಸು ಕಂದುಗೆಂಪು ಬಣ್ಣಕ್ಕಿದ್ದು ಹೊಟ್ಟೆಯ ಭಾಗ ಬೂದಿ ಬಿಳಿ ಬಣ್ಣ ಇದಕ್ಕಿದೆ. ಜೋಡಿಗಳಲ್ಲಿ ಹೂವಿನ ಗಿಡಗಳಲ್ಲಿ ಇವು ಹೆಚ್ಚಾಗಿ ಇರುತ್ತವೆ. ಅತಿ ಹಗುರ ಹಕ್ಕಿಗಳಾದ್ದರಿಂದ ಹೂವಿನ ತೊಟ್ಟು ದಳಗಳ ಮೇಲೆಲ್ಲಾ ರೆಕ್ಕೆ ಬಡಿಯುತ್ತಾ ಕುಳಿತು ಹೂವಿನ ಮಕರಂದ ಹೀರುತ್ತವೆ. ಕೊಂಚ ಕಾಲ ರೆಕ್ಕೆ ಬಡಿಯುತ್ತಾ ಗಾಳಿಯಲ್ಲೇ ನಿಂತು ಮಧುಪಾನ ಮಾಡುವ ಸಾಮರ್ಥ್ಯ ಇವಕ್ಕಿದೆ. ಚಿಕ್ ಚಿಕ್ ಚೀಚೀ ಎಂದು ಮಕರಂದ ಹೀರುತ್ತಾ ನಿರಂತರವಾಗಿ ಸಿಳ್ಳು ಹಾಕುತ್ತವೆ.
ಹೆಬ್ಬೆರಳುಗಾತ್ರದ ಈ ಪುಟಾಣಿ ಹಕ್ಕಿ ಕೆಲವೊಮ್ಮೆ ರೆಕ್ಕೆ ಬಿಚ್ಚಿ ಹಾರುತ್ತಿದ್ದಂತೆಯೇ ಹೂವಿನ ಬುಡಕ್ಕೆ ಉದ್ದನೆಯ ಕೊಳವೆ ನಾಲಗೆ ಚಾಚಿ ಯಾವ ಸಪೋರ್ಟಿಲ್ಲದೇ ಮಕರಂದ ಹೀರುವುದು ಸಹಜ ಕ್ರಿಯೆ. ಸನ್ ಬರ್ಡ್ ಎಂದೇ ಪ್ರಚಲಿತವಾದ ೧೩೨ ವಿಧಗಳ ಮಕರಂದ ಸವಿಯುವ ಪುಟಾಣಿ ಹಕ್ಕಿ, ವಿಶ್ವದ ಅನೇಕ ಕಡೆ ಉಷ್ಣ ಪ್ರದೇಶಗಳಲ್ಲಿ ಜೀವಿಸುತ್ತಿವೆ. ಕರ್ನಾಟಕದಲ್ಲಿ ಇವುಗಳ ಅರು ತಳಿಗಳು ಕಂಡುಬರುತ್ತವೆ. ಅವುಗಳಲ್ಲಿ ಒಂದಾದ ನಾಲ್ಕಿಂಚಿನ ‘ನೇರಳೆ ಬೆನ್ನಿನ ಸೂರಕ್ಕಿ’ ಬಲುಸುಂದರ. ಅದರ ಹೆಸರು ‘ಪರ್ಪಲ್ ರಂಪ್‌ಸನ್ ಬರ್ಡ್’ ಕೆಳಮುಖವಾಗಿ ಓರೆಯಾದ ಕೊಕ್ಕಿನಲ್ಲಿ ಬ್ರಷ್‌ನಂತೆ ಮೊನಚಾದ ಕೊಳವೆಯಂತಿರುವ ಉದ್ದನೆಯ ನಾಲಗೆ ಚಾಚಿ ಹೂವುಗಳ ಮಕರಂದವನ್ನು ಆಹಾರವಾಗಿ ಸವಿಯುವುದು ಈ ಪಕ್ಷಿಯ ಜೀವನ ಕ್ರಮ. ಅಗಾಗ ಕೆಲವು ಬಗೆಯ ಕೀಟಗಳನ್ನೂ ನಾಲಗೆಯಲ್ಲಿ ಸೆಳೆದು ತಂದು ಮರಿಗಳಿಗೆ ಉಣಬಡಿಸುತ್ತದೆ.
ಚಿತ್ರ/ಬರಹ: ಮಾಲತೇಶ ಅಂಗೂರ, ಹಾವೇರಿ-