
“ಹಾವೇರಿ-ಧಾರವಾಡ ಜಿಲ್ಲಾ ಪೊಲೀಸ್ ಜಂಟಿ ಕಾರ್ಯಾಚರಣೆ; ಅಂತರ್ ರಾಜ್ಯ ಕಳ್ಳರಿಂದ ೧.೧೫ ಕೋಟಿ ಮೌಲ್ಯದ ಚಿನ್ನಾಭರಣ ಆಭರಣಗಳ ವಶ”
ಚಿಕ್ಕಾಂತಿ ಹೊಸೂರಿನ ಶಾರದಾ ಜ್ಯೂವೆಲರಿ ವರ್ಕ್ಸ ದೋಚಿದ್ದ ಇಬ್ಬರು ಖದೀಮರ ಎರಡು ದಿನದಲ್ಲಿ ಬಂಧನ!
ಹಾವೇರಿಳ ಜಿಲ್ಲೆಯ ಆತಂಕ ಸೃಷ್ಟಿಸಿದ್ದ ಜಿಲ್ಲೆಯ ಹಾನಗಲ್ಲ ತಾಲೂಕಿನ ಚಿಕ್ಕಾಂತಿ ಹೊಸೂರ ಗ್ರಾಮದಲ್ಲಿ ಮೇ. ೧೬ ರಂದು ನಡೆದಿದ್ದ ಶಾರದಾ ಜ್ಯೂವೆಲರಿ ವರ್ಕ್ಸ ಬಂಗಾರದ ಅಂಗಡಿ ಕಳ್ಳತನವಾದ ಬಗ್ಗೆ ಪ್ರಕರಣವನ್ನು ಕೇವಲ ಎರಡುದಿನಗಳಲ್ಲಿ ಪೊಲೀಸರು ಭೇದಿಸಿದ್ದು, ಇಬ್ಬರ ಆರೋಪಿಗಳನ್ನು ಬಂಧಿಸಿ, ಬಂಧಿತ ಅಂತರ್ ರಾಜ್ಯ ಕಳ್ಳರಿಂದ ೧.೧೫ ಕೋಟಿ ಮೌಲ್ಯದ ಚಿನ್ನಾಭರಣ ಆಭರಣ ಹಾಗೂ ಬೆಳ್ಳಿಯ ಆಭರಣಗಳನ್ನು “ಹಾವೇರಿ-ಧಾರವಾಡ ಜಿಲ್ಲಾ ಪೊಲೀಸ್ ಇಲಾಖೆಯ ವಿಶೇಷ ತನಿಖಾ ತಂಡವು ಜಂಟಿ ಕಾರ್ಯಾಚರಣೆ ನಡೆಸಿ ಸೋಮವಾರ ವಶಕ್ಕೆ ಪಡೆದಿದ್ದಾರೆ.
ಕಳವಾದ ಚಿನ್ನಾಭರಣ ಮತ್ತು ಆರೋಪಿರ ಪತ್ತೆಗಾಗಿ ಹಾವೇರಿ ಮತ್ತು ಧಾರವಾಡ ಜಿಲ್ಲಾ ಪೊಲೀಸರು ಜಂಟಿಯಾಗಿ ನಡೆಸಿದ ಸಿನಿಮೀಯ ಮಾದರಿಯ ಮಹತ್ವದ ಕಾರ್ಯಾಚರಣೆಯಲ್ಲಿ ಅಂತರರಾಜ್ಯ ಕಳ್ಳರ ಗ್ಯಾಂಗ್ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಗಳಿಂದ ಒಟ್ಟು ೧ ಕೋಟಿ ೧೫ ಲಕ್ಷ ರೂಪಾಯಿ ಮೌಲ್ಯದ ಚಿನ್ನ ಹಾಗೂ ಬೆಳ್ಳಿಯ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಲಕ್ಷೇಶ್ವರ ತಾಲ್ಲೂಕಿನ ಬಾಳೇಹೊಸೂರಿನ ಶಿವರಾಜ ಹನುಮಂತಪ್ಪ ಮೋಡಿಕೇರ ಹಾಗೂ ಸಿಂಧನೂರು ತಾಲ್ಲೂಕಿನ ಅಂಬಾಪುರದ ಅಶೋಕ ಅಲಿಯಾಸ್ ರಮೇಶ್ ಶಿವಪ್ಪ ಕೊಂಚಿಕುರವರ್ ಬಂಧಿತ ಆರೋಪಿಗಳಾಗಿದ್ದಾರೆ. ಈ ಜಾಲದಲ್ಲಿದ್ದ ಇನ್ನುಳಿದ ನಾಲ್ವರು ಆರೋಪಿಗಳು ಸದ್ಯ ತಲೆಮರೆಸಿಕೊಂಡಿದ್ದು, ಅವರ ಬಂಧನಕ್ಕಾಗಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ.
ಹಾನಗಲ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಾಂತಿ ಹೊಸೂರ ಗ್ರಾಮದಲ್ಲಿ ಮೇ.೧೬ ರಂದು ಶಾರದಾ ಜ್ಯೂವೆಲರಿ ವರ್ಕ್ಸ ಬಂಗಾರದ ಅಂಗಡಿ ಕಳ್ಳತನವಾದ ಬಗ್ಗೆ ಪ್ರಕರಣ ದಾಖಲಾಗಿದ್ದು, ಆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿರ ಪತ್ತೆಗಾಗಿ ಹಾವೇರಿ ಜಿಲ್ಲೆಯ ಹಾನಗಲ್ ವೃತ್ತದ ಅಧಿಕಾರಿ/ಸಿಬ್ಬಂದಿಗಳನ್ನೊಳಗೊಂಡಂತೆ ಶಿಗ್ಗಾಂವ ಉಪ ವಿಭಾಗದ ೦೪ ವಿಶೇಷ ತಂಡಗಳನ್ನು ಕಾರ್ಯಾಚರಣೆ ಕುರಿತು ರಚಿಸಲಾಗಿತ್ತು. ಅದರಂತೆ ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯ ವ್ಯಾಪ್ತಿಯ ಕಿರೇಸೂರ ಗ್ರಾಮದಲ್ಲಿ ಕಳೆದ ಏಪ್ರಿಲ್ ತಿಂಗಳಲ್ಲಿ ಮನೆ ಕಳ್ಳತನ ಪ್ರಕರಣ ದಾಖಲಾಗಿದ್ದು ಆ ಪ್ರಕರಣದ ಆರೋಪಿಗಳ ಪತ್ತೆಗಾಗಿ ಹುಬ್ಬಳ್ಳಿ ಗ್ರಾಮೀಣ ಹಾಗೂ ನವಲಗುಂದ ಪೊಲೀಸ್ ಠಾಣಾ ಅಧಿಕಾರಿ ಮತ್ತು ಸಿಬ್ಬಂಧಿಗಳ ತಂಡ ಪತ್ತೆ ಕಾರ್ಯದಲ್ಲಿದ್ದಾಗ ಅವರೊಂದಿಗೆ ಜಂಟಿಯಾಗಿ ಹಾವೇರಿ ಜಿಲ್ಲೆಯ ವಿಶೇಷ ಕಾರ್ಯಾಚರಣೆ ಅಪರಾಧ ತಂಡಗಳು ಕಾರ್ಯಾಚಾರಣೆ ಕೈಗೊಂಡು ಪ್ರಕರಣ ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತರಿಂದ ೩೧೦ ಗ್ರಾಂ ಬಂಗಾರದ ಆಭರಣಗಳು ಮತ್ತು ೨೬ ಕೆ.ಜಿ ಬೆಳ್ಳಿಯ ಆಭರಣಗಳು, ಹಾಗೂ ಒಂದು ಬುಲೆರೋ ವಾಹನ ಸೇರಿ ೧.೧೫ ಕೋಟಿ ಮೌಲ್ಯದ ಚಿನ್ನಾಭರಣ ಆಭರಣಗಳ ವಶಕ್ಕೆ ಪಡೆಯಗಿದೆ.
ಕಳ್ಳತನಕ್ಕೆ ಬಳಸಿದ್ದು ಕಳವು ಮಾಡಿದ ಬುಲೆರೋ ವಾಹನ: ಚಿಕ್ಕಾಂತಿ ಹೊಸೂರಿನ ಶಾರದಾ ಜ್ಯೂವೆಲರಿ ವರ್ಕ್ಸ ದೋಚಲು ಕಳ್ಳರು ಕದ್ದವಾಹನವನ್ನೇ ಬಳಕೆ ಮಾಡಿದ್ದಾರೆ. ದಿನಾಂಕ: ೧೪.೦೫.೨೦೨೬ ರಂದು ಬೆಳಿಗ್ಗೆ ತೆಲಂಗಾಣ ರಾಜ್ಯದ ಗದ್ವಾಲ್ ಜಿಲ್ಲೆಯ ಬೀಚುಪಲ್ಲಿ ಎಂಬ ಗ್ರಾಮದಿಂದ ಬೊಲೆರೋ ವಾಹನ ಕಳ್ಳತನಮಾಡಲಾಗಿದ್ದು, ಈ ಬಗ್ಗೆ ಇತ್ತಿಕ್ಯಾಲ್ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ: ೮೪/೨೦೨೬ ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ ಎನ್ನುವುದು ತನಿಖೆಯ ವೇಳೆ ಗೊತ್ತಾಗಿದೆ.
ಈ ಕಾರ್ಯಾಚರಣೆಯಲ್ಲಿ ಹಾವೇರಿ ಜಿಲ್ಲೆಯ ಪೊಲೀಸ್ ಅಧೀಕ್ಷಕರಾದ ಯಶೋದಾ ವಂಟಗೋಡಿ ಮತ್ತು ಧಾರವಾಡ ಜಿಲ್ಲೆ ಪೊಲೀಸ್ ಅಧೀಕ್ಷಕರಾದ ಗುಂಜನ ಆರ್ಯ ಹಾಗೂ ಹಾವೇರಿ ಜಿಲ್ಲೆ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಎಲ್.ವೈ ಶಿರಕೋಳ ಅವರ ಮಾರ್ಗದರ್ಶನದಲ್ಲಿ, ಶಿಗ್ಗಾಂವ ಡಿ.ಎಸ್.ಪಿ ಗುರುಶಾಂತಪ್ಪ ಕೆ.ವಿ ಮುಂದಾಳತ್ವದಲ್ಲಿ ಹಾನಗಲ್ ಪೊಲೀಸ್ ಇನ್ಸಪೆಕ್ಟರ್ ಬಸವರಾಜ ಹಳಬಣ್ಣವರ, ಮುರುಗೇಶ ಚನ್ನಣ್ಣವರ, ಪಿ.ಐ ಹುಬ್ಬಳ್ಳಿ ಗ್ರಾಮೀಣ, ರವಿ ಕಪ್ಪತ್ತಣವರ ಸಿಪಿಐ ನವಲಗುಂದ, ತಂಪತ್ ಆಕಿಡಿ, ಪಿ.ಎಸ್.ಐ ಹಾನಗಲ್ಲ, ಶರಣಪ್ಪ ಹಂಡ್ರಗಲ್ ಪಿ.ಎಸ್.ಐ ಆಡೂರ, ಮಂಜುನಾಥ, ಯಲ್ಲಪ್ಪ ಹಿರಗಣ್ಣನವರ, ಜನಾರ್ದನ್, ಇಮ್ರಾನ ಪಠಾಣ, ಅಪರಾಧ ದಳದ ಸಿಬ್ಬಂದಿಗಳಾದ ಇಲಿಯಾಜ್ ಶೇತಸನದಿ, ಎಲ್. ಎಲ್ ಪಾಟೀಲ್, ಚಿಕ್ಕಪ್ಪ ಕಡಕೋಳ, ಬಾಹುಬಲಿ ಉಪಾದ್ಯ, ಉದಯಕುಮಾರ ವಿರೋಜಿ, ಎಸ್.ಬಿ ಕೂಸನೂರ, ನಾರಾಯಣ ಗುರ್ಕಿ, ಅನೀಲ್ ಮಡಿವಾಳರ, ಜಾವೇದ ಸಂಶಿ, ಮಂಜುನಾಥ ಶೀರನಹಳ್ಳಿ, ವೆಂಕಟೇಶ ಲಮಾಣಿ, ಶೇಖಪ್ಪ ಕುರುಬರ, ಪರಶುರಾಮ ಯತ್ನಳ್ಳಿ, ಬಂಗಾರಪ್ಪ ಹುರಕಡ್ಲಿ, ತಾಂತ್ರಿಕ ವಿಭಾಗದ ಮಾರುತಿ ಹಾಲಬಾವಿ, ಸತೀಶ ಮಾರಕಟ್ಟೆ ಮಾರುತಿ ಕಲಾಲ್ ಮತ್ತು ಹುಬ್ಬಳ್ಳಿ ಗ್ರಾಮೀಣ ಹಾಗೂ ನವಲಗುಂದ ಪೊಲೀಸ್ ಠಾಣೆಗಳ ಅಪರಾಧ ದಳದ ಸಿಬ್ಬಂದಿ ಇವರನ್ನೊಳಗೊಂಡ ತಂಡ ಸೇರಿ ಚುರುಕಿನ ಜಂಟಿ ಕಾರ್ಯಾಚರಣೆ ನಡೆಸಿ ಆರೋಪಿತರನ್ನು ಬಂಧಿಸಿ ಹಾನಗಲ್ಲ ಪೊಲೀಸ್ ಠಾಣೆಯ ಮತ್ತು ಹುಬ್ಬಳ್ಳಿ ಗ್ರಾಮೀಣ ಠಾಣೆಯ ಎರಡೂ ಠಾಣೆಗಳ ಸ್ವತ್ತಿನ ಅಪರಾಧ ಪ್ರಕರಣಗಳನ್ನು ಪತ್ತೆ ಮಾಡಲಾಗಿದೆ.
ಒಟ್ಟು ೬ ಜನ ಆರೋಪಿತರಲ್ಲಿ ೪ ಜನ ಆರೋಪಿತರು ಪರಾರಿಯಾಗಿದ್ದು, ಅವರ ಬಂಧನಕ್ಕೂ ಬಲೆ ಬೀಸಲಾಗಿದೆ, ಮೊದಲನೇ ಆರೋಪಿತನ ಮೇಲೆ ಧಾರವಾಡ, ಗದಗ, ಕೊಪ್ಪಳ, ಹಾವೇರಿ, ಜಿಲ್ಲೆಯಲ್ಲಿ ಸೇರಿದಂತೆ ೦೬ ಕಳ್ಳತನದ ಪ್ರಕರಣಗಳು ದಾಖಲಾಗಿದ್ದು ತನಿಖೆ ಮುಂದುವರೆದಿರುತ್ತದೆ. ಸದರ ಪ್ರಕರಣವನ್ನು ಸಿನಿಮೀಯ ರೀತಿಯಲ್ಲಿ ಭೇದಿಸಿದ ಅಧಿಕಾರಿ ಹಾಗೂ ಸಿಬ್ಬಂದಿ ಜನರ ಕಾರ್ಯವನ್ನು ಶ್ಲಾಘಿಸಿ ಬಹುಮಾನ ಘೋಷಣೆ ಮಾಡಲಾಗಿದೆ.

