
ವರದಾ-ಬೇಡ್ತಿ ನದಿ ಜೋಡಣೆ ವಿಚಾರ ಕೇಂದ್ರ ಗಮನಕ್ಕೆ: ಡಿ.ಕೆ.ಶಿವಕುಮಾರ
ಹಾವೇರಿ : “ಕುಸುಮ್ ಯೋಜನೆ ಮೂಲಕ ಪ್ರತಿ ತಾಲ್ಲೂಕಿನಲ್ಲಿ ೨೦ ಮೆ.ವ್ಯಾ ಸಾಮರ್ಥ್ಯದ ಸೋಲಾರ್ ವಿದ್ಯುತ್ ಘಟಕ ಸ್ಥಾಪನೆ ಮಾಡಿ ಇದರಿಂದ ಹಗಲು ಹೊತ್ತಿನಲ್ಲಿಯೇ ರೈತರ ಪಂಪ್ ಸೆಟ್ ಗಳಿಗೆ ವಿದ್ಯುತ್ ನೀಡಲು ಸರ್ಕಾರ ತೀರ್ಮಾನ ಮಾಡಿದೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು. ಜಿಲ್ಲೆಯ ಹಾನಗಲ್ ವಿಧಾನಸಭಾ ಕ್ಷೇತ್ರದ ಅಕ್ಕಿ ಆಲೂರಿನಲ್ಲಿ ಭಾನುವಾರ ನಡೆದ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
“ಮಾಜಿ ಸಿಎಂ ಬಂಗಾರಪ್ಪ ಅವರ ಅವಧಿಯಲ್ಲಿ ರೈತರ ಪಂಪ್ ಸೆಟ್‌ಗೆ ಉಚಿತ ವಿದ್ಯುತ್ ನೀಡಲಾಯಿತು. ೨೦೧೩ ರ ಕಾಂಗ್ರೆಸ್ ಸರ್ಕಾರದ ವೇಳೆ ನಾನು ಇಂಧನ ಸಚಿವನಾಗಿದ್ದಾಗ ರೈತರ ಪಂಪ್ ಸೆಟ್ ಗಳಿಗೆ ನೀಡುವ ತ್ರೀ ಫೇಸ್ ವಿದ್ಯುತ್ ಪೂರೈಕೆಯನ್ನು ೬ ಗಂಟೆಯಿಂದ ೭ ಗಂಟೆಗೆ ಹೆಚ್ಚಳ ಮಾಡಲಾಯಿತು” ಎಂದು ಹೇಳಿದರು.
“೬೬೫.೭೫ ಕೋಟಿ ಹಣವನ್ನು ನಿಮ್ಮ ಕ್ಷೇತ್ರದ ಅಭಿವೃದ್ಧಿಗೆ ನೀಡುತ್ತಿದ್ದೇವೆ. ೪೧೮ ಕೋಟಿ ವೆಚ್ಚದಲ್ಲಿ ಬಾಳಂಬೀಡು ಹಾಗೂ ಇತರೇ ೭೨ ಗ್ರಾಮಗಳ ೧೬೨ ಕೆರೆಗಳು. ೧೧೬ ಕೋಟಿ ವೆಚ್ಚದಲ್ಲಿ ಹಿರೇಕೌಂಶಿ ಮತ್ತು ಇತರೇ ೯ ಗ್ರಾಮಗಳ ೭೭ ಕೆರೆಗಳನ್ನು ತುಂಬಿಸುವ ಕೆಲಸ ನಾವು ಮಾಡುತ್ತಿದ್ದೇವೆ. ೨೦೧೮ ಕೋಟಿ ವೆಚ್ಚದ ವರದಾ ಮತ್ತು ಬೇಡ್ತಿ ನದಿ ಜೋಡಣೆ ವಿಚಾರವನ್ನು ರಾಷ್ಟ್ರೀಯ ನದಿ ಪ್ರಾಧಿಕಾರದ ಮೂಲಕ ಕೇಂದ್ರ ಸರ್ಕಾರದ ಗಮನಕ್ಕೆ ತರಲಾಗಿದೆ” ಎಂದರು.
“ರೈತರಿಗಾಗಿ ಹಾಲಿನ ಬೆಲೆ ಹೆಚ್ಚಳ ಮಾಡಿದ್ದೇವೆ. ಈ ಹಣವನ್ನು ಸರ್ಕಾರ ಏನಾದರೂ ತೆಗೆದುಕೊಂಡಿದೆಯೇ? ಇದನ್ನು ರೈತರಿಗೆ ನೀಡಿದ್ದೇವೆ. ೩೦ ಸಾವಿರವಿದ್ದ ೧೦ ಗ್ರಾಂ ಚಿನ್ನದ ಬೆಲೆ ೧ ಲಕ್ಷಕ್ಕೆ ಏರಿದೆ. ದಿನಸಿ ವಸ್ತುಗಳು, ಕಬ್ಬಿಣ, ಸಿಮೆಂಟ್ ಸೇರಿದಂತೆ ಪ್ರತಿಯೊಂದು ವಸ್ತುಗಳ ಬೆಲೆ ಏರಿಕೆಯಾದಾಗ ಬಿಜೆಪಿಯವರು ಆಕ್ರೋಶ ವ್ಯಕ್ತಪಡಿಸಲಿಲ್ಲ. ಈಗ ಕಾಂಗ್ರೆಸ್ ಮೇಲೆ ಆಕ್ರೋಶವಂತೆ. ಅವರು ಯಾವಾಗ ನಮ್ಮ ಮೇಲೆ ಆಕ್ರೋಶ ವ್ಯಕ್ತಪಡಿಸಿದರೋ ಅದೇ ದಿನ ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಬೆಲೆ ಹೆಚ್ಚಳ ಮಾಡಿತು. ಅಧಿಕಾರದಲ್ಲಿ ಇರುವ ನಾವು ನಿಮ್ಮ ನೆರವಿಗೆ ನಿಲ್ಲಬೇಕೆ ಹೊರತು ಪಿಕ್ ಪಾಕೆಟ್ ಮಾಡಲು ಅಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗ್ಯಾರಂಟಿ ವಿರೋಧ ಮಾಡುತ್ತಿದ್ದ ಬಿಜೆಪಿಯವರು ನಂತರ ಮಹಾರಾಷ್ಟ್ರ, ಹರಿಯಾಣ, ಮಧ್ಯಪ್ರದೇಶ, ದೆಹಲಿ ಚುನಾವಣೆಯಲ್ಲಿ ಅವರೂ ಗ್ಯಾರಂಟಿಗಳನ್ನು ಘೋಷಣೆ ಮಾಡಿದರು. ದೇಶದ ಪ್ರಧಾನಿ ಕರ್ನಾಟಕ ಬರಿದಾಗಿ ಹೋಯಿತು ಎಂದರು. ಗ್ಯಾರಂಟಿ ಯೋಜನೆಗಳಿಗೆ ೫೨ ಸಾವಿರ ಕೋಟಿ ಕೊಟ್ಟು ರಾಜ್ಯದಲ್ಲಿ ಸಾವಿರಾರು ಕೋಟಿ ರೂಪಾಯಿಗಳ ಅಭಿವೃದ್ಧಿ ಕೆಲಸ ಮಾಡಲಾಗುತ್ತಿದೆ. ಗ್ಯಾರಂಟಿಗಳಿಂದ ಪ್ರತಿಯೊಂದು ಕುಟುಂಬ ೫-೬ ಸಾವಿರ ಉಳಿತಾಯ ಮಾಡುತ್ತಿದೆ” ಎಂದರು.
“ನಾವು ಹಾನಗಲ್ ಕ್ಷೇತ್ರಕ್ಕೆ ಕೇವಲ ಅಭಿವೃದ್ಧಿ ಕೆಲಸಗಳ ಉದ್ಘಾಟನೆಗೆ ಬಂದಿಲ್ಲ. ಬದಲಾಗಿ ನೀವು ನಮಗೆ ಕೊಟ್ಟ ಶಕ್ತಿಗೆ ಪ್ರತಿಯಾಗಿ ನಿಮ್ಮ ಋಣ ತೀರಿಸಲು ಬಂದಿದ್ದೇವೆ. ನೀವು ನಮ್ಮ ಪಕ್ಷದ ಮೇಲೆ ನಂಬಿಕೆಯಿಟ್ಟು ಆಯ್ಕೆ ಮಾಡಿದ್ದೀರಿ. ಅದಕ್ಕಾಗಿ ನಾವು ನಿಮಗೆ ಆಭಾರಿ” ಎಂದು ಡಿ.ಕೆ.ಶಿವಕುಮಾರ “ಹಾನಗಲ್ಲಿನ ಶಾಸಕರಾದ ಶ್ರೀನಿವಾಸ ಮಾನೆ ಅವರು ಅತ್ಯಂತ ಕ್ರಿಯಾಶೀಲವಾದ ಶಾಸಕರು. ನೀರಾವರಿ, ಲೋಕೋಪಯೋಗಿ ಮಾತ್ರವಲ್ಲ ಎಲ್ಲಾ ಇಲಾಖೆಗಳಿಂದ ಜನರಿಗೆ ಉಪಯೋಗವಾಗುವ ಕೆಲಸ ಮಾಡುತ್ತಿದ್ದಾರೆ. ಕಂದಾಯ, ವಿದ್ಯುತ್ ಇಲಾಖೆಯಿಂದ ರೈತರಿಗೆ ಬೇಕಾದಂತಹ ಕೆಲಸ ಮಾಡಿಕೊಡುತ್ತಿದ್ದಾರೆ. ಸಮುದಾಯದ ಬೆಂಬಲ ಇಲ್ಲದೇ ಹೋದರು ಸಹ ಕಳೆದ ಎರಡು ದಶಕಗಳಿಂದ ಜನಸೇವೆ ಮಾಡುತ್ತಿದ್ದಾರೆ. ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಇದ್ದಾಗಲೂ ಇವರನ್ನು ಉಪಚುನಾವಣೆಯಲ್ಲಿ ಗೆಲ್ಲಿಸಿ ನಮ್ಮ ಮೇಲೆ ನಂಬಿಕೆ ಇಟ್ಟವರು ನೀವು” ಎಂದು ಹೇಳಿದರು.

