ಹಾವೇರಿ : ಲೈಂಗಿಕ ದೌರ್ಜನ್ಯ ಎಸಗಿದ ಅಪರಾಧಿಗೆ ೨೦ ವರ್ಷ ಜೈಲು
ಹಾವೇರಿ : ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿ ಬಸವರಾಜ ಫಕ್ಕೀರಪ್ಪ ಬಾರ್ಕಿ ಎಂಬುವರಿಗೆ ೨೦ ವರ್ಷಗಳ ಕಠಿಣ ಕಾರಾವಾಸ ಶಿಕ್ಷೆ ಹಾಗೂ ರೂ.೧.೫೦ ಲಕ್ಷ ದಂಡ ವಿಧಿಸಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಎಫ್.ಟಿ.ಎಸ್.ಸಿ-೧ದ ನ್ಯಾಯಾಧೀಶರಾದ ನಿಂಗೌಡ ಪಾಟೀಲ ಅವರು ಮಂಗಳವಾರ ತೀರ್ಪು ನೀಡಿದ್ದಾರೆ.
ಬಾಲಕಿಯು ಅಪ್ರಾಪ್ತ ಎಂದು ಗೊತ್ತಿದ್ದರೂ ಸಹ ದಿ.೫-೯-೨೦೨೨ ರಂದು ಬಾಲಕಿಯೊಂದಿಗೆ ಮಾತನಾಡಿ, ಮೆಡಿಕಲ್ ಶ್ಯಾಪ್‌ಗೆ ಬಿಡುವುದಾಗಿ ಹೇಳಿ ತನ್ನ ಮೋಟಾರ್ ಸೈಕಲ್‌ನಲ್ಲಿ ಹತ್ತಿಸಿಕೊಂಡು ಗೋವಿನಜೋಳದ ಹೊಲಕ್ಕೆ ಕರೆದುಕೊಂಡು ಹೋಗಿ ಒತ್ತಾಯದಿಂದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ಈ ವಿಯಷವನ್ನು ಯಾರಿಗೂ ಹೇಳದಂತೆ ಜೀವಬೆದರಿಕೆ ಹಾಕಿದ ಬಗ್ಗೆ ಆರೋಪಿಯ ಮೇಲೆ ಹಾವೇರಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖಾಧಿಕಾರಿ ಪೊಲೀಸ್ ಇನ್ಸಪೆಕ್ಟರ್ ಎಸ್.ಆರ್.ಬಡಿಗೇರ ಅವರು ಪ್ರಕರಣದ ತನಿಖೆ ನಡೆಸಿ ದೋಷರೋಪಣಾ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಆರೋಪಿ ಬಸವರಾಜ ಫಕ್ಕೀರಪ್ಪ ಬಾರ್ಕಿ ಮೇಲೆ ಹೊರಿಸಲಾದ ಆಪಾಧನೆಗಳಾದ ಕಲಂ ೩೭೬, ೫೦೬ ಭಾ.ದಂ.ಸಂ. ಮತ್ತು ಕಲಂ. ೬, ೪, ೧೨ ಪೋಕ್ಸೋ ಕಾಯ್ದೆ-೨೦೧೨ರ ಅಡಿಯಲ್ಲಿ ಅಪಾದನೆಗಳನ್ನು ಅಭಿಯೋಜನೆಯು ರುಜುವಾತುಪಡಿಸಿರುತ್ತದೆ. ನ್ಯಾಯಾಧೀಶರು ಮೇಲಿನಂತೆ ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ನೀಡಿದ್ದು, ದಂಡದ ಹಣದಲ್ಲಿ ನೊಂದ ಬಾಲಕಿಗೆ ರೂ. ಒಂದು ಲಕ್ಷ ಪರಿಹಾರ ಹಾಗೂ ಕರ್ನಾಟಕ ಸರ್ಕಾರದ ನೊಂದವರ ಪರಿಹಾರ ನಿಧಿ ಯೋಜನೆಯಡಿ ಇರುವ ಪರಿಹಾರ ನಿಧಿಯಿಂದ ಕರ್ನಾಟಕ ಸರ್ಕಾರವು ನೊಂದ ಬಾಲಕಿಗೆ ರೂ. ನಾಲ್ಕು ಲಕ್ಷ ಪರಿಹಾರ ನೀಡಬೇಕೆಂದು ಎಂದು ತೀರ್ಪು ನೀಡಿದ್ದಾರೆ.
ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ವಿಜಯಕುಮಾರ ಶಂಕರಗೌಡ ಪಾಟೀಲ ಅವರು ಪ್ರಕರಣ ನಡೆಸಿ ವಾದ ಮಂಡಿಸಿದ್ದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.