

“ಉತ್ತರ ಕರ್ನಾಟಕದ ಹೆಬ್ಬಾಗಿಲಿಗೆ ಸಾಹಿತ್ಯ ಭವನದ ಸಂಭ್ರಮ-ಹಾವೇರಿಯಲ್ಲಿ ತಲೆ ಎತ್ತಿದೆ ಸಾಹಿತ್ಯ ಭವನ”
ಅಖಂಡ ಧಾರವಾಡ ಜಿಲ್ಲೆಯಿಂದ ಪ್ರತ್ಯೇಕಗೊಂಡು ಹಾವೇರಿ ಜಿಲ್ಲೆಯು ದಿನಾಂಕ ೨೪/೦೮/೧೯೯೭ ರಂದು ಉದಯವಾಯಿತು. ಉತ್ತರ ಕರ್ನಾಟಕ ಜಿಲ್ಲೆಗಳಿಗೆ ಹೆಬ್ಬಾಗಿಲು ಎಂಬ ಪ್ರಸಿದ್ದಿ ಇದರದಾಗಿದೆ. ವಾಣಿಜ್ಯ, ಕಲೆ, ಸಂಸ್ಕೃತಿ ಮತ್ತು ಸಾಹಿತ್ಯ ಕ್ಷೇತ್ರಗಳಿಗೆ ತನ್ನದೇಯಾದ ಕಾಣಿಕೆಯನ್ನು ಈ ಜಿಲ್ಲೆ ನೀಡಿದೆ. ಅಂಬಿಗರಚೌಡಯ್ಯ, ಕನಕದಾಸರು, ಹೆಳವನಕಟ್ಟೆ, ಗಿರಿಯಮ್ಮ , ಶರೀಪರು ,ಹಾನಗಲ್ ಕುಮಾರಸ್ವಾಮಿಗಳು,ಪಂಚಾಕ್ಷರಿ ಗವಾಯಿಗಳು,ಪುಟ್ಟರಾಜ ಗವಾಯಿಗಳು ಮೊದಲಾದ ದಾರ್ಶನಿಕರು ಮಾತ್ರವಲ್ಲದೆ ಶಾಂತಕವಿಗಳು, ಗಳಗನಾಥರು, ವಿ.ಕೃ.ಗೋಕಾಕ, ಪಾಟೀಲ ಪುಟ್ಟಪ್ಪ , ಚಂಪಾ ಸಾಹಿತ್ಯಲೋಕದ ಖ್ಯಾತನಾಮರ ತವರು ಜಿಲ್ಲೆ ಇದಾಗಿದೆ. ಜಿಲ್ಲೆಯು ಉದಯವಾದ ನಂತರ ಸಾಹಿತ್ಯ ಕ್ಷೇತ್ರದಲ್ಲಿ ಕ್ರಿಯಾಶೀಲ ಬೆಳವಣಿಗೆಗಳಿಗೆ ತೆರೆದುಕೊಂಡಿತು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಜನ್ಮತಾಳಿತು. ಈವರೆಗೆ ಡಾ.ಕೆ. ಎಚ್. ಮುಕ್ಕಣ್ಣನವರಮೊದಲುಮಾಡಿ ಸರ್ವಶ್ರೀ ಎಸ್ ವೈ ಗುಬ್ಬಣ್ಣನವರ , ಅ. ಸಿ.ಹಿರೇಮಠ, ಮಾರುತಿ ಶಿಡ್ಲಾಪುರ, ಜಿ. ಬಿ. ಮಾಸಣಗಿ ಸೇರಿದಂತೆ ಪ್ರಸ್ತುತ ಪ್ರೊಫೆಸರ್ ಲಿಂಗಯ್ಯ ಹಿರೇಮಠ ಅವರ ಅಧ್ಯಕ್ಷತೆಯಲ್ಲಿ ಸಾಹಿತ್ಯದ ಚಟುವಟಿಕೆಗಳು ನಡೆದುಕೊಂಡು ಬಂದವು.
ಪರಿಷತ್ತಿಗೆ ಹೊಸ ಚೈತನ್ಯ ನೀಡಿದ ಸಾಧಕ ಲಿಂಗಯ್ಯ ಬಿ. ಹಿರೇಮಠ
ಜಿಲ್ಲೆಯ ಸಾಹಿತ್ಯ ವಲಯದಲ್ಲಿ ಸಾಹಿತ್ಯಾಭಿಮಾನಿಗಳಿಗೆ ಎರಡು ಕೊರಗುಗಳು ಸದಾಕಾಡುತ್ತಿದ್ದವು, ಅವುಗಳೆಂದರೆ ೦೧) ಜಿಲ್ಲೆಯಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಆಯೋಜನೆ ೨) ಜಿಲ್ಲಾ ಸಾಹಿತ್ಯಭವನ ನಿರ್ಮಾಣ. ಇವೆರಡು ಕೊರಗುಗಳನ್ನು ನಿವಾರಿಸುವಲ್ಲಿ ಪ್ರಸ್ತುತ ಅಧ್ಯಕ್ಷರಾದ ಪ್ರೊ.ಲಿಂಗಯ್ಯ ಬಿ ಹಿರೇಮಠ ಅವರ ಅವಿರತ ಪರಿಶ್ರಮ ಮತ್ತು ಹೋರಾಟ ಮೆಚ್ಚುವಂತದ್ದು.ಪ್ರಸ್ತುತ ಕ.ಸಾ.ಪ ರಾಜ್ಯಾಧ್ಯಕ್ಷರಾದ ನಾಡೋಜ ಮಹೇಶ ಜೋಶಿ ಅವರ ಸಹಕಾರ ಪಡೆದು, ತಮ್ಮ ತಂಡದೊಂದಿಗೆ ಜಿಲ್ಲೆಯ ಎಲ್ಲ ಸಾಹಿತಿಗಳು, ಕವಿಗಳು, ಜನಪ್ರತಿನಿಧಿಗಳು, ಅಧಿಕಾರಿ ವರ್ಗ, ಕ. ಸಾ. ಪ ಸದಸ್ಯರು, ಮತ್ತು ಸಾಹಿತ್ಯ ಅಭಿಮಾನಿಗಳು ಮುಂತಾದವರನ್ನೆಲ್ಲಾ ಒಂದುಗೂಡಿಸಿ ಚರ್ಚಿಸಿ ಒಮ್ಮತದ ನಿರ್ಧಾರ ಕೈಗೊಂಡ ಫಲವಾಗಿ ಜಿಲ್ಲೆಯಲ್ಲಿ ಸನ್ ೨೦೨೩ ಜನೆವರಿ ೬ , ೭ ಮತ್ತು ೮ ರಂದು, ೮೬ನೇ ಅಖಿಲ ಭಾರತ ಕನ್ನಡಸಾಹಿತ್ಯ ಸಮ್ಮೇಳನವು ’ನಾ ಭೂತೋ ನ ಭವಿಷ್ಯತಿ’ ಎನ್ನುವ ಹಾಗೆ ಆಯೋಜನೆಗೊಂಡದ್ದು ಇತಿಹಾಸ. ಇಲ್ಲಿಗೆ ಒಂದು ಕೊರಗು ನಿವಾರಣೆಯಾಯಿತು ಎನ್ನಬಹುದು. ಮಾತ್ರವಲ್ಲದೆ ಜಿಲ್ಲೆಯ ಸಮಗ್ರ ಸಾಹಿತ್ಯ ಮತ್ತು ಸಾಹಿತಿಗಳ ವಸ್ತುನಿಷ್ಠ ಮಾಹಿತಿಯನ್ನು ಸಾಧಕರ ಮಾಲೆ ಶೀರ್ಷಿಕೆಯಡಿಯಲ್ಲಿ ೩೬ ಕೃತಿಗಳ ಮೂಲಕ ದಾಖಲೀಕರಣಗೊಳಿಸಿದ್ದು ಸಾಂಸ್ಕೃತಿಕ ಲೋಕಮರೆಯದ ಮೈಲುಗಲ್ಲು ಎನಿಸಿತು.
ಸಮ್ಮೇಳನದ ನಂತರ ಸಾಹಿತ್ಯ ಭವನದ ನಿರ್ಮಾಣವು ಒಂದು ದೊಡ್ಡ ಸವಾಲಾಗಿ ಪರಿಣಮಿಸಿತು. ಅದನ್ನ ತಮ್ಮ ನಿರಂತರ ಪರಿಶ್ರಮ ಮತ್ತು ಸಂಘಟನೆಯ ಮೂಲಕ ಸಾಧಿಸಲು ಪ್ರೊ ಲಿಂಗಯ್ಯನವರು ತಮ್ಮ ತಂಡವನ್ನು ಸಜ್ಜುಗೊಳಿಸಿದರು.ಜನಪ್ರತಿನಿಧಿಗಳ ಸಹಾಯದೊಂದಿಗೆ ಸಾಹಿತ್ಯ ಭವನ ನಿರ್ಮಾಣಕ್ಕೆ ಸೂಕ್ತ ಸ್ಥಳ ಪರಿಶೀಲನೆಗೆ ಸಾಕಷ್ಟು ಅಲೆದಾಡಿದರು. ಮ್ಯಾಚಿಂಗ್ ಗ್ರಾಂಟ್ ನೊಂದಿಗೆ ನಗರಸಭೆಯ ಮಾಲೀಕತ್ವದ ೦೮ ಗುಂಟೆ ಜಾಗವನ್ನು, ಜಿಲ್ಲಾಧಿಕಾರಿ ಕಛೇರಿಗೆ ಹೋಗುವ
ರಸ್ತೆಗೆ ಹೊಂದಿಕೊಂಡಂತೆ ನಗರದ ವಿನಾಯಕ ನಗರದಲ್ಲಿ ಪಡೆಯುವಲ್ಲಿ ಯಶಸ್ವಿಯಾದರು, ತರುವಾಯ ನಿವೇಶನ ಖರೀದಿಗೆ ಹಣ ಜೋಡಿಸಲು ಸಾಕಷ್ಟು ಶ್ರಮಿಸಿದರು. ಪ್ರಥಮ ಹಂತದಲ್ಲಿಯೇ ಹಾವೇರಿಯ ನೆಲದ ಹಿರಿಯ ಸಾಹಿತಿ ದಿ.ಗಂಗಾಧರ
ನಂದಿ ಅವರ ಸ್ಮರಣಾರ್ಥ ಅವರ ಕುಟುಂಬದವರು ೫ .೫ ಲಕ್ಷ ಹಣ ದೇಣಿಗೆ ನೀಡಿದರು. ಅಲ್ಲದೆ ಇತರರಿಂದ ಕೈಲಾದ ದೇಣಿಗೆ ಕ್ರೋಢೀಕರಿಸಿದ ಫಲವಾಗಿ ಜಾಗ ಖರೀದಿಯಾಯಿತು. ನಂತರ ಕಟ್ಟಡ ನಿರ್ಮಾಣ ಕಾರ್ಯಕ್ಕೆ ಕಂಕಣ ಬದ್ದರಾಗಿ ಮತ್ತೆ
ಲೋಕಸಭಾ, ರಾಜ್ಯಸಭಾ, ಶಾಸಕರ ಸ್ಥಳಿಯ ಪ್ರದೇಶಾಭಿವೃದ್ಧಿ ಅನುದಾನಗಳನ್ನು ಪಡೆದು, ಅಲ್ಲದೆ ಜಿಲ್ಲೆಯ ಗಣ್ಯ ವ್ಯಾಪಾರಸ್ಥರುಗಳಿಂದ, ಸ್ಥಳಿಯ ದಾನಿಗಳ ಮನವೊಲಿಸಿಕೊಂಡು ಹಣ ಕ್ರೋಢೀಕರಿಸಿ ಸಾಹಿತ್ಯ ಭವನವನ್ನು ಯಶಸ್ವಿಯಾಗಿ
ನಿರ್ಮಾಣಗೊಳಿಸಿದರು.
ಇದರಿಂದ ಜಿಲ್ಲೆಯ ಸಾಹಿತಿಗಳು,ಕವಿಗಳು, ತಮ್ಮ ಚಿಂತನೆಗಳನ್ನು ತಮ್ಮದೇ ಆದ ಸ್ವಂತ ಕಟ್ಟಡದಲ್ಲಿ ನಡೆಸಲು ಮತ್ತು ಕನ್ನಡಪರ ಚಟುವಟಿಕೆಗಳನ್ನು ನಿರಂತರವಾಗಿ ಕೈಗೊಳ್ಳಲು ಅನುಕೂಲ ಕಲ್ಪಿಸಿದಂತಾಗಿದೆ.ಅಲ್ಲದೆ ಕನ್ನಡ ನಾಡು-ನುಡಿ ಚಿಂತನೆಗಳಿಗೆ ಹೊಸ ವೇಗ ಸಿಗಲಿದೆ ಎಂದು ಆಶಿಸಲಾಗಿದೆ. ಶ್ರೀಯುತ ಲಿಂಗಯ್ಯನವರು ಇಂತಹ ಚಿರಸ್ಥಾಯಿ ಸಾಧನೆಯ ಮೂಲಕ ತಮಗೆ ಸಿಕ್ಕ ಅಧ್ಯಕ್ಷ ಸ್ಥಾನದ ಜವಾಬ್ದಾರಿಯನ್ನು ಸಾರ್ಥಕಗೊಳಿಸಿದ್ದಾರೆ. ” ಟೀಕೆಗಳುಸಾಯುತ್ತವೆ- ಕೆಲಸಗಳು ಉಳಿಯುತ್ತವೆ ” ಎನ್ನುವ ಕವಿ ವಾಣಿಯಂತೆ ಸಾಹಿತ್ಯವಲಯದ ೨ ಪ್ರಮುಖ ಅಗತ್ಯತೆಗಳನ್ನು ಪೂರೈಸುವ ಮೂಲಕ ಇತಿಹಾಸ ಪುಟಗಳಲ್ಲಿ ನೆನಪಿಡುವಂತಹ ಕಾರ್ಯಗಳನ್ನು ಮಾಡಿದ್ದಾರೆ.ಇದು ಲಿಂಗಯ್ಯನವರ ಕಾರ್ಯಕ್ಷಮತೆ, ದೂರ ದೃಷ್ಟಿ ಚಿಂತನೆಗೆ ಹಿಡಿದ ಕೈಗನ್ನಡಿಯಾಗಿದೆ.
ಈ ಎಲ್ಲಾ ಕಾರ್ಯಗಳಲ್ಲಿ ಲಿಂಗಯ್ಯನವರ ಹೆಗಲಿಗೆ ಹೆಗಲು ಕೊಟ್ಟು ಜೋಡೆತ್ತಿನ ರೂಪದಲ್ಲಿ, ಹಾವೇರಿ ತಾಲೂಕ ಕ.ಸಾ.ಪ ಅಧ್ಯಕ್ಷರಾದ ವೈ ಬಿ ಆಲದಕಟ್ಟಿ ಅವರು ಸಹ ಟೊಂಕಕಟ್ಟಿ ನಿಂತು ಅಹಿರ್ನಶಿ ದುಡಿದಿರುವುದಲ್ಲದೆ ಸಾಹಿತ್ಯ ಭವನ ನಿರ್ಮಾಣದ ಎಲ್ಲ ಸ್ಥರಗಳಲ್ಲಿ
ನೆರವಾಗಿರುವುದುದನ್ನು ಸಹ ಮರೆಯಲಾಗದು. ಜಿಲ್ಲೆಯ ಸಾಹಿತಿಗಳ, ಜನಪ್ರತಿನಿಧಿಗಳ, ಅಧಿಕಾರಿಗಳ, ದಾನಿಗಳ ಸಹಾಯ ಸಹಕಾರ ಹಾಗೂ ಹಾವೇರಿ ಜಿಲ್ಲಾ ಕ.ಸಾ.ಪ ದ ಎಲ್ಲಾ ಪದಾಧಿಕಾರಿಗಳು,ಜಿಲ್ಲೆಯ ಎಲ್ಲಾ ತಾಲ್ಲೂಕು ಹಾಗೂ ಹೋಬಳಿ ಘಟಕಗಳ ಅಧ್ಯಕ್ಷರ ಮತ್ತು ಪದಾಧಿಕಾರಿಗಳ ಸಮನ್ವಯ-ಸಹಕಾರದೊಂದಿಗೆ ಈ ಕಾರ್ಯ ಸಾಧ್ಯವಾಗಿದೆ ಎಂಬುದನ್ನು ಸ್ಮರಿಸಲೇಬೇಕು.ದಿನಾಂಕ ೧೨-೧೦-೨೦೨೫ರ ಭಾನುವಾರ ಬೆಳಿಗ್ಗೆ ೧೧ ಗಂಟೆಗೆ ಲೋಕಾರ್ಪಣೆಗೊಳ್ಳುತ್ತಿರುವ ಪ್ರಸ್ತುತ ಸಾಹಿತ್ಯ ಭವನ ಜಿಲ್ಲೆಯ ಎಲ್ಲ ಸಾಹಿತ್ಯ ಅಭಿಮಾನಿಗಳಲ್ಲಿ ಸಂಭ್ರಮವನ್ನಂಟುಮಾಡಿದ್ದು ತನ್ನತ್ತ ಕೈಬೀಸಿ ಕರೆಯುತ್ತಿದೆ. ಈ ಅಕ್ಷರದ ಭವನದ ಪ್ರವೇಶಕ್ಕೆ ನಾವೆಲ್ಲರೂ ಸಾಕ್ಷಿಯಾಗೋಣವೇ ?.ನೀವೂ ಬನ್ನಿ ನಿಮ್ಮವರನ್ನೂ ಕರೆತನ್ನಿ !!
ಲೇಖಕರು:—
ಬಸವರಾಜ.ಪಿ.ಶಿಡೇನೂರ
ಗೌರವ ಕಾರ್ಯದರ್ಶಿಗಳು,ಜಿಲ್ಲಾ ಕ.ಸಾ.ಪ ಹಾವೇರಿ

