

–ಹಾವೇರಿ ವಿವಿಯಿಂದ ಸದಾಶಿವಶ್ರೀ, ಸಂಸದ ಬೊಮ್ಮಾಯಿ, ಸಾಹಿತಿ ಕುಲಕರ್ಣಿ ಅವರಿಗೆ ಗೌರವ ಡಾಕ್ಟರೇಟ್
ಹಾವೇರಿ: ಇಲ್ಲಿಗೆ ಸಮೀಪದ ಕೆರಿಮತ್ತಿಹಳ್ಳಿಯಲ್ಲಿ ಸ್ಥಾಪಿತವಾದ ಹಾವೇರಿ ವಿಶ್ವವಿದ್ಯಾಲಯ ತನ್ನ ಮೊದಲ ಘಟಿಕೋತ್ಸವವನ್ನು ಸಾಕಷ್ಟು ವಿರೋಧದ ನಡುವೆ ಇಲ್ಲಿನ ಖಾಸಗಿ ಕಾಲೇಜಿನ ಸಭಾಂಗಣದಲ್ಲಿ ಏ.೬ರಂದು ಭರ್ಜರಿಯಾಗಿ ಆಯೋಜಿಸಲು ಸಿದ್ಧವಾಗಿದ್ದು, ಘಟಿಕೋತ್ಸವದ ಹಿನ್ನಲೆಯಲ್ಲಿ ಜಿಲ್ಲೆಯ ಮೂವರು ಗಣ್ಯರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲು ನಿರ್ಧರಿಸಲಾಗಿದೆ.
ಈ ಬಗ್ಗೆ ಆದೇಶ ಹೊರಡಿಸಿರುವ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಸುರೇಶ್ ಜಂಗಮಶೆಟ್ಟಿ ಶಿಕ್ಷಣ, ಸಾಮಾಜಿಕ ಸೇವೆ ಹಾಗೂ ಸಾಹಿತ್ಯ ಕ್ಷೇತ್ರಗಳಲ್ಲಿ ವಿಶಿಷ್ಟ ಸಾಧನೆ ಮಾಡಿದ ವ್ಯಕ್ತಿಗಳನ್ನು ಆಯ್ಕೆ ಮಾಡಲಾಗಿದೆ. ಶಿಕ್ಷಣ ಕ್ಷೇತ್ರದಲ್ಲಿ ಮಹತ್ವದ ಸೇವೆ ಸಲ್ಲಿಸಿರುವ ಹಾವೇರಿಯ ಹುಕ್ಕೇರಿಮಠದ ಶ್ರೀ ಸದಾಶಿವ ಸ್ವಾಮೀಜಿ ಅವರಿಗೆ ಗೌರವ ಡಾಕ್ಟರೇಟ್ ನೀಡಲಾಗುತ್ತದೆ. ಸಾಮಾಜಿಕ ಸೇವೆ ಹಾಗೂ ಸಾರ್ವಜನಿಕ ಜೀವನದಲ್ಲಿ ತಮ್ಮದೇ ಆದ ಗುರುತು ಮೂಡಿಸಿರುವ ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅವರಿಗೆ ಈ ಗೌರವ ದೊರೆಯಲಿದೆ. ಸಾಹಿತ್ಯ ಕ್ಷೇತ್ರದಲ್ಲಿ ತಮ್ಮ ವಿಶಿಷ್ಟ ಕೃತಿಗಳ ಮೂಲಕ ಗುರುತಿಸಿಕೊಂಡಿರುವ ಹಿರಿಯ ಬಂಡಾಯ ಸಾಹಿತಿ ಸತೀಶ ಕುಲಕರ್ಣಿ ಅವರನ್ನು ಸಹ ಗೌರವ ಡಾಕ್ಟರೇಟ್ಗೆ ಆಯ್ಕೆ ಮಾಡಲಾಗಿದೆ.
ಎಂಟು ವಿದ್ಯಾರ್ಥಿಗಳಿಗೆ ಚಿನ್ನದ ಪದಕ: ಹಾವೇರಿ ವಿಶ್ವವಿದ್ಯಾಲಯದ ಮೊದಲ ಘಟಿಕೋತ್ಸವ ಸಮಾರಂಭವನ್ನು ಏಪ್ರಿಲ್ ೬ರಂದು ಹಮ್ಮಿಕೊಳ್ಳಲಾಗಿದ್ದು, ಶೈಕ್ಷಣಿಕ ವರ್ಷದಲ್ಲಿ ಉತ್ತಮ ಸಾಧನೆ ಮಾಡಿದ ಎಂಟು ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಹಾಗೂ ೧೦ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ನೀಡಲಾಗುತ್ತಿದೆ.
೨೦೨೩ರಲ್ಲಿ ರಾಜ್ಯದಲ್ಲಿ ಒಂಬತ್ತು ಹೊಸ ವಿಶ್ವವಿದ್ಯಾನಿಲಯಗಳ ಸ್ಥಾಪನೆಯಾಗಿದ್ದವು. ಅವುಗಳಲ್ಲಿ ಘಟಿಕೋತ್ಸವ ನಡೆಸುತ್ತಿರುವ ಮೊದಲ ವಿಶ್ವವಿದ್ಯಾನಿಲಯ ಹಾವೇರಿ ಎಂದು ಪ್ರಕಟಿಸಲು ನಮಗೆ ಹೆಮ್ಮೆಯಾಗುತ್ತದೆ. ಹಾವೇರಿ ವಿಶ್ವವಿದ್ಯಾನಿಲಯ ಆರಂಭವಾಗಿ ಮೂರು ವರ್ಷವಾಗಿದೆ. ಘಟಿಕೋತ್ಸವಕ್ಕೆ ರಾಜ್ಯದ ಘನವೆತ್ತ ರಾಜ್ಯಪಾಲರಾದ ಥಾವರಚೆಂದ್ ಗೆಹ್ಲೋಟ್ ಆಗಮಿಸಲಿದ್ದಾರೆ ಎಂದು ಜಂಗಮಶೆಟ್ಟಿ ಹೇಳಿದರು.
ಘಟಿಕೋತ್ಸವಕ್ಕೆ ಅಪಸ್ವರ : ಹಾವೇರಿ ವಿಶ್ವವಿದ್ಯಾಲಯದ ಮೊದಲನೆ ಘಟಿಕೋತ್ಸವಕ್ಕೆ ವಿದ್ಯಾರ್ಥಿ ಸಂಘಟನೆಗಳು ಸೇರಿದಂತೆ ಹಲವು ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ. ಹಾವೇರಿ ವಿಶ್ವವಿದ್ಯಾಲಯದ ಕುಲಪತಿ ವಯೋವೃತ್ತಿಯ ಅಂಚಿನಲ್ಲಿದ್ದಾರೆ. ವಯೋನಿವೃತ್ತಿ ಆಗುವುದರೊಳಗೆ ಘಟಿಕೋತ್ಸವ ಮುಗಿಸಬೇಕು ಎನ್ನುವ ಪ್ರತಿಷ್ಠೆಯಲ್ಲಿ ಕುಲಪತಿ ಜಂಗಮಶೆಟ್ಟಿ ಇದ್ದಾರೆ. ಅದಕ್ಕಾಗಿ ಘಟಿಕೋತ್ಸವಕ್ಕೆ ಇಷ್ಟು ಅವಸರ ಮಾಡುತ್ತಿದ್ದಾರೆ’ ಎಂದು ಎಸ್ಎಫ್ಐ ಜಿಲ್ಲಾಧ್ಯಕ್ಷ ಬಸವರಾಜ್ ಆರೋಪಿಸಿದರು.
ಇದಲ್ಲದೇ, ಘಟಿಕೋತ್ಸವವನ್ನು ವಿಶ್ವವಿದ್ಯಾಲಯದ ಕ್ಯಾಂಪಸ್ನಲ್ಲಿ ನಡೆಸುವುದು ಬಿಟ್ಟು ಹಾವೇರಿ ಖಾಸಗಿ ಕಾಲೇಜಾದ ಜಿ. ಹೆಚ್. ಕಾಲೇಜ್ ಸಭಾಭವನದಲ್ಲಿ ಆಯೋಜಿಸಲಾಗಿದೆ. ಘಟಿಕೋತ್ಸವದ ದಿನಾಂಕ, ಸ್ಥಳ ನಿಗಧಿ ಸೇರಿದಂತೆ ಹಲವು ವಿಷಯಗಳಿಗೆ ಸಿಂಡಿಕೇಟ್ ಸಭೆ ನಡೆಸಿಲ್ಲ. ಅಷ್ಟೇ ಅಲ್ಲದೆ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಆಯ್ಕೆಯಲ್ಲಿ ದೊಡ್ಡ ಭ್ರಷ್ಟಾಚಾರ ನಡೆದಿದೆ’ ಎಂದು ಬಸವರಾಜ್ ದೂರಿದರು.
ರಾಜ್ಯದಲ್ಲಿ ೨೦೨೩ರಲ್ಲಿ ಅಧಿಕಾರಕ್ಕೆ ಬಂದಿದ್ದ ಸರ್ಕಾರ ಹಾವೇರಿ ವಿಶ್ವವಿದ್ಯಾಲಯವನ್ನ ಮುಚ್ಚಲು ಹೊರಟಿತ್ತು. ಆದರೆ ಹಾವೇರಿಯ ವಿವಿಧ ಸಂಘಟನೆಗಳು ಹೋರಾಟ ಮಾಡಿ ವಿವಿಯನ್ನು ಮುಚ್ಚದಂತೆ ನೋಡಿಕೊಳ್ಳಲಾಗಿತ್ತು. ಆ ಸಂಘಟನೆಗಳ ಮಾತನ್ನ ಸಹ ಕುಲಪತಿ ಜಂಗಮಶೆಟ್ಟಿ ಕೇಳುತ್ತಿಲ್ಲ’ ಎಂದು ಅವರು ಹಾವೇರಿ ವಿಶ್ವವಿದ್ಯಾಲಯದ ಪ್ರಥಮ ಘಟಿಕೋತ್ಸವದ ದಿನಾಂಕ ಮುಂದೂಡಬೇಕು ಮತ್ತು ವಿವಿ ಕ್ಯಾಂಪಸ್ನಲ್ಲಿಯೇ ಘಟಿಕೋತ್ಸವ ನಡೆಯಬೇಕು’ ಎಂದು ಅವರು ಒತ್ತಾಯಿಸಿದರು.
ಹಾವೇರಿ ವಿಶ್ವವಿದ್ಯಾಲಯ ೨೦೨೩ರಲ್ಲಿ ಹಾವೇರಿ ಹೊರವಲಯದ ಕೆರಿಮತ್ತಿಹಳ್ಳಿಯಲ್ಲಿರುವ ಪಿಜೆ ಸೆಂಟರ್ನಲ್ಲಿ ಕಾರ್ಯಾರಂಭ ಮಾಡಿದೆ. ಸುಮಾರು ೪೨ ಎಕರೆ ವಿಸ್ತೀರ್ಣ ಇರುವ ಈ ವಿವಿ ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳಿಗೆ ಅಚ್ಚುಮೆಚ್ಚಿನ ವಿವಿಯಾಗಿದೆ.
ಈ ವಿವಿಯ ವ್ಯಾಪ್ತಿಗೆ ಸುಮಾರು ೪೨ ಕಾಲೇಜ್ಗಳು ಒಳಪಟ್ಟಿವೆ. ೨೦೨೩-೨೪ ಮತ್ತು ೨೪-೨೫ನೇ ಸಾಲಿನಲ್ಲಿ ಹಾವೇರಿ ವಿಶ್ವವಿದ್ಯಾಲಯದಲ್ಲಿ ಸುಮಾರು ೧೫ ಸಾವಿರ ವಿದ್ಯಾರ್ಥಿಗಳು ಪ್ರವೇಶಾತಿ ಪಡೆದಿದ್ದಾರೆ. ೨೦೨೬-೨೭ನೇ ಸಾಲಿನಲ್ಲಿ ಸುಮಾರು ೮ ಸಾವಿರ ವಿದ್ಯಾರ್ಥಿಗಳು ಪ್ರವೇಶಾತಿ ಪಡೆದಿದ್ದಾರೆ. ೩೪೦ ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಹಾವೇರಿ ವಿವಿಯ ಕುಲಪತಿ ಜಂಗಮಶೆಟ್ಟಿ ಹೆಚ್ಚು ಉತ್ಸುಕವಾಗಿದ್ದು, ಹಾವೇರಿಯ ಐದು ವಿವಿಧ ಸಂಘಟನೆಗಳ ಸಹಯೋಗದಲ್ಲಿ ವಿವಿಧ ಕಾರ್ಯಗಳನ್ನು ಕೈಗೊಂಡಿದ್ದಾರೆ.
ವಿಶ್ವವಿದ್ಯಾಲಯದ ಆವರಣದಲ್ಲಿ ಆರು ಸ್ನಾತಕೋತ್ತರ ವಿಭಾಗಗಳನ್ನು ನಡೆಸಲಾಗುತ್ತಿದೆ. ೧೮ ಸಿಬ್ಬಂದಿ, ಅತಿಥಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಲ್ಲದೇ, ೨೦ ಜನ ನಾನ್ ಟೀಚಿಂಗ್ ಸ್ಟಾಪ್ ಕಾರ್ಯನಿರ್ವಹಿಸುತ್ತಿದ್ದಾರೆ. ಕುಲಪತಿ, ಕುಲಸಚಿವರು, ಮೌಲ್ಯಾಂಕನ ವಿಭಾಗದ ಮೂರು ಹುದ್ದೆಗಳಿಗೆ ರಾಜ್ಯ ಸರ್ಕಾರವೇ ವೇತನ ನೀಡುತ್ತಿದೆ. ವಿಶ್ವವಿದ್ಯಾಲಯ ವಿದ್ಯಾರ್ಥಿಗಳ ಪ್ರವೇಶ ಫೀ ಮತ್ತು ಇತರ ಫೀಗಳಲ್ಲಿಯೇ ವಿವಿ ಆಡಳಿತ ನಡೆಯುತ್ತಿದೆ. ಸೈಬರ್ ಸೆಕ್ಯುರಿಟಿ, ಎಕನಾಮಿಕ್ಸ್, ಇತಿಹಾಸ, ಕಂಪ್ಯೂಟರ್ ಸೇರಿದಂತೆ ವಿವಿಧ ಕೋರ್ಸ್?ಗಳ ಪ್ರಯೋಗಕ್ಕೆ ವಿವಿಧ ಸಿದ್ಧತೆ ಮಾಡಿಕೊಂಡಿದೆ.

