
“ಬೆಳಗಾವಿ ಕರ್ನಾಟಕದ ಅವಿಭಾಜ್ಯ” ಘೋಷಿಸಲು ಆಗ್ರಹಿಸಿ ಕರವೇ ಸ್ವಾಭಿಮಾನಿ ಸೇನೆಯ ಪ್ರತಿಭಟನೆ
ಹಾವೇರಿ: ಗಡಿ ಉಸ್ತುವಾರಿ ಸಚಿವರ ನೇಮಕ, ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂದು ಬೆಳಗಾವಿ ಮಹಾನಗರಪಾಲಿಕೆಯಲ್ಲಿ ಠರಾವು ಪಾಸು ಮಾಡಲು ಹಾಗೂ ಗಡಿ ಅಭಿವೃದ್ಧಿ ಪ್ರಾಧಿಕಾರ ಕಚೇರಿ ಬೆಂಗಳೂರಿನಿಂದ ಬೆಳಗಾವಿ ಸುವರ್ಣ ಸೌಧಕ್ಕೆ ಸ್ಥಳಾಂತರಿಸುವಂತೆ ಒತ್ತಾಯಿಸಿ ಕರವೇ ಸ್ವಾಭಿಮಾನಿ ಸೇನೆಯ ಜಿಲ್ಲಾ ಸಮಿತಿಯ ಪದಾಧಿಕಾರಿಗಳು ಜುಲೈ ೬ನೇ ಸೋಮವಾರ ಹಾವೇರಿ ನಗರದ ಮಹಾತ್ಮಾ ಗಾಂಧಿ ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಕಾರ್ಯಾಧ್ಯಕ್ಷ ರಾಮು ತಳವಾರ ಮಾತನಾಡಿ, ಕಳೆದ ಮೂರಾಲ್ಕು ತಿಂಗಳುಗಳಿಂದ ಬೆಳಗಾವಿ ಮಹಾನಗರ ಪಾಲಿಕೆ ಇವರಿಗೆ ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂದು ಠರಾವು ಪಾಸು ಮಾಡಲು ಕನ್ನಡಪರ ಸಂಘಟನೆಗಳು ಹಾಗೂ ಸಾರ್ವಜನಿಕರು ಒತ್ತಾಯಿಸುತ್ತಾ ಬಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಕೆಲವು ಪಟ್ಟಭದ್ರ ಹಿತಾಸಕ್ತಿಗಳು ತೆರೆಮರೆಯಲ್ಲಿ ಠರಾವು ಪಾಸಾಗದಂತೆ ನೋಡಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಮಹಾನಗರ ಪಾಲಿಕೆ ಸದಸ್ಯರು ಎಚ್ಚರಿಕೆಯಿಂದ ಮುನ್ನಡೆಯಬೇಕು ಹಾಗೂ ಕೂಡಲೇ ಠರಾವು ಪಾಸು ಮಾಡಬೇಕು. ಅಲ್ಲದೇ ರಾಜ್ಯ ಸರ್ಕಾರ ಈ ಹಿಂದೆ ಸಿದ್ದರಾಮಯ್ಯನವರ ಸರ್ಕಾರದಲ್ಲಿ ಗಡಿ ಉಸ್ತುವಾರಿ ಸಚಿವರನ್ನು ನೇಮಿಸಿ ಗಡಿಭಾಗದ ಜನರ ಮೂಲಭೂತ ಸೌಕರ್ಯ, ಶಿಕ್ಷಣ, ಆರೋಗ್ಯಕ್ಕೆ ಒತ್ತು ನೀಡಿದ್ದು, ಆದರೆ ಈಗಿನ ಮುಖ್ಯಮಂತ್ರಿಗಳು ಗಡಿ ಉಸ್ತುವಾರಿ ಸಚಿವರ ನೇಮಕದ ವಿಷಯ ತಕ್ಷಣವೇ ಕಾರ್ಯಪ್ರವೃತ್ತರಾಗಬೇಕು ಎಂದರು.
ಜಿಲ್ಲಾಧ್ಯಕ್ಷ ಮಂಜುನಾಥ ದಾನಪ್ಪನವರ ಮಾತನಾಡಿ, ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯಗಳ ನಡುವೆ ಹಲವು ದಶಕಗಳಿಂದ ಬೆಳಗಾವಿ ಗಡಿ ವಿಚಾರಕ್ಕೆ ಸಂಬಂಧಿಸಿದಂತೆ ತಂಟೆ ತಕರಾರುಗಳು ಮುಂದುವರೆಯುತ್ತಲೇ ಬಂದಿದ್ದು, ರಾಜ್ಯ ಸರ್ಕಾರ ಹಾಗೂ ಕನ್ನಡಿಗರು ಸಮರ್ಪಕವಾಗಿ ಈ ಬಗ್ಗೆ ಉತ್ತರ ನೀಡಲು ಗಡಿ ಅಭಿವೃದ್ಧಿ ಪ್ರಾಧಿಕಾರ ಕಚೇರಿಯನ್ನು ಬೆಂಗಳೂರಿನಿಂದ ಬೆಳಗಾವಿಗೆ ಸ್ಥಳಾಂತರಿಸುವುದು ಅಥವಾ ಬೆಳಗಾವಿಯ ಸುವರ್ಣಸೌಧದಲ್ಲಿ ಪ್ರಾದೇಶಿಕ ಕಚೇರಿಯನ್ನು ತೆರೆಯುವ ಬಗ್ಗೆ ೨೦೨೩ ರಲ್ಲಿ ಆಯೋಗದ ಅಧ್ಯಕ್ಷ ನ್ಯಾಯಮೂರ್ತಿ ಶಿವರಾಜ ಪಾಟೀಲರು ಈ ಬಗ್ಗೆ ಬೆಳಗಾವಿ ಸಭೆಯಲ್ಲಿ ಸೂಚನೆ ನೀಡಿದ್ದರು. ಅಲ್ಲದೇ ಈ ಹಿಂದೆ ಸಿದ್ದರಾಮಯ್ಯನವರ ಸರ್ಕಾರದಲ್ಲಿ ಎಚ್.ಕೆ. ಪಾಟೀಲರಿಗೆ ಗಡಿ ಉಸ್ತುವಾರಿ ಸ್ಥಾನಮಾನ ನೀಡಿ ಗಡಿಯ ಸಂರಕ್ಷಣೆಯ ಬಗ್ಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಆದರೆ ಈಗ ಜಾರಿಯಲ್ಲಿರುವ ಸರ್ಕಾರ ಈ ಬಗ್ಗೆ ಕ್ರಮ ಜರುಗಿಸಬೇಕು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಮಹಿಳಾ ಅಧ್ಯಕ್ಷೆ ಸುಮಾ ಪುರದ, ಜಿಲ್ಲಾ ಮುಖಂಡರಾದ ಬಸವಣ್ಣೆಯ್ಯ ಬಸಾಪುರಮಠ, ಪ್ರವೀಣ ಕಾಗದ, ಮಂಜುನಾಥ ಬಡಿಗೇರ, ಲೋಹಿತಾಶ್ವರ ಓಲೇಕಾರ, ಅಲ್ಲಾವುದ್ದೀನ ಕಟ್ಟೂರ, ಸಿದ್ದಲಿಂಗೇಶ ಕೋತಂಬರಿ, ಪವಿತ್ರ ಮೋಟಳ್ಳಿ, ಮೀನಾಕ್ಷಮ್ಮ ಗಾಜಿ, ಚನ್ನಮ್ಮ ವಾಲ್ಮೀಕಿ, ನಾಗರಾಜ ಮುಳ್ಳಳ್ಳಿ, ಮಲ್ಲಿಕಾರ್ಜುನ ಬೆಣಗೇರಿ, ಗುತ್ತಲ ಹೋಬಳಿ ಘಟಕದ ಅಧ್ಯಕ್ಷರಾದ ನಿಂಗರಾಜ ಓಲೇಕಾರ, ಈರಣ್ಣ ಬಡಿಗೇರ, ಪೂರ್ವಾಚಾರಿ ಕಮ್ಮಾರ ಸೇರಿದಂತೆ ಹಲವಾರು ಕರವೇ ಕಾರ್ಯಕರ್ತರು ಉಪಸ್ಥಿತರಿದ್ದರು.

