ಅರ್ಹ ಕಾರ್ಮಿಕರಿಗೆ ನ್ಯಾಯ ದೊರೆಯದಿದ್ದರೇ ಕಾರ್ಮಿಕ ಇಲಾಖೆಯ ಕಚೇರಿಗೆ ಬೀಗ: ದಾವಲಸಾಬ
ಹಾವೇರಿ: ನಕಲಿ ಕಾರ್ಡಗಳ ರದ್ದತಿಯ ಹೆಸರಿನಲ್ಲಿ ಹಾವೇರಿ ಜಿಲ್ಲೆಯಲ್ಲಿ ಕಾರ್ಮಿಕ ಇಲಾಖೆ ನೈಜ ಕಾರ್ಮಿಕರಿಗೆ ಅನ್ಯಾಯ ಮಾಡಿದೆ. ಕಾರ್ಮಿಕ ಇಲಾಖೆಯ ಅಧಿಕಾರಿಗಳು ಯಾವುದೇ ಕಾರ್ಮಿಕರ ಮನೆಗಳಿಗೆ ಭೇಟಿ ನೀಡದೇ ಕಚೇರಿಯಲ್ಲಿ ಕುಳಿತು ನೈಜ ಕಾರ್ಮಿಕರ ಕಾರ್ಡುಗಳನ್ನು ರದ್ದುಗೊಳಿಸಿದ್ದಾರೆ. ಕಾರ್ಮಿಕ ಇಲಾಖೆ ಜಾರಿಗೊಳಿಸಿದ ಯಾವೊಂದು ಸೌಲಭ್ಯಗಳು ನೈಜ ಹಾಗೂ ಅರ್ಹ ಕಾರ್ಮಿಕರಿಗೆ ದೊರೆಯುತ್ತಿಲ್ಲ. ಅರ್ಹ ಕಾರ್ಮಿಕರಿಗೆ ೮ದಿನಗಳೊಳಗೆ ನ್ಯಾಯ ದೊರೆಯದಿದ್ದರೇ ಹಾವೇರಿಯ ಕಾರ್ಮಿಕ ಇಲಾಖೆಯ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಲಾಗುವುದು ಎಂದು ಜಿಲ್ಲಾ ಬಿಲ್ಡಿಂಗ್ ಕಟ್ಟಡ ಕಟ್ಟುವ ಕಾಂರ್ಮಿಕರ ಸಂಘದ ಅಧ್ಯಕ್ಷ ದಾವಲಸಾಬ ಹಿರೇಮೂಗದೂರು ಎಚ್ಚರಿಕೆ ನೀಡಿದ್ದಾರೆ.
ಶನಿವಾರ ಇಲ್ಲಿನ ಪತ್ರಿಕಾಭವನದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಹಾವೇರಿಯಲ್ಲಿ ಬಿಲ್ಡಿಂಗ್ ಕಟ್ಟಡ ಕಟ್ಟುವ ಕಾರ್ಮಿಕರ ಸಂಘವು ಕಾರ್ಮಿಕ ಇಲಾಖೆಯಲ್ಲಿ ನೊಂದಾವಣಿಯಾಗಿ ಕಳೆದ ೧೭ ವರ್ಷಗಳಿಂದ ಅಸ್ತಿತ್ವದಲ್ಲಿದ್ದು, ಕಾರ್ಮಿಕರ ಹಿತ ಕಾಯುತ್ತಾ ಬರುತ್ತಿದೆ. ಸಂಘದಲ್ಲಿ ೨೭೫೨ ಕಟ್ಟಡ ಮತ್ತು ಇತರೇ ನಿರ್ಮಾಣದಲ್ಲಿ ತೊಡಗಿಸಿ ಕೊಂಡಿರುವ ಕಾರ್ಮಿಕರು ಸದಸ್ಯರಿದ್ದಾರೆ. ಇವರಿಗೆ ಕಾರ್ಮಿಕ ಇಲಾಖೆ ಕಾರ್ಮಿಕ ಕಾರ್ಡುಗಳನ್ನು ನೀಡಿತ್ತು. ನಮ್ಮ ಸಂಘದ ಸದಸ್ಯತ್ವ ಪಡೆದಿರುವ ಕಾರ್ಮಿಕರು ಕಾರ್ಮಿಕ ಇಲಾಖೆಗೆ ಲಕ್ಷಾಂತರ ರೂಗಳನ್ನು ಸದಸ್ಯತ್ವ ಶುಲ್ಕವೆಂದು ಇಲಾಖೆಗೆ ಭರಿಸುತ್ತಾ ಬಂದಿದ್ದೇವೆ.
ಜಿಲ್ಲೆಯಲ್ಲಿ “ನಕಲಿ ಕಾರ್ಮಿಕರು, ಕಾರ್ಮಿಕರ ಕಾರ್ಡುಗಳನ್ನು ಹೊಂದಿದ್ದಾರೆಂಬ ಆರೋಪದ ಹಿನ್ನಲೆಯಲ್ಲಿ ಕಾರ್ಡುಗಳನ್ನು ರದ್ದು ಪಡಿಸಿದ ವೇಳೆ ನಮ್ಮ ಸಂಘದ ೨೦೦೦ಸಾವಿರ ನೈಜ ಕಾರ್ಮಿಕರ ಕಾರ್ಡುಗಳನ್ನು ರದ್ದು ಪಡಿಸಿದ್ದಾರೆ. ಕಾರ್ಮಿಕರ ಮನೆಗಳಿಗೆ ಭೇಟಿ ನೀಡದೇ ಕಾರ್ಮಿಕ ಇಲಾಖೆಯ ಅಧಿಕಾರಿಗಳು ಕಚೇರಿಯಲ್ಲಿ ಕುಳಿತು ನೈಜ ಕಾರ್ಮಿಕರ ಕಾರ್ಡುಗಳನ್ನು ರದ್ದು ಪಡಿಸಿದ್ದಾರೆ”. ನಮ್ಮ ಸಂಘದ ೧೪ ಜನ ಪಿಂಚಣಿ ಕಾರ್ಮಿಕರಿದ್ದು, ಇವರಿಗೆ ಕಳೆದ ೬ ತಿಂಗಳಿಂದ ಇವರಿಗೆ ಪಿಂಚಣಿ ಹಣ ಸ್ಥಗಿತಗೊಳಿಸಲಾಗಿದೆ. ಮದುವೆ ಸಹಾಯಧನ ಕೋರಿ ೨೦೨೨ರಲ್ಲಿ ೨೭ ಜನ ಕಾರ್ಮಿಕರು ಕಾರ್ಮಿಕ ಇಲಾಖೆಗೆ ಮನವಿ ಸಲ್ಲಿಸಿದ್ದರು. ಆದರೆ ಈವರೆಗೂ ಇವರಿಗೆ ಮದುವೆ ಸಹಾಂiiಧನ ಬಂದಿಲ್ಲ. ಅನಾರೋಗಕ್ಕೆ ತುತ್ತಾದ ಕಾರ್ಮಿಕರು ಸಹಾಯಧನಕ್ಕಾಗಿ ಸಲ್ಲಿಸಿದ ಅರ್ಜಿಗಳನ್ನು ನಕಲಿ ಕಾರ್ಡಗಳ ಹೆಸರಿನಲ್ಲಿ ತಿರಸ್ಕರಿಸಲಾಗಿದೆ.
ಈ ಬಗ್ಗೆ ಪರಿಶೀಲಿಸಿ ನೈಜ ಕಾರ್ಮಿಕರ ನ್ಯಾಯ ಒದಗಿಸಲು ಹಲವಾರು ಬಾರಿ ಮನವಿ ಮಾಡಿದರು, ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಈ ಬಗ್ಗೆ ಬೆಂಗಳೂರಿಗೆ ತೆರಳಿ ಕಾರ್ಮಿಕ ಇಲಾಖೆಯ ಆಯುಕ್ತರಿಗೆ, ಕಾರ್ಮಿಕ ಸಚಿವಸಂತೋಷ ಲಾಡ್ ಅವರಿಗೆ ಮನವಿ ಅರ್ಪಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಬದಲಾಗಿ ಕಳೆದ ಮೂರು ವರ್ಷಗಳಿಂದ ನೈಜ ಕಾರ್ಮಿಕರಿಗೆ ನಿರಂತರವಾಗಿ ಅನ್ಯಾಯವಾಗುತ್ತಿದೆ ಎಂದು ಅವರು ಈ ಬಗ್ಗೆ ದಾಖಲೆಗಳನ್ನು ಪ್ರದರ್ಶಿಸಿ, ಕಾರ್ಮಿಕ ಸಚಿವ ಸಂತೋಷ ಲಾಡ್ ಅವರು ಕುದ್ದಾಗಿ ಹಾವೇರಿಗೆ ಭೇಟಿ ನೀಡಿ ಕಾರ್ಡುರದ್ದಾಗಿರುವವರ ಮನೆಗಳಿಗೆ ಭೇಟಿ ಪರಿಶೀಲಿಸಬೇಕು.ಈ ಬಗ್ಗೆ ವಿಶೇಷ ಅಧಿಕಾರಿಗಳನ್ನು ನೇಮಿಸಿ ಕಾರ್ಡು ರದ್ದು ಪಡಿಸಿರುವ ಹಗರಣವನ್ನು ತನಿಖೆಗೆ ಒಳಪಡಿಸಿ ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕಾರ್ಮಿಕ ಸಂಘದ ಉಪಾಧ್ಯಕ್ಷ ನಾಗರಾಜ ಮಲಗೋಡ ಮಾತನಾಡಿ ಕಾರ್ಮಿಕ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಾರ್ಮಿಕರ ಹಿತರಕ್ಷಣೆ ಕುರಿತು ಕೆಲಸ ಮಾಡುತ್ತಿಲ್ಲ. ಕಾರ್ಮಿಕರ ಮದುವೆ, ಅಪಘಾತದಿಂದಾಗುವ ಸಾವು-ನೋವು, ಸಹಜ ಮರಣ ಸಂಭವಿಸಿದಾಗ ನೀಡುವ ಆರ್ಥಿಕ ನೆರವು, ವೃದ್ಧಾಪ್ಯ ವೇತನ, ಪಿಂಚಣಿ ಹಾಗೂ ವಿದ್ಯಾರ್ಥಿವೇತನದ ಮೊತ್ತ ಬಿಡುಗಡೆ ಮಾಡುತ್ತಿಲ್ಲ. ಕಾರ್ಮಿಕ ಅವಲಂಬಿತರ ಆಸ್ಪತ್ರೆಯ ಚಿಕಿತ್ಸಾ ವೆಚ್ಚದ ಮರು ಪಾವತಿಮಾಡಿರುವುದಿಲ್ಲ. ಕಾರ್ಮಿಕರ ವಸತಿ ಯೋಜನೆಗೆ ಸಾಲ ಮತ್ತು ಸಹಾಯಧನವನ್ನು ತ್ವರಿತವಾಗಿ ಬಿಡುಗಡೆಮಾಡಬೇಕು. ಮರಣ ಹೊಂದಿದ ಕಾರ್ಮಿಕರ ಪತ್ನಿಗೆ ವಿಧವಾ ವೇತನ ನೀಡಬೇಕು ಮತ್ತು ಮರಣ ಹೊಂದಿದ ಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿವೇತನ ನೀಡಬೇಕು. ಅವರ ಆರ್ಥಿಕ ಪುನಃಶ್ವೇತನಕ್ಕಾಗಿ ಕ್ರಮ ಕೈಗೊಳ್ಳಬೇಕು.
ಕಾರ್ಮಿಕರು ಮಕ್ಕಳ ಮದುವೆಗೆ ನೀಡುವ ೫೦,೦೦೦/ ೬೦೦೦೦ ರೂ ನೆರವು ಪಡೆಯಬೇಕಿದ್ದರೆ ೧೫,೦೦೦ ರಿಂದ ೨೦೦೦೦ ಸಾವಿರ ಲಂಚ ಕೇಳುತ್ತಾರೆ. ಅಂದರೆ ಅರ್ಜಿ ಹಾಕಿದ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಹಣ ನೇರವಾಗಿ ವರ್ಗಾವಣೆ ಆಗುವುದರಿಂದ ಲಂಚದ ಹಣವನ್ನು ಮೊದಲೇ ಒಪ್ಪಿಸಬೇಕು. ಇಲ್ಲದಿದ್ದರೆ ಅವರ ಅರ್ಜಿ ಶೀಘ್ರ ಮಂಜೂರಾಗುವುದಿಲ್ಲ. ಕಾರ್ಮಿಕರು ಸಹಜ ಸಾವಿಗೆ ಈಡಾದರೂ ಅಂತ್ಯಕ್ರಿಯೆಗೆ ರೂ ೪,೦೦೦ ಸೇರಿ ಅವಲಂಬಿತರಿಗೆ ರೂ ೭೪,೦೦೦ ಪರಿಹಾರ ನೀಡಲಾಗುತ್ತದೆ. ಈ ಸೌಲಭ್ಯ ಕೊಡಿಸಲೂ ಲಂಚ ಪಡೆಯುವ ಏಜೆಂಟರು ಇದ್ದಾರೆ. ಇಂಥವರಿಗೆ ‘ಪಾಲು’ ಪಡೆಯುವ ಇಲಾಖೆಯ ಅಧಿಕಾರಿಗಳು ಬೆಂಬಲವಾಗಿ ನಿಂತಿದ್ದಾರೆ ಎಂದು ಆರೋಪಿಸಿದರು.
ಕಾರ್ಮಿಕರ ನೋಂದಣಿ ಪ್ರಕ್ರಿಯೆಯಿಂದ ಹಿಡಿದು ಸೌಲಭ್ಯ ದೊರಕಿಸಿಕೊಡುವ ಹಂತದವರೆಗೂ ಮಧ್ಯವರ್ತಿಗಳ ಹಾವಳಿ ಮಿತಿಮೀರಿದೆ. “ಹಾವೇರಿಜಿಲ್ಲೆಯಲ್ಲಿ ಗಲ್ಲಿಗೊಂದರಂತೆ ಕಾರ್ಮಿಕ ಕಾರ್ಡುಗಳನ್ನು ಮಾಡಿಕೊಡಲಾಗುವುದು” ಎನ್ನುವ ನಾಮ ಫಲಕದ ಅಂಗಡಿಗಳು ತೆರೆದಿರುವುದೇ ಇದಕ್ಕೆ ಸಾಕ್ಷಿಯಾಗದೆ. ಒಂದರ್ಥದಲ್ಲಿ ಕಾರ್ಮಿಕರ ಸುಲಿಗೆ ನಡೆಯುತ್ತಿದೆ. ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸದೇ ಮಧ್ಯವರ್ತಿಗಳಿಗೆ ‘ಕುಮ್ಮಕ್ಕು’ ನೀಡುತ್ತಿದ್ದಾರೆ.
ಸೌಲಭ್ಯದ ಮಂಜೂರಾತಿ ಕೋರಿ ಏಜೆಂಟರ ಮೂಲಕ ಅರ್ಜಿ ಸಲ್ಲಿಸಿ, ಲಂಚದ ಬೇಡಿಕೆಯ ಹಣ ನೀಡಿದಲ್ಲಿ ಫಲಾನುಭವಿಯ ಖಾತೆಗೆ ಸೌಲಭ್ಯದ ಹಣ ನೇರವಾಗಿ ಸೇರುತ್ತದೆ. ಇಲ್ಲದಿದ್ದರೆ ಅರ್ಜಿಯನ್ನು ಯಾವುದಾದರೂ ಕಾರಣ ನೀಡಿ ತಿರಸ್ಕರಿಸಲಾಗುತ್ತದೆ. ಅರ್ಹ ಮತ್ತು ನೈಜ ಕಾರ್ಮಿಕರ ಕಾರ್ಡುಗಳನ್ನು ಮರು ಮಂಜೂರು ನೀಡಬೇಕು, ಕಾರ್ಮಿಕರ ಮದುವೆ, ಅಪಘಾತ ಸಂಭವಿಸುವ ಸಾವು, ಸಹಜ ಮರಣ ಸಂಭವಿಸಿದಾಗ ನೀಡುವ ಆರ್ಥಿಕ ನೆರವು, ವೃದ್ಧಾಪ್ಯ ವೇತನ, ಪಿಂಚಣಿ ಹಾಗೂ ವಿದ್ಯಾರ್ಥಿವೇತನದ ಮೊತ್ತ ಬಿಡುಗಡೆ ಮಾಡಬೇಕೆಂದು ೮ದಿನಗಳ ಗಡವನ್ನು ನೀಡುತ್ತೇವೆ. ನಮ್ಮ ಬೇಡಿಕೆಗೆ ಸ್ಪಂದಿಸದಿದ್ದರೇ ಕಾರ್ಮಿಕ ಇಲಾಖೆಯ ಅಧಿಕಾರಿಗಳ ಬೇಜವಾಬ್ದಾರಿತನ ಖಂಡಿಸಿ ಹಾಗೂ ಕಾರ್ಮಿಕ ಇಲಾಖೆಯಿಂದ ವಿವಿಧ ಸೌಲಭ್ಯಗಳ ಈಡೇರಿಕೆಗೆ ಆಗ್ರಹಿಸಿ ಜಿಲ್ಲಾಡಳಿತ ಭವನದಲ್ಲಿರುವ ಕಾರ್ಮಿಕ ಇಲಾಖೆ ಕಚೇರಿಗೆ ಬೀಗ ಜಡಿದು ಮುತ್ತಿಗೆ ಹಾಕಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕಾರ್ಮಿಕ ಸಂಘದ ಮುಖಂಡರುಗಳಾದ ಸಂಜೀವಪ್ಪ ಹರಪನಹಳ್ಳಿ, ನಜೀರಸಾಬ ಪಟೇಲ, ಹಸನಸಾಭ ಗಣಜೂರ, ಬಸಯ್ಯ ಕುಲಕರ್ಣಿ, ಮಹಮ್ಮದ ಸಾಬ ದೇವಿಹೊಸೂರ, ಪ್ರಕಾಶ ಅರಸನಾಳ, ಮಾರುತಿ, ಸುಭಾನಿ ಪಟೇಲ ಮತ್ತಿತರರು ಇದ್ದರು.