

ಹಾವೇರಿಯಲ್ಲಿ ಮೊಹರಂಗೆ ಸಂಭ್ರಮದ ತೆರೆ
ಹಾವೇರಿ : ಹಾವೇರಿನಗರದಲ್ಲಿ ಕಳೆದ ವಾರದಿಂದ ಭಕ್ತಿ, ಭಾವೈಕ್ಯದಿಂದ ಜರುಗಿದ ಮೊಹರಂ ಆಚರಣೆಗೆ ಶನಿವಾರ ಸೌಹಾರ್ದಯುತ ತೆರೆ ಬಿದ್ದಿತು. ಹಿಂದೂ-ಮುಸ್ಲಿಂ ಬಾಂಧವ್ಯದ ಪ್ರತೀಕವಾಗಿರುವ ಹಬ್ಬದಲ್ಲಿ ಜಾತಿ-ಮತ ಬೇಧವಿಲ್ಲದೆ ಸಾರ್ವಜನಿಕರು ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ಸಂಭ್ರಮದಿಂದ ಹಬ್ಬದ ಆಚರಿಸಿದರು.
ಕೊನೇ ದಿನದ ನಿಮಿತ್ತ ಮಸೀದಿಯಲ್ಲಿ ಪ್ರತಿಷ್ಠಾಪಿಸಲಾಗಿದ್ದ ಪೀರಲು ದೇವರುಗಳನ್ನು ಸಂಜೆ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮಾಡಲಾಯಿತು. ಮೆರವಣಿಗೆ ಉದ್ದಕ್ಕೂ ಭಕ್ತಿಪೂರ್ವಕವಾಗಿ ಅಲಾಯಿ ದೇವರಿಗೆ ಮಂಡಕ್ಕಿ ಎಸೆದು ಸಾರ್ವಜನಿಕರು ಭಕ್ತಿ ಸಮರ್ಪಿಸಿದರು. ಇಲ್ಲಿನ ಸುಭಾಸ್ ಸರ್ಕಲ್‌ನಲ್ಲಿ ಸೇರಿದ ಆಲೆ ದೇವರುಗಳ ಮೆರವಣಿಗೆಯಲ್ಲಿ ಯುವಕರು, ವೃದ್ಧರು ಸಾಂಪ್ರದಾಯಿಕ ಅಲಾಯಿ ಕುಣಿತಕ್ಕೆ ಹೆಜ್ಜೆ ಹಾಕಿ ಸಂಭ್ರಮಿಸಿದರು. ಅಹಿತಕರ ಘಟನೆ ನಡೆಯದಂತೆ ಪೊಲೀಸರು ಹೆಚ್ಚಿನ ಸಿಬ್ಬಂದಿ ನಿಯೋಜಿಸಿ ಭದ್ರತೆ ಕೈಗೊಂಡಿದ್ದರು. ಸೂಕ್ಷ್ಮ ಪ್ರದೇಶಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗಿತ್ತು. ದೇವರುಗಳನ್ನು ಸಾಂಪ್ರದಾಯಿಕವಾಗಿ ಹೊಂಡದಲ್ಲಿ ಕೊಂಡೊಯ್ದು ವಿಸರ್ಜನೆ ಮಾಡುವ ಮೂಲಕ ಹಬ್ಬ ಮುಕ್ತಾಯಗೊಂಡಿತು.
ಮೊಹರಂ ಆಚರಣೆ ಸೌಹಾರ್ದಯುತ ನೆರವೇರಿದ ಹಿನ್ನೆಯಲ್ಲಿ ಮುಖಂಡ ಮಲ್ಲಿಕಾರ್ಜುನ ಸಾತೇನಹಳ್ಳಿ ಹಾಗೂ ಸಿಪಿಐ ಮೋತಿಲಾಲ್ ಪವಾರ ಅವರನ್ನು ಮುಸ್ಲಿಂ ಸಮಾಜದವತಿಯಿಂದ ಹಿರಿಯರಾದ ದಾವಲಸಾಬ ಹಿರೇಮೂಗದೂರ, ಮೊಹಮ್ಮದ ದೇವಿಹೊಸೂರ, ಇಕಬಾಲ್ ಶಿಡಗನಾಳ, ಸನಬರಖಾನ್ ಪಠಾಣ, ಉಸ್ಮಾನ ಕಳ್ಳಿಹಾಳ, ದಾದಪೀರ್ ಅನ್ನಿಮಾನವರ ಮತ್ತಿತರರು ಸನ್ಮಾನಿಸಿ ಗೌರವಿಸಿದರು.

