
— ಬ್ಯಾಂಕ್ಗಳು ಯಾವುದೇ ಕಾರಣಕ್ಕೂ ಎಜುಕೇಶನ್ ಲೋನ್ ನೀಡುವುದನ್ನು ನಿರಾಕರಿಸುವಂತಿಲ್ಲ : ನಿಸಾರ್ ಅಹಮ್ಮದ್
ಹಾವೇರಿ : ಅಲ್ಪಸಂಖ್ಯಾತರಿಗೆ ಸರ್ಕಾರದಿಂದ ದೊರೆಯಬೇಕಿರುವ ಪ್ರತಿಯೊಂದು ಸೌಲಭ್ಯಗಳು ಕಡ್ಡಾಯವಾಗಿ ತಲುಪಿಸುವಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು ಎಂದು ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷ ಯು. ನಿಸಾರ್ ಅಹಮ್ಮದ್ ಹೇಳಿದರು.
ಜಿಲ್ಲಾಧಿಕಾರಿಗಳ ಕಾರ್ಯಾಲಯದ ಸಭಾಂಗಣದಲ್ಲಿ ಶುಕ್ರವಾರ ನಡೆದ ಪ್ರದಾನ ಮಂತ್ರಿ ೧೫ ಅಂಶಗಳ ಕಾರ್ಯಕ್ರಮಗಳ ಅನುಷ್ಠಾನ ಜಿಲ್ಲಾ ಸಮಿತಿಯ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅಲ್ಪಸಂಖ್ಯಾತ ಸಮುದಾಯದ ಪ್ರತಿಯೊಂದು ವರ್ಗಾಗಳ ಕಲ್ಯಾಣ ಕೈಕೊಳ್ಳುವುದು ಪ್ರತಿ ಇಲಾಖೆಯ ಜವಾಬ್ದಾರಿಯಾಗಿದೆ ಎಂದ ಅವರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳಿಂದ ಅಂಗನವಾಡಿ ಮಕ್ಕಳ ಮಾಹಿತಿ ಪಡೆದು, ಒಂದನೇ ತರಗತಿ ಪ್ರವೇಶಕ್ಕೆ ಅರ್ಹವಿರುವ ಮಕ್ಕಳನ್ನು ಶಾಲೆಗಳಿಗೆ ಸೇರ್ಪಡೆಗೊಳಿಸುವಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಕ್ರಮ ವಹಿಸಬೇಕು ಎಂದರು.
ಮನೆ ಮನೆ ಸಮೀಕ್ಷೆ ನಡೆಸಿ ಮಕ್ಕಳನ್ನ ಗುರುತಿಸಿ ಶಾಲೆಗಳಿಗೆ ಸೇರಿಸುವಂತೆ ಸೂಚಿಸಬೇಕು. ಅದರಲ್ಲೂ ವಿಶೇಷವಾಗಿ ಅಲ್ಪಸಂಖ್ಯಾತ ಸಮುದಾಯದ ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ಜಾಗೃತಿ ಮೂಡಿಸಬೇಕು. ಯಾವುದೇ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು. ಪ್ರತಿ ಮಗುವಿಗೂ ಶಿಕ್ಷಣ ನೀಡುವುದು ಸರ್ಕಾರದ ಮುಖ್ಯ ಉದ್ದೇಶವಾಗಿದೆ ಎಂದರು. ಹಾಗೆಯೇ ನಾಗರಿಕ ಸೇವೆಗಳ ಎಲೆಕ್ಟ್ರಾನಿಕ್ ಡೆಲಿವರಿ ನಿರ್ದೇಶನಾಲಯ (ಇಆಅS) ಮೊಬೈಲ್ ಅಪ್ಲಿಕೇಶನ್ ನ್ನು ಅಭಿವೃದ್ಧಿಪಡಿಸಿದೆ, ಶಾಲೆಯಿಂದ ಹೊರಗುಳಿದಿರುವ ಮಕ್ಕಳನ್ನು ಸಮೀಕ್ಷೆ ಮಾಡುತ್ತದೆ. ಆ ಮೂಲಕ ಮಕ್ಕಳನ್ನು ಗುರುತಿಸಿ ಮರಳಿ ಶಾಲೆಗೆ ತರುವಂತಹ ಕಾರ್ಯವಾಗಬೇಕು. ಶಾಲೆಗಳಲ್ಲಿ ಮಕ್ಕಳಿಗೆ ಶುದ್ಧ ಕುಡಿಯುವ ನೀರು, ಹಾಗೂ ಶೌಚಾಲಯಗಳ ದುರಸ್ತಿ ಜೊತೆಗೆ ಸ್ವಚ್ಛವಾಗಿ ಇಟ್ಟುಕೊಳ್ಳಬೇಕು ಎಂದರು.
ಕೌಶಲ್ಯ ಅಭಿವೃದ್ಧಿ ಇಲಾಖೆ ವತಿಯಿಂದ ಜಿಲ್ಲೆಯಲ್ಲಿನ ಕೌಶಲ್ಯ ಘಟಕಗಳನ್ನು ಗುರುತಿಸಿ ಯುವಕರ ಕೌಶಲ್ಯಕ್ಕೆ ಅನುಗುಣವಾಗಿ ಸೂಕ್ತ ತರಬೇತಿ ನೀಡಿ ಉದ್ಯೋಗಸ್ಥರನ್ನಾಗಿ ಮಾಡಬೇಕು. ಹಾಗೆಯೇ ಜಿಲ್ಲೆಯಲ್ಲಿ ಕಟ್ಟಡ ಕಾರ್ಮಿಕರಿಗೆ ಇರುವಂತಹ ಸೌಲಭ್ಯಗಳ ಕುರಿತು ಜಾಗೃತಿ ಮೂಡಿಸಿ, ಅದರ ಸೌಲಭ್ಯಗಳು ಅವರಿಗೆ ತಲುಪಿಸುವಲ್ಲಿ ಕ್ರಮ ವಹಿಸಬೇಕು. ಕೊಳಗೇರಿ ಪ್ರದೇಶಗಳಲ್ಲಿನ ಮಕ್ಕಳು ಹಾಗೂ ವಿಕಲಚೇತನರಿಗಾಗಿ ಸರಕಾರದಿಂದ ಜಾರಿಯಲ್ಲಿರುವ ವಿವಿಧ ಯೋಜನೆಗಳು ಸಮರ್ಪಕವಾಗಿ ಸಿಗುತ್ತಿಲ್ಲ ಎಂಬುದರ ಕುರಿತು ಮಾಹಿತಿ ಬಂದಿದ್ದು, ಹೀಗಾಗಿ ಸಂಬಂಧಪಟ್ಟ ಅಧಿಕಾರಿಗಳು ಜಿಲ್ಲೆಯ ಎಲ್ಲ ಕೋಳಗೇರಿ ಪ್ರದೇಶಗಳಿಗೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಿ,ಸಮೀಕ್ಷೆ ಮಾಡಿ ಪ್ರತಿಯೊಬ್ಬ ಫಲಾನುಭವಿಗಳಿಗೆ ಸೌಲಭ್ಯಗಳು ಸಿಗುವಂತಾಗಬೇಕು ಎಂದರು.
ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಅನುಕೂಲಕ್ಕಾಗಿ ಬ್ಯಾಂಕುಗಳಿಂದ ಎಜುಕೇಶನ್ ಲೋನ್ ಸಿಗುವಂತಾಗಬೇಕು. ಬ್ಯಾಂಕುಗಳು ಯಾವುದೇ ಕಾರಣಕ್ಕೂ ಎಜುಕೇಶನ್ ಲೋನ್ ನೀಡುವುದನ್ನು ನಿರಾಕರಿಸುವಂತಿಲ್ಲ. ಬ್ಯಾಂಕುಗಳ ಮಾರ್ಗಸೂಚಿ ಪ್ರಕಾರ ಸಾಲ ನೀಡಲು ಮುಂದಾಗಬೇಕು ಎಂದರು.
ಆಯೋಗಕ್ಕೆ ನೇಮಕವಾದಂತಹ ನಾಮನಿರ್ದೇಶಿತ ಸದಸ್ಯರುಗಳು ನಿಯಮಿತವಾಗಿ ಸಭೆಗಳನ್ನು ಮಾಡಿ, ತಮ್ಮ ತಮ್ಮ ಕ್ಷೇತ್ರದಲ್ಲಿನ ಸಮಸ್ಯೆಗಳನ್ನು ಆಲಿಸಿ ಆಯೋಗಕ್ಕೆ ಮಾಹಿತಿ ನೀಡಬೇಕು ಎಂದು ಸಲಹೆ ನೀಡಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಡಾ. ವಿಜಯ ಮಹಾಂತೇಶ್ ದಾನಮ್ಮನವರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರುಚಿ ಬಿಂದಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧ ವಂಟಗೋಡಿ, ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಅಲ್ಪಸಂಖ್ಯಾತ ಕಲ್ಯಾಣ ಆಯೋಗದ ಸದಸ್ಯರು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

