
ಜೂ.೨೮ ರಂದು ಪಲ್ಸ್ ಪೋಲಿಯೋ-ಐದು ವರ್ಷದೊಳಗಿನ ಮಗು ಲಸಿಕೆಯಿಂದ ಹೊರಗುಳಿಯಬಾರದು: ಡಿಸಿ ಡಾ.ವಿಜಯಮಹಾಂತೇಶ
ಹಾವೇರಿ : ಜಿಲ್ಲೆಯಲ್ಲಿ ಇದೇ ಜೂ.೨೮ ರಂದು ಪಲ್ಸ್ ಪೋಲಿಯೋ ಕಾರ್ಯಕ್ರಮ ಜರುಗಲಿದ್ದು, ಸೊನ್ನೆಯಿಂದ ಐದು ವರ್ಷದೊಳಗಿನ ಯಾವುದೇ ಮಗು ಪಲ್ಸ್ ಪೋಲಿಯೋ ಲಸಿಕೆಯಿಂದ ಹೊರಗುಳಿಯದಂತೆ ನೋಡಿಕೊಳ್ಳಬೇಕು ಹಾಗೂ ಎಲ್ಲರೂ ಸಮನ್ವಯದಿಂದ ಕಾರ್ಯನಿರ್ವಹಿಸುವ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಅವರು ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಜರುಗಿದ ಪಲ್ಸ್ ಪೋಲಿಯೋ ಕಾರ್ಯಕ್ರಮದ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪಲ್ಸ್ ಪೋಲಿಯೋ ಕಾರ್ಯಕ್ರಮದ ಕುರಿತು ಮುಂಚಿತವಾಗಿ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಹೆಚ್ಚಿನ ಪ್ರಚಾರಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಶಾಲಾ ಮಕ್ಕಳಿಂದ ಪಲ್ಸ್ ಪೋಲಿಯೋ ಕಾರ್ಯಕ್ರಮದ ಬಗ್ಗೆ ಜಾಥಾ ಮೂಲಕ ಜಾಗೃತಿ ಮೂಡಿಸಬೇಕು. ಗ್ರಾಮ ಪಂಚಾಯತಿಗಳಿಂದ ಗ್ರಾಮಗಳಲ್ಲಿ ಪಲ್ಸ್ ಪೋಲಿಯೋ ಕಾರ್ಯಕ್ರಮದ ಬಗ್ಗೆ ಟಾಂ ಟಾಂ ಮೂಲಕ ಪ್ರಚಾರ ಕೈಗೊಳ್ಳಲು, ಪಲ್ಸ್ ಪೋಲಿಯೋ ದಿನದಂದು ಅಂಗನವಾಡಿ ಕೇಂದ್ರಗಳು ಆರಂಭ ಇರುವಂತೆ ನೋಡಿಕೊಳ್ಳಬೇಕು. ನಗರಸಭೆ ಹಾಗೂ ಪುರಸಭೆ ವ್ಯಾಪ್ತಿಯ ಕೊಳಚೆ ಪ್ರದೇಶಗಳಲ್ಲಿ ಮುಂಚಿತವಾಗಿ ಪ್ರಚಾರ ಕೈಗೊಳ್ಳಲು, ಬ್ಯಾನರ್ ಹಾಗೂ ಬಿತ್ತಿ ಪತ್ರ ಪ್ರದರ್ಶಿಸಲು, ಜಲ್ಲಿ ಒಡೆಯುವ, ಗಣಿಗಾರಿಕೆ ಹಾಗೂ ಕುರಿ ಕಾಯುವವರು ಸೇರಿದಂತೆ ಇತರೆ ವಲಸೆ ಕಾರ್ಮಿಕರ ಐದುವರ್ಷದೊಳಗಿನ ಮಕ್ಕಳನ್ನು ಗುರುತಿಸಿ ಲಸಿಕೆ ಹಾಕಿಸುವಂತೆ ನಗರಾಭಿವೃದ್ಧಿ ಇಲಾಖೆ, ಕಾರ್ಮಿಕ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪೋಲಿಯೋ ಲಸಿಕೆಯನ್ನು ಸುರಕ್ಷಿತವಾಗಿಡಲು ಹಾಗೂ ಶೀತಲ ಪ್ಯಾಕ್ಗಳನ್ನು ತಯಾರಿಸಲು ನಿರಂತರ ವಿದ್ಯುತ್ ಅವಶ್ಯಕತೆ ಇರುವುದರಿಂದ ಪ್ರಾಥಮಿಕ ಮತ್ತು ಸಮುದಾಯ ಆರೋಗ್ಯ ಕೇಂದ್ರ ಪ್ರದೇಶಗಳಲ್ಲಿ ಪಲ್ಸ್ ಪೋಲಿಯೋ ಕಾರ್ಯಕ್ರಮದ ಮೊದಲ ಒಂದು ವಾರ ಹಾಗೂ ನಂತರದ ಮೂರು ದಿನಗಳವರೆಗೆ ವಿದ್ಯುತ್ ವ್ಯತ್ಯಯವಾಗದಂತೆ ನಿರಂತರ ವಿದ್ಯುತ್ ಸರಬರಾಜು ಮಾಡುವಂತೆ ಹೆಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಂ.ಜಯಾನಂದ ಮಾತನಾಡಿ, ಜೂ. ೨೮ ರಿಂದ ಜು.೧ರವರೆಗೆ ಪಲ್ಸ್ ಪೋಲಿಯೋ ಕಾರ್ಯಕ್ರಮ ಜರುಗಲಿದ್ದು, ಜೂ.೨೮ ರಂದು ಬೂತ್ ಮಟ್ಟದಲ್ಲಿ ಹಾಗೂ ನಂತರದ ದಿನಗಳಲ್ಲಿ ಮನೆ ಮನೆ ಭೇಟಿ ನೀಡಲಾಗುವುದು. ಜಿಲ್ಲೆಯಲ್ಲಿ ಗ್ರಾಮೀಣ ಭಾಗದಲ್ಲಿ ೧,೧೩,೧೭೩ ಹಾಗೂ ನಗರ ಪ್ರದೇಶದಲ್ಲಿ ೩೮,೧೩೫ ಸೇರಿ ೧,೫೧,೩೦೮ ಸೊನ್ನೆಯಿಂದ ಐದು ಮಕ್ಕಳನ್ನು ಗುರುತಿಸಲಾಗಿದೆ. ಗ್ರಾಮೀಣ ಭಾಗದಲ್ಲಿ ೮೦೬ ಹಾಗೂ ನಗರ ಪ್ರದೇಶದಲಿ ೧೯೨ ಸೇರಿ ೯೯೮ ಬೂತ್ಗಳನ್ನು ಗುರುತಿಸಲಾಗಿದೆ. ಇದಲ್ಲದೇ ಬಸ್ ನಿಲ್ದಾಣದಲ್ಲಿ ಬಸ್ಗಳಲ್ಲಿ ಸಂಚರಿಸುವ ಮಕ್ಕಳಿಗೆ ಹಾಗೂ ರೈಲು ನಿಲ್ದಾಣದಲ್ಲಿ ನಿಲುಗಡೆಯಾದ ರೈಲಿನಲ್ಲಿರುವ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ೧೯೯೬ ವ್ಯಾಕ್ಸಿನೇಟರ್ಸ್ಗಳನ್ನು ಹಾಗೂ ೨೦೧ ಮೇಲ್ವಿಚಾರಕರನ್ನು ನಿಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.
ಈಗಾಗಲೇ ಜಿಲ್ಲೆಗೆ ಅಗತ್ಯ ಲಸಿಕೆ ಸರಬರಾಜಾಗಿದೆ. ೯೨ ಕೋಲ್ಡ್ ಚೈನ್ ಪಾಯಿಂಟ್ಗಳನ್ನು ಗುರುತಿಸಲಾಗಿದೆ. ೧,೪೩೮ ಆಶಾ ಕಾರ್ಯಕರ್ತೆಯರು ಹಾಗೂ ೧,೮೯೫ ಅಂಗನವಾಡಿ ಕಾರ್ಯಕರ್ತೆಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಸಭೆಗೆ ತಿಳಿಸಿದರು.
ಪ್ರಚಾರ ಸಾಮಗ್ರಿ ಬಿಡುಗಡೆ: ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು ಪಲ್ಸ್ ಪೋಲಿಯೋ ಕಾರ್ಯಕ್ರಮದ ಪ್ರಚಾರ ಸಾಮಗ್ರಿಗಳನ್ನು ಬಿಡುಗಡೆಗೊಳಿಸಿದರು.
ಸಭೆಯಲ್ಲಿ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಪಿ.ಆರ್.ಹಾವನೂರ, ಡಾ.ಜಗದೀಶ ಪಾಟೀಲ, ಡಾ.ನಿಲೇಶ, ಡಾ.ಚನ್ನವೀರಯ್ಯ ವೀರಕ್ತಮಠಮಠ, ಡಾ.ಸರಿತಾ, ಡಾ.ಪ್ರಭಾಕರ ಕುಂದೂರ ಸೇರಿದಂತೆ ತಾಲೂಕಾ ಆರೋಗ್ಯಾಧಿಕಾರಿಗಳು, ವಿವಿಧ ಇಲಾಖೆ ಅಧಿಕಾರಿಗಳು, ಇತರರು ಉಪಸ್ಥಿತರಿದ್ದರು.

