
“ಹಾವೇರಿ ಜಿಲ್ಲೆಯ ಜನ ಚಿಕ್ಕ ಕೆಲಸ ಮಾಡಿದರೂ ಒಳ್ಳೆಯ ಮಾತುಗಳನ್ನು ಆಡುತ್ತಾರೆ”
ಹಾವೇರಿ: ಸುಧಾರಿತ ವೈದ್ಯಕೀಯ ಸೇವೆ, ಒಳ್ಳೆಯ ಶಿಕ್ಷಣ, ಕುಡಿವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಹಾಗೂ ನೀರಾವರಿ ಸೌಲಭ್ಯ ಕಲ್ಪಿಸುವುದು ನನ್ನ ಕನಸು. ಈ ದೃಷ್ಟಿಕೋನದಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಹೇಳಿದರು.ಜಿಲ್ಲೆಯಲ್ಲಿ ಆಯೋಜಿಸಿದ್ದ ಭೂ ಗ್ಯಾರಂಟಿ ಸಮರ್ಪಣಾ ಸಮಾವೇಶದ ಯಶಸ್ಸಿನ ಹಿನ್ನೆಲೆಯಲ್ಲಿ ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಕೃತಜ್ಞತೆ ಸಲ್ಲಿಸಲು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಉಸ್ತುವಾರಿ ಸಚಿವನಾಗಿ ಈ ಜಿಲ್ಲೆಗೆ ಕೆಲವು ಸಮಸ್ಯೆಗಳಿಗಾದರೂ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಶ್ರಮಿಸುತ್ತೇನೆ. ಈ ಹಾದಿಯಲ್ಲಿ ನಿಮ್ಮ ಸಹಕಾರ ಅಗತ್ಯ ಎಂದು ಹೇಳಿದರು.
ಹಿಂದಿನ ಸರ್ಕಾರದಲ್ಲಿ ಜಿಲ್ಲೆಯಲ್ಲಿ ಕೆಲಸಗಳು ಆಗಿಲ್ಲ ಎಂದು ಟೀಕೆ ಮಾಡಲು ಬಯಸುವುದಿಲ್ಲ. ಆ ಕೆಲಸಗಳನ್ನು ಮಾಡಲು ನನಗೆ ಅವಕಾಶ ಮಾಡಿಕೊಂಡಿದ್ದಾರೆ ಎಂದು ಭಾವಿಸುತ್ತೇನೆ. ಹಿಮ್ಸ್ ಕಟ್ಟಡಕ್ಕೆ ರಾಜ್ಯ ಸರ್ಕಾರ ಸುಮಾರು ೨೦೦ ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದು, ಕಾಲೇಜು ಸ್ವಂತ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ. ವಿದ್ಯಾರ್ಥಿಗಳ ಪ್ರವೇಶ ಮಿತಿ ೧೫೦ರಿಂದ ೨೦೦ಕ್ಕೆ ಹೆಚ್ಚಳವಾಗಲಿದೆ. ಪ್ಯಾರಾ ಮೆಡಿಕಲ್ ಕಾಲೇಜು, ಟ್ರಾಮಾ ಸೆಂಟರ್ ಕೂಡಾ ನಿರ್ಮಾಣವಾಗಲಿದೆ ಎಂದು ವಿವರಿಸಿದರು.
ಉಸ್ತುವಾರಿ ಸಚಿವನಾಗಿ ಜವಾಬ್ದಾರಿ ವಹಿಸಿಕೊಂಡ ಸಂದರ್ಭದಲ್ಲಿ ಜಿಲ್ಲಾ ಆಸ್ಪತ್ರೆಯ ಹೊರರೋಗಿಗಳ ಸಂಖ್ಯೆ ೮೦೦ರಷ್ಟು ಇತ್ತು. ಈಗ ೧,೬೦೦ ದಾಟಿದೆ. ವೈದ್ಯಕೀ ಸೇವೆ ಸುಧಾರಣೆಯಾಗಿರುವ ಕಾರಣ ದಾವಣಗೆರೆ ಮತ್ತು ಹುಬ್ಬಳ್ಳಿಗೆ ಹೋಗುತ್ತಿದ್ದ ಜಿಲ್ಲೆಯ ಜನ ಈಗ ಜಿಲ್ಲಾ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಭವಿಷ್ಯದ ದಿನಗಳಲ್ಲಿ ಎಲ್ಲ ರೀತಿಯ ವೈದ್ಯಕೀಯ ಸೇವೆ ಜಿಲ್ಲೆಯಲ್ಲಿ ಲಭ್ಯವಾಗಬೇಕು ಎಂಬುದು ನನ್ನ ಗುರಿಯಾಗಿದೆ ಎಂದ ಅವರು ಎಷ್ಟೇ ಒಳ್ಳೆಯ ಕೆಲಸ ಮಾಡಿದರೂ ಹಲವು ಕಡೆ ಜನ ಗುರುತಿಸುವುದಿಲ್ಲ. ಆದರೆ ಹಾವೇರಿ ಜಿಲ್ಲೆಯ ಜನ ಒಂದು ಚಿಕ್ಕ ಕೆಲಸ ಮಾಡಿದರೂ ಒಳ್ಳೆಯ ಮಾತುಗಳನ್ನು ಆಡುತ್ತಾರೆ. ಈ ಜಿಲ್ಲೆಯ ಉಸ್ತುವಾರಿ ಸಚಿವನಾಗಿ ಕೆಲಸ ಮಾಡಲು ನನಗೂ ಖುಷಿಯಾಗುತ್ತದೆ ಎಂದು ಹೇಳಿದರು.
ಶಾಸಕ ಶ್ರೀನಿವಾಸ ಮಾನೆ, ಕರ್ನಾಟಕ ಅರಣ್ಯ ನಿಗಮದ ಅಧ್ಯಕ್ಷ ರಾದ ಶಾಸಕ ಬಸವರಾಜ ಶಿವಣ್ಣನವರ್, ವಿಧಾನಸಭೆ ಉಪಾಧ್ಯಕ್ಷ ರುದ್ರಪ್ಪ ಲಮಾಣಿ, ಶಾಸಕರಾದ ಪ್ರಕಾಶ್ ಕೋಳೀವಾಡ್, ಶಾಸಕ ಯಾಸಿರ್ ಖಾನ್ ಪಠಾಣ್ ಸೇರಿದಂತೆ ಹಲವರು ಮಾತನಾಡಿದರು. ಹೆಸ್ಕಾಂ ಅಧ್ಯಕ್ಷ ಅಜೀಂ ಪೀರ್ ಖಾದ್ರಿ, ಜಿಪಂ ಮಾಜಿ ಅಧ್ಯಕ್ಷ ಕೊಟ್ರೇಶಪ್ಪ ಬಸಗಣ್ಣಿ, ಮೋಹನ್ ಲಿಂಬಿಕಾಯಿ, ಮಾಜಿ ಶಾಸಕ ಬನ್ನಿಕೋಡ್, ಜಿಲ್ಲಾಧಿಕಾರಿ ಡಾ. ಮಹಾಂತೇಶ ದಾನಮ್ಮನವರ್, ಜಿಪಂ ಸಿಇಒ ರುಚಿ ಬಿಂದಲ್, ಎಸ್ಪಿ ಯಶೋದಾ ವಂಟಿಗೋಡಿ, ಎಡಿಸಿ ನಾಗರಾಜ್, ಡೀನ್ ಡಾ. ಪ್ರದೀಪ್ ಕುಮಾರ್ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದ ಯಶಸ್ಸಿಗೆ ಕಾರಣದಾರ ಜಿಲ್ಲಾಧಿಕಾರಿ, ಜಿಪಂ ಸಿಇಒ, ಎಸ್ಪಿ, ಉಪವಿಭಾಗಾಧಿಕಾರಿಗಳು, ಜಿಲ್ಲೆಯ ಎಲ್ಲ ತಹಸೀಲ್ದಾರ್ಗಳನ್ನು ಸಚಿವರು ಸನ್ಮಾನಿಸಿದರು. ಕಂದಾಯ ಇಲಾಖೆಯ ಎಲ್ಲ ಸಿಬ್ಬಂದಿಗೆ ಪ್ರಶಂಸನಾ ಪತ್ರ ವಿತರಣೆ ಮಾಡಲಾಯಿತು.
ಪ್ರಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಂಜೀವಕುಮಾರ್ ನೀರಲಗಿ ಅವರು, ಹಾವೇರಿಯಲ್ಲಿ ಆಯೋಜಿಸಿದ್ದ ಭೂಗ್ಯಾರಂಟಿ ಸಮರ್ಪಣಾ ಸಮಾವೇಶ ಭವಿಷ್ಯದ ದಿನಗಳಲ್ಲಿ ಇತರ ಜಿಲ್ಲೆಗಳಲ್ಲಿ ನಡೆಯಲಿರುವ ಕಾರ್ಯಕ್ರಮಗಳಿಗೆ ಮಾದರಿ ಎನ್ನುವಂತೆ ನಡೆದಿದೆ. ನಿಮ್ಮ ಶ್ರಮ ಮತ್ತು ಶ್ರದ್ಧೆ ಇದಕ್ಕೆ ಕಾರಣ. ಹೀಗಾಗಿ ಸಚಿವರು ಇಂದು ನಿಮಗೆ ಕೃತಜ್ಞತೆ ಹೇಳಲು ಈ ಕಾರ್ಯಕ್ರಮ ಆಯೋಜನೆ ಮಾಡಿದ್ದಾರೆ ಎಂದರು.

