

ಹಾವೇರಿಜಿಲ್ಲೆಯಾದ್ಯಂತ ೧೯ ಅಬಕಾರಿ ದಾಳಿ, ೧೯ ಆರೋಪಿಗಳ ವಿರುದ್ಧ ಪ್ರಕರಣ
ಹಾವೇರಿ: ಜಿಲ್ಲೆಯಲ್ಲಿ ಅಕ್ರಮ ಸಾರಾಯಿ ಮಾರಾಟ ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ೧೯ ಅಬಕಾರಿ ದಾಳಿ ನಡೆಸಿ, ೧೯ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಂಶುಕುಮಾರ ತಿಳಿಸಿದ್ದಾರೆ.
ಜುಲೈ. ೦೩. ಹಾಗೂ ೦೪ ರಂದು ಜಿಲ್ಲೆಯಾದ್ಯಂತ ಪೊಲೀಸ್ ಠಾಣಾಧಿಕಾರಿಗಳಿಗೆ ಹಾಗೂ ಹಾವೇರಿ ಜಿಲ್ಲಾ ಅಪರಾಧ ಪತ್ತೆ ದಳ ವಿಭಾಗದ ಅಧಿಕಾರಿಗಳಿಗೆ ಈ ಕುರಿತು ಕಾರ್ಯಾಚರಣೆ ಕೈಗೊಂಡು ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ. ಅಕ್ರಮ ಸಾರಾಯಿ ಮಾರಾಟದ ಕುರಿತು ವಿಶೇ? ದಾಳಿ ನಡೆಸಿ ಕ್ರಮ ಕೈಕೊಳ್ಳುವಂತೆ ಸೂಚಿಸಿದ ಮೇರೆಗೆ ಒಟ್ಟು ೧೯ ಅಬಕಾರಿ ದಾಳಿಗಳನ್ನು ಕೈಕೊಂಡು ೧೯ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿ ಆರೋಪಿತರಿಂದ ೩೫,೪೯೬ರೂ ಮೌಲ್ಯದ ಒಟ್ಟು ೮೦.೨೪ ಲೀ. ಮದ್ಯ ವಶಪಡಿಸಿಕೊಳ್ಳಲಾಗಿದೆ.
ನವೆಂಬರ್-೨೦೨೩ ರಿಂದ ಜೂನ್-೨೦೨೪ ರವರೆಗೆ ಜಿಲ್ಲೆಯಾದ್ಯಂತ ಒಟ್ಟು ೮೫ ಅಬಕಾರಿ ದಾಳಿಗಳನ್ನು ಕೈಕೊಂಡು ೯೩ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿ, ಆರೋಪಿತರಿಂದ ಒಟ್ಟು ೪೫೮.೪೨ ಲೀ. ಮದ್ಯ, ಅಂದಾಜು ಕಿಮ್ಮತ್ತು ರೂ ೨,೦೨,೫೮೬.೨೩ ಮೌಲ್ಯದ ಮಾಲನ್ನು ವಶಪಡಿಸಿಕೊಳ್ಳಲಾಗಿದೆ. ಜಿಲ್ಲೆಯ ಯಾವುದೇ ಗ್ರಾಮ ಅಥವಾ ನಗರ ವ್ಯಾಪ್ತಿಗಳಲ್ಲಿ ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿರುವ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ಇದ್ದಲ್ಲಿ ಕೂಡಲೇ ಇ.ಆರ್.ಎಸ್.ಎಸ್-೧೧೨ ಗೆ ಕರೆ ಮಾಡಬೇಕು, ಇಲ್ಲವೇ ಸ್ಥಳೀಯ ಪೊಲೀಸ್ ಠಾಣೆ / ಜಿಲ್ಲಾ ಕಂಟ್ರೋಲ್ ರೂಮ್ ವಾಟ್ಸ್ಯಾಪ್ ಸಂಖ್ಯೆ. ೯೪೮೦೮೦೪೫೦೦ ಗೆ ಮಾಹಿತಿಯನ್ನು ತಿಳಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಂಶುಕುಮಾರ್ ತಿಳಿಸಿದ್ದಾರೆ.

