
ಆರ್. ಬಿ.ತಿಮ್ಮಪೂರಗೆ ಉಪಮುಖ್ಯಮಂತ್ರಿ ಸ್ಥಾನ ನೀಡಲು ಆಗ್ರಹ
ಹಾವೇರಿ: ಬಡತನದಿಂದ ಬೆಳೆದು, ಜನಮಾನಸದ ಜೊತೆ, ದೀನ-ದಲಿತರ ಜೊತೆ ಬೆರೆತು, ಜನಪ್ರಿಯ ನಾಯಕರಾಗಿ ರೂಪುಗೊಂಡಿರುವ ಈಗಾಶಗಲೇ ಸಚಿವರಾಗಿ ಸಮರ್ಥವಾಗಿ ಕಾರ್ಯನಿರ್ವಹಿಸಿರುವ ಆರ್. ಬಿ.ತಿಮ್ಮಪೂರ ಅವರನ್ನು ಉಪ ಮುಖ್ಯಮಂತ್ರಿಗಳನ್ನಾಗಿ ಮಾಡುವಂತೆ ಕರ್ನಾಟಕ ಶಕ್ತಿ ಕೇಂದ್ರ ಸಮಿತಿ ಹಾವೇರಿ ಜಿಲ್ಲಾಧ್ಯಕ್ಷ ಸಂಜಯಗಾಂಧಿ ಸಂಜೀವಣ್ಣನವರ ಕಾಂಗ್ರೆಸ್ ಹೈಕಮಾಂಡ್‌ನ್ನು ಒತ್ತಾಯಿಸಿದ್ದಾರೆ.
ಜನಸಮೂಹದ ನಡುವೆ ಸದಾ ಸಮಾಜಸೇವೆಯಲ್ಲಿ ನಿರತರಾಗಿದ್ದ ಆರ್.ಬಿ.ತಿಮ್ಮಾಪೂರ ಅವರನ್ನು ಮುಧೋಳ ಕ್ಷೇತ್ರದ ಜನತೆ ತಮ್ಮ ಶಾಸಕರನ್ನಾಗಿ ೧೯೮೯ರಲ್ಲಿ ಆಯ್ಕೆ ಮಾಡಿಕೊಂಡರು. ಆಲಮಟ್ಟಿ ಜಲಾಶಯಕ್ಕೆ ಗೇಟ್‌ಗಳನ್ನು ಅಳವಡಿಸಿದ ಕೀರ್ತಿ ಆರ್.ಬಿ.ತಿಮ್ಮಾಪೂರ ಅವರಿಗೆ ಸಲ್ಲಬೇಕು. ಈ ಕಾರ್ಯದಿಂದ ಕಾಲುವೆಗಳಲ್ಲಿ ನೀರು ಹರಿದು. ಲಕ್ಷಾಂತರ ಹೆಕ್ಟೇರ್ ಒಣಭೂಮಿ, ಫಲವತ್ತಾದ ಭೂಮಿಯಾಗಿ ಪರಿವರ್ತನೆಯಾಗಿ ಭತ್ತ, ಕಬ್ಬು ಬೆಳೆಗಳನ್ನು ಬೆಳೆಯುವಂತಾಯಿತು. ಈ ಸಂದರ್ಭದಲ್ಲಿ ಜಮೀನು ಕಳೆದುಕೊಂಡಿದ್ದ ರೈತರಿಗೆ ನೀರಾವರಿ ಜಮೀನುಗಳಿಗೆ ಎಕರೆಗೆ ನಲವತ್ತು (೪೦)ಲಕ್ಷ ಮತ್ತು ಮಳೆ ಆಶ್ರಿತ ಕೃಷಿ ಜಮೀನುಗಳಿಗೆ ತಲಾ ಎಕರೆಗೆ ಮೂವತ್ತು (೩೦)ಲಕ್ಷ ಪರಿಹಾರ ಕೊಡಿಸಿದ ಕೀರ್ತಿ ಅವರದ್ದಾಗಿದೆ.
೧೯೯೫ರಿಂದ ಜನರ ನಡುವೆ ಜನಸೇವೆ ಮಾಡಿಕೊಂಡಿದ್ದ ಜನನಾಯಕನನ್ನು ಮತ್ತೆ ೧೯೯೯-೨೦೦೪ರ ಅವಧಿಗೆ ಜನ ಶಾಸಕನನ್ನಾಗಿ ಆಯ್ಕೆ ಮಾಡಿಕೊಂಡರು. ಆರ್.ಬಿ.ತಿಮ್ಮಪೂರ ಅವರು ಮಂತ್ರಿಯಾದರು. ತಮ್ಮ ಕ್ಷೇತ್ರವನ್ನು ಒಂದು ಮಾದರಿ ಕ್ಷೇತ್ರವಾಗಿ ಮಾಡಿದರು. ೨೦೧೯ರವರೆಗೆ ಅಬಕಾರಿ ಖಾತೆಯ ಜೊತೆಗೆ ಸಕ್ಕರೆ ಖಾತೆಯನ್ನು ಯಶಸ್ವಿಯಾಗಿ ನಿರ್ವಹಿಸಿದರು. ೨೦೨೩ರ ಚುನಾವಣೆಯಲ್ಲಿ ಉಪಮುಖ್ಯಮಂತ್ರಿಯಾಗಿದ್ದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯನ್ನು ಸೋಲಿಸಿ, ಶಾಸಕರಾಗಿ ಮತ್ತೆ ವಿಧಾನಸಭೆಯನ್ನು ಪ್ರವೇಶಿಸಿ, ಅಬಕಾರಿ ಸಚಿವರಾದರು. ಹೀಗೆ ಸತತ ಸೋಲು, ಗೆಲುವುಗಳ ನಡುವೆ ಜನ ಸಾಮಾನ್ಯರ ಸೇವೆಗೆ ಚ್ಯುತಿ ಬರದ ಹಾಗೆ ಸೇವೆ ಸಲ್ಲಿಸುತ್ತಾ ಜನಾನುರಾಗಿ ನಾಯಕನಾಗಿ ಆರ್.ಬಿ.ತಿಮ್ಮಾಪೂರ ಬೆಳೆದಿದ್ದಾರೆ.
ದಲಿತ ಸಮಾಜಕ್ಕೆ ಅನ್ಯಾಯವಾದಾಗಲೆಲ್ಲ ಪ್ರತಿಭಟಿಸಿ, ಮನವೊಲಿಸಿ, ನ್ಯಾಯ ದೊರಕಿಸಿಕೊಟ್ಟ ರೀತಿ, ಹುಬ್ಬಳ್ಳಿಯಲ್ಲಿ ಬೃಹತ್ ಸಮಾವೇಶದ ಆಯೋಜನೆ. ಒಳಮೀಸಲಾತಿಯ ವಿಷಯದಲ್ಲಿ ಸಂಪುಟದಲ್ಲಿದ್ದುಕೊಂಡೇಸರ್ಕಾರದ ಮನವೊಲಿಸಿ ಒಳಮೀಸಲಾತಿ ಜಾರಿಗೆ ಶ್ರಮಿಸಿದ್ದು, ೨೦೨೬ರಲ್ಲಿ ನಡೆದ ಬಾಗಲಕೋಟೆ ಕ್ಷೇತ್ರದ ಉಪಚುನಾವಣೆಯಲ್ಲಿ ದಿ. ಹೆಚ್.ವೈ. ಮೇಟಿಯವರ ಪುತ್ರರನ್ನು ಭಾರಿ ಬಹುಮತದೊಂದಿಗೆ ಗೆಲ್ಲಿಸಿಕೊಂಡು ಬರುವುದರಲ್ಲಿ ಹಗಲಿರುಳೆನ್ನದೆ ಶ್ರಮಿಸಿ ಪಕ್ಷಕ್ಕೆ ಗೆಲುವ ತಂದು ಹೀಗೆ ಹತ್ತು ಹಲವು ಸಾಧನೆಗಳನ್ನು ಸಾಧಿಸಿದ ಕ್ಷಿಷ್ಟಕರ ಪರಿಸ್ಥಿತಿಗಳನ್ನು ತಮ್ಮ ಧೈರ್ಯ ಮತ್ತು ಚಾಣಾಕ್ಷತೆಯಿಂದ ನಿಭಾಯಿಸಿದ ನಾಯಕರಿಗೆ ಇನ್ನೂ ಹೆಚ್ಚಿನ ಸ್ಥಾನ ಮಾನಗಳು ಸಿಗಲೇಬೇಕು.
ರಾಜ್ಯ ಸರ್ಕಾರದ ಅತ್ಯುನ್ನತ ಹುದ್ದೆಯನ್ನು ನಿಭಾಯಿಸುವ ಅರ್ಹತೆ ಇರುವ ಆರ್.ಬಿ.ತಿಮ್ಮಪೂರ ಅವರಿಗೆ ಕನಿಷ್ಠ ಮುಂಬರುವ ಸರ್ಕಾರದ ಸಂಪುಟ ಪುನಾರಚನೆಯ ಸಂದಭದಲ್ಲಿ, ಉಪಮುಖ್ಯಮಂತ್ರಿಯನ್ನಾಗಿ ನೇಮಕ ಮಾಡಬೇಕು.. ಈ ಹುದ್ದೆಯು ರಾಜ್ಯದ ಮಾದಿಗ ಸಮುದಾಯವನ್ನು ಪ್ರತಿನಿಧಿಸುವುದರ ಜೊತೆಗೆ, ಉತ್ತರ ಕರ್ನಾಟಕದ ಜನಪ್ರತಿನಿಧಿಗೆ ದೊರಕಬಹುದಾದ ಉನ್ನತ ಸ್ಥಾನವಾಗಿದೆ. ಪಕ್ಷ ಸಂಘಟನೆ ದೃಷ್ಟಿಯಿಂದಲೂ ಈ ಹುದ್ದೆ ನಿರ್ಣಾಯಕವಾಗಲಿದೆ. ಸಜ್ಜನ, ಜನಪರ, ರಾಜಕಾರಣಿಯನ್ನು ಸಂಪುಟ ಪುನಃರಚನೆಯ ಸಂದರ್ಭದಲ್ಲಿ ರಾಜ್ಯದ ಉಪಮುಖ್ಯಮಂತ್ರಿಯನ್ನಾಗಿ ನೇಮಕ ಮಾಡಬೇಕೆಂದು ಸಂಜೀವಣ್ಣನವರ ಒತ್ತಾಯಿಸಿದ್ದಾರೆ.

