ಕಬ್ಬು ಬೆಳೆಗಾರರ ಹೋರಾಟಕ್ಕೆ ಕೊನೆಗೂ ಜಯ!
ಮಂಗಳವಾರ ಬೆಳಗಿನಜಾವ ೩-೨೫ರವರೆಗೆ ಸಭೆ
ಟನ್‌ಗೆ ₹3,225 ದರ ನಿಗದಿ; 14 ಗಂಟೆಗಳ ಸುದೀರ್ಘ ಸಭೆಯಲ್ಲಿ ಒಪ್ಪಂದ
ಹಾವೇರಿ: ಕಬ್ಬಿನ ಬೆಲೆ ನಿಗದಿಗಾಗಿ ಹಾವೇರಿಯಲ್ಲಿ ರೈತರು ನಡೆಸುತ್ತಿದ್ದ ಹೋರಾಟಕ್ಕೆ ಕೊನೆಗೂ ಫಲ ದೊರೆತಿದೆ. ಸಕ್ಕರೆ ಸಚಿವ ರುದ್ರಪ್ಪ ಲಮಾಣಿ ನೇತೃತ್ವದಲ್ಲಿ ನಡೆದ ಸುದೀರ್ಘ ಸಭೆಯಲ್ಲಿ ಪ್ರತಿ ಟನ್ ಕಬ್ಬಿಗೆ ₹3,225 ದರ ನಿಗದಿಪಡಿಸುವ ಒಪ್ಪಂದಕ್ಕೆ ಬರಲಾಗಿದೆ.
ನಗರದ ದೇವಗಿರಿ ಸಮೀಪದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಮಧ್ಯಾಹ್ನ 12 ಗಂಟೆಗೆ ಆರಂಭವಾದ ಸಭೆ, ಸತತ 14 ಗಂಟೆಗಳ ಚರ್ಚೆ ಹಾಗೂ ಹಗ್ಗಜಗ್ಗಾಟದ ಬಳಿಕ ಮಂಗಳವಾರ ನಸುಕಿನ ಜಾವ ೩-೨೫ ಗಂಟೆಗೆ ಅಂತ್ಯಗೊಂಡಿತು. ರೈತ ಮುಖಂಡರು ಮತ್ತು ಸಕ್ಕರೆ ಕಾರ್ಖಾನೆ ಮಾಲೀಕರ ನಡುವೆ ಹಲವು ಸುತ್ತಿನ ಮಾತುಕತೆ ನಡೆದ ಬಳಿಕ ಅಂತಿಮವಾಗಿ ದರ ನಿಗದಿಯಾಯಿತು.
₹3,600ಕ್ಕೆ ರೈತರ ಪಟ್ಟು; ₹3,100ಕ್ಕೆ ಮಾಲೀಕರ ಹಠ
ಸಭೆಯ ಆರಂಭದಲ್ಲಿ ಪ್ರತಿ ಟನ್ ಕಬ್ಬಿಗೆ ₹3,600 ನೀಡಬೇಕೆಂದು ರೈತರು ಆಗ್ರಹಿಸಿದ್ದರು. ಕನಿಷ್ಠ ₹3,300 ದರ ನೀಡಲೇಬೇಕೆಂದು ಹೋರಾಟಗಾರರು ಪಟ್ಟು ಹಿಡಿದಿದ್ದರು. ಆದರೆ, ₹3,100ಕ್ಕಿಂತ ಹೆಚ್ಚಿನ ದರ ನೀಡಲು ಸಾಧ್ಯವಿಲ್ಲ ಎಂದು ಸಕ್ಕರೆ ಕಾರ್ಖಾನೆ ಮಾಲೀಕರು ತಮ್ಮ ನಿಲುವು ವ್ಯಕ್ತಪಡಿಸಿದ್ದರು.
ರೈತರ ಬೇಡಿಕೆ ಮತ್ತು ಕಾರ್ಖಾನೆ ಮಾಲೀಕರ ನಿಲುವಿನ ನಡುವೆ ಸುದೀರ್ಘ ಹಗ್ಗಜಗ್ಗಾಟ ನಡೆಯಿತು. ಹಲವು ಸುತ್ತಿನ ಚರ್ಚೆಗಳ ನಂತರ ಪ್ರತಿ ಟನ್ ಕಬ್ಬಿಗೆ ₹3,225 ನೀಡಲು ಒಪ್ಪಂದ ಮಾಡಿಕೊಳ್ಳಲಾಯಿತು.
ರಿಕವರಿ ಪ್ರಮಾಣದ ವಿಚಾರವೂ ಚರ್ಚೆ
ಬೆಳಗಾವಿ ಭಾಗದಲ್ಲಿ ಕಬ್ಬಿನ ರಿಕವರಿ ಪ್ರಮಾಣ ಶೇ.11ಕ್ಕಿಂತ ಹೆಚ್ಚಿದ್ದರೆ, ಹಾವೇರಿ ಜಿಲ್ಲೆಯಲ್ಲಿ ಶೇ.9.44ರಷ್ಟಿದೆ ಎಂದು ಕಾರ್ಖಾನೆ ಮಾಲೀಕರು ಸಭೆಯಲ್ಲಿ ವಾದಿಸಿದ್ದರು. ಕಡಿಮೆ ರಿಕವರಿ ಪ್ರಮಾಣವನ್ನು ಉಲ್ಲೇಖಿಸಿ ರೈತರ ಬೇಡಿಕೆಯಷ್ಟು ದರ ನೀಡಲು ಮಾಲೀಕರು ಹಿಂದೇಟು ಹಾಕಿದ್ದರು. ಈ ವಿಚಾರವೂ ಸಭೆಯಲ್ಲಿ ಪ್ರಮುಖ ಚರ್ಚೆಯ ವಿಷಯವಾಗಿತ್ತು.
14 ಗಂಟೆಗಳ ಕಾಲ ಮುಂದುವರಿದ ಹೋರಾಟದ ಕಾವು
ಸಕ್ಕರೆ ಸಚಿವ ರುದ್ರಪ್ಪ ಲಮಾಣಿ, ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ ನೇತೃತ್ವದಲ್ಲಿ ಸಭೆ ನಡೆಯಿತು. ರೈತ ಮುಖಂಡ ಚನ್ನಪ್ಪ ಪೂಜಾರಿ ಸೇರಿದಂತೆ 30ಕ್ಕೂ ಹೆಚ್ಚು ರೈತ ಮುಖಂಡರು ಭಾಗವಹಿಸಿದ್ದರು.
ಸಭೆ ಮುಗಿಯುವವರೆಗೂ ಯಾರೂ ಹೊರಹೋಗದಂತೆ ರೈತರು ಪ್ರತಿಭಟನೆ ಮುಂದುವರಿಸಿದ್ದರು. ಸಚಿವರು, ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಕಾರ್ಖಾನೆ ಮಾಲೀಕರು ಸಭೆಯಿಂದ ಹೊರಹೋಗದಂತೆ ರೈತರು ಪಟ್ಟು ಹಿಡಿದಿದ್ದರು. ಜಿಲ್ಲಾಧಿಕಾರಿ ಕಚೇರಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳಿಗೆ ಮುಳ್ಳಿನ ಬೇಲಿ ಹಾಕಿ ಬಂದ್ ಮಾಡಲಾಗಿತ್ತು.
ರೈತರ ಪಟ್ಟು, ಕಾರ್ಖಾನೆ ಮಾಲೀಕರ ವಾದ ಹಾಗೂ ಸತತ 14 ಗಂಟೆಗಳ ಮಾತುಕತೆಯ ಬಳಿಕ ಕೊನೆಗೂ ಕಬ್ಬಿನ ದರ ಅಂತಿಮಗೊಂಡಿದೆ. ದೀರ್ಘಕಾಲದಿಂದ ನ್ಯಾಯಯುತ ಬೆಲೆಗಾಗಿ ಹೋರಾಟ ನಡೆಸುತ್ತಿದ್ದ ಹಾವೇರಿ ಜಿಲ್ಲೆಯ ಕಬ್ಬು ಬೆಳೆಗಾರರಲ್ಲಿ ಈ ಒಪ್ಪಂದ ಹೊಸ ನಿರೀಕ್ಷೆ ಮೂಡಿಸಿದೆ…..



