
ಹಾವೇರಿ ಗಾಂಧಿಪುರ ಸರ್ಕಾರಿ ಪ್ರಥಮದರ್ಜೆ ಕಾಲೇಜು ಮಾದರಿ ಕಾಲೇಜ್ ಆಗಿ ಆಯ್ಕೆಹಾವೇರಿ : ರಾಜ್ಯದ ೪೧೩ ಕಾಲೇಜುಗಳ ಪೈಕಿ ಗಾಂಧಿಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮಾದರಿ ಕಾಲೇಜ್ ಎಂದು ಆಯ್ಕೆಯಾಗಿದ್ದು, ಖಾಸಗಿ ಕಾಲೇಜುಗಳಿಗೆ ಸವಾಲು ನೀಡುವ ಮಟ್ಟದಲ್ಲಿ ಈ ಕಾಲೇಜಿನಲ್ಲಿ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ ಎಂದು ಗಾಂಧಿಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲರಾದ ಫರ್ಜಾನ್ ಪಠಾಣ ತಿಳಿಸಿದರು.
ಮಂಗಳವಾರ ಹಾವೇರಿ ನಗರದ ಸಮೀಪದಲ್ಲಿರುವ ಗಾಂಧಿಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್‌ನಲ್ಲಿ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಈ ಕಾಲೇಜು ಮಾದರಿ ಕಾಲೇಜಾಗಿ ಆಯ್ಕೆಯಾದ ಹಿನ್ನಲೆಯಲ್ಲಿ ನಾಳೆ ಧಾರವಾಡದಿಂದ ಕಾಲೇಜು ವೀಕ್ಷಣೆ ವಿಶೇಷ ತಂಡ ಆಗಮಿಸಲಿದೆ. ಇದು ಮಾದರಿ ಕಾಲೇಜು ಎಂದು ಅನುಮೋದನೆಗೊಂಡರೆ ಈ ಕಾಲೇಜಿಗೆ ಹೆಚ್ಚಿನ ಅನುದಾನ ಲಭ್ಯವಾಗಲಿದೆ ಎಂದು ತಿಳಿಸಿದರು.
ಈ ಕಾಲೇಜು ೨೦೦೬-೦೭ನೇ ಸಾಲಿನಲ್ಲಿ ಹಾವೇರಿ ನಗರದ ಪುರಸಭೆ ಕಟ್ಟಡದಲ್ಲಿ ಕಾಲೇಜು ಆರಂಭವಾಗಿತ್ತು. ಬಿ.ಎ ಹಾಗೂ ಬಿ.ಕಾಂ. ಕೋರ್ಸುಗಳೀಗೆ ೨೪೩ ವಿದ್ಯಾರ್ಥಿಗಳು ದಾಖಲಾಗಿದ್ದರು. ೨೦೧೦ ರಲ್ಲಿ ಬಿಎಸ್ಸಿ ಮತ್ತು ೨೦೧೨ರಲ್ಲಿ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ(ಎಂ.ಎ. ಎಕನಾಮಿಕ್ಸ್) ಪದವಿಗಳನ್ನು ಆರಂಭಿಸಲಾಗಿತು ಎಂದರು.
೬.೧೧ ಎಕರೆ ಪ್ರದೇಶ: ಗಾಂಧಿಪುರ ಗ್ರಾಮದ ೬.೧೧ ಎಕರೆ ಪ್ರದೇಶದಲ್ಲಿ ಜೂನ್ ೨೦೧೫ರಲ್ಲಿ ನೂತನ ಕಾಲೇಜು ಕಟ್ಟಡ ನಿರ್ಮಾಣ ಮಾಡಲಾಯಿತು. ಸಂಸ್ಥೆಯ ನಿರಂತರ ಬೆಳವಣಿಗೆಯಿಂದ ಕೆಲವೇ ವರ್ಷಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಸಾವಿರ ಗಡಿ ದಾಡಿತು. ಈ ಹಿನ್ನಲೆಯಲ್ಲಿ ೨೦೧೭-೧೮ರಲ್ಲಿ ರೂ.೩.೫೬ ಕೋಟಿ ವೆಚ್ಚದಲ್ಲಿ ತರಗತಿ ಕೊಠಡಿಗಳು ಹಾಗೂ ಸಭಾಂಗಣ ನಿರ್ಮಾಣ ಮಾಡಲಾಗಿದೆ. ಕಾಲೇಜು ಆವರಣದಲ್ಲೇ ೧೨೦ ಸಾಮರ್ಥ್ಯದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳ ಬಾಲಕರ ವಸತಿ ನಿಲಯ ನಿರ್ಮಾಣ ಮಾಡಲಾಗಿದೆ.
ರೂ.೬.೧೦ ಕೋಟಿ : ವಿಜ್ಞಾನ ವಿಭಾಗದ ಕಟ್ಟಡಕ್ಕೆ ಪ್ರಸಕ್ತ ೨೦೨೫-೨೬ನೇ ಸಾಲಿನಲ್ಲಿ ರೂ.೬.೧೦ ಕೋಟಿ ಮಂಜೂರಾಗಿದ್ದು, ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ ಎಂದು ತಿಳಿಸಿದರು.
ಹೆಚ್ಚುವರಿ ಕೊಠಡಿ ನಿರ್ಮಾಣ: ೨೦೨೧ ರಿಂದ ೨೦೨೩ರವರೆಗೆ ೧೧ ಹೆಚ್ಚುವರಿ ಕೊಠಡಿ ನಿರ್ಮಾಣ ಮಾಡಲಾಗಿದೆ.
ನ್ಯಾಕ್‌ನಿಂದ ಬಿ ಗ್ರೇಡ್: ೨೦೧೭ರಲ್ಲಿ ನಡೆದ ಮೊದಲ ಹಂತದ ಮಾನ್ಯತೆಯಲ್ಲಿ ನ್ಯಾಕ್‌ನಿಂದ ‘ಬಿ’ಗ್ರೇಡ್(೨.೧೦ ಸಿಜಿಪಿಎ) ಲಭಿಸಿದೆ.೨೦೧೮-೧೯ ರಿಂದ ೨೦೨೩ರ ಐದು ವರ್ಷದ ನ್ಯಾಕ್‌ನ ೨ನೇ ಭೇಟಿಯಲ್ಲಿ ಬಿ + ಗ್ರೇಡ್ ೨.೬೯ ಸಿಜಿಪಿಎ ಅಂಕ ಗಳಿಸಿದೆ. ೨೦೨೩-೨೪ನೇ ಸಾಲಿನಿಂದ ಹಾವೇರಿ ವಿಶ್ವವಿದ್ಯಾಲಯದ ಅಡಿಯಲ್ಲಿ ಅಲಿಫಿಯೇಷನ್ ಸಂಯೋಜನೆ ಹೊಂದಿದೆ.
ನಾನ್-ಸಿಬಿಸಿಎಸ್, ಸಿಬಿಸಿಎಸ್, ಎನ್.ಇ.ಸಿ. ಹಾಗೂ ರಿವೈಸ್ಡ್ ಎನ್.ಇ.ಪಿ. ಸಿಲೆಬಸ್ ಅಧ್ಯಯನ ಮಾಡುತ್ತಿದ್ದಾರೆ. ೨೦೦೬ ರಿಂದ ಈವರೆಗೆ ೨೦ ವರ್ಷಗಳ ಸುಧೀರ್ಘ ಅವಧಿಯಲ್ಲಿ ಸಾಕಷ್ಟು ವಿದ್ಯಾರ್ಥಿಗಳು ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದಾರೆ ಎಂದು ತಿಳಿಸಿದರು.
೧೩೮೨ ವಿದ್ಯಾರ್ಥಿಗಳು: ೨೦೨೪-೨೫ರಲ್ಲಿ ಬಿಕಾಂ(ಆರ್‌ಒ) ಹೊಸ ಕೋರ್ಸ್ ಆರಂಭಿಸಲಾಗಿದೆ. ಪ್ರಸ್ತುತ ೧೩೮೨ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಬಿಎ-೭೧೪, ಬಿಕಾಂ-೩೮೬, ಬಿಕಾಂ(ಆರ್‌ಒ)-೪೩, ಬಿ.ಎಸ್ಸಿ-೨೧೫ ಹಾಗೂ ಎಂ.ಎ(ಅರ್ಥಶಾಸ್ತ್ರ) ವಿಭಾಗದಲ್ಲಿ-೨೪ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ ಎಂದರು.
ಬಿ.ಸಿ.ಎ ಕೋರ್ಸ್: ೨೦೨೬-೨೭ನೇ ಶೈಕ್ಷಣಿಕ ಸಾಲಿನಿಂದ ಈ ಕಾಲೇಜಿನಲ್ಲಿ ಬಿ.ಸಿ.ಎ ಕೋರ್ಸ್ ಆಂಭಿಸಲಾಗುತ್ತಿದೆ. ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಸಿಬ್ಬಂದಿ ಕೊರತೆ: ಖಾಯಂ ಬೋಧಕ ಸಿಬ್ಬಂದಿ-೧೭, ಖಾಯಂ ಬೋಧಕೇತರ ಸಿಬ್ಬಂದಿ ಮೂರು ಜನ , ಅತಿಥಿ ಉಪನ್ಯಾಸಕರು-೫೧ ಹಾಗೂ ಹೊರಗುತ್ತಿಗೆ ಸಿಬ್ಬಂದಿ ನಾಲ್ಕು ಹಾಗೂ ಸಿಡಿಸಿ ನಾಲ್ಕು ಜನರು ಕಾರ್ಯನಿರ್ವಹಿಸುತ್ತಿದ್ದು, ವಿದ್ಯಾರ್ಥಿಗಳ ಸಂಖ್ಯೆಗೆ ಅನುಪಾತದಲ್ಲಿ ಸಿಬ್ಬಂದಿಗಳು ಇರುವುದಿಲ್ಲ. ಹಾಗಾಗಿ ಸಿಬ್ಬಂದಿ ಕೊರತೆ ಇದೆ ಎಂದರು.
ವಾಣಿಜ್ಯ ಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಎಂ.ಬಿ.ನಾಗಲಾಪೂರ, ಪ್ರಾ.ರವಿ ಸಿ.ಎಚ್., ಡಾ.ಇಂಡಿಮಠ, ಪ್ರಾ. ಚಂದ್ರಪ್ರಭಾ ಪಠಗಾರ ಅವರು ಕಾಲೇಜಿನಲ್ಲಿ ಆಯೋಜಿಸಲಾದ ಉದ್ಯೋಗ ಮೇಳ, ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ, ಕೌಶಲ್ಯ ತರಬೇತಿ ಆಯೋಜನೆ ಸೇರಿದಂತೆ ಕಾಲೇಜಿನ ಸಾಧನೆ ಕುರಿತು ಮಾಹಿತಿ ನೀಡಿದರು.
ಮಾಧ್ಯಮಗೋಷ್ಠಿಯಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕಿ ಭಾರತಿ ಎಚ್. ಇತರರು ಉಪಸ್ಥಿತರಿದ್ದರು.

