ನೆರವಿನ ನಿರೀಕ್ಷೆಯಲ್ಲಿ ಗಾಯಾಳು, ಪತ್ರಿಕಾ ವಿತರಕ ಸಂಜೀವ ಎಳುಕೊಳ್ಳದ
ಹಾವೇರಿ: ಕಳೆದ ಹತ್ತಾರು ವರ್ಷಗಳಿಂದ ಹಾವೇರಿನಗರದಲ್ಲಿ ಪತ್ರಿಕಾವಿತರಕನಾಗಿ ಕರ್ತವ್ಯ ನಿರ್ವಹಿಸುತ್ತಿರುವ ಸಂಜೀವ ಮಲ್ಲಪ್ಪ ಎಳುಕೊಳ್ಳದ ಕಳೆದ ತಿಂಗಳ ಏಪ್ರೀಲ್-೨೮ರಂದು ನಡೆದ ಬೈಕ್ ಅಪಘಾತದಲ್ಲಿ ತೀವೃವಾಗಿ ಗಾಯಗೊಂಡಿದ್ದು, ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾರೆ.
ಸಂಜೀವ ಎಳುಕೊಳ್ಳದ ಏ.೨೮ರಂದು ಹಾವೇರಿಯಿಂದ ತಮ್ಮ ಸ್ವಂತ ಊರಾದ ಮಡ್ಲೂರುಗ್ರಾಮಕ್ಕೆ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ತಾಲೂಕಿನ ಕಬ್ಬೂರುಗ್ರಾಮದ ಹೊಂಡದ ಬಳಿ ಚಿಕ್ಕಬಾಸೂರ ಕಡೆಯಿಂದ ಸೋಮಶೇಖರ ಬಣಕಾರ ಎನ್ನುವ ಯುವಕ ಬೈಕ್‌ನ್ನು ನಿರ್ಲಕ್ಷತನದಿಂದ ನಡೆಯಿಸಿಕೊಂಡು ಬಂದು ಸಂಜೀವನ ಬೈಕ್‌ಗೆ ಡಿಕ್ಕಿಹೊಡೆದಿದ್ದಾನೆ. ಡಿಕ್ಕಿಯ ರಭಸಕ್ಕೆ ಸಂಜೀವನ ಬೈಕ್ ಸಂಪೂರ್ಣ ನುಜ್ಜುಗುಜ್ಜಾಗಿದ್ದು, ಅಪಘಾತದಲ್ಲಿ ಸಂಜೀವನ ಕಾಲಿನ ಮೂಳೆ ಮೂರುಕಡೆಗೆ ಮುರಿದಿದ್ದು, ಕೈ ಹಾಗೂ ಎದೆಗೆ ತೀವೃತರನಾದ ಗಾಯಗಳಾಗಿದ್ದವು.
ಗಾಯಾಳು ಸಂಜೀವ ಎಳುಕೊಳ್ಳದರನ್ನು ಚಿಕಿತ್ಸೆಗೆ ಹುಬ್ಬಳ್ಳಿಯ ಕಿಮ್ಸ್‌ಗೆ ದಾಖಲಿಸಲಾಗಿತ್ತು, ಸಂಜೀವನ ಆರೋಗ್ಯ ತಪಾಸಣೆ ನಡೆಸಿದ ವೈದ್ಯರು, ಸ್ಕ್ಯಾನಿಂಗ್ ವೈಗರೆಗಳನ್ನು ಪರೀಕ್ಷಿಸಿ ಸಂಜೀವನ ಕಾಲಿಗೆ ಮೂರುಕಡೆ ಶಸ್ತ್ರಚಿಕಿತ್ಸೆ ನಡೆಸಿ, ರಾಡ್ ಅಳವಡಿಸಿ, ೫೨ಹೊಲಿಗೆಗಳನ್ನು ಹಾಕುವ ಮೂಲಕ ಇತನಿಗೆ ಚಿಕಿತ್ಸೆ ನೀಡಿದ್ದರು. ಚಿಕಿತ್ಸೆಗೆ ನಿಧಾನವಾಗಿ ಚೇತರಿಸಿಕೊಳ್ಳುತ್ತಿರುವ ಸಂಜೀವ ವೈದ್ಯರ ಸಲಹೆಯ ಮೇರೆಗೆ ಇದೀಗ ಹಾವೇರಿಯಲ್ಲಿನ ತನ್ನ ಮನೆಯಲ್ಲಿಯೇ ವಿಶ್ರಾಂತಿ ಪಡೆಯುತ್ತಾ ಚಿಕಿತ್ಸೆ ಪಡೆಯುತ್ತಿದ್ದಾನೆ.
ಕರ್ತವ್ಯಪ್ರಜ್ಞೆಗೆ ಹೆಸರಾಗಿರುವ ಸಂಜೀವ: ಪತ್ರಿಕಾವಿತರಕನಾಗಿ ಸಕಾಲಕ್ಕೆ ಪತ್ರಿಕೆಗಳನ್ನು ಓದುಗರ ಮನೆಗಳಿಗೆ ತಲುಉವ ಮೂಲಕ ಓದುಗರ ಹಾಗೂ ಪತ್ರಿಕೆಗಳ ಸಂಪಾದಕರ ವಿಶ್ವಾಸಗಳಿಸಿದ್ದು, ಕೊರೋನಾ ಸಂದರ್ಭದಲ್ಲಿಯು ಸಹ ಸಂಜೀವ ಎಳುಕೊಳ್ಳದ ಎದೆಗುಂದದೇ ನಸುಕಿನ ಜಾವದಲ್ಲಿ ಪತ್ರಿಕೆಗಳನ್ನು ವಿತರಿಸಿದ್ದರು. ಆ ಸಂದರ್ಭದಲ್ಲಿ ಸಂಜೀವ ಅವರ ತಾಯಿ ನಿಧನರಾಗಿದ್ದರು. ಒಂದು ಕಡೆ ಮನೆಯಲ್ಲಿ ಹೆತ್ತತಾಯಿ ಸಾವನ್ನಪ್ಪಿದ್ದರೂ ಸಹ ತಾಯಿಯ ಶವವನ್ನು ಮನೆಯಲ್ಲಿ ಬಿಟ್ಟು ಪತ್ರಿಕೆಗಳನ್ನು ಸಕಾಲಕ್ಕೆ ಓದುಗರಿಗೆ ತಲುಪಿಸಿ ನಂತರ ತನ್ನ ತಾಯಿಯ ಅಂತ್ಯ ಸಂಸ್ಕಾರದಲ್ಲಿ ಸಂಜೀವ ಪಾಲ್ಗೊಂಡಿದ್ದರು. ಈ ಘಟನೆ ಪತ್ರಿಕಾ ವಿತರಕನ ಬದ್ದತೆಗೆ ಸಾಕ್ಷಿಯಾಗಿದೆ.
ಇದೀಗ ಅಪಘಾತದಲ್ಲಿ ತೀವೃವಾಗಿ ಗಾಯಗೊಂಡು ನರಳುತ್ತಿರುವ ೩೮ ವಯೋಮಾನದ ಸಂಜೀವ ಎಳುಕೊಳ್ಳದಗೆ ನೆರವಿನ ಅಗತ್ಯ ಇದೆ. ಚಿಕಿತ್ಸೆಗೆ ಹುಬ್ಬಳ್ಳಿಗೆ ಓಡಾಡಲು, ಔಷಧಿಮಾತ್ರೆಗಳನ್ನು ಖರೀದಿಸಲು ಹಣದ ಅಗತ್ಯ ಇದ್ದು, ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದ ಪದಾಧಿಕಾರಿಗಳು ಇವರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿ, ಮಾನಸಿಕ ಸ್ಥೈರ್ಯ ತುಂಬಿ ತಮ್ಮ ಕೈಲಾದ ನೆರವನ್ನು ನೀಡಿದ್ದಾರೆ.
ಪತ್ರಿಕೆಗಳನ್ನು ವಿತರಿಸುವ ಪತ್ರಿಕಾ ವಿತರಕರಿಗೆ ರಾಜ್ಯ ಸರ್ಕಾರ ಅಪಘಾತ ಪರಿಹಾರ ಹಾಗೂ ವೈದ್ಯಕೀಯ ಸೌಲಭ್ಯ ಯೋಜನೆ ಜಾರಿ ಮಾಡಿದೆ. ಅಪಘಾತದಿಂದ ಗಂಭೀರ ಅನಾರೋಗ್ಯಕ್ಕೆ ತುತ್ತಾಗಿರುವ ಸಂಜೀವ ಎಳುಕೊಳ್ಳದ ಅವರಿಗೆ ಆಸ್ಪತ್ರೆಯ ಚಿಕಿತ್ಸಾ ವೆಚ್ಚ ಭರಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮ ಜರುಗಿಸಬೇಕಿದೆ. ಸಂಘ-ಸಂಸ್ಥೆಗಳು ಸಹ ಇವರ ನೆರವಿಗೆ ಧಾವಿಸಬೇಕಿದೆ.