
ಸಂಗೂರ ಸಕ್ಕರೆ ಕಾರ್ಖಾನೆಯಲ್ಲಿ ಕಬ್ಬು ನುರಿಸುವ ಕಾರ್ಯಕ್ಕೆ ಚಾಲನೆ
ಪ್ರತಿಟನ್‌ಗೆ ರೂ ೩೫೫೦ ದರ ನೀಡಲು ರೈತರ ಒತ್ತಾಯ
ಹಾವೇರಿ: ತಾಲೂಕಿನ ಸಂಗೂರ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ಗುತ್ತಿಗೆ ಪಡೆದಿರುವ ಜಿ.ಎಂ. ಶುಗರ‍್ಸ್‌ನ ಅಧಿಕಾರಿಗಳು ೨೦೨೫-೨೬ ನೇ ಸಾಲಿನ ಕಬ್ಬು ನುರಿಸುವ ಕಾರ್ಯಕ್ಕೆ ಶುಕ್ರವಾರ ಕಬ್ಬು ಬೆಳೆಗಾರರು, ರೈತ ಮುಖಂಡರ ಸಮ್ಮುಖದಲ್ಲಿ ಕಾರ್ಖಾನೆ ಅಧಿಕಾರಿಗಳಿಂದ ಚಾಲನೆ ನೀಡಿದರು.
ರಾಜ್ಯ ಕಬ್ಬು ಬೆಳೆಗಾರ ಸಂಘದ ಜಿಲ್ಲಾಧ್ಯಕ್ಷ ಭುವನೇಶ್ವರ್ ಶಿಡ್ಲಾಪುರ ಮಾತನಾಡಿ, ಕಾರ್ಖಾನೆಯವರು ರೈತರಿಗೆ ಮೋಸ ಮಾಡದೆ ಕಬ್ಬುಸಾಗಿಸಿದ ರೈತರಿಗೆ ೧೪ ದಿನಗಳ ಒಳಗಾಗಿ ಹಣ ಪಾವತಿಸಬೇಕು. ಹಿಂದಿನ ವರ್ಷದ ಬಾಕಿ ಹಣವನ್ನು ಒಂದು ವಾರದ ಒಳಗೆ ಪಾವತಿಸಬೆಕು. ಕಬ್ಬು ಕಟಾವು ಹಾಗೂ ಸಾಗಾಣಿಕೆ ವೆಚ್ಚವನ್ನು ಕಾರ್ಖಾನೆಯವರೆ ಭರಿಸಿಕೊಳ್ಳಬೇಕು, ರೈತರಿಗೆ ಪ್ರತಿಟನ್‌ಗೆ ರೂ ೩೫೫೦ ದರ ಕೊಡಬೇಕು.ಕಬ್ಬು ಕಟಾವು ಮಾಡಲು ಬಂದ ಗ್ಯಾಂಗ್‌ಗಳನ್ನು ಕಾರ್ಖಾನೆಯವರು ಹತೋಟಿಯಲ್ಲಿ ಇಟ್ಟುಕೊಂಡು, ರೈತರಿಗೆ ಗ್ಯಾಂಗುಗಳಿಂದ ತೊಂದರೆ ಆಗದಂತೆ ಕಾರ್ಖಾನೆಯವರು ನೋಡಿಕೊಳ್ಳಬೇಕು. ಕಾರ್ಖಾನೆಯ ಮಾಲೀಕರು ಬೇಗನೆ ರೈತರ ಜೊತೆ ಚರ್ಚಿಸಿ ದರವನ್ನು ನಿಗದಿ ಮಾಡಬೇಕೆಂದರು.
ಸಕ್ಕರೆ ಕಾರ್ಖಾನೆ ಅಧ್ಯಕ್ಷ ಚಂದ್ರಪ್ಪ ವರದಿ ಮಾತನಾಡಿ ಪ್ರತಿಸಲ ರಿಕವರಿಯಲ್ಲಿ ನಮಗೆ ಕಾರ್ಖಾನೆಯವರು ಮೋಸ ಮಾಡುತ್ತಾ ಬಂದಿದ್ದಾರೆ. ನಮ್ಮ ಆಡಳಿತ ಮಂಡಳಿ ಕಾರ್ಖಾನೆಯನ್ನು ನಡೆಸುವಾಗ ೧೦.೫೦ ಮತ್ತು ೧೧ ವರೆಗೆ ರಿಕವರಿ ಬರುತ್ತಿತ್ತು, ಈಗ ಗುತ್ತಿಗೆದಾರರು ೯.೪೨ ರಿಕವರಿ ಬರುವ ಹಾಗೆ ಮಾಡಿದ್ದಾರೆ, ಇದರಿಂದ ರೈತರಿಗೆ ಅನ್ಯವಾಗುತ್ತದೆ. ಕಾರ್ಖಾನೆಯ ಮಾಲೀಕರು ರೈತರಿಗೆ ಹೆಚ್ಚಿನ ಬೆಲೆ ಕೊಡಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಕಾರ್ಖಾನೆಯ ಎಂ.ಡಿ. ನಟರಾಜ್,ಅಧೀಕಾರಿಗಳಾದ ಪ್ರಸನ್ನ, ರಾಮಚಂದ್ರಪ್ಪ, ಹನುಮಂತಪ್ಪ, ಮುನಿಕುಮಾರ್, ರೈತ ಮುಖಂಡರಾದ ಫಕೀರಪ್ಪ ಹುಲ್ಲಾಳ್, ಪ್ರಕಾಶ್‌ಗೌಡ ಪಾಟೀಲ್, ರಾಜಶೇಖರ್ ಹಲಸೂರ, ಪ್ರಕಾಶ್ ಬೆಂಚಳ್ಳಿ, ಮಂಜುನಾಥ್ ಕ್ಯಾತಪ್ಪನವರ್, ಮಲ್ಲಪ್ಪ ಕೋರಿ, ನಿರ್ದೇಶಕರುಗಳಾದ ರಾಮಣ್ಣ ಮಾದಪ್ಪನವರ್, ದಾನೇಶಪ್ಪ ಕೆಂಗೊಂಡ, ಫಕೀರಪ್ಪ ಕಟಾರಿ, ರಾಜು ಹೊನ್ನತ್ತಿ, ಕೊಡೆಪ್ಪ ದ್ಯಾವಣ್ಣನವರ್, ನಂದೇಪ್ಪ ಲಮಾಣಿ, ಸಂಕಣ್ಣನವರ್ ಎಂ ಎನ್ ಕಾರ್ಖಾನೆ ಸಿಬ್ಬಂದಿ. ಕಾರ್ಮಿಕರು ಹಾಗೂ ಇನ್ನೂ ಅನೇಕ ರೈತರು ಹಾಜರಿದ್ದರು.

