
೨೦೨೫-೨೬ ನೇ ಸಾಲಿನಲ್ಲಿ ಹಾವೇರಿ ಕೆ.ಎಂ.ಎಫ್ಗೆ ೮ ಕೋಟಿ ನಿವ್ವಳ ಲಾಭ : ಮಂಜನಗೌಡ ಪಾಟೀಲ
ಹಾವೇರಿ: ಆರಂಭದಿಂದಲೂ ನಷ್ಟದ ಹಾದಿಯಲ್ಲಿದ್ದ ಹಾವೇರಿ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟವು ೨೦೨೫-೨೬ ನೇ ಸಾಲಿನ ಆರ್ಥಿಕ ವರ್ಷದಲ್ಲಿ ಅಂದಾಜು ರೂ. ೮ ಕೋಟಿಗಳಷ್ಟು ನಿವ್ವಳ ಲಾಭ ಹೊಂದಿ. ಹಲವಾರು ಪ್ರಗತಿಪರ ಯೋಜನೆಗಳ ಗುರಿಯನ್ನು ಹೊಂದಿ ಪ್ರಗತಿಯಲ್ಲಿ ಮುನ್ನುಗ್ಗುತ್ತಿರುವುದು ಹರ್ಷದಾಯಕ ವಿಷಯವಾಗಿದೆ ಎಂದು ಹಾವೇರಿ ಕೆ.ಎಂ.ಎಫ್. ಅಧ್ಯಕ್ಷ ಮಂಜನಗೌಡ ಪಾಟೀಲ ತಿಳಿಸಿದರು.
ಈ ಬಗ್ಗೆ ಸೋಮವಾರ ಪತ್ರಿಕೆಯ ಪ್ರತಿನಿಧಿಯೊಂದಿಗೆ ಮಾತನಾಡಿದ ಅವರು ಧಾರವಾಡ ಜಿಲ್ಲಾ ಹಾಲು ಒಕ್ಕೂಟದಿಂದ ವಿಭಜನೆಗೊಂಡು ದಿನಾಂಕ ೦೧.೦೪.೨೦೨೨ ರಿಂದ ಪ್ರತ್ಯೇಕವಾಗಿ ತನ್ನ ಕಾರ್ಯ ಚಟುವಟಿಕೆಗಳನ್ನು ಪ್ರಾರಂಭಿಸಿದ್ದು, ಒಕ್ಕೂಟವು ಪ್ರಸ್ತುತವಾಗಿ ಪ್ರತಿ ದಿನ ಅಂದಾಜು ೧.೫ ಲಕ್ಷ ಲೀಟರ್ ಹಾಲು ಶೇಖರಣೆ ಮಾಡುತ್ತಿದ್ದು, ಒಕ್ಕೂಟದ ವ್ಯಾಪ್ತಿಯಲ್ಲಿ ಅಂದಾಜು ೩೩ ಬಿ.ಎಮ್.ಸಿ. ಕೇಂದ್ರಗಳು, ಎರಡು ಶೀಥಲೀಕರಣ ಕೇಂದ್ರಗಳು. ೪೪೯ ಸಹಕಾರ ಸಂಘಗಳು, ಒಕ್ಕೂಟದ ಯು.ಹೆಚ್.ಟಿ. ಘಟಕ, ಪೌಚ್ ಘಟಕ ಹಾಗೂ ಮುಂದಿನ ದಿನಗಳಲ್ಲಿ ಮೆಗಾ ಡೇರಿ ಪ್ರಾರಂಭವಾಗುತ್ತಿದ್ದು, ಒಕ್ಕೂಟವು ೨೦೨೪-೨೫ ನೇ ಸಾಲಿನಲ್ಲಿ ಹಲವಾರು ಸವಾಲುಗಳನ್ನು ಎದುರಿಸಿ ಸದರಿ ಸಾಲಿನಲ್ಲಿ ರೂ. ೧೪.೯೫ ಕೋಟಿಗಳ ನಷ್ಟವನ್ನು ಅನುಭವಿಸಿ, ೨೦೨೫-೨೬ ನೇ ಸಾಲಿನ ಆರ್ಥಿಕ ವರ್ಷದಲ್ಲಿ ಅಂದಾಜು ರೂ. ೮ ಕೋಟಿಗಳಷ್ಟು ನಿವ್ವಳ ಲಾಭ ಹೊಂದಿದೆ ಎಂದು ಅವರು ಹೇಳಿದರು.
> ಉತ್ತರ ಕರ್ನಾಟಕದಲ್ಲಿ ಬರತಕ್ಕ ಒಕ್ಕೂಟಗಳಿಗೆ ಹೋಲಿಕೆ ಮಾಡಿದಲ್ಲಿ ಕೆಲವೊಂದು ಒಕ್ಕೂಟಗಳು ಆರ್ಥಿಕ ಸ್ಥಿತಿಗತಿಗನುಗುಣವಾಗಿ ಹಾಲಿನ ಖರೀದಿ ದರ ಕಡಿಮೆ ಮಾಡಿದ್ದರೂ ಸಹ ಹಾವೇರಿ ಹಾಲು ಒಕ್ಕೂಟವು ನಷ್ಟದಲ್ಲಿದ್ದಾಗಲೂ ಕೂಡ ಹಾಲು ಉತ್ಪಾದಕರಿಗೆ ಎರಡು ವರ್ಷಗಳಿಂದ ಹಾಲು ಖರೀದಿ ದರವನ್ನು ಹೆಚ್ಚಿಗೆ ಪಾವತಿ ಮಾಡಲಾಗಿರುತ್ತದೆ. ಹಾಲು ಉತ್ಪಾದಕರ ಸಹಕಾರ ಸಂಘಗಳ ಸಿಬ್ಬಂದಿಗಳನ್ನು ಪ್ರೋತ್ಸಾಹಿಸಲು ಹಲವಾರು ವರ್ಷಗಳಿಂದ ಸಲ್ಲಿಸಿರುವ ಕೋರಿಕೆಯನ್ನು ಪರಿಗಣಿಸಿ. ದಿನಾಂಕ ೦೧.೦೪.೨೦೨೬ ರಿಂದ ಅನ್ವಯವಾಗುವಂತೆ ಸಂಘಗಳ ಸಿಬ್ಬಂದಿಗಳಿಗೆ ಹಾಲು ಗುಣಮಟ್ಟದ ಪ್ರೋತ್ಸಾಹ ಧನವನ್ನು ಪ್ರತಿ ಕೆ.ಜಿ. ಹಾಲಿಗೆ ೧೫ ಪೈಸೆಯಂತೆ ಹೆಚ್ಚಿಸಿ ಪ್ರತಿ ಕೆ.ಜಿಗೆ ೫೦ ಪೈಸೆಯಂತೆ ಪಾವತಿಸಲಾಗುತ್ತಿದೆ.
ಒಕ್ಕೂಟವು ೨೦೨೨-೨೩ ಮತ್ತು ೨೦೨೩-೨೪ ನೇ ವರ್ಷದಲ್ಲಿ ಗಳಿಸಿದ ಲಾಭಾಂಶದ ಆಧಾರದ ಮೇಲೆ ಹಂಚಿಕೆ ಮಾಡಿದ ಡಿವಿಡೆಂಡ್ ಮತ್ತು ಬೋನಸ್ನ್ನು ೦೪ ವರ್ಷಗಳಿಂದ ಪಾವತಿಸದೇ ಹೊಸ ಆಡಳಿತ ಮಂಡಳಿ ಬಂದ ನಂತರ ಒಕ್ಕೂಟವು ಆರ್ಥಿಕವಾಗಿ ಸದೃಢವಾಗಿರುವುದರಿಂದ ಅಂದಾಜು ರೂ. ೫೦ ಲಕ್ಷಗಳನ್ನು ಹಾಲು ಉತ್ಪಾದಕ ಸಂಘಗಳಿಗೆ ಪಾವತಿಸಲಾಗಿರುತ್ತದೆ. ೨೫-೨೬ ನೇ ಸಾಲಿನಲ್ಲಿ ಹಾಲಿನ ಗುಣಮಟ್ಟವನ್ನು ಸುಧಾರಿಸಲು ಒಕ್ಕೂಟದಿಂದ ಸಂಘಗಳಿಗೆ ೧೩೫ ಅನಲೈಸರ್ಗಳನ್ನು ನೀಡಲಾಗಿರುತ್ತದೆ. ೨೦೨೫-೨೬ ನೇ ಸಾಲಿನಲ್ಲಿ ಹಾಲಿನ ಗುಣಮಟ್ಟವನ್ನು ಸುಧಾರಿಸಲು ಒಕ್ಕೂಟದಿಂದ ಸಂಘಗಳಿಗೆ ೮೦ ಎ.ಎಮ್.ಸಿ.ಯು ಗಳನ್ನು ನೀಡಲಾಗಿರುತ್ತದೆ.
ಒಕ್ಕೂಟದ ವ್ಯಾಪ್ತಿಯ ಬಿ.ಎಮ್.ಸಿ.ಗಳಲ್ಲಿ ಕಲಬೆರಿಕೆ ಹಾಲನ್ನು ಪತ್ತೆ ಹಚ್ಚಲು ಒಕ್ಕೂಟದಿಂದ ಮಿಲ್ಕ್ ಅಡಲೇಷನ್ ಮಷಿನ್ಗಳನ್ನು ನೀಡಲಾಗಿರುತ್ತದೆ. ಒಕ್ಕೂಟದ ವ್ಯಾಪ್ತಿಯಲ್ಲಿ ಕಳೆದ ೦೮ ತಿಂಗಳಿನಿಂದ ಅಂದಾಜು ೬೦ ಫ್ರಾಂಚೈಸಿ ಹಾಗೂ ಒಕ್ಕೂಟದಿಂದ ೦೨ ನಂದಿನಿ ಎಕ್ಸ್ ಕ್ಯೂಸಿವ್ ಕೇಂದ್ರಗಳನ್ನು ತೆರೆಯಲಾಗಿದ್ದು, ಇದರಿಂದ ಪ್ರತಿದಿನ ೨೦೦೦ ಲೀಟರ್ ಹಾಲು ಹಾಗೂ ೨೦೦೦ ಕೆ.ಜಿ. ಮೊಸರು ಹೆಚ್ಚಿಗೆ ಮಾರಾಟವಾಗುತ್ತಿದೆ. ಮುಂದಿನ ದಿನಗಳಲ್ಲಿ ಪ್ರತಿದಿನ ೨೫೦೦೦ ಲೀಟರ್ ಹಾಲು ಹಾಗೂ ೧೦೦೦೦ ಕೆ. ಜಿ. ಮೊಸರನ್ನು ಮಾರಾಟ ಮಾಡಲು ಯೋಜಿಸಲಾಗಿದೆ.
ಕರ್ನಾಟಕ ಸರ್ಕಾರದಿಂದ ಬಜೆಟ್ನಲ್ಲಿ ಒಕ್ಕೂಟದ ಮೆಗಾ ಡೇರಿಗೆ ಅಂದಾಜು ರೂ. ೭೦.೦೦ ಕೋಟಿ ಅನುದಾನ ಘೋಷಿಸಲಾಗಿದ್ದು, ಅದರಲ್ಲಿ ರೂ. ೬೫.೦೦ ಕೋಟಿ ಬಿಡುಗಡೆಯಾಗಿ ಮೆಗಾ ಡೇರಿ ಪ್ರಾರಂಭದ ಹಂತದಲ್ಲಿದ್ದು, ೨೦೦೮ ಉಳಿದ ರೂ. ೦೫ ಕೋಟಿ ಅನುದಾನವನ್ನು ಬಿಡುಗಡೆಗೊಳಿಸಲಾಗಿರುತ್ತದೆ. ೨೦೨೪-೨೫ ನೇ ಸಾಲಿಗೆ ಹೋಲಿಕೆ ಮಾಡಿದಲ್ಲಿ ಒಕ್ಕೂಟದಿಂದ ಹಾಲು ಉತ್ಪಾದಕ ಸಂಘಗಳಿಗೆ ೫ ರಿಂದ ೬ ಬಿಲ್ಲುಗಳು ಪಾವತಿಗೆ ಬಾಕಿ ಇದ್ದು, ಪ್ರಸ್ತುತವಾಗಿ ೨ ಬಿಲ್ಲುಗಳು ಮಾತ್ರ ಬಾಕಿ ಇರುತ್ತವೆ ಎಂದು ಮಂಜನಗೌಡ ಪಾಟೀಲ ಹೇಳಿದರು.

