
ಸಾಮಾಜಿಕ ಸೇವೆ ಗುರುತಿಸಿ ಉಡಚಪ್ಪ ಮಾಳಗಿ ಅವರಿಗೆ ‘ಭೀಮ ಸೇವಾ ರತ್ನ’ ಪ್ರಶಸ್ತಿ
ಹಾವೇರಿ: ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡು ಸಂಘಟನೆ ಹಾಗೂ ಸಾಮಾಜಿಕ ಸೇವಾ ಕ್ಷೇತ್ರದಲ್ಲಿ ನಿರಂತರವಾಗಿ ಸೇವೆ ಸಲ್ಲಿಸುತ್ತಿರುವ ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಮತ್ತು ಹಿಂದುಳಿದ ವರ್ಗ, ಅಲ್ಪಸಂಖ್ಯಾತರ ಕಲ್ಯಾಣ ಸಮಿತಿ (ರಿ) ರಾಜ್ಯ ಸಂಘಟನಾ ಸಂಚಾಲಕ ಉಡಚಪ್ಪ ಮಾಳಗಿ ಅವರಿಗೆ ‘ಭೀಮ ಸೇವಾ ರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಮುಂಡಗೋಡ ತಾಲೂಕಿನ ಮಾಳಗಿ ಗ್ರಾಮದ ಸಮುದಾಯ ಭವನದಲ್ಲಿ ಡಾ. ಬಾಬಾಸಾಹೇಬ ಅಂಬೇಡ್ಕರ್ ಸೇವಾ ಸಮಿತಿ ಎಸ್ಸಿ/ಎಸ್ಟಿ (ರಿ) ವತಿಯಿಂದ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಡಾ. ಬಾಬಾಸಾಹೇಬ ಅಂಬೇಡ್ಕರ್ ಸೇವಾ ಸಮಿತಿಯ ಅಧ್ಯಕ್ಷ ಯಲ್ಲಪ್ಪ ಹೊಸಮನಿ, ಸಮಾಜದಲ್ಲಿ ಉತ್ತಮ ಸಾಮಾಜಿಕ ಸೇವೆ ಸಲ್ಲಿಸುತ್ತಿರುವ ವ್ಯಕ್ತಿಗಳನ್ನು ಗುರುತಿಸಿ ಭೀಮ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಸಂಘಟನೆ ಹಾಗೂ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡು ಎಲ್ಲ ಕ್ಷೇತ್ರಗಳಲ್ಲಿಯೂ ತಮ್ಮದೇ ಆದ ಸೇವಾ ಮನೋಭಾವ ಹೊಂದಿರುವ ಹಾವೇರಿ ಜಿಲ್ಲೆಯ ಉಡಚಪ್ಪ ಮಾಳಗಿ ಸೇರಿದಂತೆ ಹಲವು ಗಣ್ಯರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಈ ಗೌರವ ಮತ್ತಷ್ಟು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ಪ್ರೇರಣೆಯಾಗಲಿ ಎಂದು ಆಶಿಸಿದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಉಡಚಪ್ಪ ಮಾಳಗಿ, ಬಸವಣ್ಣನವರ ಕಾಯಕವೇ ಕೈಲಾಸ ತತ್ವದಡಿ ನಿರಂತರವಾಗಿ ಸಮಾಜ ಸೇವೆ ಮಾಡುತ್ತಾ ಬಂದಿದ್ದೇನೆ. ಡಾ. ಬಾಬಾಸಾಹೇಬ ಅಂಬೇಡ್ಕರ್ ಸೇವಾ ಸಮಿತಿಯು ಭೀಮ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಿರುವುದು ಮತ್ತಷ್ಟು ಸೇವೆ ಮಾಡಲು ಪ್ರೋತ್ಸಾಹ ನೀಡಿದೆ. ಸಮಿತಿಯ ರಾಜ್ಯಾಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸಹಕಾರ ನೀಡಿದ ಮುಖಂಡರಿಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಟಿಬೇಟಿಯನ್ ಕ್ಯಾಂಪ್ನ ಜಂಪಾ ಲಾಮಾ ಅವರಿಗೂ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಸತ್ರ ನ್ಯಾಯಾಲಯದ ಅಭಿಯೋಜಕ ರಾಜೇಶ ಮಳಗೀಕರ, ಅಲ್ಪಸಂಖ್ಯಾತರ ಘಟಕದ ರಾಜ್ಯಾಧ್ಯಕ್ಷ ಮಹಮ್ಮದ್ ರಫೀಕ್ ನದಾಫ್, ಡಾ. ಪ್ರಕಾಶ ಅಜ್ಜಮನವರ, ವಿಜಯಕುಮಾರ ಭೋಸ್ಲೆ, ಮೇಘರಾಜ ಪಟೇಲ್, ಹನುಮಂತಪ್ಪ ಅತ್ತಿಗೇರಿ, ಸುನೀಲ ಹೊನ್ನಾವರ, ಫೀರಪ್ಪ ಲಮಾಣಿ, ರೂಪಾ ಅಂಗಡಿ, ಮಹಾವೀರ ಕಂಬಳೆ, ಪ್ರಕಾಶ ಛಲವಾದಿ, ಶಿವು ಮುದಿಮಲ್ಲಣ್ಣನವರ ಸೇರಿದಂತೆ ಅನೇಕ ಗಣ್ಯರು ಹಾಗೂ ಮುಖಂಡರು ಉಪಸ್ಥಿತರಿದ್ದರು.

