
ಜನರ ಸಮಸ್ಯೆಗಳಿಗೆ ತ್ವರಿತ ಪರಿಹಾರವೇ ಪ್ರಜಾಸೇವೆಯ ಉದ್ದೇಶ: ಬಸವರಾಜ ಶಿವಣ್ಣನವರ
ಬ್ಯಾಡಗಿ : ಜನಸಾಮಾನ್ಯರ ಬಹುದಿನಗಳ ಬೇಡಿಕೆ ಹಾಗೂ ಸಾರ್ವಜನಿಕ ವೈಯಕ್ತಿಕ ಸಮಸ್ಯೆಗಳನ್ನು ಸ್ಥಳೀಯ ಮಟ್ಟದಲ್ಲಿಯೇ ಆಲಿಸಿ, ಕಾನೂನು ಚೌಕಟ್ಟಿನೊಳಗೆ ತ್ವರಿತವಾಗಿ ಪರಿಹಾರ ಒದಗಿಸುವ ಸದುದ್ದೇಶದಿಂದ ‘ಪ್ರಜಾಸೇವೆ’ ಕಾರ್ಯಕ್ರಮವನ್ನು ಜಾರಿಗೆ ತರಲಾಗಿದೆ ಎಂದು ಕರ್ನಾಟಕ ರಾಜ್ಯ ಅರಣ್ಯ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಬಸವರಾಜ ಶಿವಣ್ಣನವರ ಹೇಳಿದರು.
ಬ್ಯಾಡಗಿ ಪಟ್ಟಣದ ಶ್ರೀ ಸಿದ್ದೇಶ್ವರ ಕಲ್ಯಾಣ ಮಂಟಪದಲ್ಲಿ ಶನಿವಾರ ಆಯೋಜಿಸಲಾಗಿದ್ದ ತಾಲೂಕ ಮಟ್ಟದ ಪ್ರಜಾಸೇವಾ ಆಂದೋಲನ ಸಭೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಜನರ ಸಮಸ್ಯೆಗಳನ್ನು ಪ್ರತಿ ಹೋಬಳಿ ಹಾಗೂ ತಾಲೂಕು ಮಟ್ಟದಲ್ಲಿ ಆಲಿಸಿ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಪ್ರಜಾಸೇವೆ ಕಾರ್ಯಕ್ರಮ ರೂಪಿಸಲಾಗಿದೆ. ಸಾರ್ವಜನಿಕರು ತಮ್ಮ ಸಮಸ್ಯೆಗಳ ಕುರಿತು ಅರ್ಜಿ ಸಲ್ಲಿಸಿದಾಗ, ಸಂಬಂಧಿಸಿದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ತಕ್ಷಣ ಸ್ಪಂದಿಸಬೇಕು. ಕಾನೂನು ವ್ಯಾಪ್ತಿಯಲ್ಲಿ ಸಮಸ್ಯೆ ಪರಿಹರಿಸಲು ಸಾಧ್ಯವಾಗದಿದ್ದಲ್ಲಿ, ಅದಕ್ಕೆ ಸೂಕ್ತ ಕಾರಣವನ್ನು ಅರ್ಜಿದಾರರಿಗೆ ಸ್ಥಳದಲ್ಲಿಯೇ ತಿಳಿಸಬೇಕು ಎಂದರು.
ಸಾರ್ವಜನಿಕರು ತಮ್ಮ ಸಣ್ಣಪುಟ್ಟ ಸಮಸ್ಯೆಗಳಿಗೂ ತಿಂಗಳುಗಟ್ಟಲೆ ತಾಲೂಕು ಕಚೇರಿಗಳಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಬಾರದು. ವಿಶೇಷವಾಗಿ ಕಂದಾಯ ಇಲಾಖೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಅಧಿಕಾರಿಗಳು ಪ್ರಾಮಾಣಿಕವಾಗಿ ಪರಿಶೀಲಿಸಿ, ತಮ್ಮ ವ್ಯಾಪ್ತಿಯಲ್ಲಿ ಸಾಧ್ಯವಿರುವ ಪರಿಹಾರವನ್ನು ತ್ವರಿತವಾಗಿ ಒದಗಿಸಬೇಕು ಎಂದರು.
ಅಧಿಕಾರಿಗಳು ಸಾರ್ವಜನಿಕರೊಂದಿಗೆ ಮಾನವೀಯತೆಯಿಂದ ನಡೆದುಕೊಳ್ಳಬೇಕು. ಅರ್ಜಿಯನ್ನು ಪರಿಶೀಲಿಸದೇ ಅಥವಾ ಸಮಸ್ಯೆಯನ್ನು ಆಲಿಸದೇ ಸಾರ್ವಜನಿಕರನ್ನು ಹಿಂದಕ್ಕೆ ಕಳುಹಿಸುವ ಮನೋಭಾವವನ್ನು ಕೈಬಿಡಬೇಕು. ಜನರ ಸಮಸ್ಯೆಗಳನ್ನು ತಮ್ಮದೇ ಸಮಸ್ಯೆಗಳೆಂದು ಪರಿಗಣಿಸಿ ಸ್ಪಂದಿಸುವ ಮೂಲಕ ಉತ್ತಮ ಆಡಳಿತ ನೀಡಬೇಕು ಎಂದರು.
ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ್ ಅವರು ಸಾಮಾನ್ಯ ಜನರು ಕಚೇರಿಗೆ ಬಂದಾಗಲೂ ಅವರ ಸಮಸ್ಯೆಗಳನ್ನು ಆಲಿಸಿ ಸ್ಪಂದಿಸುವ ಉತ್ತಮ ಅಧಿಕಾರಿ ಎಂದು ಪ್ರಶಂಸಿಸಿದ ಅವರು, ಇಂತಹ ಜನಪರ ಮನೋಭಾವದ ಅಧಿಕಾರಿಗಳು ಜಿಲ್ಲೆ, ತಾಲೂಕು ಹಾಗೂ ರಾಜ್ಯಕ್ಕೆ ಅಗತ್ಯವಿದೆ ಎಂದರು.
ಸಾರ್ವಜನಿಕರ ಸಮಸ್ಯೆಗಳಿಗೆ ಅವರ ಮನೆ ಬಾಗಿಲಿನಲ್ಲೇ ಪರಿಹಾರ ಕಲ್ಪಿಸುವ ಉದ್ದೇಶದಿಂದ ಸರ್ಕಾರ ಪ್ರತ್ಯೇಕ ವ್ಯವಸ್ಥೆಯನ್ನು ರೂಪಿಸಿದ್ದು, ಹಿರಿಯ ಅಧಿಕಾರಿಗಳ ನೇಮಕ ಸೇರಿದಂತೆ ಹಲವು ಕ್ರಮಗಳನ್ನು ಕೈಗೊಂಡಿದೆ. ಇದರ ಭಾಗವಾಗಿ ರಾಜ್ಯದ ವಿವಿಧೆಡೆ ಪ್ರಜಾಸೇವೆ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಮೊದಲ ವಾರದಲ್ಲೇ ರಾಜ್ಯಾದ್ಯಂತ ಸುಮಾರು ೧೫ರಿಂದ ೧೬ ಸಾವಿರ ಅರ್ಜಿಗಳು ಸ್ವೀಕೃತವಾಗಿವೆ. ಹಲವು ಅರ್ಜಿಗಳಿಗೆ ಈಗಾಗಲೇ ಪರಿಹಾರ ಕಲ್ಪಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಡಾ ಪುನೀತ್, ಉಪ ವಿಭಾಗಧಿಕಾರಿ ಕಲ್ಯಾಣಿ ಕಾಂಬಳೆ, ಸಾಮಾಜಿಕ ಅರಣ್ಯ ವಿಭಾಗದ ಉಪ ಸಂರಕ್ಷಣಾಧಿಕಾರಿ ಚಂದ್ರಶೇಖರ ಪಾಟೀಲ, ಬ್ಯಾಡಗಿ ತಹಸೀಲ್ದಾರ್ ಚಂದ್ರಶೇಖರ ನಾಯ್ಕ್, ತಾಲೂಕ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಿಕಾರ್ಜುನ ಕೆ ಎಂ ಹಾಗೂ ಜಿಲ್ಲಾ ಮತ್ತು ತಾಲೂಕ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

