ಹಾವೇರಿ: ೩.೨೦ ಲಕ್ಷ ವಿದ್ಯುತ್ ಮೀಟರ್ ಆಧರಿಸಿ ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆ- ಭರದಿಂದಸಾಗಿದೆ ಸ್ಟಿಕ್ಕರ್ ಅಳವಡಿಕೆ
ಹಾವೇರಿ: ಹಾವೇರಿಜಿಲ್ಲೆಯಾದ್ಯಂತ ರಾಜ್ಯ ಸರ್ಕಾರದ ನಿರ್ದೇಶನದಂತೆ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸಲು ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಸಿದ್ಧತೆ ಮಾಡಿಕೊಂಡಿದ್ದು ಸೆ. ೨೨ರಿಂದ ಅಕ್ಟೋಬರ್ ೭ರವರೆಗೂ ’ಮನೆ ಮನೆ ಸಮೀಕ್ಷೆ’ ನಡೆಯಲಿದೆ. ಈ ಮಧ್ಯೆ ಜಿಲ್ಲೆಯಾದ್ಯಂತ ಮನೆಗಳಿಗೆ ಇರುವ ೩.೨೦ ಲಕ್ಷ ವಿದ್ಯುತ್ ಮೀಟರ್ ಆಧರಿಸಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಪೂರಕವಾಗಿ ಸ್ಟಿಕ್ಕರ್ ಅಳವಡಿಕೆ ಭರದಿಂದಸಾಗಿದೆ.
೩.೩೮ ಲಕ್ಷ ಮನೆ: ವಿದ್ಯುತ್ ಸಂಪರ್ಕ ಪಡೆದಿರುವ ಮನೆಗಳ ಮೀಟರ್ ಆಧರಿಸಿ ಸಮೀಕ್ಷೆ ನಡೆಸಲಾಗುತ್ತಿದೆ. ಮೀಟರ್ ಇರುವ ಜಾಗದಲ್ಲಿ ಈಗಾಗಲೇ ಸ್ಟಿಕ್ಕರ್ ಅಂಟಿಸಲಾಗಿದೆ. ಹಾವೇರಿ ಜಿಲ್ಲೆಯಲ್ಲಿ ೩.೩೮ ಲಕ್ಷ ಮನೆಗಳಿವೆ. ಇದರಲ್ಲಿ ೩.೨೦ ಲಕ್ಷ ಮನೆಗಳಿಗೆ ಮೀಟರ್ಗಳಿವೆ, ಉಳಿದ ಮನೆಗಳಿಗೆ ಮೀಟರ್ಗಳಿಲ್ಲ ಎಲ್ಲ ಮನೆಗಳನ್ನು ಗುರುತಿಸಿ ಸಮೀಕ್ಷೆ ನಡೆಸಲು ಆಯೋಗ ತಯಾರಿ ಮಾಡಿಕೊಂಡಿದೆ.
’ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷ ಎನ್ನುವುದು ರಾಜ್ಯದ ಎಲ್ಲ ಜನರ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳನ್ನು ತಿಳಿದುಕೊಂಡು ರಾಜ್ಯದ ನೀತಿ ನಿರೂಪಣೆಯನ್ನು ಕೈಗೊಳ್ಳಲು ಆಧಾರವಾಗಿರುತ್ತದೆ. ಸಮೀಕ್ಷೆ ಕಾರ್ಯವು ಈ ನಾಡಿನ ಸೇವೆಯ ಭಾಗವಾಗಿದೆ. ಇದಕ್ಕೆ ಜನರು ಸಹಕರಿಸಬೇಕು’ ಎಂದು ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ ತಿಳಿಸಿದ್ದಾರೆ.
’ಪ್ರತಿಯೊಂದು ಮನೆಗೂ ಸಮೀಕ್ಷೆದಾರರು ಬರಲಿದ್ದಾರೆ. ಸಮೀಕ್ಷೆಯಲ್ಲಿ ಸುಮಾರು ೬೦ ಪ್ರಶ್ನೆಗಳಿದ್ದು ಪಡಿತರ ಚೀಟಿ ಮತ್ತು ಆಧಾರ್ ಸಂಖ್ಯೆಯ ಆಧಾರದಲ್ಲಿ ಮಾಹಿತಿ ಪಡೆಯಲಿದ್ದಾರೆ. ಸಮೀಕ್ಷೆದಾರರು ಮನೆಗೆ ಭೇಟಿ ನೀಡಿದಾಗ ’ಕುಟುಂಬದ ಎಲ್ಲ ಸದಸ್ಯರು ಆಧಾರ್ ಕಾರ್ಡ್ಗೆ ತಮ್ಮ ಮೊಬೈಲ್ ಸಂಖ್ಯೆ ಲಿಂಕ್ ಆಗಿರುವುದರಿಂದ ಖಚಿತಪಡಿಸಿಕೊಳ್ಳಬೇಕು. ಸಮೀಕ್ಷೆ ಸಮಯದಲ್ಲಿ ಇ-ಕೆವೈಸಿ ಮಾಡುವಾಗ ಒಟಿಪಿ ಅಗತ್ಯವಿರುತ್ತದೆ. ಪ್ರತಿ ಸದಸ್ಯರ ವಿದ್ಯಾರ್ಹತೆ, ಕೌಶಲ ತರಬೇತಿಯ ಅಗತ್ಯತೆ, ಆದಾಯ, ಕುಟುಂಬದ ಸ್ಥಿರ ಮತ್ತು ಚರಾಸ್ತಿ ವಿವರಗಳು, ಧರ್ಮ, ಜಾತಿ, ಉಪಜಾತಿ ಹಾಗೂ ಕುಲಕಸುಬು ಮುಂತಾದ ವಿಷಯಗಳು ಸೇರಿದಂತೆ ಎಲ್ಲ ಪ್ರಶ್ನೆಗಳಿಗೂ ಕುಟುಂಬದ ಸದಸ್ಯರು ಸರಿಯಾದ ಮಾಹಿತಿ ನೀಡಬೇಕಿದೆ.


