
ದೇವರಗುಡ್ಡದ ಮಾಲತೇಶ ದೇವಸ್ಥಾನದಲ್ಲಿ ನುಸಿ ಹಿಡಿದ ಅಕ್ಕಿ ಮಾರಾಟ -ಗವಿಸಿದ್ದಪ್ಪ
ಹಾವೇರಿ: ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ದೇವರಗುಡ್ಡದ ಮಾಲತೇಶ ದೇವಸ್ಥಾನದಲ್ಲಿ ಭಕ್ತರು ನೀಡಿದ ಅಕ್ಕಿಯನ್ನು ಅಕ್ರಮವಾಗಿ ಮಾರಾಟ ಮಾಡಲಾಗಿದೆ ಎಂಬ ಆರೋಪ ಸತ್ಯಕ್ಕೆ ದೂರವಾಗಿದೆ. ದೇವಸ್ಥಾನಕ್ಕೆ ದಾಸೋಹಕ್ಕಾಗಿ ಭಕ್ತರು ನೀಡಿದ ಅಕ್ಕಿ ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹವಾಗಿದ್ದು, ನುಸಿ ಮತ್ತು ಹುಳು ಹಿಡಿದ ಕಾರಣ ಬಳಕೆಗೆ ಯೋಗ್ಯವಾಗಿರಲಿಲ್ಲ. ಹೀಗಾಗಿ ಕಮಿಟಿ ಸಭೆಯಲ್ಲಿ ಚರ್ಚಿಸಿ, ನಿಯಮಾನುಸಾರ ಮಾರಾಟ ಮಾಡಿ ಚೆಕ್ ಮೂಲಕ ಹಣ ಪಡೆಯಲಾಗಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಗವಿಸಿದ್ದಪ್ಪ ದ್ಯಾಮಣ್ಣನವರ ಸ್ಪಷ್ಟಪಡಿಸಿದರು.
ಮಂಗಳವಾರ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ದೇವಸ್ಥಾನ ಆಡಳಿತ ಮಂಡಳಿ ಹಾಗೂ ಸ್ಥಳೀಯ ಆಡಳಿತ ಮಂಡಳಿ ಎಂಬ ಎರಡು ಸಮಿತಿಗಳಿವೆ. ದಸರಾ ಉತ್ಸವದ ಸಂದರ್ಭದಲ್ಲಿ ಲಕ್ಷಾಂತರ ಭಕ್ತರು ದೇವರ ದರ್ಶನಕ್ಕೆ ಆಗಮಿಸುತ್ತಾರೆ. ಭಕ್ತರು ಬೆಲ್ಲ, ಅಕ್ಕಿ, ಬೇಳೆ ಸೇರಿದಂತೆ ವಿವಿಧ ದವಸ-ಧಾನ್ಯಗಳನ್ನು ನೀಡುತ್ತಾರೆ. ರವಿವಾರ, ಗುರುವಾರ, ಅಮಾವಾಸ್ಯೆ ಹಾಗೂ ಹುಣ್ಣಿಮೆ ದಿನಗಳಲ್ಲಿಯೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಆಗ ಮಾತ್ರ ದಾಸೋಹದ ಮೂಲಕ ಅನ್ನಸಂತರ್ಪಣೆ ನಡೆಸಲಾಗುತ್ತದೆ ಎಂದರು.
ಭಕ್ತರಿಂದ ಹೆಚ್ಚಿನ ಪ್ರಮಾಣದಲ್ಲಿ ಅಕ್ಕಿ ಸಂಗ್ರಹವಾಗಿದ್ದರಿಂದ ಸ್ಥಳೀಯ ಕಮಿಟಿ ಸದಸ್ಯರು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಅಕ್ಕಿಗೆ ನುಸಿ ಮತ್ತು ಹುಳು ಹಿಡಿದಿರುವುದು ಕಂಡುಬಂದಿದೆ. ದಾಸೋಹಕ್ಕೆ ಬಳಸಲು ಸಾಧ್ಯವಾಗದ ಕಾರಣ ಅದನ್ನು ಮಾರಾಟ ಮಾಡಿ, ಹೊಸ ಅಕ್ಕಿ ಖರೀದಿಸಿ ಅನ್ನಸಂತರ್ಪಣೆಗೆ ಬಳಸುವಂತೆ ನಿರ್ಣಯಿಸಿ, ಎಲ್ಲ ಸದಸ್ಯರಿಗೆ ನೋಟಿಸ್ ನೀಡಿ, ನ.೧೧ರಂದು ಸಭೆ ನಡೆಸಿ ಠರಾವು ಅಂಗೀಕರಿಸಲಾಗಿದೆ. ವ್ಯಾಪಾರಸ್ಥರೊಂದಿಗೆ ಪ್ರತಿ ಕೆ.ಜಿ.ಗೆ ೧೬ರಂತೆ ದರ ನಿಗದಿಪಡಿಸಿ, ಅಧ್ಯಕ್ಷರ ಅನುಮತಿ ಪಡೆದು ಮಾರಾಟ ಮಾಡಲಾಗಿದೆ ಎಂದು ತಿಳಿಸಿದರು.
ಬೆಳಗ್ಗೆ ೧೧ ಗಂಟೆ ಸುಮಾರಿಗೆ ಜನ ಸಮೂಹ ಇದ್ದಾಗಲೇ ಅಕ್ಕಿ ಮಾರಾಟ ಮಾಡಲಾಗಿದೆ. ಆದರೆ, ಪ್ರಕಾಶ ಎಂಬ ವ್ಯಕ್ತಿ ಏಕಾಏಕಿ ಆಗಮಿಸಿ, ದೇವಸ್ಥಾನದ ಅಕ್ಕಿಯನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದೀರಾ ಎಂದು ಪ್ರಶ್ನಿಸಿ ಮಾತಿನ ಚಕಮಕಿ ನಡೆಸಿದ್ದಾರೆ. ನಾವು ಅಕ್ರಮವಾಗಿ ಅಕ್ಕಿ ಮಾರಾಟ ಮಾಡಿಲ್ಲ, ಸಭೆಯಲ್ಲಿ ಚರ್ಚಿಸಿಯೇ ಒಟ್ಟು ೪೨ ಕ್ವಿಂಟಾಲ್ ಅಕ್ಕಿಯನ್ನು ೬೭ ಸಾವಿರಕ್ಕೆ ಮಾರಾಟ ಮಾಡಲಾಗಿದ್ದು, ದೇವಸ್ಥಾನದ ಹೆಸರಿನಲ್ಲಿ ಚೆಕ್ ಪಡೆಯಲಾಗಿದೆ. ಈ ಹಿಂದೆ ಮಾರಾಟ ಮಾಡಿದ್ದ ೨೦ ಕ್ವಿಂಟಾಲ್ ಅಕ್ಕಿಯ ಹಣವನ್ನೂ ದೇವಸ್ಥಾನದ ಕಮಿಟಿ ಹೆಸರಿನಲ್ಲಿ ಜಮೆ ಮಾಡಲಾಗಿದೆ. ಯಾವುದೇ ಹಣ ದುರುಪಯೋಗವಾಗಿಲ್ಲ ಎಂದು ಸ್ಪಷ್ಟಪಡಿಸಿದರು.
ಹೊಸ ಆಡಳಿತ ಮಂಡಳಿ ಅಧಿಕಾರಕ್ಕೆ ಬಂದಾಗಿನಿಂದ ಏನಾದರೂ ಕಿರಿಕಿರಿ ಮಾಡಲಾಗುತ್ತಿದೆ. ಆದರೆ, ನಾವು ಪಾರದರ್ಶಕವಾಗಿ ಕೆಲಸ ಮಾಡುತ್ತಿದ್ದೇವೆ. ಸಿಸಿ ಕ್ಯಾಮರಾ, ಪೊಲೀಸರ ಹಾಗೂ ಕೋರ್ಟ್ ಸಿಬ್ಬಂದಿ ಬಂದೋಬಸ್ತ್ನಲ್ಲಿ ಹುಂಡಿ ತೆರೆಯಲಾಗಿದೆ. ಒಂದು ಡಬ್ಬಿಯಲ್ಲಿಯೇ ೪೧ ಲಕ್ಷ ಸಂಗ್ರಹವಾಗಿತ್ತು. ಒಟ್ಟು ಸಂಗ್ರಹವಾದ ೧.೨೬ಕೋಟಿ ರೂ., ಬ್ಯಾಂಕ್ಗೆ ಜಮಾ ಮಾಡಲಾಗಿದೆ. ಇನ್ನೂ ೨೪ ಡಬ್ಬಿ ಏಣಿಕೆ ಮಾಡಬೇಕಿದೆ ಎಂದ ಅವರು, ದೇವಸ್ಥಾನದ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿರುವುದನ್ನು ಸಹಿಸದೆ ಕೆಲವರು ಹೀಗೆ ಸುಳ್ಳು ಆರೋಪ ಮಾಡುತ್ತಿದ್ದಾರೆ. ಇದರಿಂದ ದೇವಸ್ಥಾನಕ್ಕೆ ಕೆಟ್ಟ ಹೆಸರು ಬರುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು. ಸುದ್ದಿಗೋಷ್ಠಿಯಲ್ಲಿ ದೇವಸ್ಥಾನದ ಸ್ಥಳೀಯ ಸಮಿತಿ ಅಧ್ಯಕ್ಷ ಭರಮಣ್ಣ ಉರ್ಮಿ, ಸುರೇಶ ತಳಗೇರಿ, ಪ್ರಕಾಶ ಬಳ್ಳಾರಿ, ಬಸವಂತಪ್ಪ ಮೈಲಾರ ಇತರರಿದ್ದರು.

