
ಶೇ.೧ ಒಳಮೀಸಲು ಕಲ್ಪಿಸಲು ಸಿಎಂ ಭಾವಚಿತ್ರ ಹಿಡಿದು ಭಿಕ್ಷೆ ಬೇಡಿದ ಅಲೆಮಾರಿಗಳು
ಹಾವೇರಿ: ಒಳಮೀಸಲು ಜಾರಿಯವೇಳೆ ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿರುವ ೪೯ ಸೂಕ್ಷ್ಮ ಮತ್ತು ಅತೀ ಸೂಕ್ಷ್ಮ ಜಾತಿಗಳ ಅಲೆಮಾರಿಗಳನ್ನು ಕೈಬಿಟ್ಟಿರುವುದನ್ನು ವಿರೋಧಿಸಿ ಅಲೆಮಾರಿಗಳಿಗೆ ಶೇ.೧ ಒಳಮೀಸಲು ಕಲ್ಪಿಸಲು ಒತ್ತಾಯಿಸಿ ಶುಕ್ರವಾರ ಇಲ್ಲಿನ ಹೊಸಮನಿ ಸಿದ್ದಪ್ಪವೃತ್ತದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಭಾವಚಿತ್ರ ಹಿಡಿದು ಶೇ.೧ಮೀಸಲು ಭಿಕ್ಷೆ ಬೇಡುವ ಮೂಲಕ ಅಲೆಮಾರಿಗಳು ಪ್ರತಿಭಟನೆ ನಡೆಸಿದರು.
ಕರ್ನಾಟಕ ರಾಜ್ಯ ಎಎಸ್‌ಸಿ-ಎಸ್ಟಿ ಅಲೆಮಾರಿ ಬುಡಕಟ್ಟು ಮಹಾಸಭಾದಿಂದ ನಡೆದ ಪ್ರತಿಭಟನೆಯಲ್ಲಿ ನೂರಾರು ಅಲೆಮಾರಿಗಳು ತಮ್ಮ ಸಂಪ್ರದಾಯಕ ವೇಷಭೂಷಣಗಳನ್ನು ತೊಟ್ಟು, ಶಂಕ-ಜಾಗಟೆಗಳೊಂದಿಗೆ, ಮಹಿಳೆಯರು ತಮ್ಮ ಪುಟ್ಟ ಮಕ್ಕಳೊಂದಿಗೆ ತಟ್ಟೆ, ಚಂಬು, ಅಡುಗೆಪಾತ್ರೆಗಳನ್ನು ಹಿಡಿದು ಅರ್ಧಗಂಟೆಗೂ ಹೆಚ್ಚುಕಾಲ ಪ್ರತಿಭಟನೆ ನಡೆಸಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಭಾವ ಚಿತ್ರ ಹಿಡಿದು ತಮಗೆ ಶೇ.೧ಮೀಸಲು ಭಿಕ್ಸೆ ನೀಡುವಂತೆ ನಡೆಸಿದ ಪ್ರತಿಭಟನೆ ಮನಕಲಕುವಂತಿತ್ತು.ಒಳಮೀಸಲಾತಿ ಹಂಚಿಕೆಯಲ್ಲಿ ಅನ್ಯಾಯವಾಗಿದೆ ತಮಗೆ ಅನ್ಯಾಯವಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಒಕ್ಕೂಟದ ಶೆಟ್ಟಿ ವಿಭೂತಿ ಮಾತನಾಡಿ, ”ಅತ್ಯಂತ ಶೋಷಣೆಗೆ ಒಳಗಾಗಿರುವ ಸೂಕ್ಷ್ಮ ಮತ್ತು ಅತೀ ಸೂಕ್ಷ್ಮ ೪೯ ಜಾತಿಗಳ ಅಲೆಮಾರಿಗಳ ಸ್ಥಿತಿಗತಿಯ ದತ್ತಾಂಶ ಸಂಗ್ರಹಿಸಿದ ನ್ಯಾ.ನಾಗಮೋಹನ್ ದಾಸ್ ಏಕ ಸದಸ್ಯ ಆಯೋಗವು ಈ ಜಾತಿಗಳ ಜನರಿಗೆ ಪ್ರತ್ಯೇಕ ಗುಂಪು ಸೃಷ್ಟಿಸಿ, ಶೇ.೧ರಷ್ಟು ಒಳಮೀಸಲಾತಿ ನೀಡುವಂತೆ ಶಿಫಾರಸು ಮಾಡಿತ್ತು. ಆದರೆ, ರಾಜ್ಯ ಸರಕಾರವು ಈ ಶಿಫಾರಸು ಕಡೆಗಣಿಸಿ ಅಲೆಮಾರಿಗಳಿಗೆ ಅನ್ಯಾಯ ಮಾಡಿದೆ” ಎಂದು ಆರೋಪಿಸಿದರು.
”ಒಳಮೀಸಲಾತಿ ಹಂಚುವಾಗ ಅಲೆಮಾರಿ ಜಾತಿಗಳನ್ನು ಬಲಾಢ್ಯ ಸಮುದಾಯದ ಗುಂಪಿನಲ್ಲಿ ಸೇರಿಸಲಾಗಿದೆ. ಆ ಗುಂಪಿನಲ್ಲಿರುವ ಭೋವಿ, ಲಂಬಾಣಿ ಸೇರಿ ಇತರೆ ಸಮುದಾಯಗಳ ಜನರು ಅಕ್ಷರಸ್ಥರಾಗಿದ್ದಾರೆ. ಆದರೆ, ೪೯ ಜಾತಿಗಳ ಅಲೆಮಾರಿಗಳಿಗೆ ಇನ್ನು ಅಕ್ಷರ ಜ್ಞಾನವೇ ಇಲ್ಲವಾಗಿದೆ. ಈಗಲೂ ಸಹ ಅಲೆಮಾರಿಗಳು ಮನೆ-ಮಠಗಳಿಲ್ಲದೇ ಗುಡುಸಲಿನಲ್ಲಿ ವಾಸಮಾಡುತ್ತಾ ಭೀಕ್ಷೆ ಬೇಡುವ ಮೂಲಕ ಜೀವನ ನಡೆಸುತ್ತಿದ್ದಾರೆ. ವಾಸ್ತವ ಸ್ಥಿತಿ ಹೀಗಿರುವಾಗ ಅಲೆಮಾರಿಗಳು ಆ ಸಮುದಾಯಗಳ ಜನರೊಂದಿಗೆ ಪೈಪೋಟಿ ನಡೆಸಿ ಮೀಸಲು ಪಡೆಯುವುದು ಕಷ್ಟ ಸಾಧ್ಯ. ಹಾಗಾಗಿ ರಾಜಕೀಯ, ಶಿಕ್ಷಣ ಮತ್ತು ಉದ್ಯೋಗ ಮರೀಚಿಕೆಯಾಗಲಿದೆ. ಆದ್ದರಿಂದ ರಾಜ್ಯ ಸರಕಾರ ಈಗ ಹಂಚಿಕೆ ಮಾಡಿರುವ ಒಳ ಮೀಸಲಾತಿಯನ್ನು ಮರು ಪರಾಮರ್ಶೆಗೆ ಒಳಪಡಿಸಿ ಅಲೆಮಾರಿಗಳಿಗೆ ಪ್ರತ್ಯೇಕವಾಗಿ ಶೇ.೧ರಷ್ಟು ಒಳ ಮೀಸಲಾತಿ ಕಲ್ಪಿಸಬೇಕು”, ಇಲ್ಲದೇ ಹೋದರೆ ಉಗ್ರಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಅಲೆಮಾರಿಗಳ ಪ್ರತಿಭಟನೆಗೆ ಬಂಬಲವ್ಯಕ್ತಪಡಿಸಿ ಆದಿಜಾಂಬವ ಮಾದಿಗ ಸಮಾಜದ ಮುಖಂಡರುಗಳಾದ ಡಿ.ಎಸ್.ಮಾಳಗಿ, ಉಡಚಪ್ಪ ಮಾಳಗಿ ಮಾತನಾಡಿ ಅಲೆಮಾರಿಗಳು ನಿಕೃಷ್ಷ ಜೀವನ ನಡೆಸುತ್ತಿದ್ದಾರೆ. ಶೇ.೧ ಒಳಮೀಸಲಾತಿಗೆ ಅರ್ಹರಿರುತ್ತಾರೆ. ರಾಜ್ಯ ಸರ್ಕಾರ ಅಲೇಮಾರಿಗಳಿಗೆ ಶೇ.೧ ಒಳಮೀಸಲು ಕಲ್ಪಿಸಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಮಾಲತೇಶ ಯಲ್ಲಾಪುರ, ಜಂಬಣ್ಣ ಮಿರಿಯಾಲಿ, ಭಿಕ್ಷಾಪತಿ ಮೋತಿ, ಈರಣ್ಣ ಮೋತಿ, ದುರಗವ್ವ ಬಾದಗಿ, ಶಂಕ್ರಪ್ಪ ಮಹಾಂತ, ಮಂಜಪ್ಪ ಬಾದಗಿ,ಮಾರೇಪ್ಪ ಮೋತಿ, ಲಕ್ಷ್ಮಣ ಶಿರಶಾಲ್, ಲಿಂಗರಾಜ ಮಿರಿಯಾಲಿ, ಸುರೇಶ ಚಲವಾದಿ, ದುರಗಪ್ಪ ಮೋತಿ, ಮಂಜೇಶ ಮಿರಿಯಾಲಿ, ಮಾರೇಶ ಕೊಂಡ್ರ, ಪ್ರಜ್ವಲ್ ಶೆಟ್ಟಿ ವಿಭೂತಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿರುವ ೪೯ ಸೂಕ್ಷ್ಮ ಮತ್ತು ಅತೀ ಸೂಕ್ಷ್ಮ ಜಾತಿಗಳ ಅಲೆಮಾರಿಗಳಿಗೆ ಪ್ರತ್ಯೇಕವಾಗಿ ಶೇ.೧ರಷ್ಟು ಒಳ ಮೀಸಲಾತಿ ಕಲ್ಪಿಸುವಂತೆ ಒತ್ತಾಯಿಸಿ ತಹಶೀಲ್ದಾರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.


