
ಹಾವೇರಿ ಹೆಗ್ಗೇರಿ ಕೆರೆಗೆ ಭೇಟಿ ನೀಡಿದ ಶಾಸಕ ರುದ್ರಪ್ಪ ಲಮಾಣಿ
ಹಾವೇರಿ : ಶಾಸಕರು ಹಾಗೂ ವಿಧಾನಸಭೆ ಉಪ ಸಭಾಧ್ಯಕ್ಷ ರುದ್ರಪ್ಪ ಲಮಾಣಿ ಶನಿವಾರ ಇಲ್ಲಿನ ಹೆಗ್ಗೇರಿ ಕೆರೆಗೆ ಭೇಟಿ ನೀಡಿ, ತುಂಗಾ ಮೇಲ್ದಂಡೆ ಯೋಜನೆಯಡಿ ಹೆಗ್ಗೇರಿ ಕೆರೆಗೆ ನೀರು ಹರಿಸಲಾಗುತ್ತಿರುವುದನ್ನು ವೀಕ್ಷಣೆ ಮಾಡಿದರು.
ಪ್ರಸಕ್ತ ಉತ್ತಮ ಮಳೆಯಾಗುತ್ತಿದೆ ಹಾಗೂ ತುಂಗಾ ಮೇಲ್ದಂಡೆ ಯೋಜನೆಯಡಿ ಹೆಗ್ಗೇರಿ ಕೆರೆಗೆ ನೀರು ಹರಿಸಲಾಗುತ್ತಿದ್ದು, ಬರುವ ದಿನಗಳಲ್ಲಿ ಕೆರೆ ತುಂಬಲಿದೆ. ಇದರಿಂದ ಅಂತರ್ಜಲ ಪ್ರಮಾಣ ಹೆಚ್ಚಳವಾಗಲಿದೆ ಹಾಗೂ ಜನ-ಜಾನುವಾರುಗಳಿಗೆ ನೀರಿನ ಅನುಕೂಲವಾಗಲಿದೆ. ಹಾವೇರಿ ಜನತೆಗೆ ೨೪*೭ ಕುಡಿಯುವ ನೀರು ಪೂರೈಕೆ ಕನಸು ನನಸಾಗಲಿದೆ. ಆದಷ್ಟು ಶೀಘ್ರದಲ್ಲೇ ೨೪*೭ ನೀರು ಪೂರೈಕೆಗೆ ಕ್ರಮಕೈಗೊಳ್ಳಲಾಗುವುದು ಎಂದರು.
ನೀರಾವರಿ ಇಲಾಖೆ ಸಹಾಯಕ ಇಂಜನೀಯರ ರಾಮಕೃಷ್ಣ ಅವರು ಮಾತನಾಡಿ, ಅಕ್ಟೋಬರ್ ಅಂತ್ಯದವರೆಗೆ ತುಂಗಾಮೇಲ್ದಂಡೆ ಯೋಜನೆಯಡಿ ಕೆನಾಲ್ಗೆ ನೀರು ಬಿಡಲಾಗುವುದು. ಹೆಚ್ಚುವರಿ ನೀರನ್ನು ಹೆಗ್ಗೇರಿ ಕೆರೆಗೆ ಹರಿಸಲಾಗುವುದು ಎಂದರು.
ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಎಸ್.ಎಫ್.ಎನ್.ಗಾಜೀಗೌಡ್ರ, ನಗರಸಭೆ ಸದಸ್ಯ ಗಣೇಶ ಬಿಷ್ಟಣ್ಣನವರ ಇತರರು ಉಪಸ್ಥಿತರಿದ್ದರು.

