
ಸರಿಯಾದ ಮಾಹಿತಿ ನೀಡಿದ ಅಧಿಕಾರಿಗಳಿಗೆ ಷೋಕಾಸ್ ನೋಟೀಸ್/
ಕಳಪೆ ಬೀಜ- ಗೊಬ್ಬರ ಮಾರಾಟಗಾರರ ವಿರುದ್ಧ ಚಾರ್ಜ್‌ಶೀಟ್ ಹಾಕಿ ಎಫ್‌ಐಆರ್ ದಾಖಲಿಸಿ
-ಸಚಿವ ಶಿವಾನಂದ ಪಾಟೀಲ
ಹಾವೇರಿ: ಜಿಲ್ಲೆಯಲ್ಲಿ ಪತ್ತೆಯಾದ ಕಳಪೆ ರಸಗೊಬ್ಬರ ಹಾಗೂ ಬಿತ್ತನೆ ಬೀಜ ಮಾರಾಟಗಾರರ ಲೈಸನ್ಸ್ ರದ್ದು ಮಾಡಿ, ಅವರ ವಿರುದ್ಧ ಚಾರ್ಜ್‌ಶೀಟ್ ಹಾಕಿ, ಎಫ್‌ಐಆರ್ ದಾಖಲಿಸುವಂತೆ ಅಧಿಕಾರಿಗಳಿಗೆ ಜವಳಿ, ಕಬ್ಬು ಅಭಿವೃದ್ಧಿ, ಸಕ್ಕರೆ ಮತ್ತು ಕೃಷಿ ಮಾರುಕಟ್ಟೆ ಹಾಗೂ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವಾನಂದ ಪಾಟೀಲ ಸೂಚನೆ ನೀಡಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮಂಗಳವಾರ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈ ಮೊದಲು ರಾಣೇಬೆನ್ನೂರು ಉತ್ತಮ ಸೀಡ್ಸ್‌ಗೆ ಹೆಸರಾಗಿತ್ತು. ಈಗ ಕಳಪೆ ಬೀಜ ಮಾರಾಟದಿಂದ ಜಿಲ್ಲೆ ಸುದ್ದಿಯಲ್ಲಿದೆ. ರಾಜ್ಯ ಮಟ್ಟದ ವಿಜಲನ್ಸ್ ತಂಡ ಕರೆಸಿ ಪರಿಶೀಲನೆ ಮಾಡಿಸುವಂತೆ ಕೃಷಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಶಾಸಕ ಪ್ರಕಾಶ ಕೋಳಿವಾಡ ಅವರು ಮಾತನಾಡಿ, ಕಳಪೆ ಬೀಜ-ಗೊಬ್ಬರ ಮಾರಾಟಮಾಡಿದ ಪ್ರಕರಣದಲ್ಲಿ ಬಂದ್ ಮಾಡಲಾದ ಅಂಗಡಿಗಳನ್ನು ಪುನಃ ಆರಂಭಿಸಲಾಗಿದೆ. ಇದಕ್ಕೆ ಯಾರು ಅನುಮತಿ ನೀಡಿದರು ಎಂದು ಪ್ರಶ್ನೆ ಮಾಡಿದರು ಹಾಗೂ ಕೂಡಲೇ ಆ ಅಂಗಡಿಗಳನ್ನು ಮುಚ್ಚಿಸಲು ಕ್ರಮವಹಿಸಬೇಕು ಎಂದರು.
ಸಚಿವರು ಕಳಪೆ ಬೀಜದ ಕುರಿತು ಲ್ಯಾಬ್ ವರದಿ ಏನಂತಾ ಬಂದಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಪ್ರಶ್ನಿಸಿದರು. ಆಗ ಅವರು ಕಳಪೆ ಎಂದು ವರದಿ ಬಂದಿದೆ ಎಂದು ತಿಳಿಸಿದಾಗ, ಕೂಡಲೇ ಕಳಪೆ ಬೀಜ ಮಾರಾಟಗಾರರ ಅಂಗಡಿ ಮುಚ್ಚಿಸುವಂತೆ ಕೃಷಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಕಲಿ ಆರ್‌ಟಿಸಿ: ಶಿಗ್ಗಾಂವ ತಾಲೂಕಿನಲ್ಲಿ ನಕಲಿ ಆರ್‌ಟಿಸಿ ತಯಾರಿಸಿ ರೈತರಲ್ಲದವರು ಬೆಳೆಹಾನಿ ಪರಿಹಾರ ಪಡೆದಿದ್ದಾರೆ. ಇದರಿಂದ ನೈಜ ರೈತರಿಗೆ ಅನ್ಯಾಯವಾಗಿದೆ. ಈ ಕುರಿತು ಕೃಷಿ ಇಲಾಖೆ ಅಧಿಕಾರಿಗಳು ಯಾವುದೇ ಕ್ರಮಕೈಗೊಂಡಿಲ್ಲ. ಇಷ್ಟೊಂದು ದೊಡ್ಡ ಪ್ರಮಾಣದ ಅವ್ಯವಹಾರದಲ್ಲಿ ಅಧಿಕಾರಿಗಳ ಹಸ್ತಕ್ಷೇಪ ಇದೆ ಎಂದು ಅನುಮಾನ ಬರುತ್ತಿದೆ. ನಕಲಿ ಆರ್.ಟಿ.ಸಿ. ತಯಾರಿಸುವ ಏಜೆಂಟರಿದ್ದಾರೆ. ಅವರಿಗೆ ಮೊದಲೇ ಗೊತ್ತಿರುತ್ತದೆ ಯಾವ ಬೆಳೆಗೆ ಬೆಳೆ ವಿಮೆ ಎಂದು, ಇದು ಹೇಗೆ ಸಾಧ್ಯ? ರೈತರು ಬೆಳೆ ವಿಮೆ ಪಾವತಿಸಿದರೆ ಪರಿಹಾರ ಬರುವುದಿಲ್ಲ. ಆದರೆ ಏಜೆಂಟರು ಪಾವತಿಸಿದರೆ ಪರಿಹಾರ ಬರುತ್ತದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದು ಶಾಸಕ ಯಾಸೀರ್ ಅಹ್ಮದ್‌ಖಾನ್ ಪಠಾಣ ಅವರು ಸಚಿವರ ಗಮನಕ್ಕೆ ತಂದರು.
ತಂಡ ರಚನೆಗೆ ಸೂಚನೆ: ನಕಲಿ ಆರ್‌ಟಿಸಿ ತಯಾರಿಸಿ ೫೦೦ ಎಕರೆ ಪ್ರದೇಶದ ಬೆಳೆ ಪರಿಹಾರ ಪಡೆದಿದ್ದರೂ ಕೃಷಿ ಇಲಾಖೆ ಅಧಿಕಾರಿಗಳ ಗಮನಕ್ಕೆ ಇಲ್ವಾ? ನೀವೆಲ್ಲ ಹೇಗೆ ಕೆಲಸ ಮಾಡ್ತೀರಿ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕರನ್ನು ತರಾಟೆಗೆ ತೆಗೆದುಕೊಂಡರು. ಈ ಕುರಿತು ತಂಡ ರಚಿಸಿ, ತನಿಖೆ ನಡೆಸಿ ಎರಡು ತಿಂಗಳಲ್ಲಿ ವರದಿ ನೀಡುವಂತೆ ಹಾಗೂ ಮುಂದೆ ಇಂತಹ ಪ್ರಕರಣಗಳು ನಡೆಯದಂತೆ ಅಧಿಕಾರಿಗಳು ಜಾಗೃತರಾಗಬೇಕು ಎಂದು ಕೃಷಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ತೋಟಗಾರಿಕೆ, ಕೃಷಿ ಇಲಾಖೆ ಹಾಗೂ ಅಂಕಿ-ಸಂಖ್ಯೆ ಇಲಾಖೆಗಳು ಹಾಗೂ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಒಂದೇ ಊರು, ಒಂದೇ ಪ್ರದೇಶ ಹಾಗೂ ಒಂದೇ ಸರ್ವೇ ನಂಬರ್‌ನಲ್ಲಿ ಹೆಚ್ಚಿನ ಬೆಳೆ ಪರಿಹಾರ ಬರುತ್ತಿದ್ದರೆ ಕಳೆದ ಮೂರು ವರ್ಷದ ಕುರಿತು ಪರೀಕ್ಷೆ ಮಾಡಬೇಕು ಎಂದು ಸೂಚನೆ ನೀಡಿದರು.
ತೋಟಗಾರಿಕೆ ಪ್ರದೇಶ ವಿಸ್ತರಿಸಿ: ಜಿಲ್ಲೆಯಲ್ಲಿ ತೋಟಗಾರಿಕೆ ಪ್ರದೇಶಕ್ಕೆ ಭೇಟಿ ನೀಡಿ, ರೈತರಿಗೆ ಮಾಹಿತಿ ನೀಡಬೇಕು ಜಾಗೂ ತೋಟಗಾರಿಕೆ ಪ್ರದೇಶ ವಿಸ್ತರಣೆಗೆ ಕ್ರಮವಹಿಸಬೇಕು ಎಂದು ತೋಟಗಾರಿಕೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲೆಯಲ್ಲಿ ೪೧,೫೫೭.೭೩ ಹೆಕ್ಟೇರ್ ತೋಟಗಾರಿಕೆ ಬೆಳೆ ಪ್ರದೇಶವಿದ್ದು, ೬೩೮೫ ಹೆ.ಪ್ರದೇಶದಲ್ಲಿ ಹಣ್ಣು, ೯೮೨೯.೯೨ ಹೆ.ಪ್ರದೇಶದಲ್ಲಿ ತರಕಾರಿ, ೪೫೭೨.೫೮ ಹೆ.ಪ್ರದೇಶದಲ್ಲಿ ಸಾಂಬಾರ ಪದಾರ್ಥ, ೧೯,೯೭೬.೧೯ ತೋಟಗಾರಿಕೆ ಬೆಳೆ, ೭೧೩ ಹೆ.ಪ್ರದೇಶದಲ್ಲಿ ಹೂವು, ೩೪.೦೬ ಹೆ.ಪ್ರದೇಶದಲ್ಲಿ ಔಷಧಿಯ ಹಾಗೂ ಪರಿಮಳ ಬೆಳೆ ಬೆಳೆಯಾಗುತ್ತಿದೆ. ಪ್ರತಿ ವರ್ಷ ಒಂದರಿಂದ ಎರಡು ಸಾವಿರ ಹೆಕ್ಟೇರ್ ಪ್ರದೇಶ ಅಡಿಕೆ ಬೆಳೆ ಅಧಿಕವಾಗುತ್ತಿದೆ ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರು ಸಭೆಗೆ ಮಾಹಿತಿ ನೀಡಿದರು.
ರೈತರಿಗೆ ಮಾಹಿತಿ ನೀಡಿ: ಹಿಂಗಾರು ಹಂಗಾಮಿಗೆ ಅಗತ್ಯವಾದ ಬೀಜ ಹಾಗೂ ರಸಗೊಬ್ಬರ ದಾಸ್ತಾನುಮಾಡಿಕೊಳ್ಳಬೇಕು. ಜಿಲ್ಲೆಯ ಹವಾಮಾನ ಆಧಾರಿತ ಬೆಳೆ ಬೆಳೆಯಲು ಹಾಗೂ ಮಾಲದಂಡಿ ಮತ್ತು ಹೈಬ್ರೀಡ್ ಜೋಳಕ್ಕೆ ಉತ್ತಮ ಬೆಲೆ ಇದೆ. ಈ ಕುರಿತು ಅಭಿಯಾನ ನಡೆಸಿ ಮಾಹಿತಿ ನೀಡಬೇಕು. ಐಇಸಿ ಅಡಿ ಬರುವ ಅನುದಾನದಲ್ಲಿ ರೈತರಿಗೆ ಲಾಭವಾಗುವಂತೆ ಪ್ರಚಾರ ಮಾಡಬೇಕು ಎಂದು ಸೂಚನೆ ನೀಡಿದರು.
ಅಧಿಕಾರಿಗಳ ಅಮಾನತ್‌ಗೆ ನಿರ್ದೇಶನ: ತುಂಗಾ ಮೇಲ್ದಂಡೆ ಯೋಜನೆ, ಶಿಗ್ಗಾಂವ ಏತ ನೀರಾವರಿ, ವಿವಿಧ ಕೆರೆ ತುಂಬಿಸುವ ಯೋಜನೆ ಸೇರಿದಂತೆ ವಿವಿಧ ನೀರಾವರಿ ಯೋಜನೆಗಳ ಮಾಹಿತಿ ಪರಿಶೀಲಿಸಿದ ಸಚಿವರು, ಕಾಮಗಾರಿ ಆರಂಭದ ದಿನಾಂಕ, ಮುಕ್ತಾಯದ ದಿನಾಂಕ, ನಿರ್ವಹಣೆ ದಿನಾಂಕ, ಆರ್ಥಿಕ ಹಾಗೂ ಭೌತಿಕ ಪ್ರಗತಿ ಮಾಹಿತಿ ನೀಡದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು ಹಾಗೂ ಸರಿಯಾಗಿ ಮಾಹಿತಿ ನೀಡದ ಅಧಿಕಾರಿಗಳಿಗೆ ಷೊಕಾಸ್ ನೋಟೀಸ್ ನೀಡಿ ಅಮಾನತ್ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಹಾಗೂ ಜಿ.ಪಂ.ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಗಂಭೀರವಾಗಿ ಪರಿಗಣಿಸಿ: ಕೆಡಿಪಿ ಸಭೆಗೆ ವಿವಿಧ ಇಲಾಖೆಗಳು ಸಲ್ಲಿಸುವ ಮಾಹಿತಿಯನ್ನು ಜಿಲ್ಲಾಧಿಕಾರಿಗಳು ಹಾಗೂ ಜಿ.ಪಂ.ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಪರಿಶೀಲಿಸಿ, ಕಾಮಗಾರಿಗಳ ಸಮಗ್ರ ಮಾಹಿತಿ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಬೇಕು ಹಾಗೂ ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಹಾಗೂ ಜಿ.ಪಂ.ಸಿಇಒ ಅವರಿಗೆ ತಿಳಿಸಿದರು.
ಗುತ್ತಿಗೆದಾರರಿಗೆ ನೋಟೀಸ್: ಹಾವೇರಿ-ಹಾನಗಲ್-ಶಿರಶಿ, ಗದಗ-ಹೊನ್ನಾಳಿ ರಸ್ತೆ ಸೇರಿದಂತೆ ಲೋಕೋಪಯೋಗಿ ಇಲಾಖೆ, ಕೆಶಿಪ್ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ರಸ್ತೆ ಕಾಮಗಾರಿಗಳು ಹಾಗೂ ನಿರ್ವಹಣೆ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದ ಅವರು, ಜಿಲ್ಲೆಯಲ್ಲಿ ಪ್ರಗತಿಯಲ್ಲಿರುವ ಕಾಮಗಾರಿಗಳಿಗೆ ವೇಗ ನೀಡಬೇಕು, ಪಾಟ್‌ಹೋಲ್ ಕೆಲಸ ಸರಿಯಾಗಿ ನಿರ್ವಹಣೆ ಮಾಡಬೇಕು. ಕಾಮಗಾರಿ ವಿಳಂಬ ಮಾಡುವ ಗುತ್ತಿಗೆದಾರರಿಗೆ ನೋಟೀಸ್ ನೀಡಿ ಕಪ್ಪುಪಟ್ಟಿಗೆ ಸೇರಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಪಂಚಾಯತ್ ರಾಜ್ ಇಲಾಖೆ, ವಸತಿ ಯೋಜನೆ ಸೇರಿದಂತೆ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದರು.
ಹೊಲಿಗೆ ಯಂತ್ರ ವಿತರಣೆ: ಇದೇ ಸಂದರ್ಭದಲ್ಲಿ ಸಂಕಲ್ಪ ಯೋಜನೆಯಡಿ ಮಹಿಳಾ ಫಲಾನುಭವಿಗಳಿಗೆ ಹೊಲಿಗೆ ಯಂತ್ರ ವಿತರಣೆ ಮಾಡಲಾಯಿತು.
ಗುದ್ದಲಿಪೂಜೆ: ಜಿಲ್ಲಾ ಪಂಚಾಯತ್ ಕಚೇರಿ ಆವರಣದಲ್ಲಿ ಶಿಶು ಪಾಲನಾ ಕೇಂದ್ರ ಕಟ್ಟಡಕ್ಕೆ ಗುದ್ದಲಿಪೂಜೆ ನೆರವೇರಿಸಲಾಯಿತು.
ಸಭೆಯಲ್ಲಿ ಶಾಸಕರು ಹಾಗೂ ವಿಧಾನಸಭೆ ಉಪ ಸಭಾಧ್ಯಕ್ಷ ರುದ್ರಪ್ಪ ಲಮಾಣಿ, ಶಾಸಕರಾದ ಯು.ಬಿ.ಬಣಕಾರ, ಶ್ರೀನಿವಾಸ ಮಾನೆ, ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಉಪಾಧ್ಯಕ್ಷ ಎಸ್.ಆರ್.ಪಾಟೀಲ, ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ, ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ರುಚಿ ಬಿಂದಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಮತಿ ಯಶೋಧಾ ವಂಟಗೋಡಿ, ನಾಮ ನಿರ್ದೇಶಿತ ಸದಸ್ಯರು ಉಪಸ್ಥಿತರಿದ್ದರು.

