ಹಾಲು ಅಮೃತಕ್ಕೆ ಸಮಾನ, ಅಪವ್ಯಯ ಬೇಡ; ರಮೇಶ ಆನವಟ್ಟಿ
ಹಾವೇರಿ: ಹಾಲು ಅಮೃತಕ್ಕೆ ಸಮಾನ. ಕಲ್ಲಿಗೆ ಹಾಲೆರೆದು ಅಪವ್ಯಯ ಮಾಡುವ ಬದಲು ಈ ಹಾಲನ್ನು ಅಪೌಷ್ಟಿಕತೆಯಿಂದ ಬಳಲುವ ಮಕ್ಕಳಿಗೆ, ರೋಗಿಗಳಿಗೆ, ಕಡು ಬಡವರಿಗೆ ನೀಡುವ ಮೂಲಕ ಹಬ್ಬಗಳ ಆಚರಣೆಯನ್ನು ಅರ್ಥಪೂರ್ಣವಾಗಿಸಬೇಕೆಂದು ವಾಲ್ಮೀಕಿ ನಾಐಕ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ರಮೇಶ ಆನವಟ್ಟಿ ಹೇಳಿದರು.
ಮಂಗಳವಾರ ಸತೀಶ ಜಾರಕಿಹೊಳಿ ಅಭಿಮಾನಿ ಬಳಗ ಇಲ್ಲಿನ ನಾಗೇಂದ್ರನಮಟ್ಟಿಯ ಹೊರವಲಯದಲ್ಲಿರುವ ಅಲೆಮಾರಿ ಸಮುದಾಯದ ಮಕ್ಕಳಿಗೆ ಬಸವಪಂಚಮಿ ನಿತ್ಯ ಹಾಲು ಹಾಗೂ ಸಿಹಿತಿನಿಸುಗಳ ವಿತರಿಸಿ ಅವರು ಮಾತನಾಡಿದರು. ೧೨ ನೇ ಶತಮಾನದಲ್ಲಿ ವಿಶ್ವ ಗುರು ಬಸವಣ್ಣನವರು ತಮ್ಮ ವಚನಗಳಲ್ಲಿ ಅನೇಕ ಮೌಢ್ಯಗಳ ಬಗ್ಗೆ ಎಚ್ಚರಿಸಿದ್ದ್ಥರು. ಕಲ್ಲ ನಾಗರ ಕಂಡರೆ ಹಾಲನೆರೆಯಂಬರು, ದಿಟದ ನಾಗರ ಕಂಡರೆ ಕೊಲ್ಲೆಂಬರಯ್ಯ ಎಂದಿದ್ದಾರೆ. ಈ ಹಾಲನ್ನು ಮಕ್ಕಳಿಗೆ ಹಂಚುವ ಮೂಲಕ ಹಬ್ಬವನ್ನು ಆಚರಿಸಿದರೆ ಸಾರ್ಥಕವಾಗುತ್ತದೆ. ಸಾಂಸ್ಕೃತಿಕ ಹಿನ್ನೆಲೆಯ ಆಚರಣೆಗಳು ಜನರಿಗೆ ಸಂದೇಶ ನೀಡುವಂತಾಗಬೇಕು ಎಂದರು.
ಸತೀಶ ಜಾರಕಿಹೊಳಿ ಅಭಿಮಾನಿ ಬಳಗದ ಅಧ್ಯಕ್ಷ, ನಗರಸಭಾ ಸದಸ್ಯ ನಾಗರಾಜ ಬಡಮ್ಮನವರ ಮಾತನಾಡಿ ಅವೈಜ್ಞಾನಿಕ ಹಬ್ಬಗಳ ಆಚರಣೆಯ ಸಂದರ್ಭದಲ್ಲಿ ಹಾಲನ್ನು ಕಲ್ಲಿಗೆ, ಮಣ್ಣಿಗೆ ಸುರಿದು ವ್ಯರ್ಥ ಮಾಡುವುದು ಸರಿಯಲ್ಲ ಎಂಬ ಕಾರಣಕ್ಕೆ ಕಳೆದ ಹತ್ತಾರು ವರ್ಷಗಳಿಂದ ಅಲೆಮಾಡಿ ಸಮುದಾಯದ ಮಕ್ಕಳಿಗೆ, ರೋಗಿಗಳಿಗೆ, ಬಡವರಿಗೆ ಹಾಲು ಹಾಗೂ ಸಿಹಿ ತಿನಿಸುಗಳನ್ನು ನೀಡುವ ಮೂಲಕ ಬಸವ ಪಂಚಮಿಯ ಆಚರಿಸಿಕೊಂಡು ಬರುತ್ತಿರುವುದಾಗಿ ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ನಗರಸಭಾ ಸದಸ್ಯರಾದ ವೆಂಕಟೇಶ ಬಿಜಾಪುರ, ವಿನಯ ಪಾಲನಕರ, ಅಲೆಮಾರಿ ಸಮುದಾಯದ ಜಿಲ್ಲಾಧ್ಯಕ್ಷ ಶೆಟ್ಟಿ ವಿಭೂತಿ, ಮಲ್ಲಿಕಾರ್ಜುನ ಬೂದಗಟ್ಟಿ, ಮುತ್ತು ಕೊರವರ, ಸಿದ್ದು ಪುರದ, ಶ್ರೀಕಾಂತ ತಳವಾರ, ಅತಾವುಲ್ಲಾ ಖಾಜಿ, ಅಮೀರ ಶಿಡಗನಾಳ< ಈಂಆಮ ಮುಗದೂರ ಮತ್ತಿತರರು ಇದ್ದರು.