
ಹಾವೇರಿಯಲ್ಲಿ ಅಲೆಮಾರಿಗಳಿಗಾಗಿ ತೆರೆದಿದೆ ಪುಟ್ಟ ಗುಡಿಸಲಿನಲ್ಲಿ ಗ್ರಂಥಾಲಯ
ಹಾವೇರಿ: ಒಂದು ಕಾಲದಲ್ಲಿ ಜ್ಞಾನದ ಕೇಂದ್ರಗಳಾಗಿದ್ದ ಓದುಗರಿಂದ ತುಂಬಿ ತುಳುಕುತ್ತಿದ್ದ ಗ್ರಂಥಾಲಯಗಳು ಈಗ ಆಧುನಿಕತೆ ಭರಾಟೆಯಲ್ಲಿ ಓದುಗರ ಕೊರತೆ ಎದುರಿಸುತ್ತಿವೆ. ಆದರೂ ಸಹ ಗ್ರಂಥಾಲಯದ ಮಹತ್ವ ಬದಲಾಗಿಲ್ಲ, ಕಡಿಮೆಯಾಗಿಲ್ಲ. ಊರ ಹೊರವಲಯದಲ್ಲಿ ಗುಡಿಸಲು ನಿರ್ಮಿಸಿಕೊಂಡು ಬದುಕು ಸಾಗಿಸುವ ಬಡವರು, ನಿರ್ಗತಿಕರು, ಅಲೆಮಾರಿಗಳಿಗೆ ಗ್ರಂಥಾಲಯ ದೂರದ ಮಾತು. ಈ ಹಿನ್ನೆಲೆಯಲ್ಲಿ ಹಾವೇರಿಯ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ವಿಭೂತಿ ಶೆಟ್ಟಿ ತಮ್ಮ ಗುಡಿಸಲಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ ಸಹಕಾರದೊಂದೆಗಿ ಗುಡಿಸಲು ಗ್ರಂಥಾಲಯ ತೆರೆದಿದ್ದಾರೆ.
ಅಲೆಮಾರಿಗಳ ಕೈಯಲ್ಲಿ ಪುಸ್ತಕಗಳು: ಹಾವೇರಿಯ ತರಳುಬಾಳು ಬಡಾವಣೆಯಲ್ಲಿ ಕಳೆದ ೧೦ ವರ್ಷಗಳಿಂದ ೧೮ಕ್ಕೂ ಅಧಿಕ ಕುಟುಂಬಗಳು ಗುಡಿಸಲಿನಲ್ಲಿ ವಾಸಿಸುತ್ತಿವೆ. ಯಾರದೋ ನಿವೇಶನದಲ್ಲಿ ಜೋಪಡಿ ಕಟ್ಟಿಕೊಂಡು ಈ ಕುಟುಂಬಗಳು ಜೀವನ ಮಾಡುತ್ತಿವೆ. ಈ ಕುಟುಂಬಗಳ ಮಕ್ಕಳ ಜ್ಞಾನಾರ್ಜನೆಗಾಗಿ ವಿಭೂತಿ ಶೆಟ್ಟಿ ಗುಡಿಸಲು ಗ್ರಂಥಾಲಯ ತೆರೆದಿದ್ದಾರೆ. ಇಲ್ಲಿ ಶಾಲೆಗೆ ಹೋಗುವ ಮಕ್ಕಳು, ಶಾಲೆ ಬಿಟ್ಟ ಮಕ್ಕಳು, ವಯಸ್ಕರು ಆಗಮಿಸಿ ಪುಸ್ತಕ ಓದುತ್ತಾರೆ. ಈ ಗ್ರಂಥಾಲಯದಲ್ಲಿ ದಿನಪತ್ರಿಕೆ, ವಾರಪತ್ರಿಕೆ ಮತ್ತು ಆಯ್ದ ಕೆಲವೊಂದು ಪುಸ್ತಕಗಳಿವೆ. ಓದಿನ ಹಸಿವು ಇರುವ ಮಕ್ಕಳು ಇಲ್ಲಿ ಬಂದು ಪುಸ್ತಕ ಓದುತ್ತಾರೆ. ಈ ರೀತಿ ಗ್ರಂಥಾಲಯವಾಗಿರುವುದು ತಮಗೆ ಹೆಚ್ಚು ಅನುಕೂಲಕವಾಗಿದೆ ಎನ್ನುತ್ತಾರೆ ಇಲ್ಲಿನ ಮಕ್ಕಳು.
ಗ್ರಂಥಾಲಯಕ್ಕೆ ಸಾಹಿತಿಗಳ ಭೇಟಿ: ಈ ಗುಡಿಸಲಿನ ಗ್ರಂಥಾಲಯಕ್ಕೆ ಹಾವೇರಿಯ ಸಾಹಿತಿಗಳಾದ ಸತೀಶ್? ಕುಲಕರ್ಣಿ, ಪುಷ್ಪಾ ಶೆಲವಡಿಮಠ ಹಾಗೂ ವಿವಿಧ ಸಂಘಟನೆಗಳ ಸದಸ್ಯರು ಭೇಟಿ ನೀಡುತ್ತಾರೆ. ಮಕ್ಕಳ ಜೊತೆ ಮಾತನಾಡುತ್ತಾರೆ. ಅವರ ಕಷ್ಟ-ಕಾರ್ಪಣ್ಯಗಳನ್ನು ಆಲಿಸುತ್ತಾರೆ. ಜೊತೆಗೆ ಮಕ್ಕಳು ಕೇಳಿದ ಪುಸ್ತಕಗಳನ್ನು ಕೊಡಿಸುತ್ತಾರೆ. ಆದರೂ ಸಹ ಗ್ರಂಥಾಲಯ ಪುಸ್ತಕಗಳ ಕೊರತೆ ಎದುರಿಸುತ್ತಿದೆ.
ಗುಡಿಸಲಿನಲ್ಲಿ ಸರಿಯಾದ ಬೆಳಕಿನ ವ್ಯವಸ್ಥೆ ಇಲ್ಲಾ. ಪುಸ್ತಕಗಳ ಸಂಖ್ಯೆ ಬಹಳ ಕಡಿಮೆ ಇದೆ. ಗ್ರಂಥಾಲಯದಲ್ಲಿ ಈಗ ಇರುವ ಪುಸ್ತಕಗಳನ್ನು ಓದಿದ್ದು ಹೊಸ ಪುಸ್ತಕಗಳು ಬೇಕು ಎನ್ನುತ್ತಾರೆ ಇಲ್ಲಿಯ ಓದುಗರು. ಈ ಗ್ರಂಥಾಲಯದಿಂದ ನಮಗೆ ಹೊರಜಗತ್ತಿನ ಸಂಪರ್ಕ ಬಂದಂತಾಗಿದೆ. ಇಷ್ಟು ದಿನ ನಾವಷ್ಟೇ ಜಗತ್ತು ಅಂದರೆ ಇಷ್ಟೇ ಅಂದು ತಿಳಿದುಕೊಂಡಿದ್ದೆವು. ಈಗ ಗ್ರಂಥಾಲಯ ನಮ್ಮನ್ನು ಹೊಸ ಲೋಕಕ್ಕೆ ಕರೆದುಕೊಂಡು ಹೋಗುತ್ತಿದೆ. ನಮ್ಮ ಜ್ಞಾನದ ಹಸಿವನ್ನು ಹೆಚ್ಚಿಸಿದೆ. ನಮಗೆ ಇನ್ನಷ್ಟು ಪುಸ್ತಕಗಳು ಸಿಕ್ಕರೇ ನಾವು ಚೆನ್ನಾಗಿ ಓದುತ್ತೇವೆ ಸಮಾಜದಲ್ಲಿ ಮುಖ್ಯವಾಹಿನಿಗೆ ಬರಲು ಪ್ರಯತ್ನಿಸುತ್ತೇವೆ ಎನ್ನುತ್ತಾರೆ ಇಲ್ಲಿಯ ಮಕ್ಕಳು.

