
ತೆರಿಗೆ ಸಂಗ್ರಹದ ಹಿನ್ನಡೆ: ನಗರಸಭೆ ಅಧಿಕಾರಿಗಳ ವಿರುದ್ಧ ಗುಡುಗಿದ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ
ಹಾವೇರಿ: ಹಾವೇರಿ ನಗರಸಭೆಯಲ್ಲಿ ನಿರೀಕ್ಷಿತ ಮಟ್ಟದಲ್ಲಿ ತೆರಿಗೆ ಸಂಗ್ರಹವಾಗದ ಹಿನ್ನಲೆಯಲ್ಲಿ ಕರ್ನಾಟಕ ವಿಧಾನಸಭೆಯ ಉಪಸಭಾಧ್ಯಕ್ಷರು ಹಾಗೂ ಹಾವೇರಿ ಕ್ಷೇತ್ರದ ಶಾಸಕ ರುದ್ರಪ್ಪ ಮನಪ್ಪ ಲಮಾಣಿ ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
ಮಂಗಳವಾರ ಇಲ್ಲಿನ ನಗರಸಭೆಯ ಕಾರ್ಯಾಲಯಕ್ಕೆ ಭೇಟಿ ನೀಡಿದ ಅವರು ನಗರಸಭೆಯ ಪೌರಾಯುಕ್ತರು ಸೇರಿದಂತೆ ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿಗಳೊಂದಿಗೆ ಸಭೆ ನಡೆಸಿ , ಏಪ್ರಿಲ್ ತಿಂಗಳೊಳಗೆ ಸಂಗ್ರಹವಾಗಬೇಕಿದ್ದ ಟ್ಯಾಕ್ಸ್ ಹಣ ಗಣನೀಯವಾಗಿ ಕಡಿಮೆಯಾಗಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ತೆರಿಗೆ ಸಂಗ್ರಹದಲ್ಲಿ ಸಮರ್ಪಕವಾಗಿ ಕಾರ್ಯನಿರ್ವಹಿಸಿದ ಅಧಿಕಾರಿಗಳ ವಿರುದ್ಧ ಶಾಸಕರು ಗುಡುಗಿ ಎಚ್ಚರಿಕೆ ನೀಡಿದರು.
ಸಾರ್ವಜನಿಕರ ಮನವಿಗಳನ್ನು ಪರಿಶೀಲಿಸಿ ವಿಲೇವಾರಿ ಮಾಡಿ ಅಧಿಕಾರಿಗಳಿಗೆ ಎಚ್ಚರಿಕೆ: ಸಭೆಯಲ್ಲಿ ಕಟ್ಟುನಿಟ್ಟಿನ ಸೂಚನೆ ನೀಡಿದ ಉಪಸಭಾಧ್ಯಕ್ಷರು, “ನಗರಸಭೆಯ ಕಾರ್ಯವೈಖರಿಯನ್ನು ಸುಧಾರಿಸಿಕೊಳ್ಳಬೇಕು. ಸಾರ್ವಜನಿಕ ವಿರೋಧಿ ನೀತಿಯನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ. ಯಾರು ಸಾರ್ವಜನಿಕರಿಗೆ ಅನುಕೂಲವಾಗುವಂತೆ ಕೆಲಸ ಮಾಡುತ್ತಾರೋ ಅವರು ಮಾತ್ರ ಇಲ್ಲಿರಿ, ಉಳಿದವರು ತಕ್ಷಣವೇ ಇಲ್ಲಿಂದ ಹೊರಗೆ ಹೋಗಿ,” ಎಂದು ಕಟುವಾದ ಶಬ್ದಗಳಲ್ಲಿ ಎಚ್ಚರಿಸಿದರು.
ಅಭಿವೃದ್ಧಿಗೆ ಸಹಕಾರ ಅಗತ್ಯ: ನಗರದ ಸಮಗ್ರ ಅಭಿವೃದ್ಧಿಯ ಕುರಿತು ಮಾತನಾಡಿದ ಅವರು, “ಹಾವೇರಿ ನಗರದಲ್ಲಿ ಜನರ ಸಹಕಾರದೊಂದಿಗೆ ಕೆಲಸ ಮಾಡಿದರೆ ಮಾತ್ರ ಅಭಿವೃದ್ಧಿ ಸಾಧ್ಯ. ಸರ್ಕಾರದಿಂದ ಹೆಚ್ಚಿನ ಅನುದಾನ ತಂದು ನಗರವನ್ನು ಮಾದರಿಯನ್ನಾಗಿ ಮಾಡಲು ನಾನು ಸಿದ್ಧನಿದ್ದೇನೆ. ಅದಕ್ಕೆ ಪೂರಕವಾಗಿ ಅಧಿಕಾರಿಗಳು ಶ್ರಮವಹಿಸಬೇಕು,” ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಸಂಜೀವಕುಮಾರ್ ನೀರಲಗಿ, ನಗರಸಭಾ ಮಾಜಿ ಸದಸ್ಯ ಅತಾವುಲ್ಲಾ ಖಾಜಿ, ಮುಖಂಡರುಗಳಾದ ಸಿ.ಎಸ್. ಲಕ್ಷ್ಮೇಶ್ವರಮಠ, ಶಂಕರ್ ಮೇಹರವಾಡೆ, ಮಾಲಿಂಗಯ್ಯ ಹಿರೇಮಠ, ಉಮರ್ ಇನಾಮದಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

