
ಹೆಚ್ಚಿನ ಬೆಲೆಗೆ ರಸಗೊಬ್ಬರ ಮಾರಾಟ-ಕ್ರಮಕ್ಕೆ ಆಗ್ರಹ
ಹಾವೇರಿ: ಜಿಲ್ಲೆಯಲ್ಲಿ ರಸಗೊಬ್ಬರ ಮಾರಾಟಗಾರರು ಯೂರಿಯಾ, ಡಿಎಪಿ ಹಾಗೂ ಕಾಂಪ್ಲೆಕ್ಸ್ ರಸಗೊಬ್ಬರವನ್ನು ನಿಗದಿತ ಎಂಆರ್ಪಿ ಬೆಲೆಗಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದು, ರೈತರಿಗೆ ಆರ್ಥಿಕ ಹೊರೆ ಮಾಡುತ್ತಿದ್ದಾರೆ. ಕೃಷಿ ಇಲಾಖೆ ಅಕಾರಿಗಳು ಅಂತಹ ಡೀಲರ್ಸ್ಗಳ ಪರವಾನಿಗೆ ರದ್ದುಪಡಿಸಿ, ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಕೆಆರ್ಎಸ್ ಪಕ್ಷದ ಜಿಲ್ಲಾ ಕಾರ್ಯದರ್ಶಿ ಈರಣ್ಣ ಬಾರ್ಕಿ ಒತ್ತಾಯಿಸಿದರು. ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಸಗೊಬ್ಬರ ಮಾರಾಟಗಾರರು ಗೊಬ್ಬರ ಪೂರೈಕೆಯಲ್ಲಿ ಕೃತಕ ಅಭಾವ ಸೃಷ್ಠಿಸಿ, ರೈತರಿಗೆ ನಿರಂತರವಾಗಿ ಮೋಸ ಮಾಡುತ್ತಿದ್ದಾರೆ. ಸಬ್ಸಿಡಿ ವ್ಯಾಪ್ತಿಗೆ ಬರುವ ಯೂರಿಯಾ, ಡಿಎಪಿ ರಸಗೊಬ್ಬರವನ್ನು ಎಂಆರ್ಪಿಗಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದರೂ, ಕ್ರಮಕೈಗೊಳ್ಳಬೇಕಾದ ಕೃಷಿ ಇಲಾಖೆ ಅಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ.
ಅಕ್ರಮ ನಡೆಸುತ್ತಿರುವ ಡೀಲರ್ಗಳಿಗೆ ಪರೋಕ್ಷವಾಗಿ ಬೆಂಬಲ ನೀಡುತ್ತಿದ್ದಾರೆಂಬ ಅನುಮಾನ ವ್ಯಕ್ತವಾಗುತ್ತಿದೆ. ರಸಗೊಬ್ಬರ ವಿತರಕರು ೪೫ ಕೆಜಿ ತೂಕದ ಒಂದು ಚೀಲ ಯೂರಿಯಾಗೆ ಸಬ್ಸಿಡಿ ೨೬೬ ರೂ.ಇದ್ದು, ೩೨೦ ರೂ.ಗಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ೫೦ಕೆಜಿ ತೂಕದ ಡಿಎಪಿಗೆ ೧,೩೫೦ ರೂ.ಇದ್ದರೆ, ೧,೪೫೦ ರೂ.ಕ್ಕಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಏತನ್ಮಧ್ಯೆ ಅನವಶ್ಯಕ ಲಿಂಕ್ ಪ್ರಾಡೆಕ್ಟ್ನ್ನು ಖರೀದಿಸುವಂತೆ ರೈತರಿಗೆ ಒತ್ತಡ ಹಾಕಿ, ಹಣ ಸುಲಿಗೆ ಮಾಡುತ್ತಿದ್ದಾರೆಂದು ಆರೋಪಿಸಿದರು.
ಕೃಷಿ ಇಲಾಖೆ ಹಾಗೂ ಜಿಲ್ಲಾಡಳಿತ ಪ್ರಸ್ತುತ ಮುಂಗಾರಿನಲ್ಲಿ ಅಗತ್ಯವಿರುವಷ್ಟು ಗೊಬ್ಬರವನ್ನು ರೈತರಿಗೆ ಪೂರೈಸಬೇಕು. ಎಲ್ಲ ರಸಗೊಬ್ಬರ ಮಾರಾಟಗಾರರು ಅಂಗಡಿಗಳಲ್ಲಿ ಗೊಬ್ಬರದ ದರಪಟ್ಟಿ, ದಾಸ್ತಾನು ವಿವರದ ಫಲಕಗಳನ್ನು ಅಳವಡಿಸಬೇಕು. ಸಾರ್ವಜನಿಕ ರೈತರಿಗೆ ರಸಗೊಬ್ಬರ ಅಕ್ರಮಗಳ ಬಗ್ಗೆ ದೂರು ನೀಡಲು ಸಂಬಂಧಪಟ್ಟ ತಾಲೂಕು ಕೃಷಿ ಅಕಾರಿಗಳ ಮೊಬೈಲ್ ನಂಬರ್ನ್ನು ಸೂಚನಾ ಫಲಕದಲ್ಲಿ ನಮೂದಿಸಬೇಕು. ರಸಗೊಬ್ಬರ ಮಾರಾಟ ಕಂಪನಿಗಳು ಅಂಗಡಿಗಳ ಬಾಗಿಲಿಗೆ ತಲುಪುತ್ತವೆಯಾ ಎಂಬುದರ ಬಗ್ಗೆ ಖಾತ್ರಿಪಡಿಸಿಕೊಳ್ಳಬೇಕು. ರಸಗೊಬ್ಬರ ಜತೆಗೆ ಲಿಂಕ್ ಖರೀದಿಸಲು ಒತ್ತಡ ಹೇರುವ ಪ್ರಕ್ರಿಯೆ ನಿಲ್ಲಿಸಬೇಕು. ನಿಯಮ ಮೀರಿ ಮಾರಾಟ ಮಾಡುವವರ ಲೈಸೆನ್ಸ್ ರದ್ದುಪಡಿಸಬೇಕೆಂದು ಆಗ್ರಹಿಸಿದರು.
ರೈತರಿಗಾಗಿ ಸಹಾಯವಾಣಿ: ದೇಶದ ಬೆನ್ನೆಲುಬು ಆಗಿರುವ ರೈತರ ಸಹಾಯಕ್ಕೆ ಕೆಆರ್ಪಕ್ಷ ನಿಂತಿದ್ದು, ರೈತರಿಗೆ ರಸಗೊಬ್ಬರ ಪೂರೈಕೆಯಲ್ಲಾಗುವ ಮೋಸ, ಅಕ್ರಮವನ್ನು ನಿಲ್ಲಿಸಲು ನಿರಂತರ ಹೋರಾಡುತ್ತದೆ. ಆಸಕ್ತ ರೈತರು ಬಿತ್ತನೆ ಬೀಜ, ರಸಗೊಬ್ಬರದ ಅಕ್ರಮ ಕಂಡುಬಂದರೆ ಪಕ್ಷದ ಸಹಾಯವಾಣಿ ಸಂಖ್ಯೆ ೭೩೪೯೫ ೭೭೧೩೦ಕ್ಕೆ ಕಾಲ್ ಮಾಡಿ ಮಾಹಿತಿ ನೀಡಬೇಕು. ಆಗ ಅಕ್ರಮ ತಡೆಗಟ್ಟಿ ರೈತರಿಗೆ ಗೊಬ್ಬರ ಪೂರೈಸಲು ಕೆಆರ್ಎಸ್ ಸಹಾಯ ಮಾಡುತ್ತದೆ ಎಂದು ಈರಣ್ಣ ಬಾರ್ಕಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಉಪಾಧ್ಯಕ್ಷ ಧರ್ಮಣ್ಣ ಉಪ್ಪಾರ, ಜಿಲ್ಲಾ ಕಾರ್ಯದರ್ಶಿ ಚರಣರಾಜ ರೊಡ್ಡನವರ, ಹನುಮಂತಪ್ಪ ದುಗ್ಗತ್ತಿ, ಕರಬಸಪ್ಪ ಕುಸಗೂರ, ಶಬ್ಬೀರ ಅಹ್ಮದ್, ಉಮೇಶ ಉಪಸ್ಥಿತರಿದ್ದರು.

