
ಹಾವೇರಿ: ಅವಧಿ ಮೀರಿದ ೭೭ ಲಕ್ಷ ಮೌಲ್ಯದ ಮದ್ಯ ಉಳಿಯಲು ದನಬೆದರಿಸುವ ಸ್ಪರ್ಧೆ ಆಯೋಜನೆ ಕಡಿಮೆಯಾದದ್ದೇ ಕಾರಣವಂತೆ!
ಹಾವೇರಿ: ಇಲ್ಲಿನ ಪಾನೀಯ ನಿಗಮದ ಡಿಪೋದಲ್ಲಿದ್ದ ಅವಧಿ ಮೀರಿದ ೭೭ ಲಕ್ಷ ರೂಪಾಯಿ ಮೌಲ್ಯದ ಮದ್ಯವನ್ನು ಮಂಗಳವಾರೆ ನಾಶಪಡಿಸಲಾಯಿತು . ಸುಮಾರು ೨,೮೦೩ ಬಾಕ್ಸ್ಗಳಲ್ಲಿದ್ದ ೪೫,೪೬೬ ಬಾಟಲಿಗಳಲ್ಲಿದ್ದ ಮದ್ಯವನ್ನು ಅಧಿಕಾರಿಗಳು ನಾಶಪಡಿಸಿದರು.
ಡಿಪೋದ ಆವರಣದಲ್ಲಿದ್ದ ಗುಂಡಿಗೆ ಅವಧಿ ಮೀರಿದ ಮದ್ಯ ಸುರಿಯಲಾಯಿತು. ಈ ಸಂದರ್ಭದಲ್ಲಿ ಹಾವೇರಿ ಅಬಕಾರಿ ನಿಗಮದ ಉಪ ಆಯುಕ್ತೆ ವನಜಾಕ್ಷಿ, ತಹಶಿಲ್ದಾರ್ ಶರಣಮ್ಮ ಮತ್ತು ಪಾನೀಯ ನಿಗಮ ನಿಯಮಿತ ಡಿಪೋ ಮ್ಯಾನೇಜರ್ ಸಮ್ಮುಖದಲ್ಲಿ ಅವಧಿ ಮೀರಿದ ಮದ್ಯ ನಾಶಪಡಿಸಲಾಯಿತು. ಸುಮಾರು ೧೫ಕ್ಕೂ ಹೆಚ್ಚು ಕಾರ್ಮಿಕರು ಮೂರು ಗಂಟೆಯ ಅವಧಿಯಲ್ಲಿ ಈ ಮದ್ಯ ನಾಶಪಡಿಸಿದರು. ಈ ಸಂದರ್ಭದಲ್ಲಿ ಅಬಕಾರಿ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಈ ಮದ್ಯದ ಅವಧಿ ಮೀರಿದ ಕಾರಣ ಇದನ್ನು ಮಾರಾಟ ಮಾಡಿದರೇ ಕುಡಿದವರ ಆರೋಗ್ಯದ ಮೇಲೆ ಅಡ್ಡ ಪರಿಣಾಮ ಬೀರುತ್ತೆ. ಅಲ್ಲದೆ ಸಾವು-ನೋವು ಸಹ ಸಂಭವಿಸಬಹುದು. ಈ ಹಿನ್ನೆಲೆಯಲ್ಲಿ ಅವಧಿ ಮೀರಿದ ಮದ್ಯ ನಾಶಪಡಿಸುತ್ತಿರುವುದಾಗಿ ವನಜಾಕ್ಷಿ ತಿಳಿಸಿದರು.
ವಿವಾದಕ್ಕೀಡಾದ ಉಪ ಆಯುಕ್ತರ ಹೇಳಿಕೆ: ಈ ಸಂದರ್ಭದಲ್ಲಿ ಮಾತನಾಡಿದ ಹಾವೇರಿ ಅಬಕಾರಿ ಇಲಾಖೆಯ ಉಪ ಆಯುಕ್ತೆ ವನಜಾಕ್ಷಿ ವಿವಾದಾತ್ಮಕ ಹೇಳಿಕೆ ನೀಡಿದರು. ಹಾವೇರಿ ಜಿಲ್ಲೆಯಲ್ಲಿ ಈ ವರ್ಷ ಇಷ್ಟು ಮೌಲ್ಯದ ಮದ್ಯ ಅವಧಿ ಮೀರಲು ಜಿಲ್ಲೆಯಲ್ಲಿ ಕಡಿಮೆಯಾಗಿರುವ ದನ ಬೆದರಿಸುವ ಸ್ಪರ್ಧೆಗಳೇ ಕಾರಣ ಎಂದು ವನಜಾಕ್ಷಿ ತಿಳಿಸಿದರು. ಹಾವೇರಿ ಜಿಲ್ಲೆಯಲ್ಲಿ ಕಡಿಮೆ ಅಂದರೂ ಪ್ರತಿ ವರ್ಷ ೪೫ ಕಡೆಗಳಲ್ಲಿ ದನ ಬೆದರಿಸುವ ಸ್ಪರ್ಧೆ ಏರ್ಪಡಿಸಲಾಗುತ್ತಿತ್ತು. ಆದರೆ ಪ್ರಸ್ತುತ ವರ್ಷ ದನಬೆದರಿಸುವ ಸ್ಪರ್ಧೆ ಆಯೋಜನೆ ಕಡಿಮೆಯಾಯಿತು. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಅವಧಿ ಮೀರಿದ ಮದ್ಯ ಉಳಿದಿದೆ ಎಂದು ತಿಳಿಸಿದರು.
ಒಂದೊಂದು ಹಬ್ಬದಲ್ಲಿ ಕನಿಷ್ಠ ಐದು ಸಾವಿರದಿಂದ ೧೦ ಸಾವಿರ ಜನರು ಪಾಲ್ಗೊಳ್ಳುತ್ತಿದ್ದರು. ಹೋರಿ ಹಬ್ಬ ಆಯೋಜನೆ ಇಲ್ಲದ ಕಾರಣ ಜನರ ಓಡಾಟ ಸಹ ಕಡಿಮೆಯಾಯಿತು. ಹಾವೇರಿ ಜಿಲ್ಲೆ ಮದ್ಯಸೇವನೆಯಲ್ಲಿ ರಾಜ್ಯದಲ್ಲಿ ಪ್ರಥಮ ಸ್ಥಾನದಲ್ಲಿಲ್ಲ. ಬದಲಿಗೆ ಮದ್ಯ ಸೇವನೆಯಲ್ಲಿ ಹಿಂದುಳಿದ ಜಿಲ್ಲೆಯಾಗಿದೆ ಎಂದು ಅಬಕಾರಿ ಇಲಾಖೆಯ ಉಪ ಆಯುಕ್ತರು ತಿಳಿಸಿದರು.
ಸ್ವಾಮೀಜಿಗಳ ಪಾದಯಾತ್ರೆ ಕಾರಣ: ಇಷ್ಟು ಮಟ್ಟದ ಮದ್ಯ ಮಾರಾಟವಾಗದೇ ಉಳಿದಿರುವುದಕ್ಕೆ ಹಾವೇರಿ ಜಿಲ್ಲೆಯಲ್ಲಿ ಸ್ವಾಮೀಜಿಗಳು ಮಾಡಿದ ಪಾದಯಾತ್ರೆಗಳು ಕಾರಣ ಎಂದು ಉಪ ಆಯುಕ್ತರು ಇದೇ ಸಂದರ್ಭದಲ್ಲಿ ತಿಳಿಸಿದರು. ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ಕಾಗಿನೆಲೆಯಲ್ಲಿ ಕನಕಜಯಂತಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಕಾಗಿನೆಲೆ ಕನಕಗುರುಪೀಠದ ನಿರಂಜನಾನಂದಶ್ರೀಗಳು ಪ್ರತಿದಿನ ಒಂದೊಂದು ಗ್ರಾಮದಲ್ಲಿ ಪಾದಯಾತ್ರೆ ನಡೆಸಿ ಮದ್ಯಸೇವನೆಯಿಂದಾಗುವ ಅಡ್ಡ ಪರಿಣಾಮಗಳ ಕುರಿತಂತೆ ಭಕ್ತರಿಗೆ ಜಾಗೃತಿ ಮೂಡಿಸಿದ್ದರು. ಪರಿಣಾಮ ಮದ್ಯ ಮಾರಾಟ ಕಡಿಮೆಯಾಯಿತು.
ಹಾವೇರಿ ಹುಕ್ಕೇರಿಮಠದ ಸದಾಶಿವಶ್ರೀಗಳು ಹುಕ್ಕೇರಿಮಠದ ಜಾತ್ರಾ ಮಹೋತ್ಸವದ ಅಂಗವಾಗಿ ಸುಮಾರು ೭೫ ಗ್ರಾಮಗಳಲ್ಲಿ ದುರ್ಗುಣಗಳ ಭಿಕ್ಷೆ ಸದ್ಗುಣಗಳ ಧೀಕ್ಷೆ ಎಂಬ ಶೀರ್ಷಿಕೆಯಲ್ಲಿ ಪಾದಯಾತ್ರೆ ನಡೆಸಿದರು. ಮದ್ಯ ವ್ಯಸನಿಗಳಿಂದ ಮದ್ಯದ ಪ್ಯಾಕೆಟ್ಗಳನ್ನು ಜೋಳಿಗೆಗೆ ಹಾಕಿಸಿಕೊಂಡರು. ಇದರಿಂದ ಸಹ ಮದ್ಯ ಮಾರಾಟ ಕಡಿಮೆಯಾಯಿತು ಎನ್ನುತ್ತಾರೆ ಅಬಕಾರಿ ಇಲಾಖೆಯ ಉಪ ಆಯುಕ್ತೆ ವನಜಾಕ್ಷಿ.
ದನ ಬೆದರಿಸುವ ಸ್ಪರ್ಧೆ ಅವಘಡಕ್ಕೆ ಮದ್ಯ ಕಾರಣವಾ? ಕಳೆದ ವರ್ಷ ದನ ಬೆದರಿಸುವ ಸ್ಪರ್ಧೆ ಆರಂಭವಾಗುವ ದೀಪಾವಳಿ ದಿನವೇ ಹಾವೇರಿ ಜಿಲ್ಲೆಯ ವಿವಿಧೆಡೆ ನಾಲ್ಕು ಜನ ಸಾವನ್ನಪ್ಪಿದ್ದರು. ಇದರಿಂದ ಎಚ್ಚೆತ್ತುಕೊಂಡಿದ್ದ ಜಿಲ್ಲಾಡಳಿತ ಈ ಬಾರಿ ಜಿಲ್ಲೆಯಲ್ಲಿ ದನ ಬೆದರಿಸುವ ಸ್ಪರ್ಧೆಗಳನ್ನು ರದ್ದುಮಾಡಿತ್ತು. ನಂತರ ೧೮ ಕಠಿಣ ನಿಯಮಗಳನ್ನು ಹಾಕಿ ಸ್ಪರ್ಧೆಗೆ ಅನುಮತಿ ನೀಡಲು ಮುಂದಾಗಿತ್ತು. ಅದರಲ್ಲಿ ಪ್ರಮುಖ ಕಾರಣ ಮದ್ಯ. ಈ ಮಧ್ಯೆ ದನ ಬೆದರಿಸುವ ಸ್ಪರ್ಧೆಯ ಅಭಿಮಾನಿಗಳು ಹೈಕೋರ್ಟ್ ಮೊರೆ ಹೋಗಿ ಕೆಲ ನಿಯಮಗಳಿಗೆ ವಿನಾಯತಿ ತಂದಿದ್ದರು. ದನ ಬೆದರಿಸುವ ಸ್ಪರ್ಧೆಗಳಲ್ಲಿ ಅಮಾಯಕರ ಸಾವಿಗೆ ಕೆಲ ಹೋರಿಗಳಿಗೆ ಮದ್ಯ ಸೇವನೆ ಮಾಡಿಸುವುದು ಮತ್ತು ದನ ಹಿಡಿಯುವ ಪೈಲ್ವಾನರು ಮದ್ಯ ಸೇವನೆ ಮಾಡುವುದೇ ಪ್ರಮುಖ ಕಾರಣ ಎಂದು ಜಿಲ್ಲಾಡಳಿತ ಕಾರಣ ನೀಡಿತ್ತು.
ಇದೀಗ ಅಬಕಾರಿ ಇಲಾಖೆ ಉಪ ಆಯುಕ್ಷೆ ವನಜಾಕ್ಷಿ ಅವರು ಈ ರೀತಿ ಹೇಳಿಕೆ ನೀಡಿರುವುದು ದನಬೆದರಿಸುವ ಸ್ಪರ್ಧೆಯಲ್ಲಿನ ಸಾವು ನೋವುಗಳಿಗೆ ಮದ್ಯವೇ ಕಾರಣ ಎನ್ನುವುದು ಸಾಬೀತಾದಂತಾಗಿದೆ.

