
ಅಪಪ್ರಚಾರ ಮಾಡಿ ಸಚಿವ ಸ್ಥಾನ ಗಿಟ್ಟಿಸುವ ಜಾಯಮಾನ ನನ್ನದಲ್ಲ: ಶಾಸಕ ಮಾನೆ
ಹಾನಗಲ್: ಜೀವನದಲ್ಲಿ ಎಂದೂ ಸಹ ಜಾತಿ ರಾಜಕಾರಣ ಮಾಡಿಲ್ಲ, ಜಾತಿ ಕೋಟಾದಡಿ ಸಚಿವ ಸ್ಥಾನವನ್ನೂ ಕೇಳುತ್ತಿಲ್ಲ. ಸಚಿವ ಸ್ಥಾನ ನೀಡುವಾಗ ವಯಸ್ಸು, ಆರೋಗ್ಯ ಎಂಬೆಲ್ಲ ಸಂಗತಿಗಳು ಅನ್ವಯಿಸುವುದೇ ಇಲ್ಲ. ವೈಯಕ್ತಿಕ ಟೀಕೆ, ಟಿಪ್ಪಣಿ, ಅಪಪ್ರಚಾರ ಮಾಡಿ ಸಚಿವ ಸ್ಥಾನ ಗಿಟ್ಟಿಸುವ ಜಾಯಮಾನ ನನ್ನದಲ್ಲ. ನಾನೊಬ್ಬ ಕಾಂಗ್ರೆಸ್ ಪಕ್ಷದ ಶಿಸ್ತಿನ ಸಿಪಾಯಿ. ಪಕ್ಷ ಏನೇ ನಿರ್ಣಯ ಕೈಗೊಂಡರೂ ಬದ್ಧ ಎಂದು ಶಾಸಕ ಶ್ರೀನಿವಾಸ ಮಾನೆ ಸ್ಪಷ್ಟಪಡಿಸಿದರು.
ಶನಿವಾರ ಇಲ್ಲಿನ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಬ್ಯಾಡಗಿಯ ಶಾಸಕರಾದ ಬಸವರಾಜ ಶಿವಣ್ಣನವರ ಅವರಿಗೆ ಸಚಿವ ಸ್ಥಾನ ತಪ್ಪಿಸಲು ನಾನು ಪ್ರಯತ್ನಿಸಿಲ್ಲ. ಯಾರ ಬಳಿಯೂ ಅವರ ಬಗ್ಗೆ ಅಪಪ್ರಚಾರ ಮಾಡಿಲ್ಲ. ಅಂಥ ಮನಸ್ಥಿತಿಯವನೂ ನಾನಲ್ಲ. ಕಳೆದ ೧೭ ವರ್ಷಗಳಿಂದ ಸದನದಲ್ಲಿದ್ದೇನೆ. ಆದರೂ ಕೂಡ ಇದುವರೆಗೆ ನನಗೆ ಯಾವುದೇ ಹುದ್ದೆ ಅಲಂಕರಿಸುವ ಸೌಭಾಗ್ಯ ಒದಗಿ ಬಂದಿಲ್ಲ. ಈ ಬಗ್ಗೆ ನಾನು ಯಾರನ್ನೂ ದೂರುವುದಿಲ್ಲ, ಅದು ನನ್ನ ಹಣೆಬರಹ. ಹಿರಿಯರಾದ ಬಸವರಾಜ ಶಿವಣ್ಣನವರ ಅವರದ್ದು ಸಹ ಸದನದಲ್ಲಿ ೧೮ ವರ್ಷಗಳ ಸೇವೆ ಇದೆ. ಅವರ ಅದೃಷ್ಟ ಚೆನ್ನಾಗಿತ್ತು, ಶಾಸಕರಾದ ಕೇವಲ ಮೂರೇ ವರ್ಷಕ್ಕೆ ಸಚಿವರಾಗುವ ಅವಕಾಶ ಅವರಿಗೆ ಸಿಕ್ಕಿತ್ತು. ಈಗಲೂ ಅವರಿಗೆ ಅವಕಾಶ ಸಿಕ್ಕರೆ ಖುಷಿ ಪಡುತ್ತೇನೆ. ಅಲ್ಲದೇ ಎಲ್ಲ ರೀತಿಯ ಸಹಕಾರ ಸಹ ನೀಡುತ್ತೇನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಜಿಲ್ಲೆಯ ಆರೂ ಜನ ಶಾಸಕರೂ ಸಚಿವ ಸ್ಥಾನಕ್ಕೆ ಅರ್ಹರೇ. ಈ ಪೈಕಿ ನಾವು ಮೂವರು ಮಾತ್ರ ಮುಂಚೂಣಿಯಲ್ಲಿ ಸಚಿವ ಸ್ಥಾನಕ್ಕೆ ಪ್ರಯತ್ನಿಸುತ್ತಿದ್ದೇವೆ. ಪ್ರಯತ್ನಿಸಿದವರನ್ನು ಬಿಟ್ಟು ಇನ್ನುಳಿದ ಮೂವರ ಪೈಕಿ ಯಾರಿಗಾದರೂ ಸಚಿವ ಸ್ಥಾನ ಸಿಕ್ಕರೂ ಆಶ್ಚರ್ಯವಿಲ್ಲ್ಲ. ಪ್ರಯತ್ನ ಮಾಡಿದರಷ್ಟೆ ಸಚಿವ ಸ್ಥಾನ ಸಿಗಲಿದೆ ಎನ್ನುವುದೆಲ್ಲ ಸುಳ್ಳು. ಹಿಂದೆ ೨೦೧೩ ರಿಂದ ೨೦೧೮ ರ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಗಳಿದ್ದಾಗ ಜಿಲ್ಲೆಯ ಬಹಳಷ್ಟು ಆಕಾಂಕ್ಷಿ ಶಾಸಕರು ದೆಹಲಿಗೆ ತೆರಳಿ ಪ್ರಯತ್ನಿಸಿದ್ದರು. ಆದರೆ ಜಿಲ್ಲೆಯಲ್ಲಿಯೇ ಉಳಿದಿದ್ದ ರುದ್ರಪ್ಪ ಲಮಾಣಿ ಅವರಿಗೆ ಸಚಿವ ಸ್ಥಾನ ಸಿಕ್ಕಿದ್ದನ್ನು ಶಾಸಕ ಮಾನೆ ನೆನಪಿಸಿದರು.
ಬಸವರಾಜ ಶಿವಣ್ಣನವರ ವಿರುದ್ಧ ಅಪಪ್ರಚಾರ ಮಾಡಿದ್ದೇನೆ ಎನ್ನುವ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಂಜೀವಕುಮಾರ ನೀರಲಗಿ ಅವರಿಗೆ ಪತ್ರ ಬರೆದು ಸತ್ಯಾಸತ್ಯತೆ ತಿಳಿಯಲು ಹೇಳಿದ್ದೇನೆ. ಈ ಬಗ್ಗೆ ಹಿರಿಯ ಶಾಸಕರಾದ ರುದ್ರಪ್ಪ ಲಮಾಣಿ, ಯು.ಬಿ.ಬಣಕಾರ ಅವರು ಸಭೆ ಸೇರಿ ಚರ್ಚಿಸಿದ್ದಾರೆ. ಸ್ವತಃ ರುದ್ರಪ್ಪ ಲಮಾಣಿ ಅವರೇ ಊಹಾಪೋಹ ಎಂದು ಮಾಧ್ಯಮಗಳಿಗೆ ಹೇಳಿದ್ದಾರಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು ರಾಷ್ಟ್ರಮಟ್ಟದಲ್ಲಿ ಪಕ್ಷಕ್ಕೆ ಸೇವೆ ಸಲ್ಲಿಸಿದ್ದೇನೆ. ಸೇವೆ ಗುರುತಿಸಿ ಸಚಿವ ಸ್ಥಾನ ನೀಡುವಂತೆ ಮನವಿ ಮಾಡಿದ್ದೇನಷ್ಟೆ. ಜಿಲ್ಲೆಯ ಯಾರಿಗೇ ಸಚಿವ ಸ್ಥಾನ ಸಿಕ್ಕರೂ ಖುಷಿಯೇ. ಒಟ್ಟಾರೆ ಜಿಲ್ಲೆಗೆ ಅವಕಾಶ ಸಿಗಬೇಕಿದೆ ಎಂದರು.
ಕಾಂಗ್ರೆಸ್ ಪಕ್ಷ ನನ್ನನ್ನು ಬೆಳೆಸಿದೆ, ಶಾಸಕನನ್ನಾಗಿ ಮಾಡಿದೆ. ಸಚಿವ ಸ್ಥಾನಕ್ಕಾಗಿ ಪಕ್ಷದ ವಿರುದ್ಧ ಪ್ರತಿಭಟನೆ ಮಾಡುವ ಮನಸ್ಥಿತಿ ನನ್ನದಲ್ಲ. ಸಚಿವ ಸ್ಥಾನಕ್ಕೆ ಪ್ರತಿಭಟನೆ ಮಾಡಿದರೆ ನನ್ನನ್ನು ಬೆಳೆಸಿದ ಪಕ್ಷದ ವಿರುದ್ಧ ಪ್ರತಿಭಟನೆ ಮಾಡಿದಂತಾಗುತ್ತದೆ. ಈ ನಿಟ್ಟಿನಲ್ಲಿ ನನ್ನ ಮನವಿಗೆ ನಮ್ಮ ತಾಲೂಕಿನ ಮುಖಂಡರು, ಕಾರ್ಯಕರ್ತರು ಸಹ ಸ್ಪಂದಿಸಿದ್ದಾರೆ. ಹಾಗಾಗಿ ಇಲ್ಲಿ ಯಾರೂ ಪ್ರತಿಭಟನೆ ನಡೆಸಿಲ್ಲ ಎಂದು ತಿಳಿಸಿದ ಶಾಸಕ ಮಾನೆ, ನಾನು ಹಾನಗಲ್‌ನಿಂದ ಸ್ಪರ್ಧೆ ಮಾಡಬೇಕು ಎನ್ನುವುದು ಪಕ್ಷದ ತೀರ್ಮಾನ. ಈ ದೇಶದ ಯಾವುದೇ ಭಾಗದಲ್ಲಾದರೂ ಸ್ಪರ್ಧೆ ಮಾಡಲು ಸಂವಿಧಾನ ಅವಕಾಶ ಕಲ್ಪಿಸಿದೆ. ಪಕ್ಷ ಕಳಿಸಿದ್ದಕ್ಕೆ ಹಾನಗಲ್‌ಗೆ ಬಂದಿದ್ದೇನೆ. ಹೀಗಿರುವಾಗ ಓವರ್‌ಟೇಕ್ ಎನ್ನುವ ಪ್ರಶ್ನೆ ಉದ್ಭವಿಸದು ಎಂದು ಪ್ರತಿಕ್ರಿಯಿಸಿದರು.

