ಯೋಧರಿಗೆ ಆತ್ಮಸ್ಥೈರ್ಯ ತುಂಬಲು ಯುವಕಾಂಗ್ರೆಸ್‌ನಿಂದ ರಕ್ತದಾನ ಶಿಬಿರ
ಹಾವೇರಿ: ದೇಶದ ರಕ್ಷಣೆಯಲ್ಲಿ ತೊಡಗಿರುವ ಯೋಧರಿಗೆ ಆತ್ಮಸ್ಥೈರ್ಯ ತುಂಬುವ ನಿಟ್ಟಿನಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಘಟಕವು ರಕ್ತದಾನ ಶಿಬಿರ ಆಯೋಜಿಸಿರುವುದು ಶ್ಲಾಘನೀಯ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಂಜೀವಕುಮಾರ ನೀರಲಗಿ ಹೇಳಿದರು. ನಗರದ ಹೊಸಮಠ ಬಳಿಯ ಬಸವೇಶ್ವರ ವೃತ್ತದಲ್ಲಿ ಗುರುವಾರ ಜಿಲ್ಲಾ ಯುವ ಕಾಂಗ್ರೆಸ್ ಘಟಕದಿಂದ ಆಯೋಜಿಸಿದ್ದ ರಕ್ತದಾನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ದೇಶದ ಐಕ್ಯತೆ ಪ್ರಶ್ನೆ ಬಂದಾಗ ಎಲ್ಲರೂ ಒಗ್ಗಟ್ಟಿನಿಂದ ಇರಬೇಕು. ಅಂದಾಗ ದೇಶದ ಐಕ್ಯತೆ ಕಾಪಾಡಲು ಸಾಧ್ಯವಾಗುತ್ತದೆ ಎಂದ ಅವರು ಇಂದಿನ ದಿನಗಳಲ್ಲಿ ಹನಿ ರಕ್ತವು ಅತೀ ಅವಶ್ಯಕವಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ರಕ್ತದಾನ ಮಾಡುವ ಮೂಲಕ ಜೀವ ರಕ್ಷಣೆಗೆ ಕೈಜೋಡಿಸಬೇಕು. ಯುವ ಕಾಂಗ್ರೆಸ್ ಘಟಕದ ಜಿಲ್ಲಾಧ್ಯಕ್ಷ ದರ್ಶನಕುಮಾರ ಲಮಾಣಿ ಕ್ರಿಯಾಶೀಲರಾಗಿ ಕೆಲಸ ಮಾಡುತ್ತಿದ್ದು, ಅವರ ನೇತೃತ್ವದಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಘಟಕವು ಜಿಲ್ಲಾದ್ಯಂತ ರಕ್ತದಾನ ಶಿಬಿರ, ಉದ್ಯೋಗ ಮೇಳ, ಆರೋಗ್ಯ ಶಿಬಿರಗಳನ್ನು ಆಯೋಜಿಸಿ ಪಕ್ಷವನ್ನು ಕಟ್ಟುವಂತ ಕೆಲಸವನ್ನು ಮಾಡಬೇಕು ಎಂದರು.
ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ದರ್ಶನಕುಮಾರ ಲಮಾಣಿ ಮಾತನಾಡಿ ಈ ಹಿಂದೆ ೧೯೭೧ರಲ್ಲಿ ಇಂದಿರಾ ಗಾಂಧಿ ಅವರು ಪ್ರಧಾನಿಯಾಗಿದ್ದ ವೇಳೆ ಅವರು ನಡೆಸಿದ ದಾಳಿಯನ್ನು ಪಕ್ಷದ ಪರವಾಗಿ ನೆನಸಿಕೊಂಡು ಸೈನಿಕರಿಗೆ ಮಾನಸಿಕ ಸ್ಥೈರ್ಯ ತುಂಬುವ ನಿಟ್ಟಿನಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗಿದೆ. ಅಲ್ಲದೇ ಇಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರ ಜನ್ಮದಿನ ಆಚರಿಸಲಾಗುತ್ತಿದೆ. ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಮಾಡುವ ಮೂಲಕ ದೇಶದ ಸೈನಿಕರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಬೇಕು ಎಂದರು.
ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕಾಧ್ಯಕ್ಷ ಎಂ.ಎಂ.ಮೈದೂರ, ರಾಣಿಬೆನ್ನೂರ ತಾಲೂಕಿನ ಯುವ ಘಟಕದ ಅಧ್ಯಕ್ಷ ಬೀರಪ್ಪ ಲಮಾಣಿ ಮಾತನಾಡಿದರು. ಈ ಒಂದು ರಕ್ತದಾನ ಶಿಬಿರದಲ್ಲಿ ಸುಮಾರು ೨೫ಕ್ಕೂ ಹೆಚ್ಚು ಜನರು ರಕ್ತದಾನ ಮಾಡಿದರು.
ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಯುವ ಘಟಕದ ಜಿಲ್ಲಾಧ್ಯಕ್ಷ ದರ್ಶನಕುಮಾರ ಲಮಾಣಿ, ನಗರಸಭೆ ಸದಸ್ಯರಾದ ರೇಣುಕಾ ಪುತ್ರನ್, ಉಮೀದ್ ನದಾಫ್, ಸಿಪಿಐ ಮೋತಿಲಾಲ್ ಪವಾರ, ಸಿದ್ದು ಪುರದ, ಶ್ರೀಧರ ದೊಡ್ಡಮನಿ ಸೇರಿದಂತೆ ಇತರರು ಇದ್ದರು. ಸುಧೀರ ಲಮಾಣಿ ಸ್ವಾಗತಿಸಿ, ನಿರೂಪಿಸಿದರು.