
ಹಾವೇರಿಯ ಶೆಟ್ಟಿ ವಿಭೂತಿಗೆ ಮನೆಗೊಂದು ಗ್ರಂಥಾಲಯಕ್ಕಾಗಿ ಪ್ರಶಸ್ತಿ ಘೋಷಣೆ
ಹಾವೇರಿ: ಕನ್ನಡ ಪುಸ್ತಕ ಪ್ರಾಧಿಕಾರದಿಂದ ಪ್ರಸಕ್ತ ವರ್ಷದಿಂದ ಜಾರಿಗೆ ಬರುವಂತೆ ನಾಲ್ಕು ಹೊಸ ಪ್ರಶಸ್ತಿಗಳನ್ನು ಸ್ಥಾಪಿಸಿ ಘೊಷಿಸಲಾಗಿದೆ. ಹಾವೇರಿಯ ಶೆಟ್ಟಿ ಚಿನ್ನದೊಡ್ಡಪ್ಪ ವಿಭೂತಿಗೆ ಮನೆಗೊಂದು ಗ್ರಂಥಾಲಯಕ್ಕಾಗಿ ಪ್ರಶಸ್ತಿ ಘೋಷಣೆ ಮಾಡಕಾಗಿದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಮಾನಸ ಹೇಳಿದ್ದಾರೆ. ಪುಸ್ತಕ ಪ್ರಾಧಿಕಾರ ಅನುಷ್ಠಾನಗೊಳಿಸಿ ಜಾರಿಗೊಳಿಸುತ್ತಿರುವ ಮನೆಗೊಂದು ಗ್ರಂಥಾಲಯ ಕಾರ್ಯಕ್ರಮದಡಿಯಲ್ಲಿ ವಿಶಿಷ್ಟ ಹಾಗೂ ಉತ್ತಮ ಗ್ರಂಥಾಲಯಗಳನ್ನು ಅನುಷ್ಠಾನಗೊಳಿಸಿದವರಿಗೆ ಕನ್ನಡದ ಶ್ರೇಷ್ಠ ಬರಹಗಾರರ ಹೆಸರಿನಲ್ಲಿ ಸ್ಥಾಪಿಸಲಾದ ಈ ಪ್ರಶಸ್ತಿಗಳನ್ನು ನೀಡಲಾಗುವುದೆಂದು ಅವರು ತಿಳಿಸಿದರು. ಈ ನಾಲ್ಕು ಪ್ರಶಸ್ತಿಗಳನ್ನು ರಾಜ್ಯದ ನಾಲ್ಕು ಕಂದಾಯ ವಿಭಾಗಗಳಿಗೆ ಒಂದರಂತೆ ನೀಡಲಾಗುತ್ತದೆ. ಗಳಗನಾಥ ಅವರ ಹೆಸರಿನಲ್ಲಿ ಈ ಪ್ರಶಸ್ತಿಗಳನ್ನು ನೀಡಲಾಗುವುದು ಎಂದು ಡಾ. ಮಾನಸ ಹೇಳಿದ್ದಾರೆ.
೨೦೨೫ನೇ ಸಾಲಿನಲ್ಲಿ ರಾಜ್ಯದ ನಾಲ್ಕು ಕಂದಾಯ ವಿಭಾಗಗಳಲ್ಲಿ ನಾಲ್ಕು ಮಂದಿ ಗಣ್ಯರನ್ನು ಈ ಪ್ರಶಸ್ತಿಗಾಗಿ ಆಯ್ಕೆ ಮಾಡಲಾಗಿದ್ದು, ಪ್ರಶಸ್ತಿ ವಿವರ ಕೆಳಕಂಡಂತಿದೆ. ಗಳಗನಾಥ ಪ್ರಶಸ್ತಿ
ಶ್ರೀ ಶೆಟ್ಟಿ ಚಿನ್ನದೊಡ್ಡಪ್ಪ ವಿಭೂತಿ, ಹಾವೇರಿ (ಬೆಳಗಾವಿ ವಿಭಾಗ) (ಪ್ರಶಸ್ತಿ ಮೊತ್ತ ರೂ.೨೫,೦೦೦-೦೦)ಗಳಗನಾಥ ಪ್ರಶಸ್ತಿ.
ವ್ಯಕ್ತಿ ಪರಿಚಯ: ಅಕಾಡೆಮಿಕ್ ಪದವಿಗಳಿಗೂ, ಜ್ಞಾನಕ್ಕೂ ಸಂಬಂಧ ಇರುವುದಿಲ್ಲ ಎಂಬುದಕ್ಕೆ ಶಟ್ಟಿ ವಿಭೂತಿ ಅವರು ಅತ್ಯುತ್ತಮ ಉದಾಹರಣೆ. ಹಾವೇರಿಯ ನಾಗೇಂದ್ರನ ಮಟ್ಟಿಯಲ್ಲಿ ಸಣ್ಣದೊಂದು ಗುಡಿಸಿಲಿನಲ್ಲಿ ಪುಸ್ತಕಗಳ ದೊಡ್ಡ ಸಂಗ್ರಹವನ್ನೇ ಹೊಂದಿದ್ದ, ಶೆಟ್ಟಿ ವಿಭೂತಿ ಅವರ ಪುಸ್ತಕ ಪ್ರೀತಿಯನ್ನು ಗುರುತಿಸಿದ್ದು, ಮನೆಗೊಂದು ಗ್ರಂಥಾಲಯ ಯೋಜನೆಯ ಜಿಲ್ಲಾ ಜಾಗೃತಿ ಸಮಿತಿ. ಸುಡುಗಾಡು ಸಿದ್ಧರ ಕಾಲೋನಿಯಲ್ಲಿ ಸುಡುಗಾಡು ಸಿದ್ದರ ಜನಾಂಗಕ್ಕೆ ಸೇರಿದ ಈ ವ್ಯಕ್ತಿ ವಿದ್ಯಾಭ್ಯಾಸ ವಂಚಿತ, ಆದರೆ ಕನ್ನಡ, ಇಂಗ್ಲೀಷ್, ಹಿಂದಿ ಹಾಗೂ ತೆಲುಗು ಭಾಷೆಗಳಲ್ಲಿ ಅದ್ಭುತವಾದ ಭಾಷಣ ಮಾಡುವ ಸಾಮರ್ಥ್ಯ ಹೊಂದಿದ್ದಾರೆ.
ಸಾಮಾಜಿಕ ಜಾಗೃತಿ ಮತ್ತು ಸಮಕಾಲೀನ ಸಂದರ್ಭದ ಸಮಸ್ಯೆಗಳ ಬಗ್ಗೆ ತಮ್ಮದೇ ದೃಷಿಕೋನದಿಂದ ವಿಶ್ಲೇಷಣೆ ಮಾಡುವ ಶೆಟ್ಟಿ ವಿಭೂತಿ ತಮ್ಮ ಪುಟ್ಟ ಗುಡಿಸಿಲಿನಲ್ಲಿಯೇ ಸಾಕಷ್ಟು ಪುಸ್ತಕಗಳನ್ನು ಸಂಗ್ರಹ ಮಾಡಿ ಇಟ್ಟಿದ್ದಾರೆ. ಆ ಪುಸ್ತಕಗಳನ್ನು ಕಾಲೋನಿಯ ಮಕ್ಕಳಿಗೆ ಓದಲು ಕೊಟ್ಟು ಅಲೆಮಾರಿ ಜನಾಂಗದ ಪ್ರತೀ ಮಗುವಿಗೂ ಓದುವ ಹವ್ಯಾಸವನ್ನು ರೂಢಿಸುವಲ್ಲಿ ಪ್ರಯತ್ನ ಮಾಡುತಿದ್ದಾರೆ. ಶೆಟ್ಟಿ ವಿಭೂತಿಯವರ ಈ ಕೆಲಸವನ್ನು ಗುರುತಿಸಿ ಕನ್ನಡ ಪುಸ್ತಕ ಪ್ರಾಧಿಕಾರ ಅವರ ಮನೆಯಲ್ಲಿ ಗ್ರಂಥಾಲಯ ಅನುಷ್ಠಾನ ಕಾರ್ಯಕ್ರಮ ಆಯೋಜನೆ ಮಾಡಿತ್ತು. ಇದಕ್ಕೆ “ಗುಡಿಸಿಲಿಗೆ ಬಂತು ಗ್ರಂಥಾಲಯ” ಎಂಬ ಶೀರ್ಷಿಕೆಯಡಿ ವ್ಯಾಪಕವಾದ ಮಾಧ್ಯಮ ಪ್ರಚಾರವೂ ಸಿಕ್ಕಿತ್ತು. ಇವರ ಪುಸ್ತಕ ಪ್ರೀತಿಗಾಗಿ ಕನ್ನಡ ಪುಸ್ತಕ ಪ್ರಾಧಿಕಾರ ೨೦೨೫ನೇ ಸಾಲಿನ ಗಳಗನಾಥ ಪ್ರಶಸ್ತಿ ನೀಡಿ ಗೌರವಿಸುತ್ತಿದೆ.

