
ಬಸವಣ್ಣನವರ ತತ್ವಗಳನ್ನು ಮುಂದಿನ ಪೀಳಿಗೆಗೂ ತಲುಪಿಸಬೇಕಾಗಿದೆ- ಡಿಸಿ ಡಾ.ವಿಜಯ ಮಹಾಂತೇಶ
ಹಾವೇರಿ : ಕಾಯಕ, ದಾಸೋಹ, ಸಮಾನತೆ ಮತ್ತು ನೈತಿಕ ಮೌಲ್ಯಗಳನ್ನು ಸಮಾಜದಲ್ಲಿ ಜಾರಿಗೆ ತಂದ ಮಹಾನ್ ಚಿಂತಕರು ಬಸವಣ್ಣನವರು. ಅವರ ತತ್ವಗಳು ಸರಳವಾಗಿದ್ದು, ಪ್ರತಿಯೊಬ್ಬರೂ ಅವುಗಳನ್ನು ಅರ್ಥಮಾಡಿಕೊಂಡು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಡಾ.ವಿಜಯ ಮಹಾಂತೇಶ ದಾನಮ್ಮನವರ ಕರೆ ನೀಡಿದರು.
ನಗರದ ಹುಕ್ಕೇರಿ ಮಠದ ಶಿವಾನುಭವ ಮಂಟಪದಲ್ಲಿ ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಹುಕ್ಕೇರಿ ಮಠದ ಆಶ್ರಯದಲ್ಲಿ ಆಯೋಜಿಸಿದ್ದ ಜಗಜ್ಯೋತಿ ಬಸವೇಶ್ವರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಒಂದು ರಾಷ್ಟ್ರ ಸದೃಢವಾಗಿ ಬೆಳೆಯಬೇಕಾದರೆ ಪ್ರತಿಯೊಬ್ಬ ನಾಗರಿಕನೂ ಶ್ರಮಿಸಬೇಕು. ಬಸವಣ್ಣನವರ ತತ್ವಗಳು ಇಂದಿಗೂ ಜೀವಂತವಾಗಿದ್ದು, ಅವರ ತತ್ವಗಳನ್ನು ಮುಂದಿನ ಪೀಳಿಗೆಗೂ ತಲುಪಿಸಬೇಕಾಗಿದೆ ಎಂದು ಹೇಳಿದರು.
ಜಾತಿ-ಧರ್ಮದ ಭೇದ ಭಾವವನ್ನು ಸಮಾಜದಿಂದ ದೂರ ಮಾಡಬೇಕು. ಅಲ್ಲದೆ ೧೨ನೇ ಶತಮಾನವು ವಿಶೇಷವಾದ ಕಾಲಘಟ್ಟವಾಗಿದ್ದು, ಆ ಸಂದರ್ಭದಲ್ಲಿ ಶೋಷಣೆ ಮತ್ತು ಅಸಮಾನತೆಯಿಂದ ಬಳಲುತ್ತಿದ್ದ ದಲಿತರು ಹಾಗೂ ದುರ್ಬಲ ವರ್ಗಗಳ ಪರವಾಗಿ ನಿಂತು, ಅವರ ಅಭಿವೃದ್ಧಿಗೆ ಶ್ರಮಿಸಿದ ಮಹಾನ್ ವ್ಯಕ್ತಿ ಬಸವಣ್ಣನವರು. ಅಂತರಜಾತಿ ವಿವಾಹಗಳನ್ನು ಉತ್ತೇಜಿಸಿ ಕಲ್ಯಾಣ ಕ್ರಾಂತಿಗೆ ಕಾರಣರಾದ ಬಸವಣ್ಣನವರ ಆಚಾರ-ವಿಚಾರಗಳು ಸರ್ವಕಾಲಕ್ಕೂ ಪ್ರಸ್ತುತವಾಗಿವೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಎಫ್.ಎನ್. ಗಾಜಿಗೌಡ್ರ ಮಾತನಾಡಿ ಬಸವಣ್ಣ ನವರ ತತ್ವಗಳು, ಆದರ್ಶಗಳು ಮತ್ತು ಚಿಂತನೆಗಳು ಸಮ ಸಮಾಜ ನಿರ್ಮಾಣಕ್ಕೆ ದಾರಿದೀಪವಾಗಿವೆ ಎಂದು ಹೇಳಿದರು. ಸಾಮಾಜಿಕ ಅಸಮಾನತೆ, ಜಾತಿ ವ್ಯವಸ್ಥೆ ಸೇರಿದಂತೆ ಅನೇಕ ಅನಿಷ್ಠ ಪದ್ಧತಿಗಳನ್ನು ತೊಡೆದುಹಾಕಲು ೧೨ನೇ ಶತಮಾನದಲ್ಲಿ, ಸರಳ ವಚನಗಳ ಮೂಲಕ ಸಮಾಜದಲ್ಲಿ ಮಹತ್ತರ ಸುಧಾರಣೆಗಳನ್ನು ತಂದ ಮಹಾನ್ ನಾಯಕ ಬಸವಣ್ಣ ಎಂದು ಬಣ್ಣಿಸಿದರು.
ಉಪನ್ಯಾಸಕರಾಗಿ ಭಾಗವಹಿಸಿದ್ದ ಬಸವ ಬಳಗದ ಶರಣ ಚಿಂತಕ ಹಾಗೂ ಕಾರ್ಯದರ್ಶಿ ಜಗದೀಶ ಹತ್ತಿಕೋಟಿ ಮಾತನಾಡಿ, ಬಸವಣ್ಣನವರು ವಿಶ್ವಗುರುಗಳಾಗಿದ್ದು, ಅವರ ವ್ಯಕ್ತಿತ್ವ ಮತ್ತು ಚಿಂತನೆಗಳು ಅಪ್ರತಿಮವಾಗಿವೆ. ದಲಿತರು, ಶೂದ್ರರು ಹಾಗೂ ಸಮಾಜದಲ್ಲಿ ತುಳಿತಕ್ಕೊಳಗಾದವರನ್ನು ತನ್ನವರಂತೆ ಅಪ್ಪಿಕೊಂಡ ಮಹಾನ್ ಮಾನವತಾವಾದಿ. ವಚನಗಳ ಮೂಲಕ ಸನ್ಯಾಸ ಮತ್ತು ಸಾಂಸಾರಿಕ ಜೀವನದ ತತ್ವಗಳನ್ನು ಸರಳವಾಗಿ ವಿವರಿಸಿದ್ದಾರೆ. ಇಂದಿನ ಜನರು ವಚನ ಸಾಹಿತ್ಯವನ್ನು ಅರಿತುಕೊಳ್ಳಬೇಕು ಎಂದು ಹೇಳಿದರು.
ಹುಕ್ಕೇರಿ ಮಠದ ಡಾ. ಸದಾಶಿವ ಮಹಾಸ್ವಾಮಿಗಳು ಹಾಗೂ ಹೊಸಮಠದ ಬಸವಶಾಂತಲಿಂಗ ಮಹಾಸ್ವಾಮಿಗಳು ಸಾನಿಧ್ಯ ವಹಿಸಿದ್ದರು.
ಕಾರ್ಯಕ್ರಮಕ್ಕೂ ಮೊದಲು ನಗರದ ಶ್ರೀ ಬಸವೇಶ್ವರ ವೃತ್ತದಲ್ಲಿರುವ ಶ್ರೀ ಬಸವೇಶ್ವರ ಪುತ್ಥಳಿಗೆ ಮಾಲಾರ್ಪಣೆ ಜರುಗಿತು. ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ನಾಗರಾಜ್ ಎಲ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ವೀರಯ್ಯಸ್ವಾಮಿ ಹಿರೇಮಠ, ಬಸವ ಬಳಗದ ಅಧ್ಯಕ್ಷ ವಿ.ಜಿ. ಏಳಗೇರಿ, ಪರಮೇಶ್ವರಪ್ಪ ಮೇಗಳಮನಿ, ಮಹೇಶ್ ಚಿನ್ನಿಕಟ್ಟಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

