ಹಲವು ವಿಶೇಷತೆಗಳ ಹಾವೇರಿಯ ಅಕ್ಕ ಕೆಫೆ ಉದ್ಘಾಟನೆ ಜ.೪ ರಂದು
ಹಾವೇರಿ: ಅಕ್ಕ ಕೆಫೆ ಎಂಬ ಪದ ಅದ್ಭುತವಾಗಿದೆ. ಈ ಅಕ್ಕ ಕೆಫೆ ಹಲವು ವಿಶೇಷತೆಗಳಿಂದ ಕೂಡಿದ್ದು, ಹಾವೇರಿ ಜಿಲ್ಲಾಡಳಿತ ಭವನದ ಆವರಣದಲ್ಲಿರುವ ಜಿಲ್ಲಾ ಪಂಚಾಯತ್ ಕಟ್ಟಡದ ಆವರಣದಲ್ಲಿ ನಿರ್ಮಾಣ ಮಾಡಲಾಗಿದೆ. ಜ.೪ ರಂದು ಜವಳಿ, ಕಬ್ಬು ಅಭಿವೃದ್ಧಿ ಸಕ್ಕರೆ ಮತ್ತು ಕೃಷಿ ಮಾರುಕಟ್ಟೆ ಹಾಗೂ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಅವರು ಉದ್ಘಾಟನೆ ನೆರವೇರಿಸಲಿದ್ದಾರೆ.
ಅಕ್ಕ ಕೆಫೆ ಕಾರ್ಯಕ್ರಮ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಮಹಾತ್ವಾಕಾಂಕ್ಷೆಯ ಯೋಜನೆಯಾಗಿದೆ. ಮಹಿಳಾ ಸ್ವ-ಸಹಾಯ ಸಂಘಗಳಿಗೆ ಆಹಾರ ಪೂರೈಕೆ ಕ್ಷೇತ್ರದಲ್ಲಿ ಸುಸ್ಥಿರ ಜೀವನೋಪಾಯ ಚಟುವಟಿಕೆಯನ್ನು ಒದಗಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ.
ಉತ್ತಮ ಗುಣಮಟ್ಟದ ಶುಚಿ-ರುಚಿ ಪೌಷ್ಠಿಕ ಆಹಾರವನ್ನು ಸಾರ್ವಜನಿಕರಿಗೆ ಕೈಗೆಟಕುವ ದರದಲ್ಲಿ ಪೂರೈಸುವ ದೂರದೃಷ್ಠಿಯೊಂದಿಗೆ ರಾಜ್ಯದಲ್ಲಿ ಅನು?ನಗೊಳಿಸಲಾಗುತ್ತಿದೆ. ರಾಜ್ಯಾದ್ಯಂತ ಒಂದೇ ಮಾದರಿಯ ೫೦ ಕೆಫೆ ಸಂಜೀವಿನಿ (ಅಕ್ಕ ಕೆಫೆ) ಕ್ಯಾಂಟೀನ್ಗಳನ್ನು ೨೦೨೪-೨೫ನೇ ಸಾಲಿನಲ್ಲಿ ಸ್ಥಾಪಿಸಲು ಸರ್ಕಾರವು ಕಾರ್ಯಕ್ರಮ ರೂಪಿಸಿದೆ.
ಜಿಲ್ಲಾ ಆಡಳಿತ ಭವನ ಹಾಗೂ ಜಿಲ್ಲಾ ಪಂಚಾಯತ ಕಾರ್ಯಾಲಯದ ಆವರಣದಲ್ಲಿ ಸರ್ಕಾರದ ಮಹತ್ವಾಕಾಂಕ್ಷಿ ಕಾರ್ಯಕ್ರಮ ಅಕ್ಕ ಕೆಫೆ ಪ್ರಾರಂಭಿಸುವಂತೆ ಬಹಳ ಬೇಡಿಕೆ ಇತ್ತು. ಜಿಲ್ಲಾ ಆಡಳಿತ ಭವನ ಮತ್ತು ಜಿಲ್ಲಾ ಪಂಚಾಯತ ಕಚೇರಿಯ ವ್ಯಾಪ್ತಿಯ ವಿವಿಧ ಕಚೇರಿಗೆ ದಿನನಿತ್ಯ ನೂರಾರು ಜನರು ಕಚೇರಿ ಕೆಲಸಗಳಿಗಾಗಿ ಆಗಮಿಸುತ್ತಾರೆ. ವಿವಿಧ ಕಚೇರಿಗಳ ಸಭೆಗಳು ಮತ್ತು ಸಮಾರಂಭಗಳಿಗೆ ಊಟ-ಉಪಹಾರ ಮತ್ತು ಪಾನೀಯಗಳ ಸರಬರಾಜು ಮಾಡಲು ಬೇಡಿಕೆ ಇದೆ.
ಹತ್ತಿರದಲ್ಲೇ ಸುಮಾರು ೧೨ ಸಾವಿರ ಜನಸಂಖ್ಯೆ ಹೊಂದಿರುವ ದೇವಗಿರಿ ಗ್ರಾಮ, ವಿವಿಧ ಜನವಸತಿ ಬಡಾವಣೆಗಳು, ಇಂಜನೀಯರಿಂಗ್ ಮತ್ತು ಮೆಡಿಕಲ್ ಕಾಲೇಜುಗಳು ಇರುವುದರಿಂದ ಶುಚಿ-ರುಚಿಯಾದ ಆಹಾರ ಮತ್ತು ಉಪಹಾರ ಸರಬರಾಜು ಮಾಡುವ ಬೇಡಿಕೆ ಸಾಮಾನ್ಯವಾಗಿದೆ. ಈ ವಿಷಯಗಳನ್ನು ಗಮನದಲ್ಲಿಟ್ಟಿಕೊಂಡು ಜಿಲ್ಲಾ ಪಂಚಾಯತ್ ಕಟ್ಟಡ ನೆಲ ಮಹಡಿಯಲ್ಲಿ ಈ ಅಕ್ಕ ಕೆಫೆ ಆರಂಭಿಸಲಾಗಿದೆ.
ಲಿಂಗತ್ವ ಅಲ್ಪಸಂಖ್ಯಾತರಿಂದ ನಿರ್ವಹಣೆ: ಜಿಲ್ಲೆಯಲ್ಲಿರುವ ೩೦ ಲಿಂಗತ್ವ ಅಲ್ಪಸಂಖ್ಯಾತರ ಸ್ವ-ಸಹಾಯ ಸಂಘದ ಸದಸ್ಯರು ತಾವು ಅಕ್ಕ ಕೆಫೆ ಕ್ಯಾಂಟೀನ್ ನಿರ್ವಹಣೆ ಜವಾಬ್ದಾರಿ ನಮಗೆ ವಹಿಸಿಕೊಡಬೇಕೆಂದು ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ ಈ ಸಮುದಾಯವನ್ನು ವಿಶೇ? ಸಮುದಾಯವೆಂದು ಪರಿಗಣಿಸಿ, ಲಿಂಗತ್ವ ಅಲ್ಪಸಂಖ್ಯಾತರ ಜೀವನೋಪಾಯ ಆರ್ಥಿಕ ಚಟುವಟಿಕೆಗೆ ಪ್ರೋತ್ಸಾಹ ನೀಡುವ ಮೂಲಕ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಲು, ಆರ್ಥಿಕ, ಸಾಮಾಜಿಕ ಅಭಿವೃದ್ಧಿ ಹೊಂದಲು ಈ ಅಕ್ಕ ಕೆಫೆ ಉದ್ಯಮದ ತರಬೇತಿ ನೀಡಿ ಅವರಿಗೆ ಅಕ್ಕ ಕೆಫೆ ನಿರ್ವಹಣೆ ಹೊಣೆ ನೀಡಲಾಗಿದೆ. ಲಿಂಗತ್ವ ಅಲ್ಪಸಂಖ್ಯಾತರೂ ಸಹ ಎಲ್ಲರಂತೆ ಗೌರವದಿಂದ ಬದುಕು ನಡೆಸಲು ಅಕ್ಕ ಕೆಫೆ ಸಹಕಾರಿಯಾಗಿದೆ.
ತರಬೇತಿ: ಬ್ಯಾಂಕ್ ಆಫ್ ಬರೋಡಾ ಸ್ವ-ಉದ್ಯೋಗ ತರಬೇತಿ ಕೇಂದ್ರದಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಸಮುದಾಯದ ಸ್ವ-ಸಹಾಯ ಸಂಘದ ೩೦ ಜನ ಸದಸ್ಯರಿಗೆ ಅಕ್ಕ ಕೆಫೆ ಉದ್ಯಮದ ಕೌಶಲ್ಯ ತರಬೇತಿ ನೀಡಲಾಗಿದೆ.
ಅನುದಾನ: ಅಕ್ಕ ಕೆಫೆ ನಡೆಸಲು ಮೂಲಭೂತ ಸೌಕರ್ಯ ಒದಗಿಸಲು ಸರ್ಕಾರವು ರೂ.೮.೫೦ ಲಕ್ಷ ಅನುದಾನ ನೀಡಿದೆ. ಈ ಅನುದಾನದಲ್ಲಿ ಪಂಚಾಯತ್ ರಾಜ್ ಇಂಜನೀಯರಿಂಗ್ ವಿಭಾಗ ಅಕ್ಕ ಕೆಫೆಯ ನಿರ್ಮಾಣದ ಸಂಪೂರ್ಣ ಕಾಮಗಾರಿ ನಿರ್ವಹಿಸಿದೆ. ಅಕ್ಕ ಕೆಫೆಯ ಸಾಮಗ್ರಿ, ಆಹಾರ ಪದಾರ್ಥ ಮುಂತಾದ ವೆಚ್ಚಗಳಿಗೆ ಸರ್ಕಾರವು ದೇವಗಿರಿ ಗ್ರಾಮ ಪಂಚಾಯತ ಮಟ್ಟದ ಸಂಜೀವಿನಿ ಒಕ್ಕೂಟದ ಮುಖಾಂತರ ರೂ.೧.೫೦ ಲಕ್ಷ ಸಮುದಾಯ ಬಂಡವಾಳ ಸಾಲ ನಿಧಿಯನ್ನು ಸಂಘಕ್ಕೆ ಬಿಡುಗಡೆ ಮಾಡಿದೆ. ಜೊತೆಗೆ ಸಂಘದ ಸದಸ್ಯರು ರೂ.೪ ಲಕ್ಷ ಸಾಲ ಮಂಜೂರಾತಿಗೆ ಬ್ಯಾಂಕ್ ಆಫ್ ಬರೋಡಾ ಹಾವೇರಿ ಮುಖ್ಯ ಶಾಖೆಗೆ ಅರ್ಜಿ ಸಲ್ಲಿಸಿದ್ದು, ಸಾಲ ಮಂಜೂರಾತಿ ಪ್ರಕ್ರಿಯೆ ಪ್ರಗತಿಯಲ್ಲಿದೆ.
ಉದ್ಯಮದ ಲೈಸೆನ್ಸ್: ದೇವಗಿರಿ ಗ್ರಾಮ ಪಂಚಾಯತಿಯಿಂದ ಅಕ್ಕ ಕೆಫೆ ಕ್ಯಾಂಟೀನ್ ಉದ್ಯಮದ ಲೈಸೆನ್ಸ್ ನೀಡಲಾಗಿದೆ. ಆಹಾರ ಇಲಾಖೆಯಿಂದ ಆಹಾರ ಪದಾರ್ಥ ಸುರಕ್ಷತಾ ಪತ್ರವನ್ನು ಈಗಾಗಲೇ ಸಂಘಕ್ಕೆ ನೀಡಲಾಗಿದೆ. ಜಿ.ಎಸ್.ಟಿ. ಆರ್ಥಿಕ ವ್ಯವಹಾರ ಸಂಬಂಧ ಎಲ್ಲ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡಲಾಗಿದೆ.
ಸುರಕ್ಷತೆ: ಈ ಅಕ್ಕ ಕೆಫೆ ಕ್ಯಾಂಟೀನ್ ಆವರಣದಲ್ಲಿ ಸಂಪೂರ್ಣ ಅಗ್ನಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಹಾಗೂ ಅಗ್ನಿ ಶಾಮಕ ಇಲಾಖೆಯ ಮಾರ್ಗದರ್ಶನದಂತೆ ಸಜ್ಜುಗೊಳಿಸಲಾಗಿದೆ. ಸುರಕ್ಷತೆ ಹಿತದೃಷ್ಟಿಯಿಂದ ಅಕ್ಕ ಕೆಫೆ ಕ್ಯಾಂಟೀನ್ ಸುತ್ತಮುತ್ತ ಸಿ.ಸಿ. ಕ್ಯಾಮರಾಗಳನ್ನು ಅಳವಡಿಸಲಾಗಿದೆ.
ಅಚ್ಚುಕಟ್ಟು ವ್ಯವಸ್ಥೆ: ವಿಶೇಷ ಹಾಗೂ ವಿಭಿನ್ನವಾಗಿ ಅಚ್ಚುಕಟ್ಟಾಗಿ ಅಕ್ಕ ಕೆಫೆ ನಿರ್ಮಾಣವಾಗಿದೆ. ಕೆಫೆ ಒಳಭಾಗದಲ್ಲಿ ಆಹಾರ ತಯಾರಿಕೆ ಕೊಠಡಿ, ಆಹಾರ ಪೂರೈಕೆ ಕೌಂಟರ್, ಶುದ್ಧ ಕುಡಿಯುವ ನೀರು, ಶೌಚಾಲಯ ಸೇರಿದಂತೆ ಅಗತ್ಯ ಸೌಕರ್ಯಗಳನ್ನು ಕಲ್ಪಿಸಲಾಗಿದೆ.
ವರ್ಲಿಕಲೆ: ಆಧುನಿಕ ಜೀವನ ಶೈಲಿ ಮಧ್ಯೆಯೂ ಅಕ್ಕ ಕೆಫೆ ಸಾಂಪ್ರಸಾಯಿಕ ಅಡುಗೆ ಹಾಗೂ ಜಾನಪದ ಶೈಲಿಗೆ ಒತ್ತು ನೀಡಿದ್ದು ವಿಶೇಷವಾಗಿದೆ. ಅಕ್ಕ ಕೆಫೆ ಹೊರ ಗೋಡೆಗಳಿಗೆ ವಿಶೇಷವಾಗಿ ವರ್ಲಿಕಲೆ ಚಿತ್ತಾರ ಬರೆಯಲಾಗಿದೆ. ಹೊರಭಾಗದಲ್ಲಿ ಹುಲ್ಲುಗಾವಲು ಉದ್ಯಾನವನ ನಿರ್ಮಾಣ ಮಾಡಲಾಗಿದೆ, ಜೊತೆಗೆ ಕುಳಿತುಕೊಳ್ಳಲು ಸಹ ವ್ಯವಸ್ಥೆ ಮಾಡಲಾಗಿದೆ.
ಸಾಂಪ್ರದಾಯಿಕ ಆಹಾರ: ಪ್ರತಿ ಸೋಮವಾರ ಮತ್ತು ಗುರುವಾರ ಅಕ್ಕ ಕೆಫೆಯಲ್ಲಿ ಹೂರಣದ ಹೋಳಿಗೆ, ಸಜ್ಜಕದ ಹೋಳಿಗೆ, ಕಾಯಿ ಹೋಳಿಗೆ, ಶೇಗಾ ಸೇರಿದಂತೆ ವಿವಿಧ ತರೆವಾರಿ ಹೋಳಿಗೆಗಳನ್ನು ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಜೊತೆಗೆ ಉತ್ತರ ಕರ್ನಾಟಕ ಶೈಲಿಯ ರೊಟ್ಟಿ ಊಟ ಸೇರಿದಂತೆ ವಿವಿಧ ಬಗೆಯ ಉಪಹಾರ ನೀಡಲು ಆಹಾರ ಮೆನು ತಯಾರಿಸಿದ್ದಾರೆ. ಸಾರ್ವಜನಿಕರಿಗೆ ಕೈಗೆಟಕುವ ದರದಲ್ಲಿ ಶುಚಿಯಾದ ಹಾಗೂ ರುಚಿಯಾದ ಊಟ-ಉಪಹಾರ ಪೂರೈಸಲು ಉದ್ದೇಶಿಸಲಾಗಿದೆ. ಈ ಅಕ್ಕ ಕೆಫೆಯಲ್ಲಿ ಕಾಫಿ, ಟೀ, ಉಪಹಾರ, ಊಟ, ಸಂಜೆ ಸ್ನ್ಯಾಕ್ಸ್ ಸೇರಿದಂತೆ ಎಲ್ಲವನ್ನೂ ಒಳಗೊಂಡಿದೆ.
ನಂದಿನಿ ಪಾರ್ಲರ್: ಅಕ್ಕ ಕೆಫೆ ಪಕ್ಕದಲ್ಲೇ ನಂದಿ ಉತ್ನನ್ನಗಳ ಮಾರಾಟ ಕೇಂದ್ರವನ್ನು ಸಹ ತೆರೆಯಲಾಗಿದೆ. ಇಲ್ಲಿ ನಂದಿನಿ ಉತ್ಪನ್ನಗಳ ವಿವಿಧ ಪಾನೀಯಗಳು, ಹಾಲು, ಮೊಸರು, ಬೆಣ್ಣ, ತುಪ್ಪ ಮತ್ತು ಐಸ್ಕ್ರೀಂ ದೊರೆಯಲಿವೆ.
ಹಾವೇರಿ ಜಿಲ್ಲೆಗೆ ಎರಡು ಅಕ್ಕ ಕೆಫೆ ಕ್ಯಾಂಟೀನ್ಗಳನ್ನು ಪ್ರಾರಂಭಿಸಲು ಗುರಿ
ಪ್ರಸಕ್ತ ಸಾಲಿನಲ್ಲಿ ಹಾವೇರಿ ಜಿಲ್ಲೆಗೆ ಎರಡು ಅಕ್ಕ ಕೆಫೆ ಕ್ಯಾಂಟೀನ್ಗಳನ್ನು ಪ್ರಾರಂಭಿಸಲು ಗುರಿ ನೀಡಲಾಗಿತ್ತು, ಒಂದು ಅಕ್ಕ ಕೆಫೆ ಜಿಲ್ಲಾ ಪಂಚಾಯತ ಕಾರ್ಯಾಲಯದ ಆವರಣದಲ್ಲಿ ಆರಂಭಿಸಲಾಗಿದೆ, ಇನ್ನೊಂದು ರಾಣೇಬೆನ್ನೂರು ತಾಲೂಕಿನ ಕೋಡಿಯಾಲ ಗ್ರಾಮದ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಪ್ರಾರಂಭಿಸಲುತೀರ್ಮಾನಿಸಲಾಗಿದೆ. – ಅಕ್ಷಯ್ ಶ್ರೀಧರ್ ,ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿ.ಪಂ.ಹಾವೇರಿ.